logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್ ಅನ್ನು ಹಗುರವಾಗಿ ಪರಿಗಣಿಸಬೇಡಿ; ಮೊದಲ ಟೆಸ್ಟ್ ಸೋಲಿನ ಬೆನ್ನಲ್ಲೇ ಭಾರತಕ್ಕೆ ನಾಸಿರ್ ಹುಸೈನ್ ಎಚ್ಚರಿಕೆ ಕರೆ

ಇಂಗ್ಲೆಂಡ್ ಅನ್ನು ಹಗುರವಾಗಿ ಪರಿಗಣಿಸಬೇಡಿ; ಮೊದಲ ಟೆಸ್ಟ್ ಸೋಲಿನ ಬೆನ್ನಲ್ಲೇ ಭಾರತಕ್ಕೆ ನಾಸಿರ್ ಹುಸೈನ್ ಎಚ್ಚರಿಕೆ ಕರೆ

Jayaraj HT Kannada

Jan 29, 2024 04:11 PM IST

google News

ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋಲನ್ನು ಎಚ್ಚರಿಕೆ ಕರೆ ಎಂದ ನಾಸಿರ್ ಹುಸೇನ್

    • Nasser Hussain: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡವು ಸೋತಿರುವುದು ರೋಹಿತ್ ಶರ್ಮಾ ಪಡೆಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಮಾಜಿ ಕ್ರಿಕೆಟಿಗ ನಾಸಿರ್ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.
ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋಲನ್ನು ಎಚ್ಚರಿಕೆ ಕರೆ ಎಂದ ನಾಸಿರ್ ಹುಸೇನ್
ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋಲನ್ನು ಎಚ್ಚರಿಕೆ ಕರೆ ಎಂದ ನಾಸಿರ್ ಹುಸೇನ್ (ANI-AFP)

ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವು ಅಚ್ಚರಿಯ ಗೆಲುವು ಸಾಧಿಸಿತು. ಒಂದು ಹಂತದಲ್ಲಿ ಸಂಪೂರ್ಣವಾಗಿ ಭಾರತದ ಕೈಯಲ್ಲಿದ್ದ ಪಂದ್ಯವು, ಕೊನೆಯ ಹಂತದಲ್ಲಿ ತಿರುವು ಪಡೆದುಕೊಂಡಿತು. ಪಂದ್ಯದ ಬಳಿಕ ಮಾಜಿ ಇಂಗ್ಲೀಷ್‌ ಕ್ರಿಕೆಟಿಗರು ಭಾರತದ ವಿರುದ್ಧ ಮೈಂಡ್‌ ಗೇಮ್‌ ಆರಂಭಿಸಿದ್ದಾರೆ.

ಇಂಗ್ಲೆಂಡ್‌ ತಂಡದ ಬಜ್‌ಬಾಲ್ ತಂತ್ರದಿಂದ ಹಿಡಿದು ಆತಿಥೇಯ ಭಾರತವು ಟೆಸ್ಟ್‌ ಕ್ರಿಕೆಟ್‌ಗೆ ಟರ್ನಿಂಗ್ ಪಿಚ್‌ಗಳನ್ನು ಸಿದ್ಧಪಡಿಸುತ್ತಿದೆ ಎನ್ನುವವರೆಗೆ, ಇಂಗ್ಲೆಂಡ್‌ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಭಾರತದ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೂ ಮುನ್ನ ಸಾಕಷ್ಟು ಚರ್ಚೆಯ ವಿಷಯಗಳನ್ನು ಎಳೆದು ತಂದಿದ್ದರು. ಸರಣಿಯಲ್ಲಿ ಭಾರತವನ್ನು ಗೆಲ್ಲುವ ಫೇವರಿಟ್ ತಂಡ ಎಂದು ಬಣ್ಣಿಸಿದ್ದ ಇಂಗ್ಲೆಂಡ್‌ನ ಮಾಜಿ ನಾಯಕ, ಬಜ್‌ಬಾಲ್ ಆರಂಭದಿಂದಲೂ ಬೆನ್ ಸ್ಟೋಕ್ಸ್ ಬಳಗವು ತನ್ನ ಪ್ರಮುಖ ಆಟಗಾರರನ್ನು ನೆಚ್ಚಿಕೊಂಡಿದೆ ಎಂದು ರೋಹಿತ್‌ ಶರ್ಮಾ ಬಳಗಕ್ಕೆ ಎಚ್ಚರಿಕೆ ನೀಡಿದ್ದಾರೆ.

