ಕೊನೆಯ ಕ್ಷಣದಲ್ಲಿ ವಿಶ್ವಕಪ್ ಆಸ್ಟ್ರೇಲಿಯಾ ತಂಡದಲ್ಲಿ ಬದಲಾವಣೆ: ಭಾರತದ ವಿರುದ್ಧ 3ನೇ ಏಕದಿನದಲ್ಲಿ ಅಬ್ಬರಿಸಿದ ಆಟಗಾರನಿಗೆ ಅವಕಾಶ
Sep 28, 2023 10:10 PM IST
ಕೊನೆಯ ಕ್ಷಣದಲ್ಲಿ ವಿಶ್ವಕಪ್ ಆಸ್ಟ್ರೇಲಿಯಾ ತಂಡದಲ್ಲಿ ಬದಲಾವಣೆ.
- Australia final World Cup 2023 squad: ಅಕ್ಟೋಬರ್ 5ರಿಂದ ಶುರುವಾಗುವ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಆಸ್ಟ್ರೇಲಿಯಾ ಪರಿಷ್ಕೃತ ತಂಡ ಪ್ರಕಟಿಸಿದೆ. ತಂಡದಲ್ಲಿ ಒಂದು ಬದಲಾವಣೆಯಾಗಿದ್ದು, ಆಲ್ರೌಂಡರ್ ಆಶ್ಟನ್ ಅಗರ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ (ODI World Cup 2023) ಕೆಲವೇ ದಿನಗಳು ಬಾಕಿ ಇರುವಾಗ ಆಸ್ಟ್ರೇಲಿಯಾ ತಂಡದಲ್ಲಿ ಮಹತ್ವದ ಬದಲಾವಣೆ ಕಂಡಿದೆ. ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) ತನ್ನ 15 ಸದಸ್ಯರ ಅಂತಿಮ ತಂಡವನ್ನು ಘೋಷಿಸಿದೆ. ತಂಡದಲ್ಲಿ ಒಂದು ಪ್ರಮುಖ ಬದಲಾವಣೆಯಾಗಿದೆ. ತಂಡದ ಅನುಭವಿ ಸ್ಪಿನ್ನರ್ ಆಶ್ಟನ್ ಅಗರ್ (Ashton Agar) ಇಂಜುರಿಯಿಂದ ಹೊರಗುಳಿದಿದ್ದು, ಅನುಭವಿ ಬ್ಯಾಟರ್ ಮಾರ್ನಸ್ ಲಬುಶೇನ್ರನ್ನು (Marnus Labuschagne) ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ.
ಎರಡು ಸರಣಿಗಳಲ್ಲಿ ಲಬುಶೇನ್ ಮಿಂಚು
ಏಕದಿನ ವಿಶ್ವಕಪ್ ಟೂರ್ನಿಗೆ ಮಾರ್ನಸ್ ಲಬುಶೇನ್ ಮೊದಲು ಆಯ್ಕೆಯಾಗಿರಲಿಲ್ಲ. ಇದರಿಂದ ಲಬುಶೇನ್ ಭಾರಿ ಅಸಮಾಧಾನಕ್ಕೆ ಒಳಗಾಗಿದ್ದರು. ಆದರೆ, ದಕ್ಷಿಣ ಆಫ್ರಿಕಾ ಮತ್ತು ಭಾರತದ ವಿರುದ್ಧದ ಏಕದಿನ ಸರಣಿಗಳಲ್ಲಿ ಅದ್ಭುತ ಪ್ರದರ್ಶನ ತೋರಿದ ಪರಿಣಾಮ, ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ದೊರಕಿಸಿಕೊಟ್ಟಿದೆ. ಅವಕಾಶ ಸಿಗದ ಹಿನ್ನೆಲೆಯಲ್ಲಿ ಬ್ಯಾಟ್ ಮೂಲಕವೇ ಆಯ್ಕೆಗಾರರಿಗೆ ಬಿಸಿ ಮುಟ್ಟಿಸಿದ್ದರು. ಇದೀಗ ಆಶ್ಟನ್ ಅಗರ್ ಗಾಯಗೊಂಡಿದ್ದು, ಲಬುಶೇನ್ಗೆ ಅದೃಷ್ಟದ ಬಾಗಿಲು ತೆರೆದಿದೆ.
