Rahul vs Ishan: ರಾಹುಲ್ ಅಥವಾ ಇಶಾನ್ ಕಿಶನ್; ಪಾಕ್ ಕದನಕ್ಕೆ ಯಾರಿಗೆ ಸಿಗಲಿದೆ ತಂಡದಲ್ಲಿ ಅವಕಾಶ?
Sep 08, 2023 08:30 AM IST
ಇಶಾನ್ ಕಿಶನ್ ಮತ್ತು ಕೆಎಲ್ ರಾಹುಲ್.
- KL Rahul vs Ishan Kishan: ಕೆಎಲ್ ರಾಹುಲ್ ತಂಡಕ್ಕೆ ಮರಳಿರುವುದು ಟೀಮ್ ಇಂಡಿಯಾ ಮ್ಯನೇಜ್ಮೆಂಟ್ಗೆ ತಲೆಬಿಸಿ ಹೆಚ್ಚಾಗಿದೆ. ಇಶಾನ್ ಕಿಶನ್ ಅಥವಾ ರಾಹುಲ್ ಇಬ್ಬರಲ್ಲಿ ಯಾರಿಗೆ ಅವಕಾಶ ನೀಡಬೇಕು ಎಂಬ ಗೊಂದಲ ಉಂಟಾಗಿದೆ.
ಸೆಪ್ಟೆಂಬರ್ 10ರಂದು ಭಾರತ-ಪಾಕಿಸ್ತಾನ (India vs Pakistan) ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕೊಲೊಂಬೊದ ಆರ್ ಪ್ರೇಮದಾಸ ಮೈದಾನ ವೇದಿಕೆ ಕಲ್ಪಿಸಲಿದೆ. ಆದರೆ ಈ ಪಂದ್ಯಕ್ಕೂ ಮಳೆ (Rain) ಅಡ್ಡಿಪಡಿಸಲಿದೆ ಎನ್ನುವುದು ನಿರಾಸೆಯ ಸಂಗತಿಯಾಗಿದೆ. ಇದರ ನಡುವೆಯೂ ರೋಹಿತ್ ಪಡೆಯ ಭರ್ಜರಿ ಅಭ್ಯಾಸ ನಡೆಸುತ್ತಿದೆ. ಅದರಲ್ಲೂ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಕೆಎಲ್ ರಾಹುಲ್ (KL Rahul), ನೆಟ್ಸ್ನಲ್ಲಿ ಭರ್ಜರಿ ಪ್ರಾಕ್ಟೀಸ್ ನಡೆಸಿ ಗಮನ ಸೆಳೆದರು.
ಕಳೆದ ನಾಲ್ಕು ತಿಂಗಳಿಂದ ಕ್ರಿಕೆಟ್ ಸೇವೆಯಿಂದ ಹೊರಗುಳಿದಿದ್ದ ರಾಹುಲ್, ಈಗ ಪ್ರಧಾನ ತಂಡಕ್ಕೆ ಮರಳಿದ್ದಾರೆ. ಪ್ರಸ್ತುತ ಗಾಯದ ಸಮಸ್ಯೆಯಿಂದ ಗುಣಮುಖರಾಗಿರುವ ರಾಹುಲ್ ಏಷ್ಯಾಕಪ್‌ನ (Asia Cup 2023) ಲೀಗ್ ಹಂತದ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಈಗವರು ಪಾಕಿಸ್ತಾನ ಎದುರಿನ ಸೂಪರ್ 4 ಹಂತದ ಪಂದ್ಯದೊಂದಿಗೆ ಟೀಮ್ ಇಂಡಿಯಾಗೆ ಮರಳಲು ಸಜ್ಜಾಗಿದ್ದಾರೆ. ಆದರೆ ಇದು ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ತಲೆ ನೋವು ಹೆಚ್ಚಿಸಿದೆ.
ಇಶಾನ್ ಅಥವಾ ರಾಹುಲ್.. ಯಾರಿಗೆ ಅವಕಾಶ?
