logo
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ ತಂಡದ ಮುಖ್ಯ ಕೋಚ್ ಆಯ್ಕೆಗೆ ಸಿಎಸ್‌ಕೆ ನೆಚ್ಚಿಕೊಂಡ ಬಿಸಿಸಿಐ; ಮನವೊಲಿಕೆ ಜವಾಬ್ದಾರಿ ಎಂಎಸ್ ಧೋನಿ ಹೆಗಲಿಗೆ

ಭಾರತ ತಂಡದ ಮುಖ್ಯ ಕೋಚ್ ಆಯ್ಕೆಗೆ ಸಿಎಸ್‌ಕೆ ನೆಚ್ಚಿಕೊಂಡ ಬಿಸಿಸಿಐ; ಮನವೊಲಿಕೆ ಜವಾಬ್ದಾರಿ ಎಂಎಸ್ ಧೋನಿ ಹೆಗಲಿಗೆ

Jayaraj HT Kannada

May 21, 2024 09:51 AM IST

google News

ಭಾರತ ತಂಡದ ಮುಖ್ಯ ಕೋಚ್ ಆಯ್ಕೆಗೆ ಸಿಎಸ್‌ಕೆ ನೆಚ್ಚಿಕೊಂಡ ಬಿಸಿಸಿಐ

    • ರಾಹುಲ್‌ ದ್ರಾವಿಡ್‌ ನಂತರ ಭಾರತದ ಮುಖ್ಯ ಕೋಚ್ ಯಾರು ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಬಿಸಿಸಿಐ ಮಾತ್ರ ಇನ್ನೂ ಸ್ಟೀಫನ್ ಫ್ಲೆಮಿಂಗ್ ಅವರನ್ನು ಬಿಟ್ಟುಕೊಡಲು ಸಿದ್ಧವಿಲ್ಲ. ಹೀಗಾಗಿ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಅವರನ್ನು ಮನವೊಲಿಕೆಗೆ ಬಿಡುವ ಯೋಜನೆ ಮಾಡಿದೆ.
ಭಾರತ ತಂಡದ ಮುಖ್ಯ ಕೋಚ್ ಆಯ್ಕೆಗೆ ಸಿಎಸ್‌ಕೆ ನೆಚ್ಚಿಕೊಂಡ ಬಿಸಿಸಿಐ
ಭಾರತ ತಂಡದ ಮುಖ್ಯ ಕೋಚ್ ಆಯ್ಕೆಗೆ ಸಿಎಸ್‌ಕೆ ನೆಚ್ಚಿಕೊಂಡ ಬಿಸಿಸಿಐ (Sportzpics for BCCI)

ಅತ್ತ ಐಪಿಎಲ್‌ ಪಂದ್ಯಾವಳಿಯ ಜೋಶ್‌ ಹೆಚ್ಚುತ್ತಿದ್ದರೆ, ಇತ್ತ ಟೀಮ್‌ ಇಂಡಿಯಾ ಮುಂದಿನ ಕೋಚ್‌ ಯಾರು ಎಂಬ ಚರ್ಚೆ ಜೋರಾಗಿದೆ. ಬಿಸಿಸಿಐ ಈಗಾಗಲೇ ಭಾರತ ಕ್ರಿಕೆಟ್‌ ತಂಡದ ಉನ್ನತ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅದರ ನಡುವೆ ಹಲವು ದಿಗ್ಗಜರನ್ನು ಸಂಪರ್ಕಿಸಿದೆ. ಈ ನಡುವೆ, ರಾಹುಲ್‌ ದ್ರಾವಿಡ್‌ ಉತ್ತರಾಧಿಕಾರಿ ಆಯ್ಕೆಯಲ್ಲಿ ಎಂಎಸ್ ಧೋನಿ ಅವರ ಸಲಹೆ ನಿರ್ಣಾಯಕ ಅಂಶವಾಗುವ ಸಾಧ್ಯತೆ ಇದೆ. ಆರ್‌ಸಿಬಿ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಸೋತ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪಂದ್ಯಾವಳಿಯಿಂದ ಹೊರಬಿದ್ದಿದೆ. ಈ ನಡುವೆ ಕ್ರಿಕೆಟ್‌ ಮಂಡಳಿಯ ಸಿಎಸ್‌ಕೆ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ಆಯ್ಕೆಗೆ ಇಚ್ಛೆ ವ್ಯಕ್ತಪಡಿಸಿದೆ. ಇದಕ್ಕಾಗಿ ಧೋನಿ ಅವರ ಸಹಾಯವನ್ನು ಕೋರಲು ಬಿಸಿಸಿಐ ಯೋಚಿಸುತ್ತಿದೆ.

