logo
ಕನ್ನಡ ಸುದ್ದಿ  /  ಕ್ರಿಕೆಟ್  /  ನಾನು ಒಮ್ಮೆ ಹೋದರೆ, ನೀವು ಮತ್ತೆ ನನ್ನ ನೋಡಲ್ಲ; ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಅಚ್ಚರಿ ಹೇಳಿಕೆ, ಫ್ಯಾನ್ಸ್​ಗೆ ಆತಂಕ

ನಾನು ಒಮ್ಮೆ ಹೋದರೆ, ನೀವು ಮತ್ತೆ ನನ್ನ ನೋಡಲ್ಲ; ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಅಚ್ಚರಿ ಹೇಳಿಕೆ, ಫ್ಯಾನ್ಸ್​ಗೆ ಆತಂಕ

Prasanna Kumar P N HT Kannada

May 16, 2024 01:14 PM IST

google News

ನಾನು ಒಮ್ಮೆ ಹೋದರೆ, ನೀವು ಮತ್ತೆ ನನ್ನ ನೋಡಲ್ಲ; ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಅಚ್ಚರಿ ಹೇಳಿಕೆ

    • Virat Kohli: ಕ್ರಿಕೆಟ್​​​ನೊಂದಿಗೆ ಎಲ್ಲವನ್ನೂ ಮುಗಿಸಿ ನಾನು ಒಮ್ಮೆ ಹೋದರೆ, ನೀವು ನನ್ನನ್ನು ಮತ್ತೆ ನೋಡಲು ಸಾಧ್ಯವಾಗಿಲ್ಲ ಎಂದು ವಿರಾಟ್ ಕೊಹ್ಲಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ನಾನು ಒಮ್ಮೆ ಹೋದರೆ, ನೀವು ಮತ್ತೆ ನನ್ನ ನೋಡಲ್ಲ; ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಅಚ್ಚರಿ ಹೇಳಿಕೆ
ನಾನು ಒಮ್ಮೆ ಹೋದರೆ, ನೀವು ಮತ್ತೆ ನನ್ನ ನೋಡಲ್ಲ; ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಅಚ್ಚರಿ ಹೇಳಿಕೆ

ಸಚಿನ್ ತೆಂಡೂಲ್ಕರ್​ ತಮ್ಮ ವೃತ್ತಿಜೀವನದ ಕೊನೆಯ ಹಂತದ 5-6 ವರ್ಷಗಳ ಕಾಲ ನಿವೃತ್ತಿಯ ಮಾತುಗಳೇ ಕೇಳಿಬರುತ್ತಿದ್ದವು. ಆದರೆ, ಇಲ್ಲಿ ಹೆಚ್ಚಾಗಿ ಕೇಳಿಬರುತ್ತಿದ್ದದ್ದು ಕಾರ್ಯಕ್ಷಮತೆ ಅಥವಾ ಫಿಟ್ನೆಸ್ ಕುರಿತಲ್ಲ. ಚರ್ಚೆಗಳು ಶುರುವಾಗಿದ್ದು, ವಯಸ್ಸಿನ ಕುರಿತು. ಭಾರತೀಯ ಕ್ರಿಕೆಟ್​ನಲ್ಲಿ ಇದು ಸರ್ವೇ ಸಾಮಾನ್ಯ. ಹೀಗೆ ಚರ್ಚೆಗೊಳಪಟ್ಟವರು ಸಚಿನ್​ ಮೊದಲಿಗರನೇನು ಅಲ್ಲ, ಕೊನೆಯವರೂ ಅಲ್ಲ. ಇದೀಗ ಈ ಸಾಲಿಗೆ ಭಾರತದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಸೇರಿದ್ದಾರೆ.

