ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ರುಚಿ ಕಂಡ ಮುಂಬೈ ಇಂಡಿಯನ್ಸ್; ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿ ನಿಟ್ಟುಸಿರು ಬಿಟ್ಟ ಪಾಂಡ್ಯ ಪಡೆ
Apr 07, 2024 07:28 PM IST
ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ರುಚಿ ಕಂಡ ಮುಂಬೈ ಇಂಡಿಯನ್ಸ್
- ಮುಂಬೈ ಇಂಡಿಯನ್ಸ್ ತಂಡ ಕೊನೆಗೂ ಗೆಲುವಿನ ನಿಟ್ಟುಸಿರು ಬಿಟ್ಟಿದೆ. ಐಪಿಎಲ್ 2024ರಲ್ಲಿ ಸತತ ಸೋಲುಗಳಿಂದಾಗಿ, ಗೆಲುವಿಗಾಗಿ ಹವಣಿಸುತ್ತಿದ್ದ ಹಾರ್ದಿಕ್ ಪಾಂಡ್ಯ ಪಡೆ, ಕೊನೆಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ತವರಿನ ಪಂದ್ಯದಲ್ಲಿ ಜಯದ ಹಳಿಗೆ ಮರಳಿದೆ. ಇದರೊಂದಿಗೆ ಅಂಕಗಳ ಖಾತೆ ತೆರೆದಿದೆ.
ಐಪಿಎಲ್ 2024ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೊನೆಗೂ ಗೆಲುವಿನ ರುಚಿ ನೋಡಿದೆ. ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಹಾರ್ದಿಕ್ ಪಾಂಡ್ಯ ಬಳಗ, ತವರು ಮೈದಾನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Mumbai Indians vs Delhi Capitals) ತಂಡವನ್ನು ರೋಚಕವಾಗಿ ಮಣಿಸಿದೆ. ಇದರೊಂದಿಗೆ ಟೂರ್ನಿಯ ಅಂಕಪಟ್ಟಿಯಲ್ಲಿ ಪಾಯಿಂಟ್ ಖಾತೆ ತೆರೆದಿದೆ. ಅತ್ತ ಪೃಥ್ವಿ ಶಾ ಹಾಗೂ ಟ್ರಿಸ್ಟಾನ್ ಸ್ಟಬ್ಸ್ ಆಕರ್ಷಕ ಅರ್ಧಶತಕದ ಹೊರತಾಗಿಯೂ ಡೆಲ್ಲಿ ಸೋಲು ಕಂಡಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, ತಂಡದ ಸಂಘಟಿತ ಪ್ರಯತ್ನದ ಫಲವಾಗಿ 5 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು. ಬೃಹತ್ ಗುರಿ ಬೆನ್ನಟ್ಟಿದ ಡೆಲ್ಲಿ, 8 ವಿಕೆಟ್ ಕಳೆದುಕೊಂಡು 205 ರನ್ ಗಳಿಸಲಷ್ಟೇ ಶಕ್ತವಾಯ್ತು. ಹೀಗಾಗಿ ಹಾರ್ದಿಕ್ ಪಾಂಡ್ಯ ಬಳಗ 29 ರನ್‌ಗಳಿಂದ ಗೆದ್ದು ಬೀಗಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ಸ್ಫೋಟಕ ಆರಂಭ ಪಡೆಯಿತು. ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಭರ್ಜರಿ 80 ರನ್‌ಗಳ ಜೊತೆಯಾಟವಾಡಿದರು. ಕೇವಲ 27 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 49 ರನ್ ಗಳಿಸಿದ್ದ ಹಿಟ್‌ಮ್ಯಾನ್, ಅರ್ಧಶತಕದ ಹೊಸ್ತಿಲಲ್ಲಿ ಔಟಾದರು. ಅಕ್ಷರ್ ಪಟೇಲ್ ಎಸೆತದಲ್ಲಿ ರೋಹಿತ್ ಕ್ಲೀನ್ ಬೋಲ್ಡ್ ಆದರು. ಈ ವೇಳೆ ಮೈದಾನಕ್ಕಿಳಿದ ವಿಶ್ವದ ನಂಬರ್ ವನ್ ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್, ಎರಡು ಎಸೆತಗಳನ್ನು ಎದುರಿಸಿ ಡಕೌಟ್ ಆದರು.
