logo
ಕನ್ನಡ ಸುದ್ದಿ  /  ಕ್ರಿಕೆಟ್  /  ವೀಕ್ಷಕವಿವರಣೆಗೆ ಮರಳಿದ ನವಜೋತ್ ಸಿಂಗ್ ಸಿಧು; ಈ ಬಾರಿಯ ಐಪಿಎಲ್‌ನಲ್ಲಿ ಖಡಕ್‌ ಮಾತಿನ ಸಿಧು ಕಾಮೆಂಟರಿ

ವೀಕ್ಷಕವಿವರಣೆಗೆ ಮರಳಿದ ನವಜೋತ್ ಸಿಂಗ್ ಸಿಧು; ಈ ಬಾರಿಯ ಐಪಿಎಲ್‌ನಲ್ಲಿ ಖಡಕ್‌ ಮಾತಿನ ಸಿಧು ಕಾಮೆಂಟರಿ

Jayaraj HT Kannada

Mar 19, 2024 03:57 PM IST

google News

ಈ ಬಾರಿಯ ಐಪಿಎಲ್‌ನಲ್ಲಿ ಖಡಕ್‌ ಮಾತಿನ ನವಜೋತ್ ಸಿಂಗ್ ಸಿಧು ಕಾಮೆಂಟರಿ

    • ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, ಅನೇಕ ವರ್ಷಗಳ ಬಳಿಕ ಕಾಮೆಂಟ್ ಕರ್ತವ್ಯಗಳಿಗೆ ಮರಳಲಿದ್ದಾರೆ. ಈಬಾರಿ ಐಪಿಎಲ್ ಪಂದ್ಯಾವಳಿಯಲ್ಲಿ ಸಿಧು ಅವರ ವೀಕ್ಷಣ ವಿವರಣೆ ಕೇಳಬಹುದು.
ಈ ಬಾರಿಯ ಐಪಿಎಲ್‌ನಲ್ಲಿ ಖಡಕ್‌ ಮಾತಿನ ನವಜೋತ್ ಸಿಂಗ್ ಸಿಧು ಕಾಮೆಂಟರಿ
ಈ ಬಾರಿಯ ಐಪಿಎಲ್‌ನಲ್ಲಿ ಖಡಕ್‌ ಮಾತಿನ ನವಜೋತ್ ಸಿಂಗ್ ಸಿಧು ಕಾಮೆಂಟರಿ

ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (IPL 2024) ಪಂದ್ಯಗಳ ವೀಕ್ಷಣೆಗೆ ಮತ್ತಷ್ಟು ಮೆರುಗು ಬಂದಿದೆ. ಭಾರತದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು (Navjot Singh Sidhu), ಮತ್ತೆ ಕಾಮೆಂಟರಿಗೆ ಮರಳಲಿದ್ದು, ಐಪಿಎಲ್‌ ಪಂದ್ಯಗಳ ವೇಳೆ ವೀಕ್ಷಕವಿವರಣೆ ಕೊಡಲಿದ್ದಾರೆ. ಸಿಧು ಅವರು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ವೀಕ್ಷಕವಿವರಣೆ ತಂಡದ ಭಾಗವಾಗಲಿದ್ದಾರೆ. ಕೆಲವು ವರ್ಷಗಳಿಂದ ಕಾಮೆಂಟರಿಯಿಂದ ಬ್ರೇಕ್‌ ಪಡೆದಿದ್ದ ಅವರು, ವರ್ಷಗಳ ನಂತರ ಕಾಮೆಂಟ್ ಕರ್ತವ್ಯಕ್ಕೆ ಮರಳಲಿದ್ದಾರೆ. ಭಾರತದ ಜನಪ್ರಿಯ ವೀಕ್ಷಕವಿವರಣೆಕಾರರ ಪಟ್ಟಿಯಲ್ಲಿ ಸಿಧು ಅವರದ್ದು ಪರಿಚಿತ ಹೆಸರು. ಖಡಕ್‌ ಮಾತುಗಳಿಗೆ ಹೆಸರಾದ ಸಿಧು ಅವರ ಕಾಮೆಂಟರಿ ಕೇಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಈ ಬಾರಿಯ ಐಪಿಎಲ್ ಪಂದ್ಯಾವಳಿಯು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರಪ್ರಸಾರವಾಗಲಿದೆ. ಲೀಗ್‌ನ ಅಧಿಕೃತ ಟಿವಿ ಪ್ರಸಾರಕ ಸ್ಟಾರ್‌ ಸ್ಪೋರ್ಟ್ಸ್‌ ಸಿಧು ವೀಕ್ಷಕವಿವರಣೆಗೆ ಮರಳುತ್ತಿರುವುದನ್ನು ಖಚಿತಪಡಿಸಿದೆ. ಮಿಲಿಯನ್‌ ಡಾಲರ್‌ ಟೂರ್ನಿಯ 17ನೇ ಆವೃತ್ತಿಗೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ವೇಳೆ ಕಾಮೆಂಟರಿಯಲ್ಲಿ ಸಿಧು ಅವರ ಧ್ವನಿ ಕೇಳಬಹುದು.

