Mitchell Starc Profile: 24 ಕೋಟಿಗೊಬ್ಬ; ದುಬಾರಿ ವೇಗಿ ಮಿಚೆಲ್ ಸ್ಟಾರ್ಕ್ ವೃತ್ತಿಬದುಕಿನ ಚಿತ್ರಣ
Dec 20, 2023 11:38 AM IST
ಮಿಚೆಲ್ ಸ್ಟಾರ್ಕ್ ಪ್ರೊಫೈಲ್
- Mitchell Starc Profile: ಐಪಿಎಲ್ 2024ರ ಮಿನಿ ಹರಾಜಿನಲ್ಲಿ ದಾಖಲೆಯ 24.75 ಕೋಟಿ ರೂಪಾಯಿಗೆ ಆಸೀಸ್ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಖರೀದಿಯಾಗಿದ್ದಾರೆ. ಇವರ ವ್ಯಕ್ತಿ ಚಿತ್ರಣ ಇಲ್ಲಿದೆ.
Mitchell Starc Profile in Kannada: ಐಪಿಎಲ್ 2015ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ್ದ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ (Mitchell Starc), ಆ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ ಕಡೆ ಮುಖ ಮಾಡಿರಲಿಲ್ಲ. ಆ ಆವೃತ್ತಿಯಲ್ಲಿ ಆಡಿದ್ದ 13 ಪಂದ್ಯಗಳಲ್ಲಿ ಬರೋಬ್ಬರಿ 20 ವಿಕೆಟ್ ಕಬಳಿಸಿದ್ದ ವೇಗಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಮತ್ತೆ ಯಾವಾಗ ಮರಳುತ್ತಾರೆ ಎಂದು ಫ್ರಾಂಚೈಸಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದವು. ಇದೀಗ ಏಕದಿನ ವಿಶ್ವಕಪ್‌ನಲ್ಲಿ ಅಬ್ಬರಿಸಿ, ಆಸ್ಟ್ರೇಲಿಯಾ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಮಹತ್ವದ ಕೊಡುಗೆ ನೀಡಿದ್ದ ವೇಗಿ ಮತ್ತೊಮ್ಮೆ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಆಡಲು ಮುಂದಾಗಿದ್ದಾರೆ. ಅದರಂತೆಯೇ ಹರಾಜಿಗೆ ನಿಂತ ಅವರು ದಾಖಲೆಯ ದುಬಾರಿ ಮೊತ್ತಕ್ಕೆ ಸೇಲಾಗಿದ್ದಾರೆ. ಹಾಗಿದ್ರೆ ಮಿಚೆಲ್ ಸ್ಟಾರ್ಕ್ ಯಾರು, ಅವರ ಕುರಿತ ಇನ್ನಷ್ಟು ಮಾಹಿತಿ ಇಲ್ಲಿ ತಿಳಿಯೋಣ.
ಮಂಗಳವಾರ (ಡಿಸೆಂಬರ್ 19) ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ದಾಖಲೆಯ 24.70 ಕೋಟಿ ರೂಪಾಯಿಗೆ ಆಸೀಸ್ ಎಡಗೈ ವೇಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಖರೀದಿಯಾಗಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಅಬ್ಬರಿಸಿದ್ದ ವೇಗಿದ ಬೌಲರ್ ಅನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಕೆಕೆಆರ್ ಯಶಸ್ವಿಯಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತಕ್ಕೆ ಮಾರಾಟವಾದ ಆಟಗಾರ ಎಂಬ ದಾಖಲೆ ಇದೀಗ ಸ್ಟಾರ್ಕ್ ಹೆಸರಲ್ಲಿದೆ.
ಇದನ್ನೂ ಓದಿ | ಐಪಿಎಲ್ಗಿಂತ ದೇಶಕ್ಕಾಗಿ ಆಡುವುದೇ ಮುಖ್ಯ ಎಂದಿದ್ದ ಸ್ಟಾರ್ಕ್‌ಗೆ ಹಣದ ಹೊಳೆ ಹರಿಸಿದ ಕೆಕೆಆರ್
ಸ್ಟಾರ್ಕ್ ಪೂರ್ತಿ ಹೆಸರು ಮಿಚೆಲ್ ಆರನ್ ಸ್ಟಾರ್ಕ್. ಹುಟ್ಟಿದ್ದು 1990ರ ಜನವರಿ 30ರಂದು. 2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ ಎಡಗೈ ವೇಗದ ಬೌಲರ್, ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಹಲವು ವರ್ಷಗಳಿಂದ ಕಾಯಂ ಸದಸ್ಯರಾಗಿದ್ದಾರೆ. ಬೌಲಿಂಗ್ ಮಾತ್ರವಲ್ಲದೆ ಕೆಳ ಕ್ರಮಾಂಕದ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ನೆರವಾಗಲಬಲ್ಲರು.
