ಸ್ಟಾರ್ಕ್ ಅಥವಾ ಹೆಡ್ ಅಲ್ಲವೇ ಅಲ್ಲ, ಈತನೇ ಐಪಿಎಲ್ ಹರಾಜಿನ ಪ್ರಮುಖ ಆಕರ್ಷಣೆ ಎಂದ ಗವಾಸ್ಕರ್
Dec 15, 2023 07:20 AM IST
ಮಿಚೆಲ್ ಸ್ಟಾರ್ಕ್, ಸುನಿಲ್ ಗವಾಸ್ಕರ್, ಟ್ರಾವಿಸ್ ಹೆಡ್.
- Sunil Gavaskar: ಐಪಿಎಲ್ ಮಿನಿ ಹರಾಜಿನಲ್ಲಿ ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮಿನ್ಸ್ ಪ್ರಮುಖ ಆಕರ್ಷಣೆಯಾಗಿರಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ - 2024 ಮಿನಿ ಹರಾಜಿಗೆ (IPL Mini Auction) ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿರುವ ಈ ಹರಾಜಿನಲ್ಲಿ 333 ಆಟಗಾರರು ಅಂತಿಮ ಕಣದಲ್ಲಿದ್ದಾರೆ. ಸ್ಟಾರ್ ಪ್ಲೇಯರ್ಸ್ ಮೇಲೆ ನಿರೀಕ್ಷೆ ಹೆಚ್ಷಾಗಿದೆ. ದೊಡ್ಡ ದೊಡ್ಡ ಆಟಗಾರರ ಮೇಲೆ ಮಾಜಿ ಕ್ರಿಕೆಟಿಗರು ಪ್ರಿಡಿಕ್ಷನ್ ಜೋರಾಗಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಕ್ರಿಕೆಟ್ ಅಭಿಮಾನಿಗಳು ಯಾರು ಎಷ್ಟಕ್ಕೆ ಜಾಕ್ ಪಾಟ್ ಹೊಡೆಯುತ್ತಾರೆಂದು ಅಂದಾಜಿಸುತ್ತಿದ್ದಾರೆ.
ಅದರಲ್ಲೂ ವಿಶ್ವಕಪ್ ಟೂರ್ನಿಯಲ್ಲಿ ಬ್ಲಾಕ್ ಬಸ್ಟರ್ ಆಟವಾಡಿದ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ (Travis Head) ಮತ್ತು ಮಿಚೆಲ್ ಸ್ಟಾರ್ಕ್ (Mitchell Starc) ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಸೇಲ್ ಆಗುವ ದೊಡ್ಡ ಹೆಸರುಗಳು ಎಂದು ಹೇಳಲಾಗುತ್ತಿದೆ. ಆದರೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ (Sunil Gavaskar), ಈ ಆಟಗಾರರು ಐಪಿಎಲ್ ಹರಾಜಿನ ಆಕರ್ಷಣೆ ಅಲ್ಲವೇ ಅಲ್ಲ ಎಂದು ಹೇಳಿದ್ದಾರೆ. ಇವರ ಬದಲಿಗೆ ಮತ್ತೊಬ್ಬ ಆಸೀಸ್ ಸೂಪರ್ ಸ್ಟಾರ್ ಅಧಿಕ ಮೊತ್ತಕ್ಕೆ ಸೇಲ್ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಗವಾಸ್ಕರ್ ಹೇಳಿದ್ದು ಬೇರೆ ಯಾರು ಅಲ್ಲ ಪ್ಯಾಟ್ ಕಮಿನ್ಸ್.
‘ಕಮಿನ್ಸ್ ಈ ಬಾರಿ ಪ್ರಮುಖ ಆಕರ್ಷಣೆ’
ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮಿನ್ಸ್ ಮೇಲೆ ಬಹುತೇಕ ಫ್ರಾಂಚೈಸಿಗಳು ಕಣ್ಣಿಟ್ಟಿವೆ ಎಂದು ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂವಾದದಲ್ಲಿ ಈ ಬಗ್ಗೆ ಗವಾಸ್ಕರ್ ಹೇಳಿದ್ದಾರೆ. ಪ್ಯಾಟ್ ಕಮಿನ್ಸ್ ಖರೀದಿಗೆ ಹಲವು ಫ್ರಾಂಚೈಸಿಗಳು ಆಸಕ್ತಿ ಹೊಂದಿವೆ ಎಂದಿದ್ದಾರೆ. ಅಲ್ಲದೆ ಸ್ಟಾರ್ ವೇಗಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಡಿದ್ದ ಸಮಯವನ್ನು ಗವಾಸ್ಕರ್ ನೆನಪಿಸಿಕೊಂಡರು. ಐಪಿಎಲ್ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲೂ ಕ್ರಿಕೆಟ್ ಕಂಡ ಅತ್ಯುತ್ತಮ ಬೌಲರ್ ಎಂದು ಗವಾಸ್ಕರ್ ಬಣ್ಣಿಸಿದ್ದಾರೆ.
