logo
ಕನ್ನಡ ಸುದ್ದಿ  /  ಕ್ರಿಕೆಟ್  /  55 ರನ್‌ಗೆ ಆಲೌಟ್ ಆಗೋ ಪಿಚ್ ಅಲ್ಲ; ನ್ಯೂಲ್ಯಾಂಡ್ಸ್‌ನಲ್ಲಿ ಮಿಯಾನ್‌ ಮ್ಯಾಜಿಕ್ ಕುರಿತು ಸಿರಾಜ್ ಮಾತು

55 ರನ್‌ಗೆ ಆಲೌಟ್ ಆಗೋ ಪಿಚ್ ಅಲ್ಲ; ನ್ಯೂಲ್ಯಾಂಡ್ಸ್‌ನಲ್ಲಿ ಮಿಯಾನ್‌ ಮ್ಯಾಜಿಕ್ ಕುರಿತು ಸಿರಾಜ್ ಮಾತು

Jayaraj HT Kannada

Jan 04, 2024 11:52 AM IST

google News

ಮೊಹಮ್ಮದ್ ಸಿರಾಜ್

    • Mohammed Siraj: ಮೊದಲ ಟೆಸ್ಟ್‌ ಪಂದ್ಯದ ಬಳಿಕ ನಾನು ಎಲ್ಲಿ ತಪ್ಪು ಮಾಡಿದ್ದೇನೆ ಎಂಬುದನ್ನು ಅರ್ಥಮಾಡಿಕೊಂಡಿದ್ದೇನೆ. ನನ್ನನ್ನು ನಾನೇ ವಿಶ್ಲೇಷಿಸಲು ನನ್ನ ವಿಡಿಯೋಗಳನ್ನು ನೋಡುವ ಅಗತ್ಯವೂ ನನಗಿರಲಿಲ್ಲ ಎಂದು ಮೊಹಮ್ಮದ್‌ ಸಿರಾಜ್‌ ಹೇಳಿದ್ದಾರೆ.
ಮೊಹಮ್ಮದ್ ಸಿರಾಜ್
ಮೊಹಮ್ಮದ್ ಸಿರಾಜ್ (PTI)

ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ಟೌನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ (South Africa vs India 2nd Test) ಪಂದ್ಯದ ಮೊದಲ ದಿನದಾಟವು ಹಲವು ದಾಖಲೆಗಳಿಗೆ ಕಾರಣವಾಯ್ತು. ಒಂದೇ ದಿನ ಬರೋಬ್ಬರಿ 23 ವಿಕೆಟ್‌ಗಳು ಪತನವಾದವು. ಪಂದ್ಯದ ಮೊದಲ ಸೆಷನ್‌ನಲ್ಲಿಯೇ ಮಿಯಾನ್‌ ಮ್ಯಾಜಿಕ್‌ಗೆ ಆತಿಥೇಯರು ತತ್ತರಿಸಿದರು. ತಮ್ಮ ಟೆಸ್ಟ್ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಮೊಹಮ್ಮದ್ ಸಿರಾಜ್ (Mohammed Siraj), ದಾಖಲೆ ನಿರ್ಮಿಸಿದರು.

ಹರಿಣಗಳ ಬಳಗವು ಕೇವಲ 55 ರನ್‌ಗೆ ಆಲೌಟ್‌ ಆಯ್ತು. 24 ಓವರ್‌ಗಳ ಒಳಗೆ ಆತಿಥೇಯರು ಎಲ್ಲಾ ವಿಕೆಟ್ ಕಳೆದುಕೊಂಡರು. ಸಿರಾಜ್ ಕೇವಲ 15 ರನ್‌ ಬಿಟ್ಟುಕೊಟ್ಟು ಆರು ವಿಕೆಟ್‌ ಕಬಳಿಸಿದರು. ನ್ಯೂಲ್ಯಾಂಡ್ಸ್ ಪಿಚ್ ಇಡೀ ದಿನ ವೇಗದ ಬೌಲರ್‌ಗಳಿಗೆ ನೆರವಾಯ್ತು. ಬ್ಯಾಟರ್‌ಗಳ ಅಬ್ಬರ ಸಾಧ್ಯವಾಗಲಿಲ್ಲ. ಚಾಣಾಕ್ಷನ ಬೌಲಿಂಗ್‌ ಮಾಡುವ ಸಿರಾಜ್ ಸಾಮರ್ಥ್ಯವು ಹೆಚ್ಚು ವಿಕೆಟ್‌ ಪಡೆಯಲು ನೆರವಾಯ್ತು.‌