ಲೀಗ್ ಹಂತದಲ್ಲಿ ಪಾಕಿಸ್ತಾನ ಎದುರಿನ ಮೊದಲ ಪಂದ್ಯ ಮಳೆಯಿಂದ ರದ್ದಾಯಿತು. ಆದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ನಡೆಸಿತು. ಅಗ್ರ ಕ್ರಮಾಂಕದ ದಯನೀಯ ವೈಫಲ್ಯದ ನಡುವೆಯೂ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಇಶಾನ್ ಕಿಶನ್ (Ishan Kishan) ಬೊಂಬಾಟ್ ಇನ್ನಿಂಗ್ಸ್ ಕಟ್ಟಿದ್ದರು. ಆಕರ್ಷಕ ಅರ್ಧಶತಕ ಸಿಡಿಸಿ ಸಂಕಷ್ಟದಲ್ಲಿದ್ದ ತಂಡವನ್ನು ಪಾರು ಮಾಡಿದರು. 81 ಎಸೆತಗಳಲ್ಲಿ 82 ರನ್ ಸಿಡಿಸಿ ಗಮನಾರ್ಹ ಪ್ರದರ್ಶನ ನೀಡಿದ್ದರು. 66ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ವೇಳೆ ಇಶಾನ್, ಹಾರ್ದಿಕ್ ಪಾಂಡ್ಯ ಜೊತೆಗೂಡಿ ಶತಕದ ಜೊತೆಯಾಟವಾಡಿದ್ದರು.
ಏಷ್ಯಾಕಪ್ನಲ್ಲಿ ಭಾರತದ ಉಳಿದ ಪಂದ್ಯಗಳಿಗೂ ಹಾಗೂ ಏಕದಿನ ವಿಶ್ವಕಪ್ಗೆ ಭರ್ಜರಿ ಫಾರ್ಮ್ನಲ್ಲಿರುವ ಇಶಾನ್ರನ್ನೇ ಆಡಿಸಬೇಕು ಎಂದು ಮಾಜಿ ಕ್ರಿಕೆಟರ್ಗಳು ಹೇಳುತ್ತಿದ್ದಾರೆ. ಮತ್ತೊಂದೆಡೆ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ಅನುಭವಿ ಕೆಎಲ್ ರಾಹುಲ್ ಅವರಿಗೆ ಅವಕಾಶ ನೀಡಬೇಕು ಎಂಬ ಚರ್ಚೆಯೂ ನಡೆಯುತ್ತಿದೆ. ಹಾಗಾಗಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಆಡುವ 11ರ ಬಳಗದಲ್ಲಿ ಯಾರಿಗೆ ಅವಕಾಶ ನೀಡಬೇಕು ಎಂಬುದು ಟೀಮ್ ಮ್ಯಾನೇಜ್ಮೆಂಟ್ ಮುಂದಿರುವ ಪ್ರಮುಖ ದೊಡ್ಡ ಪ್ರಶ್ನೆಯಾಗಿದೆ.
ಲೀಗ್ನಲ್ಲಿ ಅದ್ಭುತ ನಿರ್ವಹಣೆ ತೋರಿರುವುದರ ಜೊತೆಗೆ ಏಕದಿನ ಕ್ರಿಕೆಟ್ನಲ್ಲಿ ಸತತ 4 ಪಂದ್ಯಗಳಲ್ಲಿ 4 ಅರ್ಧಶತಕ ಸಿಡಿಸಿರುವ ಕಿಶನ್ಗೆ ಅವಕಾಶ ನೀಡಬೇಕೆಂಬುದು ಹಲವರ ಕೂಗು. ಸತತ 4 ತಿಂಗಳ ನಂತರ ರಾಹುಲ್ ತಂಡಕ್ಕೆ ಮರಳುತ್ತಿದ್ದು, ಅದಕ್ಕೂ ಹಿಂದಿನ ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದರು. ಹಾಗಾಗಿ, ಭರ್ಜರಿ ಫಾರ್ಮ್ನಲ್ಲಿರುವ ಇಶಾನ್‌ಗೆ ಅವಕಾಶ ನೀಡಿದರೆ, ಅದೇ ಫಾರ್ಮ್ ಅನ್ನು ಮುಂದುವರೆಸಲಿದ್ದಾರೆ. ಇದರ ನಡುವೆ ಮತ್ತೊಂದು ಚರ್ಚೆ ನಡೆಯುತ್ತಿದೆ. ಕಳೆದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಫ್ಲಾಪ್ ಆಗಿದ್ದು, ಅವರ ಬದಲಿಗೆ ರಾಹುಲ್ಗೆ ಅವಕಾಶ ನೀಡಿ ಎನ್ನುವ ಚರ್ಚೆಯೂ ಜೋರಾಗಿದೆ.