ಇದನ್ನೂ ಓದಿ | ಹೇ ಅವನು ನನ್ ಅಭಿಮಾನಿ, ಹೊಡಿಬೇಡಿ; ಮೈದಾನಕ್ಕೆ ನುಗ್ಗಿದ ಅಭಿಮಾನಿ ಹಿಡಿದೆಳೆದ ಸಿಬ್ಬಂದಿಗೆ ವಿರಾಟ್ ಕೊಹ್ಲಿ ತಾಕೀತು
ಅಬ್ಬರ ಮುಂದುವರೆಸಿದ ಇಶಾನ್ ಕಿಶನ್ 23 ಎಸೆತಗಳಲ್ಲಿ 42 ರನ್ ಸಿಡಿಸಿದರು. ಪಂದ್ಯಾವಳಿಯಲ್ಲಿ ಉತ್ತಮ ಲಯದಲ್ಲಿದ್ದ ತಿಲಕ್ ವರ್ಮಾ, 6 ರನ್ ಗಳಿಸಿ ಖಲೀಲ್ ಅಹ್ಮದ್‌ಗೆ ವಿಕೆಟ್ ಒಪ್ಪಿಸಿದರು. ನಿಧಾನಗತಿಯಲ್ಲಿ ಜವಾಬ್ದಾರಿಯುತ ಆಟವಾಡಿದ ನಾಯಕ ಹಾರ್ದಿಕ್ ಪಾಂಡ್ಯ, 118.18ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ 39 ರನ್ ಮಾತ್ರ ಗಳಿಸಿದರು.
ರೊಮಾರಿಯೋ ಶೆಫರ್ಡ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ
ಡೆತ್ ಓವರ್‌ಗಳಲ್ಲಿ ಟಿಮ್ ಡೇವಿಡ್ ಮತ್ತು ರೊಮಾರಿಯೋ ಶೆಫರ್ಡ್ ರೌದ್ರಾವತಾರ ತಾಳಿದರು. 214.29ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ಡೇವಿಡ್, 4 ಸ್ಫೋಟಕ ಸಿಕ್ಸರ್ ಸಹಿತ 45 ರನ್ ಗಳಿಸಿದರು. ಶೆಫರ್ಡ್ ಆಟ ಆಕ್ರಮಣಕಾರಿಯಾಗಿತ್ತು. ಕೇವಲ 10 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 39 ರನ್ ಗಳಿಸಿದರು. 390.00ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಅವರು, ನಾರ್ಟ್ಜೆ ಎಸೆದ ಕೊನೆಯ ಓವರ್ ಒಂದರಲ್ಲೇ ನಾಲ್ಕು ಸಿಕ್ಸರ್ ಸಹಿತ 32 ರನ್ ಸೂರೆಗೈದರು. ಇದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಡೆಲ್ಲಿ ಚೇಸಿಂಗ್
ಚೇಸಿಂಗ್ ಆರಂಭಿಸಿದ ಡೆಲ್ಲಿಗೆ ಉತ್ತಮ ಆರಂಭ ಸಿಗಲಿಲ್ಲ. ಆಕ್ರಮಣಕಾರಿ ಅನುಭವಿ ಆಟಗಾರ ಡೇವಿಡ್ ವಾರ್ನರ್ 10 ರನ್ ಗಳಿಸಿ ಔಟಾದರು. ಆದರೆ, ಪೃಥ್ವಿ ಶಾ ಸುಮ್ಮನಾಗಲಿಲ್ಲ. ಅಭಿಷೇಕ್ ಪೊರೆಲ್ ಜೊತೆಗೂಡಿ ಆಕರ್ಷಕ ಜೊತೆಯಾಟವಾಡಿದರು. ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದ ಶಾ, 40 ಎಸೆತಗಳಲ್ಲಿ 66 ರನ್ ಗಳಿಸಿದ್ದಾಗ ಬುಮ್ರಾ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದರು. ಪೊರೆಲ್ 41 ರನ್ ಗಳಿಸಿ ಔಟಾದರು. ನಾಯಕ ರಿಷಬ್ ಪಂತ್ ಆರಂಭದಲೇ ಅಬ್ಬರಿಸಲು ಮುಂದಾಗಿ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಡೆತ್ ಓವರ್‌ಗಳಲ್ಲಿ ಅಬ್ಬರಿಸಿದ ಟ್ರಿಸ್ಟಾನ್ ಸ್ಟಬ್ಸ್ ತಂಡದ ಗೆಲುವಿಗೆ ಎಲ್ಲಾ ರೀತಿಯ ಪ್ರಯತ್ನ ಹಾಕಿದರು. ಆದರೆ, ತಂಡವನ್ನು ಗೆಲ್ಲಿಸಲು ಅವರಿಂದ ಸಾಧ್ಯವಾಗಲಿಲ್ಲ. ತಂಡ ಸೋತರೂ, ಸ್ಟಬ್ಸ್ ಅಜೇಯ 71 ರನ್ ಗಳಿಸಿ ಗಮನ ಸೆಳೆದರು.