ನ್ಯೂಜಿಲ್ಯಾಂಡ್ ಕ್ರಿಕೆಟ್‌ ತಂಡವನ್ನು 303 ಪಂದ್ಯಗಳಲ್ಲಿ ಮುನ್ನಡೆಸಿದ್ದ ಫ್ಲೆಮಿಂಗ್, ಸದ್ಯ ಸಿಎಸ್‌ಕೆ ತಂಡದ ಕೋಚ್‌ ಆಗದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಕಾಲ ಕೋಚ್‌ ಆಗಿ ಸೇವೆ ಸಲ್ಲಿಸಿರುವ ಅವರು, ಟಿ20 ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಬದಲಿಗೆ ಭಾರತದ ಮುಖ್ಯ ಕೋಚ್ ಆಗಿ ಮಂಡಳಿಯ ಮೊದಲ ಆಯ್ಕೆಯಾಗಿದ್ದಾರೆ ಎಂಬುದುನ್ನು ಹಿಂದೂಸ್ತಾನ್ ಟೈಮ್ಸ್ ಅರಿತುಕೊಂಡಿದೆ. ಆದರೆ 2027ರವರೆಗೆ ಸುದೀರ್ಘ ಅವಧಿಗೆ ಈ ಜವಾಬ್ದಾರಿ ವಹಿಸಿಕೊಳ್ಳಲು ಸಿಎಸ್‌ಕೆ ಕೋಚ್‌ ಹಿಂಜರಿಯುತ್ತಿದ್ದಾರೆ.

2009ರಿಂದ ಸಿಎಸ್‌ಕೆ ತಂಡಕ್ಕೆ ಕೋಚ್‌ ಆಗಿರುವ ಕಿವೀಸ್‌ ಮಾಜಿ ನಾಯಕ, ಇದರ ಜೊತೆಗೆ, ಮೇಜರ್ ಲೀಗ್ ಕ್ರಿಕೆಟ್ (ಯುಎಸ್ಎ)ನಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ಮತ್ತು ಎಸ್ಎ20 (ದಕ್ಷಿಣ ಆಫ್ರಿಕಾ)ಯಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್‌ ತಂಡಕ್ಕೂ ಕೋಚ್‌ ಆಗಿದ್ದಾರೆ. ದಿ ಹಂಡ್ರೆಡ್‌ನಲ್ಲಿ ಸದರ್ನ್ ಬ್ರೇವ್‌ ತಂಡದ ಮುಖ್ಯ ತರಬೇತುದಾರರಾಗಿದ್ದಾರೆ.

ಇದನ್ನೂ ಓದಿ | ಟಿ20 ವಿಶ್ವಕಪ್‌ನಲ್ಲಿ ಭಾರತ ಭಾಗವಹಿಸುತ್ತಾ? ಪಾಕಿಸ್ತಾನದಿಂದ ಉಗ್ರ ದಾಳಿ ಬೆದರಿಕೆ ಕುರಿತು ಬಿಸಿಸಿಐ ಪ್ರತಿಕ್ರಿಯೆ

ಈ ನಾಲ್ಕು ವಿಭಿನ್ನ ಲೀಗ್‌ಗಳಲ್ಲಿ ಪ್ರಮುಖ ಜವಾಬ್ದಾರಿ ಇದ್ದರೂ, ಫ್ಲೆಮಿಂಗ್ ತಮ್ಮ ಕುಟುಂಬದೊಂದಿಗೆ ಕಳೆಯಲು ಸಾಕಷ್ಟು ಸಮಯ ಪಡೆಯುತ್ತಾರೆ. ಏಕೆಂದರೆ ಆ ಪಂದ್ಯಾವಳಿಗಳೆಲ್ಲಾ ಅಲ್ಪಾವಧಿಯಲ್ಲಿ ಮುಗಿಯುತ್ತವೆ. ಆದರೆ, ಬಿಸಿಸಿಐ ಆಫರ್‌ ಒಪ್ಪಿಕೊಂಡ ಬಳಿಕ ಹಾಗಿರುವುದಿಲ್ಲ. ಐಪಿಎಲ್‌ ಪಂದ್ಯಾವಳಿಯ ಎರಡು ತಿಂಗಳುಗಳನ್ನು ಹೊರತುಪಡಿಸಿ ಬಹುತೇಕ ವರ್ಷವಿಡೀ ಕೆಲಸವಿರುತ್ತದೆ.

