ವಿರಾಟ್ ಕೊಹ್ಲಿಯಿಂದ ನಾವು ತುಂಬಾ ಕಲಿತಿದ್ದೇವೆ; ಅವರ ಬಗ್ಗೆ ಗೌರವ ಇದೆ ಎಂದ ಮೊಹಮ್ಮದ್ ರಿಜ್ವಾನ್
May 13, 2024 03:52 PM IST
ವಿರಾಟ್ ಕೊಹ್ಲಿಯಿಂದ ನಾವು ತುಂಬಾ ಕಲಿತಿದ್ದೇವೆ ಎಂದ ಮೊಹಮ್ಮದ್ ರಿಜ್ವಾನ್
- ವಿರಾಟ್ ಕೊಹ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ಸಾಕಷ್ಟು ಕಲಿತಿರುವುದಾಗಿ ಮೊಹಮ್ಮದ್ ರಿಜ್ವಾನ್ ಹೇಳಿದ್ದಾರೆ. ಅಲ್ಲದೆ ಭಾರತ ತಂಡದ ದಿಗ್ಗಜ ಆಟಗಾರನನ್ನು ಅತಿಯಾಗಿ ಗೌರವಿಸುವುದಾಗಿ ಪಾಕ್ ಆಟಗಾರ ಹೇಳಿಕೊಂಡಿದ್ದಾರೆ.
ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭರ್ಜರಿ ಜಯ ಸಾಧಿಸಿತು. ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಮೊಹಮ್ಮದ್ ರಿಜ್ವಾನ್ (Mohammad Rizwan) ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದರು. ಕೇವಲ 46 ಎಸೆತಗಳನ್ನು ಎದುರಿಸಿದ ಅವರು ಅಜೇಯ 75 ರನ್ ಗಳಿಸುವ ಮೂಲಕ ಸರಣಿ ಸಮಬಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೇ ವೇಳೆ ರಿಜ್ವಾನ್ ಟಿ20 ಪಂದ್ಯಗಳಲ್ಲಿ 12ನೇ ಬಾರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು. ಚುಟುಕು ಸ್ವರೂಪದಲ್ಲಿ ಉತ್ತಮ ಸರಾಸರಿಯೊಂದಿಗೆ ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದರು. ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಕುರಿತು ಅವರು ಪ್ರಾಮಾಣಿಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಐರ್ಲೆಂಡ್ ಪ್ರವಾಸ ಕೈಗೊಂಡಿರುವ ಬಾಬರ್ ಅಜಮ್ ಬಳಗವು, ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿತ್ತು. ಸರಣಿ ಗೆಲುವಿಗಾಗಿ ಎರಡನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಐರಿಶ್ ತಂಡವು, ಭರ್ಜರಿ ಬ್ಯಾಟಿಂಗ್ ಮಾಡಿ 193 ರನ್‌ಗಳ ಬೃಹತ್ ಗುರಿ ನೀಡಿತು. ಇದಕ್ಕೆ ಪ್ರತಿಯಾಗಿ ಕಳಪೆ ಆರಂಭ ಪಡೆದ ಪಾಕ್, ಆ ಬಳಿಕ ಪುಟಿದೆದ್ದಿತು. ಫಖರ್ ಜಮಾನ್ ಜೊತೆಗೂಡಿದ ರಿಜ್ವಾನ್ ಆತಿಥೇಯ ತಂಡದ ವಿರುದ್ಧ 140 ರನ್‌ಗಳ ರೋಚಕ ಜೊತೆಯಾಟವಾಡಿದರು. ಫಕರ್ 40 ಎಸೆತಗಳಲ್ಲಿ 78 ರನ್ ಗಳಿಸಿ ಔಟಾದರೆ, ಅಜಾಮ್ ಖಾನ್ ಕೇವಲ 10 ಎಸೆತಗಳಲ್ಲಿ 30 ರನ್ ಗಳಿಸಿದರು. ಅಜಾಮ್ ಹಾಗೂ ರಿಜ್ವಾನ್ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದನ್ನೂ ಓದಿ | ಪ್ಲೇಆಫ್ ಪ್ರವೇಶಿಸಿದ ಕೆಕೆಆರ್ಗೆ ಡಬಲ್ ಆಘಾತ; ವಿಂಡೀಸ್ ಸ್ಟಾರ್ ಆಲ್ರೌಂಡರ್, ಇಂಗ್ಲೆಂಡ್ ಓಪನರ್ ರೂಲ್ಡ್ ಔಟ್?