ನಾನು ನಿರೀಕ್ಷಿಸಿರಲಿಲ್ಲ

ದಿನದ ಆಟದ ಆರಂಭಕ್ಕೂ ಮುನ್ನ ನ್ಯೂಲ್ಯಾಂಡ್‌ ಪಿಚ್ ಆ ರೀತಿ ವರ್ತಿಸುತ್ತದೆ ಎಂದು ತಾನು ನಿರೀಕ್ಷಿಸಿರಲಿಲ್ಲ ಎಂದು ಸಿರಾಜ್ ಪಂದ್ಯದ ಬಳಿಕ ಹೇಳಿದ್ದಾರೆ. “ಬೆಳಗ್ಗೆ ನಾನು ವಿಕೆಟ್ ಅನ್ನು ನೋಡಿದಾಗ ಅದು 55 ರನ್‌ಗಳಿಗೆ ಆಲ್ಔಟ್ ಆಗುವ ಪಿಚ್‌ ಎಂದು ಭಾವಿಸಲಿಲ್ಲ. ಸಾಕಷ್ಟು ಬಿಸಿಲು ಇದ್ದಿದ್ದರಿಂದ ಪಿಚ್ ಬೌಲಿಂಗ್‌ಗೆ ಹೆಚ್ಚು ಸಹಾಯ ಮಾಡುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರಿಗೂ ಒತ್ತಡವಿತ್ತು. ಅವರು ಹೆಚ್ಚು ವಿಕೆಟ್‌ಗಳನ್ನು ಪಡೆಯಲಿಲ್ಲ. ಆದರೆ ಅವರು ಹೆಚ್ಚು ಒತ್ತಡವನ್ನು ಸೃಷ್ಟಿಸಿದರು” ಎಂದು ಸಿರಾಜ್ ಹೇಳಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ.

ಇದನ್ನೂ ಓದಿ | ಕೇವಲ 55 ರನ್‌ಗೆ ದಕ್ಷಿಣ ಆಫ್ರಿಕಾ ಆಲೌಟ್; ಹರಿಣಗಳ ಬ್ಯಾಟಿಂಗ್‌ ಲೈನಪ್‌ ಹಣ್ಣುಗಾಯಿ ನೀರುಗಾಯಿ ಮಾಡಿದ ಸಿರಾಜ್

ಮೇಡನ್ ಓವರ್‌ಗೆ 24ನೇ ಓವರ್‌ವರೆಗೆ ಕಾಯಬೇಕಾಯ್ತು

“ಮೊದಲ ಟೆಸ್ಟ್‌ ಪಂದ್ಯದಲ್ಲಿ, ನಾನು ಸಾಕಷ್ಟು ರನ್‌ ಬಿಟ್ಟುಕೊಟ್ಟಿದ್ದೇನೆ ಎಂದು ನನಗೆ ತಿಳಿದಿತ್ತು. ಅದರಿಂದ ನನಗೆ ತುಂಬಾ ಬೇಜಾರಾಗಿತ್ತು. ನನ್ನ ವೃತ್ತಿಜೀವನದಲ್ಲಿ ಮೊದಲ ಬಾರಿಗೆ, ಮೊದಲ ಮೇಡನ್ ಓವರ್ ಪಡೆಯಲು 24ನೇ ಓವರ್‌ವರೆಗೆ ಕಾಯಬೇಕಾಯಿತು. ನಾನು ಎಲ್ಲಿ ತಪ್ಪು ಮಾಡಿದ್ದೇನೆ ಎಂಬುದನ್ನು ಅರ್ಥಮಾಡಿಕೊಂಡಿದ್ದೇನೆ. ನನ್ನನ್ನು ನಾನೇ ವಿಶ್ಲೇಷಿಸಲು ನನ್ನ ವಿಡಿಯೋಗಳನ್ನು ನೋಡುವ ಅಗತ್ಯವೂ ನನಗಿರಲಿಲ್ಲ,” ಎಂದು ಸಿರಾಜ್‌ ಹೇಳಿದ್ದಾರೆ.

