logo
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ: ವೇಗದ ಸೆನ್ಸೇಷನ್ ಮಯಾಂಕ್ ಯಾದವ್ ಆಯ್ಕೆ; ಪಂತ್-ಗಿಲ್‌ಗೆ ವಿಶ್ರಾಂತಿ

ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ: ವೇಗದ ಸೆನ್ಸೇಷನ್ ಮಯಾಂಕ್ ಯಾದವ್ ಆಯ್ಕೆ; ಪಂತ್-ಗಿಲ್‌ಗೆ ವಿಶ್ರಾಂತಿ

Jayaraj HT Kannada

Sep 28, 2024 11:05 PM IST

google News

ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ: ಮಯಾಂಕ್ ಯಾದವ್ ಆಯ್ಕೆ

    • ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟಿಸಲಾಗಿದ್ದು, ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ. ವೇಗದ ಬೌಲರ್‌ ಮಯಾಂಕ್‌ ಯಾದವ್‌ ಇದೇ ಮೊದಲ ಬಾರಿಗೆ ಟೀಮ್‌ ಇಂಡಿಯಾಗೆ ಆಯ್ಕೆಯಾಗಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ: ಮಯಾಂಕ್ ಯಾದವ್ ಆಯ್ಕೆ
ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ: ಮಯಾಂಕ್ ಯಾದವ್ ಆಯ್ಕೆ

ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ಹಿರಿಯ ಆಯ್ಕೆ ಸಮಿತಿಯು, ಹೊಸಬರಿಗೆ ಮಣೆ ಹಾಕಿದ್ದು, ಐಪಿಎಲ್‌ನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದ ವೇಗದ ಬೌಲರ್ ಮಯಾಂಕ್ ಯಾದವ್ ಇದೇ ಮೊದಲ ಬಾರಿಗೆ ಟೀಮ್‌ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಟೆಸ್ಟ್‌ ಸರಣಿ ಮುಗಿದ ನಂತರ ಅಕ್ಟೋಬರ್ 6ರಿಂದ ಚುಟುಕು ಸರಣಿ ಆರಂಭವಾಗಲಿದೆ. ಬೆರಳಿನ ಗಾಯದಿಂದಾಗಿ ದುಲೀಪ್ ಟ್ರೋಫಿಯಿಂದ ಹೊರಗುಳಿದಿದ್ದ ಸೂರ್ಯಕುಮಾರ್ ಯಾದವ್, ಚುಟುಕು ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ತಂಡಕ್ಕೆ ಮರಳಿದ್ದಾರೆ. ಆದರೆ, ನಿರೀಕ್ಷೆಯಂತೆ ಟೆಸ್ಟ್ ಆಟಗಾರರಾದ ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ರಿಷಭ್ ಪಂತ್‌ಗೆ ವಿಶ್ರಾಂತಿ ನೀಡಲಾಗಿದೆ. ಸಂಜು ಸ್ಯಾಮ್ಸನ್ ಅವರನ್ನು ಮೊದಲ ಆಯ್ಕೆಯ ಕೀಪರ್ ಹಾಗೂ ಬ್ಯಾಟರ್ ಆಗಿ ಆಯ್ಕೆ ಮಾಡಲಾಗಿದೆ. ಜಿತೇಶ್ ಶರ್ಮಾ ಅವರನ್ನು ಬ್ಯಾಕಪ್ ಕೀಪರ್ ಆಗಿ ಹೆಸರಿಸಲಾಗಿದೆ.

ಐಪಿಎಲ್ 2024ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ವೇಗದ ಬೌಲರ್‌ ಮಯಾಂಕ್ ಯಾದವ್ ಮಿಂಚಿದ್ದರು. ನಿಯಮಿತವಾಗಿ ಗಂಟೆಗೆ 150 ಕಿ.ಮೀ ವೇಗದಿಂದ ಬೌಲಿಂಗ್‌ ಮಾಡಿ ಮನೆಮಾತಾಗಿದ್ದರು. ಆದರೆ, ಗಾಯದಿಂದ ಬಳಲುತ್ತಿದ್ದ ಬಲಗೈ ವೇಗಿ ಟೀಮ್‌ ಇಂಡಿಯಾದಲ್ಲಿ ಅವಕಾಶ ಪಡೆಯುವಲ್ಲಿ ಈವರೆಗೂ ವಿಫಲವಾಗಿದ್ದರು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬಿಸಿಸಿಐ ವೈದ್ಯಕೀಯ ತಂಡದ ಕಣ್ಗಾವಲಿನಲ್ಲಿದ್ದ ಅವರು, ಇದೀಗ ಕೊನೆಗೂ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಆರಂಭಿಕ ಆಟಗಾರ ಒಬ್ಬನೇ

ಅತ್ತ, ಸನ್‌ರೈಸರ್ಸ್ ಹೈದರಾಬಾದ್ ಕ್ರಿಕೆಟಿಗರಾದ ಅಭಿಷೇಕ್ ಶರ್ಮಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಕೂಡ ಶ್ರೀಲಂಕಾ ಟಿ20 ಸರಣಿಯಿಂದ ಹೊರಗುಳಿದ ನಂತರ ತಂಡಕ್ಕೆ ಮರಳಿದ್ದಾರೆ. ಜಿಂಬಾಬ್ವೆಯಲ್ಲಿ ಚೊಚ್ಚಲ ಶತಕ ಬಾರಿಸಿದ ಅಭಿಷೇಕ ಶ್ರೀಲಂಕಾದಲ್ಲಿ ನಡೆದ ಮೂರು ಪಂದ್ಯಗಳ ಟಿ20 ಸರಣಿಗೆ ಆಯ್ಕೆಯಾಗಿರಲಿಲ್ಲ. ಕುತೂಹಲಕಾರಿ ಸಂಗತಿಯೆಂದರೆ, 15 ಸದಸ್ಯರ ತಂಡದಲ್ಲಿ ಏಕೈಕ ನಿಯೋಜಿತ ಆರಂಭಿಕ ಆಟಗಾರರಾಗಿರುವುದು ಅಭಿಷೇಕ್‌ ಶರ್ಮಾ ಒಬ್ಬರೆ. ಹೀಗಾಗಿ ಸಂಜು ಸ್ಯಾಮ್ಸನ್ ಅವರೊಂದಿಗೆ ಬ್ಯಾಟಿಂಗ್ ಆರಂಭಿಸುವ ಸಾಧ್ಯತೆಯಿದೆ.

ಗಮನಾರ್ಹ ಬೆಳವಣಿಗೆಯೆಂದರೆ, ಸ್ಪಿನ್ನರ್ ವರುಣ್ ಚಕ್ರವರ್ತಿ ಮೂರು ವರ್ಷಗಳ ನಂತರ ಭಾರತ ಟಿ20 ತಂಡಕ್ಕೆ ಮರಳಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ಲೆಗ್ ಸ್ಪಿನ್ನರ್ 2021ರಲ್ಲಿ ದುಬೈನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಭಾರತದ ಪರ ಆಡಿದ್ದರು.

ಭಾರತ ಟಿ20 ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಮಯಾಂಕ್ ಯಾದವ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