ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ತಂಡ ಸೇರಿಕೊಳ್ಳಲಿದ್ದಾರೆ ಕೆಎಲ್ ರಾಹುಲ್; ಮತ್ತೆ ಬೌಲಿಂಗ್ ಮಾಡಲು ಬೆನ್ ಸ್ಟೋಕ್ಸ್ ಕಾತರ
Feb 19, 2024 09:38 AM IST
ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ತಂಡ ಸೇರಿಕೊಳ್ಳಲಿದ್ದಾರೆ ಕೆಎಲ್ ರಾಹುಲ್
- India vs England 4th Test: ಇಂಗ್ಲೆಂಡ್ ವಿರುದ್ಧದ ಎರಡು ಮತ್ತು ಮೂರನೇ ಟೆಸ್ಟ್ ಪಂದ್ಯಗಳಿಂದ ಹೊರಗುಳಿದ ನಂತರ, ಕೆಎಲ್ ರಾಹುಲ್ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಮರಳುವ ಸಾಧ್ಯತೆ ಇದೆ. ಅತ್ತ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಕೂಡಾ ಮುಂದಿನ ಪಂದ್ಯಗಳಲ್ಲಿ ಬೌಲಿಂಗ್ ಮಾಡಲು ಉತ್ಸುಕರಾಗಿದ್ದಾರೆ.
ಮೊಣಕಾಲು ನೋವಿನಿಂದಾಗಿ ವಿಶಾಖಪಟ್ಟಣ ಮತ್ತು ರಾಜ್‌ಕೋಟ್ ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ಕನ್ನಡಿಗ ಕೆಎಲ್ ರಾಹುಲ್ (KL Rahul), ನಾಲ್ಕನೇ ಟೆಸ್ಟ್ (India vs England) ಪಂದ್ಯಕ್ಕೆ ಮರಳಲು ಸಜ್ಜಾಗಿದ್ದಾರೆ. ಫೆಬ್ರವರಿ 23ರಿಂದ ರಾಂಚಿಯಲ್ಲಿ ಆರಂಭವಾಗುವ ಪಂದ್ಯದಲ್ಲಿ ಮಧ್ಯದ ಕ್ರಮಾಂಕದ ಆಟಗಾರ ಆಡುವ ಬಳಗ ಸೇರಿಕೊಳ್ಳುವ ಸಾಧ್ಯತೆ ಇದೆ. ಅವರು ಚೇತರಿಸಿಕೊಂಡಿದ್ದಾರೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಬಳಿಕ ಕಾಲಿನ ಗಾಯದಿಂದ ಬಳಲುತ್ತಿರುವ ರಾಹುಲ್, ಸದ್ಯ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ರಾಜ್‌ಕೋಟ್ ಪಂದ್ಯದಲ್ಲಿ ಅವರು ಆಡಬೇಕಿತ್ತು. ಆದರೆ, ಬಿಸಿಸಿಐ ವೈದ್ಯಕೀಯ ತಂಡದ ಪ್ರಕಾರ, ಅವರು ಕೇವಲ 90 ಪ್ರತಿಶತ ಫಿಟ್ ಆಗಿರುವುದರಿಂದ ತಂಡದಿಂದ ಹೊರಗಿಡಲು ನಿರ್ಧರಿಸಲಾಯಿತು. ಒಂದು ವೇಳೆ ರಾಹುಲ್ ತಂಡಕ್ಕೆ ಮರಳಿದರೆ, ರಜತ್ ಪಾಟೀದಾರ್ ಆಡುವ ಬಳಗದಿಂದ ಹೊರಬೀಳಲಿದ್ದಾರೆ. ಆಡಿದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿಯೂ ರನ್ ಗಳಿಸಲು ಪಾಟೀದಾರ್ ವಿಫಲರಾಗಿದ್ದಾರೆ.
ಇದನ್ನೂ ಓದಿ | ಭಾರತದ ಎದುರು ಶರಣಾದ ಬಾಜ್ಬಾಲ್; ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾಗೆ 434 ರನ್‌ಗಳ ಗೆಲುವು, ಸರಣಿಯಲ್ಲಿ ಮುನ್ನಡೆ
ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ 434 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಟೀಮ್ ಇಂಡಿಯಾ 400ಕ್ಕೂಅಧಿಕ ರನ್ ಕಲೆ ಹಾಕಿತು. ಇಂಗ್ಲೆಂಡ್ ತಂಡ ದ್ವಿತೀಯ ಇನ್ನಿಂಗ್ಸ್‌ನಲ್ಲಿ ತೀರಾ ಕಳಪೆ ಬ್ಯಾಟಿಂಗ್ ಬ್ಯಾಟಿಂಗ್ ಪ್ರದರ್ಶನ ನೀಡಿತು.
