logo
ಕನ್ನಡ ಸುದ್ದಿ  /  ಕ್ರಿಕೆಟ್  /  ಟೆಸ್ಟ್​ನಲ್ಲಿ ಹೊಸ ವಿಶ್ವದಾಖಲೆ ಬರೆದ ನಾಥನ್ ಲಿಯಾನ್; ಶೇನ್ ವಾರ್ನ್, ಮುರಳೀಧರನ್ ಕೈಯಲ್ಲೂ ಆಗಲಿಲ್ಲ ಈ ಸಾಧನೆ!

ಟೆಸ್ಟ್​ನಲ್ಲಿ ಹೊಸ ವಿಶ್ವದಾಖಲೆ ಬರೆದ ನಾಥನ್ ಲಿಯಾನ್; ಶೇನ್ ವಾರ್ನ್, ಮುರಳೀಧರನ್ ಕೈಯಲ್ಲೂ ಆಗಲಿಲ್ಲ ಈ ಸಾಧನೆ!

Prasanna Kumar P N HT Kannada

Mar 03, 2024 02:47 PM IST

google News

ಟೆಸ್ಟ್​ನಲ್ಲಿ ಹೊಸ ವಿಶ್ವದಾಖಲೆ ಬರೆದ ನಾಥನ್ ಲಿಯಾನ್; ಶೇನ್ ವಾರ್ನ್, ಮುರಳೀಧರನ್ ಕೈಯಲ್ಲೂ ಆಗಲಿಲ್ಲ ಈ ಸಾಧನೆ!

    • Nathan Lyon : ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಲಿಯಾನ್ ಇತಿಹಾಸ ನಿರ್ಮಿಸಿದ್ದಾರೆ.
ಟೆಸ್ಟ್​ನಲ್ಲಿ ಹೊಸ ವಿಶ್ವದಾಖಲೆ ಬರೆದ ನಾಥನ್ ಲಿಯಾನ್; ಶೇನ್ ವಾರ್ನ್, ಮುರಳೀಧರನ್ ಕೈಯಲ್ಲೂ ಆಗಲಿಲ್ಲ ಈ ಸಾಧನೆ!
ಟೆಸ್ಟ್​ನಲ್ಲಿ ಹೊಸ ವಿಶ್ವದಾಖಲೆ ಬರೆದ ನಾಥನ್ ಲಿಯಾನ್; ಶೇನ್ ವಾರ್ನ್, ಮುರಳೀಧರನ್ ಕೈಯಲ್ಲೂ ಆಗಲಿಲ್ಲ ಈ ಸಾಧನೆ!

ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ 4ನೇ ದಿನದಾಟದಲ್ಲಿ ಭಾನುವಾರ (ಮಾರ್ಚ್ 3) ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ಪರ ನಾಥನ್ ಲಿಯಾನ್ (Nathan Lyon) ಬೆಂಕಿ ಬೌಲಿಂಗ್ ನಡೆಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬೇಸಿನ್ ರಿಸರ್ವ್‌ನಲ್ಲಿ ಜರುಗಿದ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 36 ವರ್ಷದ ಸ್ಪಿನ್ನರ್​ 27 ಓವರ್‌ಗಳಲ್ಲಿ 65 ರನ್‌ ಬಿಟ್ಟು ಕೊಟ್ಟು 6 ವಿಕೆಟ್‌ ಕಬಳಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ವಿಶ್ವ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡರು.

ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಲಿಯಾನ್ ಇತಿಹಾಸ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್‌ ನೆಲದಲ್ಲಿ ಆಡಿದ ಟೆಸ್ಟ್‌ಗಳಲ್ಲಿ 5 ವಿಕೆಟ್ ಗೊಂಚಲು ಪಡೆದ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಏಕೈಕ ಬೌಲರ್​​ ಎಂಬ ವಿಶ್ವದಾಖಲೆ ಬರೆದಿದ್ದಾರೆ.

9 ದೇಶಗಳಲ್ಲಿ 5 ವಿಕೆಟ್ ಪಡೆದ ಮೊದಲ ಬೌಲರ್

ಟೆಸ್ಟ್‌ ಕ್ರಿಕೆಟ್​ನಲ್ಲಿ ಒಟ್ಟು 24 ಬಾರಿ ಐದು ವಿಕೆಟ್‌ ಪಡೆದ ಸಾಧನೆಗೈದ ಲಿಯಾನ್, ತನ್ನ ತವರಿನ ನೆಲ ಆಸ್ಟ್ರೇಲಿಯಾದಲ್ಲಿ 9 ಸಲ 5 ವಿಕೆಟ್ ಗೊಂಚಲು ಪಡೆದಿದ್ದಾರೆ. ಭಾರತದಲ್ಲಿ ಐದು ಬಾರಿ, ಬಾಂಗ್ಲಾದೇಶದಲ್ಲಿ ಮೂರು ಬಾರಿ, ಶ್ರೀಲಂಕಾದಲ್ಲಿ ಎರಡು ಬಾರಿ ಇನ್ನಿಂಗ್ಸ್‌ನಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನೆಲದಲ್ಲಿ ತಲಾ ಒಂದು ಬಾರಿ ಈ ಸಾಧನೆ ಮಾಡಿದ್ದಾರೆ.