ಇದನ್ನೂ ಓದಿ | Video: ಎಲ್ಗರ್ ಕ್ಯಾಚ್ ಪಡೆದು ಸಂಭ್ರಮಾಚರಿಸಬೇಡಿ ಎಂದು ಪ್ರೇಕ್ಷಕರಿಗೆ ಹೇಳಿದ ವಿರಾಟ್; ಕೊಹ್ಲಿ ನಡೆಗೆ ವ್ಯಾಪಕ ಮೆಚ್ಚುಗೆ

ಮೊದಲ ದಿನದಾಟದ ಅಂತ್ಯದ ವೇಳೆಗೆ ದಕ್ಷಿಣ ಆಫ್ರಿಕಾ ತಂಡವು 62/3 ರನ್‌ ಗಳಿಸಿದೆ. ತಂಡವು 36 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ದಿನದಾಟ ಆಡಲಿದೆ. “ಎರಡನೇ ದಿನ ಏನಾಗುತ್ತದೆ ಎಂದು ನನ್ನಿಂದ ಊಹಿಸಲು ಸಾಧ್ಯವಿಲ್ಲ. ನಾವು ಅವರನ್ನು ಸಾಧ್ಯವಾದಷ್ಟು ಕಡಿಮೆ ಮೊತ್ತಕ್ಕೆ ಔಟ್ ಮಾಡಬೇಕು. ನಾವು ಇನ್ನೂ 40 ರನ್‌ಗಳ ಮುಂದೆ ಇರುವುದರಿಂದ ಹೆಚ್ಚು ಯೋಚಿಸುವ ಅಗತ್ಯವಿಲ್ಲ,” ಎಂದು ಅವರು ತಿಳಿಸಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಡೇವಿಡ್‌ ಬೆಡಿಂಗ್‌ಹ್ಯಾಮ್‌ (12) ಮತ್ತು ಕೈಲ್‌ ವೆರೆನ್ನೆ (15) ಹೊರತುಪಡಿಸಿದರೆ, ಬೇರೆ ಯಾವ ಬ್ಯಾಟರ್‌ಗಳು ಕೂಡಾ ಎರಡಂಕಿ ಮೊತ್ತ ಗಳಿಸಿಲ್ಲ. ಐಡೆನ್‌ ಮರ್ಕ್ರಾಮ್‌ ಮೊದಲನೆಯವರಾಗಿ ಕೇವಲ 2 ರನ್‌ಗೆ ಔಟಾದರೆ, ನಾಯಕ ಎಲ್ಗರ್‌ ಆಟ ಕೇವಲ 4 ರನ್‌ಗೆ ಅಂತ್ಯವಾಯ್ತು. ಸಿರಾಜ್‌ ಸತತ ಎರಡು ವಿಕೆಟ್‌ ಪಡೆದರೆ, ಸ್ಟಬ್ಸ್‌ ವಿಕೆಟ್‌ ಪಡೆದು ಬುಮ್ರಾ ಮಿಂಚಿದರು. ಈ ವೇಳೆ ಮತ್ತೆ ದಾಳಿ ಮುಂದುವರೆಸಿದ ಸಿರಾಜ್‌, ಜೊರ್ಜಿ ಮತ್ತು ಬೆಡಿಂಗ್‌ಹ್ಯಾಮ್‌ ವಿಕೆಟ್‌ ಪಡೆದರು. ಕಳೆದ ಪಂದ್ಯದಲ್ಲಿ ಭಾರತವನ್ನು ಕಾಡಿದ್ದ ಜಾನ್ಸೆನ್‌ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು. ಶಾರ್ದುಲ್‌ ಠಾಕೂರ್‌ ಬದಲಿಸಗೆ ಸ್ಥಾನ ಪಡೆದ ಮುಖೇಶ್‌, ಕೇಶವ್‌ ಮಹಾರಾಜ್‌ ಮತ್ತು ರಬಾಡ ವಿಕೆಟ್‌ ಪಡೆದು ಮಿಂಚಿದರು.

ವಿಡಿಯೋ ನೋಡಿ | Gurugram : ಗುರುಗಾಂವ್ ನ ವಸತಿ ಸಮುಚ್ಛಯಕ್ಕೆ ನುಗ್ಗಿದ ಚಿರತೆ ; ಸೆರೆ ಹಿಡಿಯಲು ಅರಣ್ಯ ಇಲಾಖೆ, ಪೊಲೀಸರ ಸಾಹಸ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