ಪಂದ್ಯದ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, “ಪಂದ್ಯವು ಐದನೇ ದಿನಕ್ಕೆ ಹೋಗುತ್ತದೆ ಎಂದು ನಾನು ಭಾವಿಸಿದ್ದೆ” ಎಂದು ಹೇಳಿದರು. “ನಾವು ಇಂದು ಬೌಲಿಂಗ್ ಮಾಡಲು ಕೇವಲ 40 ಓವರ್ ಹೊಂದಿದ್ದೆವು. ಅವರನ್ನು ಔಟ್ ಮಾಡಲು 130 ಓವರ್‌ಗಳು ಸಾಕು ಎಂದು ನಾವು ಭಾವಿಸಿದ್ದೆವು. ರನ್‌ಗಳಿಗಿಂತ ಹೆಚ್ಚಾಗಿ, ಅವರನ್ನು ಔಟ್ ಮಾಡಲು ನಮಗೆ ಎಷ್ಟು ಓವರ್ ಬೇಕು ಎಂಬುದು ಮುಖ್ಯವಾಗಿತ್ತು. ನಾಲ್ಕನೇ ದಿನದ ಸಂಜೆಯ ವೇಳೆಗೆ ಪಂದ್ಯ ಮುಗಿಯುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ,” ಎಂದು ರೋಹಿತ್ ಹೇಳಿದ್ದಾರೆ.
ಸ್ಟೋಕ್ಸ್ ಬೌಲಿಂಗ್
ಅತ್ತ ನಾಲ್ಕನೇ ಟೆಸ್ಟ್‌ಗೂ ಮುನ್ನ ಇಂಗ್ಲೆಂಡ್ ತಂಡ ಕೂಡಾ ದೊಡ್ಡ ಬೂಸ್ಟ್ ಪಡೆಯಲಿದೆ. ಎರಡು ಟೆಸ್ಟ್ ಪಂದ್ಯಗಳಲ್ಲಿ ಆಂಗ್ಲ ನಾಯಕ ಬೌಲಿಂಗ್‌ಗೆ ಮರಳುವ ಸಾಧ್ಯತೆ ಇದೆ. ಈ ಕುರಿತು ಖುದ್ದು ಅವರೇ ಸುಳಿವು ನೀಡಿದ್ದಾರೆ. 2023ರ ಏಕದಿನ ವಿಶ್ವಕಪ್ ನಂತರ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಸ್ಟೋಕ್ಸ್, ಈ ಸರಣಿಯಲ್ಲಿ ಈವರೆಗೆ ಬೌಲಿಂಗ್ ಮಾಡಿಲ್ಲ. ಹೀಗಾಗಿ ಇಂಗ್ಲೆಂಡ್ ತಂಡ ನಾಲ್ಕು ಬೌಲರ್‌ಗಳೊಂದಿಗೆ ಆಡಬೇಕಾಯಿತು.
ಇದನ್ನೂ ಓದಿ | ದ್ವಿಶತಕ ಸಿಡಿಸಿದರೂ ಯಶಸ್ವಿ ಜೈಸ್ವಾಲ್ಗೆ ಸಿಗಲಿಲ್ಲ ಪಂದ್ಯಶ್ರೇಷ್ಠ; ಹಾಗಾದರೆ ಈ ಪ್ರಶಸ್ತಿ ಗೆದ್ದಿದ್ಯಾರು?
“ನಾನು ಹೌದು ಎಂದು ಹೇಳುತ್ತಿಲ್ಲ, ಇಲ್ಲ ಎಂದೂ ಹೇಳಲ್ಲ. ನಾನು ಅಂದುಕೊಂಡಿದ್ದಕ್ಕಿಂತ ವೇಗವಾಗಿ ಆರೋಗ್ಯದಲ್ಲಿ ಪ್ರಗತಿ ಸಾಧಿಸಿದ್ದೇನೆ,” ಎಂದು ಸ್ಟೋಕ್ಸ್ ಹೇಳಿದ್ದಾರೆ. ಅಭ್ಯಾಸ ಅವಧಿಯಲ್ಲಿ ನಾನು 100 ಶೇಕಡದಷ್ಟು ರಷ್ಟು ಬೌಲಿಂಗ್ ಮಾಡಲು ಸಾಧ್ಯವಾಯಿತು. ಇದು ನನಗೆ ತುಂಬಾ ಉತ್ತಮ ಭಾವನೆ ಕೊಟ್ಟಿತು. ನಾನು ಪಂದ್ಯದಲ್ಲಿ ಬೌಲಿಂಗ್ ಮಾಡಬಹುದೆಂದು ನನಗೆ ಅನಿಸಿತು. ಸದ್ಯ ಚೇತರಿಸಿಕೊಳ್ಳುವಿಕೆ ಇನ್ನೂ ಪ್ರಗತಿಯಲ್ಲಿದೆ," ಎಂದು ಅವರು ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ಗೆ ಭಾರತ ಸಂಭಾವ್ಯ ಆಡುವ ಬಳಗ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಸರ್ಫರಾಜ್ ಖಾನ್, ಧ್ರುವ ಜುರೆಲ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್.
ಇದನ್ನೂ ಓದಿ | ದ್ವಿಶತಕದ ಜೊತೆಗೆ ಸಿಕ್ಸರ್ನಲ್ಲೂ ಜೈಸ್ವಾಲ್ ವಿಶ್ವದಾಖಲೆ; ರೋಹಿತ್ ಹಿಂದಿಕ್ಕಿ ಕೊಹ್ಲಿ, ಅಕ್ರಂ ಸಾಲಿಗೆ ಸೇರಿ ಹಲವು ದಾಖಲೆ ಬರೆದ ಯಶಸ್ವಿ
(This copy first appeared in Hindustan Times Kannada website. To read more like this please logon to kannada.hindustantimes.com)