ಕೊಹ್ಲಿ ವಯಸ್ಸು ಪ್ರಸ್ತುತ 35 ವರ್ಷ. ಅದಾಗಲೇ ಅವರ ನಿವೃತ್ತಿಯ ಕುರಿತು ಚರ್ಚೆಗಳು ಹುಟ್ಟುಹಾಕಿವೆ. 2023ರ ಏಕದಿನ ವಿಶ್ವಕಪ್ ನಂತರ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿಯೇ ಬಿಡುತ್ತಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ತದ ನಂತರ ಅವರ ಟಿ20 ಕರಿಯರ್ ಮುಗಿಯಿತು ಎನ್ನಲಾಯಿತು. ಇದೆಲ್ಲದರ ನಡುವೆ ಟಿ20 ವಿಶ್ವಕಪ್​ ಟೂರ್ನಿಗೂ ಆಯ್ಕೆಯಾಗುವ ಮೂಲಕ ಇದೆಲ್ಲವೂ ಸುಳ್ಳೆಂದು ವಿರಾಟ್ ಕೊಹ್ಲಿ ನಿರೂಪಿಸಿದ್ದರು. ಆದರೂ ಚರ್ಚೆಗಳಿಗೆ ಇನ್ನೂ ಫುಲ್​ಸ್ಟಾಫ್ ಬಿದ್ದಿಲ್ಲ.

ಇದೀಗ ನಿವೃತ್ತಿಯ ಕುರಿತು ಕೊಹ್ಲಿ ಅವರೇ ಉತ್ತರಿಸಿದ್ದಾರೆ. ಆದರೆ ಯಾವಾಗ ನಿವೃತಿ ಆಗುತ್ತೇನೆ ಎಂಬುದನ್ನು ಮಾತ್ರ ವಿವಿರಿಸಿಲ್ಲ. ಟಿ20 ವಿಶ್ವಕಪ್​ ಮುಗಿದ ನಂತರ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್​ನಲ್ಲಿ ಇನ್ನೂ ಮೂರ್ನಾಲ್ಕು ವರ್ಷಗಳ ಕಾಲ ಮುಂದುವರೆಯುವ ಸಾಧ್ಯತೆ ಇದೆ. ಆರ್​​ಸಿಬಿ ಕಾರ್ಯಕ್ರಮದಲ್ಲಿ ನಿರೂಪಕ ಒಂದು ಪ್ರಶ್ನೆ ಕೇಳಿದ್ದಾರೆ. ನೀವು ಯಶಸ್ಸಿನ ಹಿಂದೆ ಯಾಕಿಷ್ಟು ಹಸಿವಿನಿಂದ ಓಡುತ್ತಾ ಇದೀರಿ ವಿರಾಟ್? ಇದರ ಹಿಂದಿರುವ ಗುಟ್ಟೇನು ಎಂಬ ಪ್ರಶ್ನೆಗೆ ಕೊಹ್ಲಿ ಅಚ್ಚರಿ ಉತ್ತರ ನೀಡಿದ್ದಾರೆ.

