ಭಾರತ vs ಇಂಗ್ಲೆಂಡ್ ಮೊದಲ ಟೆಸ್ಟ್‌ನಲ್ಲಿ ಕೆಎಲ್ ರಾಹುಲ್ ಕೀಪಿಂಗ್ ಮಾಡಲ್ಲ; ಕೋಚ್ ದ್ರಾವಿಡ್ ಸ್ಪಷ್ಟನೆ
Jan 23, 2024 04:57 PM IST
ಕೆಎಲ್ ರಾಹುಲ್ ಮತ್ತು ಭಾರತ ತಂಡದ ನಾಯಕ ರೋಹಿತ್ ಶರ್ಮಾ
- India vs England 1st Test: ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿಕೆಟ್ ಕೀಪಿಂಗ್ ಮಾಡಿದ್ದ ಕನ್ನಡಿಗ ಕೆಎಲ್ ರಾಹುಲ್, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಕೀಪರ್ ಆಗಿ ಆಡುತ್ತಿಲ್ಲ. ಈ ಕುರಿತು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸ್ಪಷ್ಟನೆ ನೀಡಿದ್ದಾರೆ.
ಮುತ್ತಿನ ನಗರಿ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಜನವರಿ 25ರ ಗುರುವಾರದಿಂದ ಆರಂಭವಾಗಲಿರುವ ಪಂದ್ಯದಲ್ಲಿ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಕೆಎಸ್ ಭರತ್ ಹಾಗೂ ಧ್ರುವ್ ಜುರೆಲ್ ನಡುವೆ ಪೈಪೋಟಿ ನಡೆಯಲಿದೆ ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶತಕ ಸಹಿತ ಉತ್ತಮ ಪ್ರದರ್ಶನ ನೀಡಿದ್ದ ರಾಹುಲ್, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸುದೀರ್ಘ ಸರಣಿಯಲ್ಲಿ ಕೀಪರ್ ಆಗಿ ಆಡುವುದಿಲ್ಲ ಎಂದು ಕನ್ನಡಿಗ ದ್ರಾವಿಡ್ ಖಚಿತಪಡಿಸಿದ್ದಾರೆ. ಆದರೆ, ತಂಡದಲ್ಲಿ ರಾಹುಲ್ ಆಡುವುದು ಬಹುತೇಕ ಖಚಿತವಾಗಿದೆ.
ರಾಹುಲ್ ದ್ರಾವಿಡ್ ಹೇಳಿದ್ದು ಹೀಗೆ
“ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಆಡುವುದಿಲ್ಲ. ಆಯ್ಕೆಯ ವೇಳೆಯೇ ನಾವು ಅದರ ಬಗ್ಗೆ ಸ್ಪಷ್ಟವಾಗಿದ್ದೇವೆ. ನಾವು ಇತರ ಇಬ್ಬರು ವಿಕೆಟ್ ಕೀಪರ್‌ಗಳನ್ನು ಆಯ್ಕೆ ಮಾಡಿದ್ದೇವೆ. ರಾಹುಲ್ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಿಸ್ಸಂದೇಹವಾಗಿ ಅದ್ಭುತ ಕೀಪಿಂಗ್ ಮಾಡಿದ್ದಾರೆ. ಅಲ್ಲದೆ ಸರಣಿಯನ್ನು ಡ್ರಾ ಮಾಡುವಲ್ಲಿ ನಮಗೆ ಸಹಾಯ ಮಾಡುವಲ್ಲಿ ನಿಜಕ್ಕೂ ಪ್ರಮುಖ ಪಾತ್ರ ವಹಿಸಿದ್ದಾರೆ” ಎಂದು ದ್ರಾವಿಡ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ | ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ಗಳಿಗೆ ಕೊಹ್ಲಿ ಸ್ಥಾನ ತುಂಬಬಲ್ಲ ಮೂವರು ಸಮರ್ಥ ಆಟಗಾರರು ಇವರು
ವೈಯಕ್ತಿಕ ಕಾರಣಗಳನ್ನು ನೀಡಿ ವಿರಾಟ್ ಕೊಹ್ಲಿ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿರುವುದರಿಂದ, ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಇಬ್ಬರೂ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಯ್ಯರ್ ಅವರಂತೆ ರಾಹುಲ್ ಕೂಡ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಭರತ್ ಅಥವಾ ಜುರೆಲ್ ಇಬ್ಬರಲ್ಲೊಬ್ಬರು ಕೀಪರ್ ಆಗಿ ಆಡಲಿದ್ದಾರೆ.