ಸೌತ್ ಆಫ್ರಿಕಾ ವಿರುದ್ಧ ಲಬುಶೇನ್ ಅಬ್ಬರ
ಟೀಮ್ ಇಂಡಿಯಾ ಎದುರಿನ ಸರಣಿಗೂ ಮುನ್ನ 5 ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಲಬುಶೇನ್ ಅದ್ಭುತ ಪ್ರದರ್ಶನ ನೀಡಿದ್ದರು. ಹರಿಣಗಳ ವಿರುದ್ಧ ಆಸ್ಟ್ರೇಲಿಯಾ ಏಕದಿನ ಸರಣಿ ಸೋತಿತ್ತು. ಇದರ ನಡುವೆಯೂ ಆಸ್ಟ್ರೇಲಿಯಾ ತಂಡದ ಪರ ಅಧಿಕ ರನ್ ಗಳಿಸಿದ ಆಟಗಾರ ಎನಿಸಿದ್ದರು. ಮೊದಲ ಎರಡು ಪಂದ್ಯಗಳಲ್ಲಿ 80 ಮತ್ತು 124 ರನ್ ಗಳಿಸಿ ಆಸ್ಟ್ರೇಲಿಯಾ ಸರಣಿ ಮುನ್ನಡೆಗೆ ಕಾರಣರಾಗಿದ್ದರು. ಆದರೆ, ಕೊನೆಯ 3 ಪಂದ್ಯಗಳಲ್ಲಿ ಸೌತ್ ಆಫ್ರಿಕಾ ಗೆದ್ದು ಸರಣಿ ವಶಪಡಿಸಿಕೊಂಡಿತು. ಲಬುಶೇನ್ ಆಡಿದ ಐದು ಪಂದ್ಯಗಳಲ್ಲಿ 283 ರನ್ ಗಳಿಸಿ ಸರಣಿಯಲ್ಲಿ ಅಗ್ರಸ್ಕೋರರ್ ಆಗಿದ್ದರು.
ಭಾರತದ ವಿರುದ್ಧವೂ ಅಬ್ಬರ
ದಕ್ಷಿಣ ಆಫ್ರಿಕಾ ಎದುರು ಅಬ್ಬರಿಸಿದ ನಂತರ ಟೀಮ್ ಇಂಡಿಯಾ ವಿರುದ್ಧವೂ ಮಾರ್ನಸ್ ಲಬುಶೇನ್ ಅದ್ಭುತ ಪ್ರದರ್ಶನ ನೀಡಿದ್ದರು. ರಾಜ್ಕೋಟ್ನಲ್ಲಿ ನಡೆದ ಕೊನೆಯ ಹಾಗೂ 3ನೇ ಏಕದಿನ ಪಂದ್ಯದಲ್ಲಿ ಅಮೋಘ ಅರ್ಧಶತಕ ಸಿಡಿಸಿದರು. ಆ ಮೂಲಕ ಆಸೀಸ್ ಬೃಹತ್ ಮೊತ್ತ ಕಲೆ ಹಾಕುವುದಲ್ಲದೆ, ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಭಾರತದ ವಿರುದ್ಧವೂ 3 ಪಂದ್ಯಗಳಲ್ಲಿ 46ರ ಬ್ಯಾಟಿಂಗ್ ಸರಾಸರಿಯಲ್ಲಿ 138 ರನ್ ಗಳಿಸಿದ್ದರು.
ಏಕದಿನ ವಿಶ್ವಕಪ್ಗೆ ಆಸ್ಟ್ರೇಲಿಯಾ ಅಂತಿಮ ತಂಡ
ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಕ್ಯಾಮರೂನ್ ಗ್ರೀನ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಮಾರ್ನಸ್ ಲಬುಶೇನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯ್ನಿಸ್, ಡೇವಿಡ್ ವಾರ್ನರ್, ಆ್ಯಡಂ ಜಂಪಾ, ಮಿಚೆಲ್ ಸ್ಟಾರ್ಕ್.