ಆರಂಭದಲ್ಲೇ ಬೇಡ ಎಂದಿದ್ದ ಫ್ಲೆಮಿಂಗ್

ಮೂಲಗಳ ಪ್ರಕಾರ, ತನಗೆ ಆಫರ್‌ ಬೇಡ ಎಂಬುದನ್ನು ಫ್ಲೆಮಿಂಗ್ ಆರಂಭದಲ್ಲೇ ಸ್ಪಷ್ಟಪಡಿಸಿದ್ದಾರೆ. ಆ ನಂತರ ಬಿಸಿಸಿಐ ಜಸ್ಟಿನ್ ಲ್ಯಾಂಗರ್, ಗೌತಮ್ ಗಂಭೀರ್ ಮತ್ತು ಮಹೇಲಾ ಜಯವರ್ಧನೆ ಸೇರಿದಂತೆ ಇತರರ ಹುಡುಕಲು ಆರಂಭಿಸಿತು. ಈ ಎಲ್ಲಾ ಚರ್ಚೆ ನಡೆಯುತ್ತಿರುವಾಗ, ಮಂಡಳಿಯು ಫ್ಲೆಮಿಂಗ್ ಅವರನ್ನು ಬಿಟ್ಟುಕೊಡಲು ಸಿದ್ಧವಾಗಿಲ್ಲ. ಹೀಗಾಗಿ ಕೊನೆಯದಾಗಿ ಧೋನಿ ಅವರೇ ಬಿಸಿಸಿಐ ದಾಳಕ್ಕೆ ಸಿಗುವ ಸಾಧ್ಯತೆ ಇದೆ.‌

ಫ್ಲೆಮಿಂಗ್‌ ಮನವೊಲಿಕೆಗೆ ಧೋನಿ

“ಫ್ಲೆಮಿಂಗ್ ಆಗಲ್ಲ ಎಂದು ಹೇಳಿಲ್ಲ. ಅವರು ಒಪ್ಪಂದದ ಅವಧಿಯ ಬಗ್ಗೆ ತಮ್ಮ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ಇದು ಅಸಾಮಾನ್ಯವೇನೂ ಅಲ್ಲ. ರಾಹುಲ್ ದ್ರಾವಿಡ್ ಕೂಡ ಆರಂಭದಲ್ಲಿ ಈ ಜವಾಬ್ದಾರಿ ವಹಿಸುವ ಆಸಕ್ತಿ ಹೊಂದಿರಲಿಲ್ಲ. ಆ ಬಳಿಕ ಅವರ ಮನವೊಲಿಸಲಾಯಿತು. ಫ್ಲೆಮಿಂಗ್ ವಿಷಯದಲ್ಲೂ ಇದೇ ರೀತಿ ಸಂಭವಿಸಿದರೆ ಆಶ್ಚರ್ಯವೇನಿಲ್ಲ. ಈ ಕೆಲಸವನ್ನು ಮಾಡಲು ಎಂಎಸ್ ಧೋನಿಗಿಂತ ಉತ್ತಮ ಆಯ್ಕೆ ಯಾರಿದ್ದಾರೆ ಹೇಳಿ?” ಎಂದು ಬಿಸಿಸಿಐ ಮೂಲವೊಂದು ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದೆ.

ಐಪಿಎಲ್ ಆರಂಭವಾದಾಗಿನಿಂದ ಧೋನಿ ಮತ್ತು ಫ್ಲೆಮಿಂಗ್ ನಡುವೆ ಉತ್ತಮ ಬಾಂಧವ್ಯವಿದೆ. ಐಪಿಎಲ್‌ನಲ್ಲಿ ಧೋನಿ ಮತ್ತು ಫ್ಲೆಮಿಂಗ್ ಎಂದಿಗೂ ಬೇರ್ಪಟ್ಟಿಲ್ಲ. ಇಬ್ಬರೂ ಒಂದೇ ತಂಡದಲ್ಲಿ ಈಗಲೂ‌ ಮುಂದುವರೆದಿದ್ದಾರೆ. ಹೀಗಾಗಿ ಫ್ಲೆಮಿಂಗ್‌ ಮನವೊಲಿಕೆಗೆ ಧೋನಿ ಸೂಕ್ತ ವ್ಯಕ್ತಿ ಎಂಬುದನ್ನು ಬಿಸಿಸಿಐ ಅರಿತುಕೊಂಡಿದೆ.

ಇದನ್ನೂ ಓದಿ | ವಿಶ್ವ ಕ್ರಿಕೆಟ್‌ನ ಅತಿ ದೊಡ್ಡ ಸವಾಲು; ಭಾರತ ತಂಡದ ಮುಖ್ಯ ಕೋಚ್ ಹುದ್ದೆ ಕುರಿತು ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯೆ

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