ಮಿಚೆಲ್ ಸ್ಟಾರ್ಕ್ ಪ್ರೊಫೈಲ್
- ಹೆಸರು : ಮಿಚೆಲ್ ಆರನ್ ಸ್ಟಾರ್ಕ್
- ಅಡ್ಡ ಹೆಸರು : ಮಿಚ್
- ಜನನ : ಜನವರಿ 30, 1990
- ವಯಸ್ಸು : 33 ವರ್ಷ
- ಹುಟ್ಟಿದ ಸ್ಥಳ : ಬಾಲ್ಕಮ್ ಹಿಲ್ಸ್, ಸಿಡ್ನಿ, ನ್ಯೂ ಸೌತ್ ವೇಲ್ಸ್
- ಎತ್ತರ : 1.96 ಮೀಟರ್ (6.6)
- ಪತ್ನಿ ಹೆಸರು: ಅಲಿಸಾ ಹೀಲಿ
- ರೋಲ್ : ಬೌಲರ್
- ಬ್ಯಾಟಿಂಗ್ ಶೈಲಿ : ಎಡಗೈ ಬ್ಯಾಟರ್
- ಬೌಲಿಂಗ್ ಶೈಲಿ : ಎಡಗೈ ವೇಗದ ಬೌಲರ್
- ಟೆಸ್ಟ್ ಪದಾರ್ಪಣೆ : 2011ರ ಡಿಸೆಂಬರ್ 1 (ನ್ಯೂಜಿಲೆಂಡ್ ವಿರುದ್ಧ)
- ಏಕದಿನ ಪದಾರ್ಪಣೆ : 2010ರ ಅಕ್ಟೋಬರ್ 20 (ಭಾರತ ವಿರುದ್ಧ)
- ಏಕದಿನ ಜೆರ್ಸಿ ಸಂಖ್ಯೆ : 56
- ಟಿ20 ಪದಾರ್ಪಣೆ : 2012ರ ಸೆಪ್ಟೆಂಬರ್ 7 (ಪಾಕಿಸ್ತಾನ ವಿರುದ್ಧ)
- ಆಡುವ ತಂಡಗಳು : ಆಸ್ಟ್ರೇಲಿಯಾ, ನ್ಯೂ ಸೌತ್ ವೇಲ್ಸ್, ಸಿಡ್ನಿ ಸಿಕ್ಸರ್ಸ್, ಯಾರ್ಕ್‌ಷೈರ್, ಆಸ್ಟ್ರೇಲಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸಿಡ್ನಿ ಥಂಡರ್, ಕೋಲ್ಕತ್ತಾ ನೈಟ್ ರೈಡರ್ಸ್, ಆಸ್ಟ್ರೇಲಿಯಾ ಎ, ಫಿಂಚ್ XI
ತಮ್ಮ ವೃತ್ತಿಜೀವನದಲ್ಲಿ ಆಗಾಗ ಗಾಯಕ್ಕೆ ತುತ್ತಾಗಿರುವ ಸ್ಟಾರ್ಕ್, ಅವಕಾಶ ಸಿಕ್ಕ ಪಂದ್ಯ ಹಾಗೂ ಪಂದ್ಯಾವಳಿಗಳಲ್ಲಿ ಅಬ್ಬರಿಸಿದ್ದಾರೆ. ಕ್ರಿಕೆಟ್ ಬದುಕಿನಲ್ಲಿ ಅವರ ಪ್ರಮುಖ ಸಾಧನೆಗಳು ಹೀಗಿವೆ.
- ಆಸ್ಟ್ರೇಲಿಯಾ ತಂಡವು 2015ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಸ್ಟಾರ್ಕ್ ಪಾತ್ರ ಮಹತ್ವದ್ದು. ಪಂದ್ಯಾವಳಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದ್ದ ಸ್ಟಾರ್ಕ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
- 2023ರ ಏಕದಿನ ವಿಶ್ವಕಪ್ ಗೆದ್ದ ಆಸೀಸ್ ತಂಡದ ಸದಸ್ಯರಾಗಿದ್ದರು. ಟೂರ್ನಿಯಲ್ಲಿ 16 ವಿಕೆಟ್ ಪಡೆದು ಮಿಂಚಿದರು. ಫೈನಲ್ ಪಂದ್ಯದಲ್ಲಿ ಭಾರತದ ಶುಭ್ಮನ್ ಗಿಲ್, ಕೆಎಲ್ ರಾಹುಲ್ ಸೇರಿದಂತೆ 3 ವಿಕೆಟ್ ಪಡೆದು ಟೀಮ್ ಇಂಡಿಯಾವನ್ನು ಕಾಡಿದ್ದರು.
- 2019ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಬರೋಬ್ಬರಿ 27 ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದರು. ಪಂದ್ಯಾವಳಿಯ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಸಾರ್ವಕಾಲಿಕ ದಾಖಲೆ ಇದಾಗಿದೆ.
- ಏಕದಿನ ವಿಶ್ವಕಪ್‌ಗಳಲ್ಲಿ 3ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಸ್ಟಾರ್ಕ್.