ಪ್ರಮುಖರೇ ಬರೆಯಲಿಲ್ಲ ಈ ದಾಖಲೆ

ಟೆಸ್ಟ್‌ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಪಡೆದ ಅಂದರೆ 800 ವಿಕೆಟ್‌ಗಳೊಂದಿಗೆ ತಮ್ಮ ವೃತ್ತಿಜೀವನ ಪೂರ್ಣಗೊಳಿಸಿದ ದಂತಕಥೆ ಮುತ್ತಯ್ಯ ಮುರಳೀಧರನ್, ಆಸ್ಟ್ರೇಲಿಯಾ ನೆಲದಲ್ಲಿ 5 ವಿಕೆಟ್‌ ಹಾಲ್​ ಗಳಿಸಲು ಸಾಧ್ಯವೇ ಆಗಿಲ್ಲ ಎಂಬುದು ಅಚ್ಚರಿಯ ಸಂಗತಿ. ವೆಸ್ಟ್ ಇಂಡೀಸ್‌ನಲ್ಲಿ ಆಡಿದ 7 ಟೆಸ್ಟ್‌ಗಳಲ್ಲಿ ಇನ್ನಿಂಗ್ಸ್‌ನಲ್ಲಿ 5 ಬ್ಯಾಟರ್​ಗಳನ್ನು ಔಟ್ ಮಾಡಲು ಶೇನ್ ವಾರ್ನ್ ಕೈಯಲ್ಲೂ ಆಗಲಿಲ್ಲ.

ಜೇಮ್ಸ್ ಆಂಡರ್ಸನ್ ಭಾರತ ಮತ್ತು ಪಾಕಿಸ್ತಾನದಲ್ಲಿ ಇನ್ನೂ ಒಂದು ಸಲ ಕೂಡ 5 ವಿಕೆಟ್ ಉರುಳಿಸಿದ ಸಾಧನೆ ಮಾಡಿಲ್ಲ. ಅನಿಲ್ ಕುಂಬ್ಳೆ ಬಾಂಗ್ಲಾದೇಶ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ನಲ್ಲಿ 5 ವಿಕೆಟ್‌ ಗೊಂಚಲು ಪಡೆಯದೆಯೇ ತಮ್ಮ ವೃತ್ತಿಜೀವನ ಮುಗಿಸಿದರು. ಗ್ಲೆನ್ ಮೆಕ್‌ಗ್ರಾತ್ ಭಾರತ ಮತ್ತು ಶ್ರೀಲಂಕಾದಲ್ಲಿ ಎಂದಿಗೂ ಐದು ವಿಕೆಟ್‌ ಪಡೆದಿಲ್ಲ. ರವಿಚಂದ್ರನ್ ಅಶ್ವಿನ್ ಅವರು SENA ದೇಶಗಳಲ್ಲಿ ಒಂದು ಸಲವೂ 5 ವಿಕೆಟ್ ಗೊಂಚಲು ಪಡೆದಿಲ್ಲ ಎಂಬುದು ಅಚ್ಚರಿ ಸಂಗತಿ.

ಆಸೀಸ್​ಗೆ ಗೆಲುವು

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಭಾನುವಾರ 172 ರನ್‌ಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಲಿಯಾನ್ ನಾಲ್ವರಿಗೆ ಗೇಟ್​ ಪಾಸ್ ನೀಡಿದರು. ಅವರು ಈ ಪಂದ್ಯದಲ್ಲಿ 108 ರನ್‌ಗಳಿಗೆ 10 ವಿಕೆಟ್‌ ಪಡೆದು ಗಮನ ಸೆಳೆದರು. ಮೊದಲ ಇನ್ನಿಂಗ್ಸ್‌ನಲ್ಲಿ ತನ್ನ ಮೂರನೇ ವಿಕೆಟ್ ಪಡೆಯುವ ಮೂಲಕ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದವರ ಪಟ್ಟಿಯಲ್ಲಿ ಮಾಜಿ ವೆಸ್ಟ್ ಇಂಡೀಸ್ ವೇಗಿ ಕರ್ಟ್ನಿ ವಾಲ್ಷ್‌ ಅವರನ್ನು ಹಿಂದಿಕ್ಕಿದರು. ಹಾಗಾಗಿ ಏಳನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