ಸುನಿಲ್ ಗವಾಸ್ಕರ್ ಹೇಳಿದ್ದೇನು?
ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಇಬ್ಬರಲ್ಲಿ ಯಾರಿಗೆ ಆಡುವ ಅಂತಿಮ ಬಳಗದಲ್ಲಿ ಸ್ಥಾನ ನೀಡಬೇಕು ಎಂಬ ಬಗ್ಗೆ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ. ಇಂಡಿಯಾ ಟುಡೆಗೆ ಮಾತನಾಡಿದ ಗವಾಸ್ಕರ್, ರಾಹುಲ್ ಮತ್ತು ಶ್ರೇಯಸ್ ಏಷ್ಯಾಕಪ್ ಸೂಪರ್-4ನಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಸದ್ಯ ಇಶಾನ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಒಂದು ವೇಳೆ ರಾಹುಲ್ ಮತ್ತು ಇಶಾನ್ ಇಬ್ಬರನ್ನೂ ತಂಡಕ್ಕೆ ಸೇರಿಸಿದರೆ, ಇಶಾನ್‌ಗೆ ಕೀಪಿಂಗ್ ಜವಾಬ್ದಾರಿ ವಹಿಸುವುದು ಉತ್ತಮ. ರಾಹುಲ್ ಗಾಯದಿಂದ ಈಗಷ್ಟೇ ರಿಕವರ್ ಆಗಿ ಬಂದಿದ್ದು, ವಿಕೆಟ್ ಕೀಪಿಂಗ್ ಪಾತ್ರ ನಿಭಾಯಿಸಲು ಕೊಂಚ ತೊಂದರೆ ಎನಿಸಬಹುದು ಎಂದು ಹೇಳಿದ್ದಾರೆ.
ಇಶಾನ್‌ಗೆ ಅವಕಾಶ ನೀಡಿ ಎಂದ ಗಂಭೀರ್
ಸದ್ಯ ಇಶಾನ್ ಕಿಶನ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಹಾಗಾಗಿ ಅವರೇ ತಂಡದ ಮೊದಲ ಆಯ್ಕೆಯಾಗಿರಬೇಕು. ರಾಹುಲ್ ಈಗಿನ್ನೂ ಚೇತರಿಸಿಕೊಂಡು ಬಂದಿದ್ದಾರೆ. ಒಂದು ವೇಳೆ ಕೆಎಲ್ಗೆ ಅವಕಾಶ ನೀಡಿದರೆ, ದೊಡ್ಡ ಪ್ರಮಾದವನ್ನು ಮಾಡಿದಂತಾಗುತ್ತದೆ ಎಂದು ಗೌತಮ್ ಗಂಭೀರ್ ಸಲಹೆ ನೀಡಿದ್ದಾರೆ. ಮತ್ತೊಂದೆಡೆ ಇರ್ಫಾನ್ ಪಠಾಣ್ ಕೆಎಲ್ ರಾಹುಲ್ ನಿಮ್ಮ ಮೊದಲ ಆಯ್ಕೆಯಾಗಿರಲಿ ಎಂದು ಸಲಹೆ ನೀಡಿದ್ದಾರೆ. ಅವರ ಮೇಲೆ ನಂಬಿಕೆ ಇಡಿ ಎಂದು ಹೇಳಿದ್ದಾರೆ.