- ಏಕದಿನ ಇತಿಹಾಸದಲ್ಲಿ 150 ಮತ್ತು 200 ವಿಕೆಟ್‌ಗಳನ್ನು ಅತಿ ವೇಗವಾಗಿ ತಲುಪಿದ ಬೌಲರ್. ಈ ಸಾಧನೆಯನ್ನು ಕೇವಲ (ಕ್ರಮವಾಗಿ) 77 ಮತ್ತು 102 ಪಂದ್ಯಗಳಲ್ಲಿ ಮಾಡಿದ್ದಾರೆ.
- ಏಕದಿನ ವಿಶ್ವಕಪ್ ಇತಿಹಾಸದಲ್ಲಿ 50 ವಿಕೆಟ್‌ಗಳನ್ನು ತಲುಪಿದ ವೇಗದ ಬೌಲರ್ ಎಂಬ ಹೆಗ್ಗಳಿಕೆ ಇವರದ್ದು. ಕೇವಲ 19 ವಿಶ್ವಕಪ್ ಪಂದ್ಯಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದಾರೆ.
- ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ಐಸಿಸಿ ಟ್ರೋಫಿ ಗೆದ್ದಿರುವ ಐವರು ಆಟಗಾರರಲ್ಲಿ ಸ್ಟಾರ್ಕ್ ಕೂಡಾ ಒಬ್ಬರು.
- ಟೆಸ್ಟ್ ಪಂದ್ಯದಲ್ಲಿ ದಾಖಲಾದ ಅತ್ಯಂತ ವೇಗದ ಎಸೆತ ಎಸೆದವರು ಸ್ಟಾರ್ಕ್. ಗಂಟೆಗೆ 160.4 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿ ದಾಖಲೆ ನಿರ್ಮಿಸಿದ್ದಾರೆ.
- 2015ರ ವಿಶ್ವಕಪ್‌ನಲ್ಲಿ ಅಬ್ಬರಿಸಿದ್ದ ವೇಗಿ, ಬೌಲಿಂಗ್‌ನಲ್ಲಿ ನಂಬರ್ ವನ್ ಶ್ರೇಯಾಂಕ ಪಡೆದಿದ್ದರು.
ವಿಕೆಟ್ ಸಾಧನೆ
ಟೆಸ್ಟ್ ಕ್ರಿಕೆಟ್‌ನಲ್ಲಿಆಡಿದ 83 ಪಂದ್ಯದ 158 ಇನ್ನಿಂಗ್ಸ್‌ಗಳಲ್ಲಿ ಒಟ್ಟು 338 ವಿಕೆಟ್ ಕಬಳಿಸಿದ್ದಾರೆ. ಏಕದಿನ ಮಾದರಿಯಲ್ಲಿ 121 ಪಂದ್ಯಗಳಿಂದ 236 ವಿಕೆಟ್ ಎಗರಿಸಿದ್ದಾರೆ. ಟಿ20 ಸ್ವರೂಪದಲ್ಲಿ 58 ಪಂದ್ಯಗಳಲ್ಲಿ 73 ವಿಕೆಟ್ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಒಟ್ಟು 27 ಪಂದ್ಯಗಳನ್ನು 34 ವಿಕೆಟ್ ಕಿತ್ತಿದ್ದಾರೆ.
ಇದನ್ನೂ ಓದಿ | ಐಪಿಎಲ್ ಟ್ರೋಫಿ ಗೆದ್ದ ತಂಡಕ್ಕೆ ಸಿಗುವ ಹಣಕ್ಕಿಂತ ಸ್ಟಾರ್ಕ್ ಸಂಭಾವನೆ ಜಾಸ್ತಿ, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್
ಸದ್ಯ ಮುಂಬರುವ ಐಪಿಎಲ್‌ನಲ್ಲಿ ಸ್ಟಾರ್ಕ್ ಮೇಲೆ ಭಾರಿ ನಿರೀಕ್ಷೆಗಳಿವೆ. 8 ವರ್ಷಗಳಿಂದ ಲೀಗ್‌ನತ್ತ ಮುಖ ಮಾಡದ ಅವರು, ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ಗೆ ಸಿದ್ಧತೆಗೆಂದು ಐಪಿಎಲ್ ಆಡಲು ಮುಂದಾಗಿರುವುದು ರಹಸ್ಯವಾಗಿ ಉಳಿದಿಲ್ಲ. ಐಪಿಎಲ್‌ಗಿಂದ ದೇಶಕ್ಕಾಗಿ ಆಡುವುದೇ ಮುಖ್ಯ ಎಂದಿದ್ದ ವೇಗಿ, ಇದೀಗ ಅದೇ ಐಪಿಎಲ್ ಟೂರ್ನಿಯನ್ನು ತಮ್ಮ ಅಂತಾರಾಷ್ಟ್ರೀಯ ಪ್ರದರ್ಶನಕ್ಕೆ ಪ್ರೇರಣೆಯಾಗಿ ಭಾವಿಸಿದ್ದಾರೆ.
ಇನ್ನಿತರ ಪ್ರೊಫೈಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