ಮಾರ್ಚ್ 22ರಂದು ಸಂಜೆ 6:30ರಿಂದ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್‌ನಲ್ಲಿ ಐಪಿಎಲ್‌ ಪ್ರಾರಂಭವಾಗಲಿದೆ. ನಂಬಲಾಗದ ವೀಕ್ಷಕವಿವರಣೆಯನ್ನು ಮಿಸ್‌ ಮಾಡಬೇಡಿ ಎಂದು ವಾಹಿನಿ ಟ್ವೀಟ್‌ ಮಾಡಿದೆ.

ಇದನ್ನೂ ಓದಿ | ಕುಸ್ತಿಯ ತಾತ್ಕಾಲಿಕ ಸಮಿತಿ ವಿಸರ್ಜಿಸಿದ ಒಲಿಂಪಿಕ್ ಅಸೋಸಿಯೇಷನ್; ಮತ್ತೆ ಡಬ್ಲ್ಯುಎಫ್ಐ ಅಸ್ತಿತ್ವಕ್ಕೆ

ವೀಕ್ಷಕವಿವರಣೆಕಾರರಾಗಿ ಈ ಹಿಂದೆಯೂ ಹಲವು ಬಾರಿ ಸಿಧು ಮೈಕ್‌ ಮುಂದೆ ಕುಳಿತಿದ್ದರು. ಹಾಸ್ಯಮಯ ವಾಕ್ಯಗಳು ಹಾಗೂ ತೀಕ್ಷ್ಣ ಒಳನೋಟಗಳಿಗೆ ಹೆಸರುವಾಸಿಯಾಗಿರುವ ಮಾಜಿ ಕ್ರಿಕೆಟಿಗನ ಕಾಮೆಂಟರಿ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಕೆಲವು ವರ್ಷಗಳಿಂದ ಸಿಧು ಕಾಮೆಂಟರಿಯನ್ನು ಅಭಿಮಾನಿಗಳು ಮಿಸ್‌ ಮಾಡಿಕೊಡಿದ್ದರು. ಇದೀಗ ಮತ್ತೆ ತಮ್ಮ ಹಳೆಯ ಮೋಡಿಯನ್ನು ಪುನರಾವರ್ತಿಸಲು ಮಾಜಿ ಆಟಗಾರ ಸಜ್ಜಾಗಿದ್ದಾರೆ.

ಐಪಿಎಲ್‌ ಪಂದ್ಯಾವಳಿಯ ಟಿವಿ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯು, ಈಗಾಗಲೇ ಈ ಋತುವಿನಲ್ಲಿ ಕಾಮೆಂಟರಿ ತಂಡದ ಭಾಗವಾಗಲಿರುವ ಸ್ಟಾರ್ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಬಲಗೈ ಬ್ಯಾಟರ್‌ ಸಿಧು, 1983ರಿಂದ 1998ರವರೆಗೆ ಭಾರತದ ಪರ ಸುದೀರ್ಘ 15 ವರ್ಷಗಳ ಕಾಲ ಕ್ರಿಕೆಟ್‌ ಆಡಿದ್ದಾರೆ. 51 ಟೆಸ್ಟ್ ಮತ್ತು 136 ಏಕದಿನ ಪಂದ್ಯಗಳಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್‌ ಆಗಿ ಪ್ರದರ್ಶನ ನೀಡಿದ್ದಾರೆ, ಟೆಸ್ಟ್‌ನಲ್ಲಿ 3202 ಮತ್ತು ಏಕದಿನ ಸ್ವರೂಪದಲ್ಲಿ 4413 ರನ್ ಗಳಿಸಿದ್ದಾರೆ.

ಈ ಬಾರಿಯ ಟೂರ್ನಿಯ ಮೊದಲ ಎರಡು ವಾರಗಳ ಪಂದ್ಯಗಳ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿದೆ. ಮಾರ್ಚ್ 22ರಿಂದ ಏಪ್ರಿಲ್ 7ರವರೆಗಿನ ಮೊದಲ ಹಂತದ ಪಂದ್ಯಗಳು ನಡೆಯಲಿವೆ. 18ನೇ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಉಳಿದ ವೇಳಾಪಟ್ಟಿಯನ್ನು ಇನ್ನಷ್ಟೇ ಅಂತಿಮವಾಗಬೇಕಿದೆ. ಉಳಿದ ಪಂದ್ಯಗಳು ಕೂಡಾ ಭಾರತದಲ್ಲೇ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಸ್ಪಷ್ಟಪಡಿಸಿದ್ದಾರೆ.

ಮೊದಲ ಎರಡು ವಾರಗಳ ಅವಧಿಯಲ್ಲಿ ಒಟ್ಟು 21 ಪಂದ್ಯಗಳು ನಡೆಯಲಿವೆ. ಪ್ರತಿ ತಂಡವು ಕನಿಷ್ಠ ಮೂರು ಪಂದ್ಯಗಳನ್ನು ಮತ್ತು ಗರಿಷ್ಠ ಐದು ಪಂದ್ಯಗಳನ್ನು ಆಡಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