ಕೆಕೆಆರ್ vs ಎಸ್‌ಆರ್‌ಎಚ್ ಐಪಿಎಲ್ ಫೈನಲ್ ದಿನ ಚೆನ್ನೈ ಹವಾಮಾನ ಹೇಗಿದೆ; ಮಳೆ ಅಡ್ಡಿಯಾದರೆ ನಿಯಮಗಳೇನು?
May 25, 2024 04:22 PM IST
ಕೆಕೆಆರ್ vs ಎಸ್‌ಆರ್‌ಎಚ್ ಐಪಿಎಲ್ ಫೈನಲ್ ದಿನ ಚೆನ್ನೈ ಹವಾಮಾನ ಹೇಗಿದೆ
- ಕೆಕೆಆರ್ ಮತ್ತು ಎಸ್‌ಆರ್‌ಎಚ್ ತಂಡಗಳ ನಡುವೆ ಐಪಿಎಲ್ ಫೈನಲ್ ಪಂದ್ಯ ನಡೆಯುತ್ತಿದೆ. ಮಹತ್ವದ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ ಎಂಬ ಆತಂಕದಲ್ಲಿ ಅಭಿಮಾನಿಗಳಿದ್ದಾರೆ. ಹಾಗಿದ್ದರೆ ಮೇ 26ರ ಭಾನುವಾರ ಚೆನ್ನೈ ಹವಾಮಾನ ಹೇಗಿರಲಿದೆ ಎಂಬುದನ್ನು ನೋಡೋಣ.
ಐಪಿಎಲ್ 2024ರ ಫೈನಲ್ ಪಂದ್ಯಕ್ಕೆ ಮುಹೂರ್ತ ನಿಗದಿಯಾಗಿದೆ. ಟ್ರೋಫಿ ಗೆಲ್ಲುವ ಅಂತಿಮ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (KKR vs SRH) ತಂಡಗಳು ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳು ಟೂರ್ನಿಯಲ್ಲಿ ಬಿರುಸಿನ ಪ್ರದರ್ಶನ ನೀಡುತ್ತಿದ್ದು, ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿವೆ. ಲೀಗ್ ಹಂತದ ಬಳಿಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಎರಡು ತಂಡಗಳೇ ಫೈನಲ್‌ನಲ್ಲೂ ಎದುರಾಗುತ್ತಿರುವುದು ವಿಶೇಷ. ನಿರ್ಣಾಯಕ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ವಿಜೇತರನ್ನು ನಿರ್ಧರಿಸುವ ಅಂತಿಮ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ ಎಂಬ ಆತಂಕ ಎದುರಾಗಿದೆ. ಹಾಗಿದ್ದರೆ ಪಂದ್ಯದ ದಿನ ಚೆನ್ನೈ ಹವಾಮಾನ ಹೇಗಿರಲಿದೆ ಎಂಬುದನ್ನು ನೋಡೋಣ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತೀವ್ರ ಚಂಡಮಾರುತಕ್ಕೆ ಕಾರಣವಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಪಂದ್ಯದ ದಿನ ಚೆನ್ನೈ ಹವಾಮಾನವು ನಿರೀಕ್ಷೆಗಿಂತ ಭಿನ್ನವಾಗುವ ನಿರೀಕ್ಷೆಯಿದೆ. ಚಂಡಮಾರುತವು ಮೇ 26ರಂದು ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳ ತಲುಪುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ, ಪಂದ್ಯದ ದಿನ ಚೆನ್ನೈ ಅಥವಾ ತಮಿಳುನಾಡಿನ ಇತರ ಭಾಗಗಳತ್ತ ಚಂಡಮಾರುತ ತಲುಪುವ ಸಾಧ್ಯತೆ ಇಲ್ಲ.