ಕಮಿನ್ಸ್ಗಾಗಿ ಪೈಪೋಟಿ ನಡೆಯುವುದು ಖಚಿತ
ಬ್ಯಾಟಿಂಗ್, ಬೌಲಿಂಗ್ ಜೊತೆಗೆ ಕ್ಯಾಪ್ಟನ್ ಆಗಿಯೂ ಮಿಂಚಿರುವ ಕಮಿನ್ಸ್ ಖರೀದಿಗೆ ಹಲವು ಫ್ರಾಂಚೈಸಿಗಳು ಪೈಪೋಟಿ ನಡೆಸುವುದು ಖಚಿತ. ಅವರನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಎಲ್ಲರಿಗೂ ಆಸಕ್ತಿ ಇರುತ್ತದೆ ಎಂದು ನಾನು ಭಾವಿಸುತ್ತೇನೆ. ಕೆಕೆಆರ್ ಪರ ಆಡುತ್ತಿದ್ದ ವೇಳೆ ಅತಿ ವೇಗದ ಅರ್ಧಶತಕ ಸಿಡಿಸಿದ್ದರು ಎಂಬುದನ್ನು ಮರೆಯಬೇಡಿ. ಹಾಗಾಗಿ ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ನೆರವಾಗುವ ಕಾರಣ ಫ್ರಾಂಚೈಸಿಗಳು ಆತನ ಖರೀದಿಗೆ ಹೆಚ್ಚು ಒಲವು ತೋರಲಿವೆ ಎಂದು ಸನ್ನಿ ಹೇಳಿದ್ದಾರೆ.
ಸಂಜಯ್ ಮಂಜ್ರೇಕರ್ ಹೇಳಿದ್ದೇನು?
ಗವಾಸ್ಕರ್ ಈ ಹೇಳಿಕೆ ನೀಡುವುದಕ್ಕೂ ಮುನ್ನ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ಸ್ ಸಂಜಯ್ ಮಂಜ್ರೇಕರ್ ಕೂಡ ಪ್ಯಾಟ್ ಕಮಿನ್ಸ್ ಅವರಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಹೇಳಿದ್ದರು. ನಾಯಕತ್ವದ ಅಗತ್ಯ ಇರುವ ತಂಡಗಳಿಗೆ ಕಮಿನ್ಸ್ ಖರೀದಿ ಉತ್ತಮ ಆಯ್ಕೆ. ಸನ್ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳಿಗೆ ನಾಯಕತ್ವ ಅವಶ್ಯಕತೆ ಇದೆ. ಹಾಗಾಗಿ ಈ ತಂಡಗಳು ಕಮಿನ್ಸ್ಗೆ ಮಣೆ ಹಾಕಿದರೆ ಉತ್ತಮ ಎಂದು ಹೇಳಿದ್ದಾರೆ.
ಪ್ಯಾಟ್ ಕಮಿನ್ಸ್ ಎಲ್ಲಾ ಪಿಚ್ಗಳಿಗೆ ಬೇಗ ಹೊಂದಿಕೊಳ್ಳುತ್ತಾರೆ. ಆದರೆ ತುಂಬಾ ಬೌಲರ್‌ಗಳು ಕೆಲ ಪಿಚ್‌ಗಳಲ್ಲಿ ಹೊಂದಿಕೊಳ್ಳಲು ಪರದಾಡುತ್ತಾರೆ. ಆದರೆ ಕಮಿನ್ಸ್ ಅದಕ್ಕೆ ವಿಭಿನ್ನ. ಅವರೊಬ್ಬ ಎಕ್ಸ್ ಫ್ಯಾಕ್ಟರ್. ಹಾಗಾಗಿ ಖಡಕ್ ಬೌಲರ್ ಅಗತ್ಯ ಇರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಕೆಕೆಆರ್ ಸೇರಿದಂತೆ ಹಲವು ತಂಡಗಳು ಕಮಿನ್ಸ್ ಖರೀದಿಗೆ ಕಣ್ಣಿಟ್ಟಿವೆ ಎಂದು ಹೇಳಿದ್ದಾರೆ.