“ಐದು ಟೆಸ್ಟ್ ಪಂದ್ಯಗಳನ್ನು ಪರಿಗಣಿಸಿ ಮತ್ತು ಭಾರತದ ಪಿಚ್‌ಗಳಲ್ಲಿ ಆಡುವುದನ್ನು ಪರಿಗಣಿಸಿ ನಮ್ಮಲ್ಲಿರುವ ಇಬ್ಬರು ಕೀಪರ್‌ಗಳ ನಡುವೆ ಆಯ್ಕೆ ಇರುತ್ತದೆ” ಎಂದು ದ್ರಾವಿಡ್ ವಿವರಿಸಿದ್ದಾರೆ.
ಕಾರು ಅಪಘಾತದಲ್ಲಿ ರಿಷಭ್ ಪಂತ್ ಗಾಯಗೊಂಡ ಬಳಿಕ ಕೀಪಿಂಗ್ ಪಾತ್ರಕ್ಕೆ ಬಂದ ಭರತ್, ಈ ಪಾತ್ರದಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದಾರೆ. ಕೆಲವೊಮ್ಮೆ ಪ್ರಶಂಸೆಗೂ ಪಾತ್ರರಾಗಿದ್ದಾರೆ. ಆಡಿದ 91 ಪ್ರಥಮ ದರ್ಜೆ ಪಂದ್ಯಗಳಲ್ಲಿ, ಭರತ್ 287 ಕ್ಯಾಚ್ ಮತ್ತು 33 ಸ್ಟಂಪಿಂಗ್ ಮಾಡಿದ್ದಾರೆ. ಭರತ್‌ಗೆ ಹೋಲಿಸಿದರೆ ಜುರೆಲ್ ಅನುಭವ ಕಮ್ಮಿ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿಗೆ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿ ಭರತ್ ಮೊದಲ ಆಯ್ಕೆಯಾಗಿರಲಿದ್ದಾರೆ.
ಇದನ್ನೂ ಓದಿ | ಭಾರತ ತಂಡಕ್ಕೆ ದೊಡ್ಡ ಹೊಡೆತ; ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್ಗಳಿಂದ ವಿರಾಟ್ ಕೊಹ್ಲಿ ಔಟ್
ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಜನವರಿ 25ಕ್ಕೆ ಆರಂಭವಾಗಲಿದ್ದು, ಮಾರ್ಚ್ 11ರವರೆಗೆ ನಡೆಯಲಿದೆ. ಸರಣಿಯ ಅಂತಿಮ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ರೋಹಿತ್ ಶರ್ಮಾ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. 2022ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ತಂಡದ ನಾಯಕರಾಗಿದ್ದರು.
ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಪಂದ್ಯಗಳಿಂದ ಹಿಂದೆ ಸರಿದಿದ್ದಾರೆ. ಕೊನೆಯ ಮೂರು ಪಂದ್ಯಗಳಿಗೆ ಅವರು ತಂಡಕ್ಕೆ ಮರಳಲಿದ್ದಾರೆ. ಸರಣಿ ಆರಂಭಕ್ಕೂ ಮುನ್ನ ಅವರ ಬದಲಿ ಆಟಗಾರನನ್ನು ಬಿಸಿಸಿಐ ಪ್ರಕಟಿಸುವ ಸಾಧ್ಯತೆ ಇದೆ.