ಭಾರತಕ್ಕೆ ಎಚ್ಚರಿಕೆ ನೀಡಿದ ಹುಸೇನ್

ಐದು ಪಂದ್ಯಗಳ ಸರಣಿಯಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 1-0 ಅಂತರದಿಂದ ಮುನ್ನಡೆ ಸಾಧಿಸಿದ ಬಳಿಕ, ಸ್ಟೋಕ್ಸ್‌ ಬಳಗದ ಪ್ರದರ್ಶನವನ್ನು ಹುಸೇನ್ ಶ್ಲಾಘಿಸಿದ್ದಾರೆ. ಅಲ್ಲದೆ ಭಾರತಕ್ಕೆ ಈ ಸೋಲು ಎಚ್ಚರಿಕೆಯ ಕರೆಗಂಟೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | ನಮ್ಮವರು ಶತಕವೇ ಗಳಿಸಲಿಲ್ಲ: ಸೋಲಿಗೆ ಭಾರತದ ಬ್ಯಾಟಿಂಗ್ ಪ್ರದರ್ಶನ ದೂಷಿಸಿದ ರಾಹುಲ್ ದ್ರಾವಿಡ್

“ನಾನು ಅವರಲ್ಲಿ (ಇಂಗ್ಲೆಂಡ್) ಇಷ್ಟಪಡುವುದು ಅವರ ಮೊಂಡುತನ. ಒಂದು ವೇಳೆ ನೀವು ಅವರನ್ನು ಅನುಮಾನಿಸಿದರೆ, ಅವರ ಆ ಮೊಂಡುತನ ದುಪ್ಪಟ್ಟಾಗುತ್ತದೆ. ಅಲ್ಲದೆ ಆಟದಲ್ಲಿ ಇನ್ನಷ್ಟು ಹಠಮಾರಿಯಾಗುತ್ತಾರೆ. ಅದು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನೀವು ಎಲ್ಲಾ ಮಾತುಗಳನ್ನು ನಿರಂತರವಾಗಿ ಕೇಳುತ್ತಿದ್ದರೆ, ಒಂದು ಸಿದ್ಧಾಂತದಿಂದ ಇನ್ನೊಂದಕ್ಕೆ ಬದಲಾಗುತ್ತೀರಿ. ಈಗಿನ ಕಾಲಕ್ಕೆ ತಕ್ಕಂತೆ ಹೇಗೆ ಆಡಬೇಕು ಎಂಬುದು ಅವರಿಗೆ ಗೊತ್ತಿದೆ. ತಮ್ಮನ್ನು ಅಷ್ಟೊಂದು ಹಗುರವಾಗಿ ಪರಿಗಣಿಸಬೇಡಿ ಎಂಬುದನ್ನು ಅವರು ತೋರಿಸಿದ್ದಾರೆ” ಎಂದು ಹುಸೇನ್ ಅವರು ಸ್ಕೈ ಸ್ಪೋರ್ಟ್ಸ್‌ಗೆ ಬರೆದ ಅಂಕಣದಲ್ಲಿ ಬರೆದಿದ್ದಾರೆ.

ಭಾರತದಲ್ಲಿ ಬಜ್‌ಬಾಲ್ ಕೆಲಸ ಮಾಡುತ್ತಿದೆ

“ಭಾರತ ತುಂಬಾ ಉತ್ತಮ ತಂಡ. ಅಲ್ಲದೆ ತವರಿನಲ್ಲಿ ಇಂಗ್ಲೆಂಡ್‌ ತಂಡಕ್ಕೆ ಕಠಿಣವಾಗಲಿದೆ ಎಂಬುದನ್ನು ಇತಿಹಾಸ ಹೇಳುತ್ತದೆ. ಆದರೆ ಈ ಪರಿಸ್ಥಿತಿಗಳಲ್ಲಿ ಬಾಜ್‌ಬಾಲ್ ವಿಧಾನ ಕೆಲಸ ಮಾಡಬಲ್ಲದು ಎಂದು ಇಂಗ್ಲೆಂಡ್ ತೋರಿಸಿಕೊಟ್ಟಿದೆ. ಹೀಗಾಗಿ ಇದು ಭಾರತಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ,” ಎಂದು ಹುಸೇನ್ ಹೇಳಿದ್ದಾರೆ.

ಇದನ್ನೂ ಓದಿ | ಮೊದಲು ಘರ್ಜಿಸಿ ನಂತರ ಮಂಕಾದ ಭಾರತ ಎಡವಿದ್ದೆಲ್ಲಿ; ರೋಹಿತ್ ಪಡೆ ಸೋಲಿಗೆ ಪ್ರಮುಖ ಕಾರಣಗಳು ಇವು

ಮೊದಲ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಂದು 231 ರನ್‌ಗಳ ಸುಲಭ ಗುರಿ ಪಡೆದ ರೋಹಿತ್ ಪಡೆಯು, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 202 ರನ್‌ಗಳಿಗೆ ಆಲೌಟ್ ಆಯ್ತು. ಆ ಮೂಲಕ 28 ರನ್‌ಗಳಿಂದ ಸೋಲನುಭವಿಸಿತು. ಪೋಪ್ ಅವರ ಆಕರ್ಷಕ ಶತಕವು ಇಂಗ್ಲೆಂಡ್‌ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿತು. ಪೋಪ್ ತಮ್ಮ ಅತ್ಯುತ್ತಮ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಮುಂದೆ ವಿಶಾಖಪಟ್ಟಣಂನಲ್ಲಿ ಜನವರಿ 2ರ ಶುಕ್ರವಾರದಿಂದ ನಡೆಯಲಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಮುಂಬರುವ ಪಂದ್ಯದಲ್ಲಿ ಭಾರತ ಪುಟಿದೇಳಲಿದೆ ಎಂದು ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantime.com )

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