ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಎಸೆತದಲ್ಲೇ ವಿಕೆಟ್; ಅನಿಲ್ ಕುಂಬ್ಳೆ ವಿಶ್ವಕಪ್ ದಾಖಲೆ ಮುರಿದ ಶಮಿ
Oct 22, 2023 04:32 PM IST
ವಿಕೆಟ್ ಪಡೆದು ಮೊಹಮ್ಮದ್ ಶಮಿ ಸಂಭ್ರಮಾಚರಣೆ
- Mohammed Shami: ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿ ಹೊಸ ದಾಖಲೆ ಮಾಡಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಮೊದಲ ವಿಕೆಟ್ ಪಡೆಯುವುದರೊಂದಿಗೆ ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ ದಾಖಲೆ ಮುರಿದ್ದಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ (India vs New Zealand) ವಿಶ್ವಕಪ್ (ICC ODI World Cup 2023) ಪಂದ್ಯದಲ್ಲಿ ಮೊಹಮ್ಮದ್ ಶಮಿ (Mohammed Shami) ದಾಖಲೆ ನಿರ್ಮಿಸಿದ್ದಾರೆ. ಪ್ರಸಕ್ತ ಆವೃತ್ತಿಯ ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತ ಆಡುವ ಬಳಗ ಸೇರಿಕೊಂಡ ಅವರು, ಎಸೆದ ಮೊದಲ ಚೆಂಡಿನಲ್ಲೇ ವಿಕೆಟ್ ಪಡೆದಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಕಿವೀಸ್ ಇನ್ನಿಂಗ್ಸ್‌ನ 9ನೇ ಓವರ್ ಎಸೆಯಲು ಬಂದ ಶಮಿ, ವಿಲ್ ಯಂಗ್ ವಿಕೆಟ್ ಹಾರಿಸಿದರು. ಓವರ್‌ನ ಮೊದಲ ಎಸೆತದಲ್ಲೇ ಯಂಗ್ ಬ್ಯಾಟ್‌ಗೆ ಇನ್‌ಸೈಡ್ ಎಡ್ಜ್ ಆದ ಚೆಂಡು ಬೇಲ್ಸ್ ಹಾರಿಸಿತು. ಆ ಮೂಲಕ ಪ್ರಸಕ್ತ ವಿಶ್ವಕಪ್‌ನಲ್ಲಿ ಎಸೆದ ಮೊದಲ ಚೆಂಡಿನಲ್ಲೇ ವಿಕೆಟ್ ಪಡೆಯುವುದರ ಮೂಲಕ ಶಮಿ ದಾಖಲೆ ಬರೆದರು.
ಅನಿಲ್ ಕುಂಬ್ಳೆ ದಾಖಲೆ ಬ್ರೇಕ್
ವಿಶ್ವಕಪ್ ಇತಿಹಾಸದಲ್ಲಿ ಭಾರತದ ಪರ ಶಮಿ ಒಟ್ಟು 32 ವಿಕೆಟ್‌ಗಳನ್ನು ಕಬಳಿಸಿದರು. ಅಲ್ಲದೆ 31 ವಿಕೆಟ್ ಪಡೆದಿದ್ದ ಅನಿಲ್ ಕುಂಬ್ಳೆ ದಾಖಲೆಯನ್ನು ಮುರಿದಿದ್ದಾರೆ.
ಈವರೆಗೆ ವಿಶ್ವಕಪ್‌ನಲ್ಲಿ ಭಾರತದ ಪಪರ ಮಾಜಿ ವೇಗಿ ಜಹೀರ್ ಖಾನ್ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ದಾಖಲೆ ಹೊಂದಿದ್ದಾರೆ. ಜಹೀರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ 44 ವಿಕೆಟ್‌ಗಳೊಂದಿಗೆ ಮೊದಲೆರಡು ಸ್ಥಾನದಲ್ಲಿದ್ದಾರೆ. ಸದ್ಯ ಅನಿಲ್ ಕುಂಬ್ಳೆ ಬಳಿ ಇದ್ದ ಮೂರನೇ ಸ್ಥಾನವನ್ನು ಇದೀಗ ಮೊಹಮ್ಮದ್ ಶಮಿ ಪಡೆದಿದ್ದಾರೆ. ಕನ್ನಡಿಗನನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿದ್ದಾರೆ. ಅತ್ತ 28* ವಿಕೆಟ್ ಪಡೆದಿರುವ ಜಸ್ಪ್ರೀತ್ ಐದನೇ ಸ್ಥಾನದಲ್ಲಿದ್ದಾರೆ. ಪ್ರಸಕ್ತ ವಿಶ್ವಕಪ್ ಆವೃತ್ತಿಯಲ್ಲಿ ಈ ಇಬ್ಬರು ಬ್ಯಾಟ್‌ಗಳು ಆಡುತ್ತಿದ್ದು, ದಾಖಲೆ ನಿರ್ಮಿಸುವ ವಿಶ್ವಾಸದಲ್ಲಿದ್ದಾರೆ.
ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು
- ಜಹೀರ್ ಖಾನ್ -44
- ಜಾವಗಲ್ ಶ್ರೀನಾಥ್ -44
- ಮೊಹಮ್ಮದ್ ಶಮಿ -32*
- ಅನಿಲ್ ಕುಂಬ್ಳೆ -31
- ಜಸ್ಪ್ರೀತ್ ಬುಮ್ರಾ -28*
ಪ್ರಸಕ್ತ ಆವೃತ್ತಿಯ ವಿಶ್ವಕಪ್‌ನಲ್ಲಿ ಭಾರತ ಈವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಶಮಿ ಸ್ಥಾನ ಪಡೆದಿರಲಿಲ್ಲ. ಬಾಂಗ್ಲಾದೇಶ ವಿರುದ್ಧ ಭಾರತ ಆಡಿದ ಕೊನೆಯ ಪಂದ್ಯದಲ್ಲಿ ಕಾಲಿನ ಗಾಯದ ಸಮಸ್ಯೆಗೆ ಒಳಗಾಗಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಹಾರ್ದಿಕ್ ಬದಲಿಗೆ ಸೂರ್ಯಕುಮಾರ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇದೇ ವೇಳೆ ಶಾರ್ದೂಲ್ ಠಾಕೂರ್ ಅವರ ಬದಲಿಗೆ ಮೊಹಮ್ಮದ್ ಶಮಿಯನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಶಮಿ ಅವರನ್ನು ಆಡುವ ಬಳಗಕ್ಕೆ ಆಯ್ಕೆ ಮಾಡುವಂತೆ ವ್ಯಾಪಕ ಒತ್ತಾಯ ಕೇಳಿ ಬಂದಿದತ್ತು. ಅದರಂತೆ ಇಂದು ತಂಡದಲ್ಲಿ ಸ್ಥಾನ ಪಡೆದ ಅವರು, ಸಾಮರ್ಥ್ಯ ಪ್ರದರ್ಶಿಸಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ನ್ಯೂಜಿಲೆಂಡ್ ತಂಡ
ಡೆವೊನ್ ಕಾನ್ವೆ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್/ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.