ಎರಡನೇ ಕ್ವಾಲಿಫೈಯರ್ ಪಂದ್ಯದ ಸಮಯದಲ್ಲಿ ಮಳೆ ಇಲ್ಲದೆ ಚೆನ್ನೈನಲ್ಲಿ ಸೆಕೆ ಹೆಚ್ಚಿತ್ತು. ಆಟಗಾರರು ಬಿಸಿ ವಾತಾವರಣದಿಂದ ಸುಸ್ತಾಗಿದ್ದರು. ಆದರೆ, ಫೈನಲ್ ಪಂದ್ಯದಂದು ಈ ಬಿಸಿಯ ವಾತಾವರಣ ಇರುವುದಿಲ್ಲ.
ಮೋಡ ಕವಿದ ವಾತಾವರಣ
ಆಕ್ಯುವೆದರ್ ಪ್ರಕಾರ, ಮೇ 25ರ ಶನಿವಾರವು ಚೆನ್ನೈನಲ್ಲಿ ಶೇಕಡಾ 10 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ಐಪಿಎಲ್ ಫೈನಲ್ ಪಂದ್ಯ ನಡೆಯುವ ಭಾನುವಾರ ಶೇಕಡಾ 4ರಷ್ಟು ಮಾತ್ರ ಮಳೆಯಾಗುವ ಸಾಧ್ಯತೆ ಇದೆ. ಇದೇ ವೇಳೆ ಶೇಕಡಾ 1ರಷ್ಟು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ. ಮಳೆ ಇಲ್ಲದಿದ್ದರೂ, ಫೈನಲ್ ಪಂದ್ಯದಲ್ಲಿ ಕಡಲ ತೀರದ ಚೆನ್ನೈ ನಗರದಲ್ಲಿ ಮೋಡ ಕವಿದ ವಾತಾವರಣವಿರಲಿದೆ ಎಂದು ನಿರೀಕ್ಷಿಸಲಾಗಿದೆ.
ಮೀಸಲು ದಿನ ಇದೆಯೇ?
ಒಂದು ವೇಳೆ ಮಳೆಯಾದರೆ, ಕನಿಷ್ಠ ಐದು ಓವರ್‌ಗಳ ಪಂದ್ಯವನ್ನು ನಡೆಸಲು ರಾತ್ರಿ 12:26ರವರೆಗೆ ಸಮಯವಿರುತ್ತದೆ. ಮಳೆಯಿಂದಾಗಿ ಮೇ 26ರ ಭಾನುವಾರ ಪಂದ್ಯ ಪೂರ್ಣಗೊಳಿಸಲು ಆಗದಿದ್ದರೆ, ಆಗ ಮೀಸಲು ದಿನವಾದ ಸೋಮವಾರ (ಮೇ 27) ಪಂದ್ಯ ಮುಂದುವರೆಸಲಾಗುತ್ತದೆ. ಭಾನುವಾರ ಐದು ಓವರ್‌ಗಳ ಪಂದ್ಯ ಸಾಧ್ಯವಾಗದಿದ್ದರೆ, ಮೀಸಲು ದಿನವಾದ ಮೇ 27ರಂದು ಹೊಸದಾಗಿ ಟಾಸ್ ನಡೆಸಿ ಪಂದ್ಯ ಆರಂಭಿಸಲಾಗುತ್ತದೆ.
ಒಂದು ವೇಳೆ ಮೀಸಲು ದಿನದಂದು ಕೂಡಾ ಮಳೆ ಮುಂದುವರೆದು ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ, ಆಗ ಕನಿಷ್ಠ ಸೂಪರ್ ಓವರ್ ನಡೆಸಲಾಗುತ್ತದೆ. ಮಳೆಯಿಂದಾಗಿ ರಿಸರ್ವ್ ದಿನದಂದು ಸೂಪರ್ ಓವರ್ ನಡೆಸಲು ಕೂಡಾ ಸಾಧ್ಯವಾಗದಿದ್ದರೆ, ಲೀಗ್ ಹಂತದ ಬಳಿಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವನ್ನು ವಿಜೇತ ತಂಡ ಎಂದು ಘೋಷಿಸಲಾಗುತ್ತದೆ. ಆ ಪ್ರಕಾರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಚಾಂಪಿಯನ್ ಆಗಲಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)