ಪಂದ್ಯದ ನಂತರ ಮಾತನಾಡಿದ ರಿಜ್ವಾನ್, ಟಿ20 ಕ್ರಿಕೆಟ್‌ನಲ್ಲಿ 50ಕ್ಕೂ ಅಧಿಕ ಸರಾಸರಿ ಹೊಂದಿರುವ ಕುರಿತು ಮಾತನಾಡಿದರು. ವಿರಾಟ್ ಕೊಹ್ಲಿ ಬಳಿಕ ಈ ಸಾಧನೆ ಮಾಡಿದ ಏಕೈಕ ಆಟಗಾರ ಎಂಬ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಭಾರತೀಯ ದಿಗ್ಗಜ ಬ್ಯಾಟರ್ ವಿರಾಟ್ ಅವರಿಂದ ತಾನು ಸಾಕಷ್ಟು ಕಲಿತಿರುವುದಾಗಿ ರಿಜ್ವಾನ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಮೇಲೆ ತುಂಬಾ ಗೌರವವಿದೆ
ಪತ್ರಕರ್ತರ ಪ್ರಶ್ನೆಗೆ ನಾಜೂಕಾಗಿ ಉತ್ತರಿಸಿದ ರಿಜ್ವಾನ್, “ಆಟದಲ್ಲಿ ಸರಾಸರಿಯನ್ನು ಗಮನದಲ್ಲಿಟ್ಟುಕೊಂಡು ಆಡಿದರೆ, ಸರಾಸರಿ ಆಟಗಾರನಷ್ಟೇ ಆಗುತ್ತಾರೆ. ಇದೇ ವೇಳೆ ಪರಿಸ್ಥಿತಿಯ ಆಧಾರದಲ್ಲಿ, ಪಂದ್ಯದ ಬೇಡಿಕೆಗನುಗುಣವಾಗಿ ಆಡಿದರೆ ಇನ್ನಷ್ಟು ಉತ್ತಮ ಆಟಗಾರನಾಗಬಹುದು. ವಿರಾಟ್ ಕೊಹ್ಲಿಯಿಂದ ನಾವು ಸಾಕಷ್ಟು ವಿಷಯಗಳನ್ನು ಕಲಿತಿದ್ದೇವೆ. ನಾನು ಅವರನ್ನು ತುಂಬಾ ಗೌರವಿಸುತ್ತೇನೆ” ಎಂದು ರಿಜ್ವಾನ್ ಹೇಳಿದ್ದಾರೆ.
ಚುಟುಕು ಸ್ವರೂಪದ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ರಿಜ್ವಾನ್ ಅಸಾಧಾರಣ ದಾಖಲೆ ಹೊಂಡಿದ್ದಾರೆ. ವಿರಾಟ್ ಕೊಹ್ಲಿ ಆಡಿರುವ 109 ಇನ್ನಿಂಗ್ಸ್‌ಗಳಲ್ಲಿ 51.75ರ ಸರಾಸರಿಯಲ್ಲಿ 4037 ರನ್ ಗಳಿಸಿದ್ದರೆ, ರಿಜ್ವಾನ್ 82 ಇನ್ನಿಂಗ್ಸ್‌ಗಳಲ್ಲಿ 50.38ರ ಸರಾಸರಿಯಲ್ಲಿ 3124 ರನ್ ಗಳಿಸಿದ್ದಾರೆ.
ಮುಂಬರುವ ಜೂನ್ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮತ್ತೆ ಮುಖಾಮುಖಿಯಾಗಲಿವೆ. ಜೂನ್ 9ರಂದು ನ್ಯೂಯಾರ್ಕ್‌ನ ತಾತ್ಕಾಲಿಕ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಐಸಿಸಿ ಟಿ 20 ವಿಶ್ವಕಪ್‌ನಲ್ಲಿ ಒಂಬತ್ತನೇ ಬಾರಿಗೆ ಎದುರಾಗಲು ಸಜ್ಜಾಗಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದ ಕೊನೆಯ ಮುಖಾಮುಖಿಯಲ್ಲಿ ಪಾಕ್ ವಿರುದ್ಧ ಭಾರತ ರೋಚಕ ಜಯ ಸಾಧಿಸಿತ್ತು. ಈ ಬಾರಿ ರೋಚಕ ಕದನ ಹೇಗಿರಲಿದೆ ಎಂಬ ಕುತೂಹಲ ಭಾರತ ತಂಡಕ್ಕಿದೆ.