ಒಮ್ಮೆ ಹೋದರೆ ಮತ್ತೆ ಸಿಗಲ್ಲ ಎಂದ ವಿರಾಟ್ ಕೊಹ್ಲಿ

ಏನಿಲ್ಲ, ಇದು ತುಂಬಾ ಸರಳವಾದದ್ದು. ಯಾವುದೇ ಕ್ರೀಡಾಪಟು, ಇವತ್ತಲ್ಲ, ನಾಳೆ ತಮ್ಮ ಕರಿಯರ್​​ನ ಅಂತ್ಯದ ದಿನಾಂಕವನ್ನು ನೋಡಲೇಬೇಕು. ಹಾಗಾಗಿ, ನಾನು ಹೆಚ್ಚು ಶ್ರಮ ಹಾಕುತ್ತಿದ್ದೇನೆ. ಮಿತಿ ಮೀರಿದ ಕಾರ್ಯನಿರ್ವಹಿಸುತ್ತಿದ್ದೇನೆ. ಅಯ್ಯೋ ಇದನ್ನು ಅವತ್ತು ಮಾಡಬೇಕಿತ್ತು ಎಂದು ವೃತ್ತಿಜೀವನದ ಮುಕ್ತಾಯದ ನಂತರ ಚಿಂತಿಸುತ್ತಾ ಕೂರಬಾರದು. ಅಂತಹ ಸಂದರ್ಭ ಬರಬಾರದೆಂದೇ ಈಗ ಉತ್ತಮ ಆಟವಾಡಲು ಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಒಂದು ವೇಳೆ ನಾನು ನನ್ನ ಕರಿಯರ್​​ಗೆ ನಿವೃತ್ತಿ ಘೋಷಿಸಿದ ಬಳಿಕ ನನಗೆ ಯಾವುದೇ ವಿಷಾದ ಇರಬಾರದು. ಹಾಗಾಗಿ, ನಾನು ಹಾಗೆ ಮಾಡಿಕೊಳ್ಳುವುದಿಲ್ಲ ಎಂಬ ಖಾತ್ರಿ ನನಗಿದೆ. ಒಮ್ಮೆ ನಾನು ಎಲ್ಲವನ್ನೂ ಮುಗಿಸಿ ಹೊರನಡೆದರೆ (ನಿವೃತ್ತಿ ಘೋಷಿಸಿ ಹೋದರೆ) ಮತ್ತೆ ನೀವು ನನ್ನ ನೋಡಲು ಸಾಧ್ಯವಿಲ್ಲ. ಹಾಗಾಗಿ ಕೊನೆಯವರೆಗೂ ನಾನು ಅತ್ಯುತ್ತಮವಾದದ್ದನ್ನು ನೀಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಈ ಹೇಳಿಕೆಯಿಂದ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಅವರು ಪ್ರಸ್ತುತ ಐಪಿಎಲ್​ನಲ್ಲಿ ಆರೆಂಜ್ ಕ್ಯಾಪ್ ಹೋಲ್ಡರ್​ ಅಗಿದ್ದಾರೆ. 13 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಕೊಹ್ಲಿ, 66.10ರ ಬ್ಯಾಟಿಂಗ್ ಸರಾಸರಿಯಲ್ಲಿ 661 ರನ್ ಗಳಿಸಿದ್ದಾರೆ. 155+ ಸ್ಟ್ರೈಕ್​ರೇಟ್ ಹೊಂದಿರುವ ವಿರಾಟ್, 5 ಅರ್ಧಶತಕ, 1 ಶತಕ ಸಿಡಿಸಿದ್ದಾರೆ. ಈಗ ಮೇ 18ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಹತ್ವದ ಪಂದ್ಯಕ್ಕೆ ರನ್​ ಮಷಿನ್ ಸಜ್ಜಾಗಿದ್ದಾರೆ.

ಆರ್​ಸಿಬಿ ಪ್ಲೇಆಫ್ ಹಾದಿ

ಮೇ 18ರಂದು ಸಿಎಸ್​ಕೆ ವಿರುದ್ಧ ಆರ್​ಸಿಬಿ ಮಹತ್ವದ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ 18 ರನ್​ಗಳ ಅಂತರದಿಂದ ಗೆಲುವು ಅಥವಾ 18.1 ಓವರ್​​ಗಳಲ್ಲಿ ಚೇಸ್ ಮಾಡಿದರೆ ಬೆಂಗಳೂರು ಪ್ಲೇಆಫ್​ ಪ್ರವೇಶಿಸುವುದು ಖಚಿತ. ಒಂದು ವೇಳೆ ಚಾಲೆಂಜರ್ಸ್ ಕಡಿಮೆ ಅಂತರದಲ್ಲಿ ಗೆದ್ದರೂ ಪ್ಲೇಆಫ್ ಪ್ರವೇಶಿಸಲು ಮತ್ತೊಂದು ಅವಕಾಶ ಪಡೆಯಬಹುದು. ಸನ್​ರೈಸರ್ಸ್ ಹೈದರಾಬಾದ್ ಎರಡೂ ಪಂದ್ಯಗಳನ್ನು ಸೋತು ರನ್​ರೇಟ್ ಇಳಿದರೆ, ಆಗ ಆರ್​ಸಿಬಿ ಪ್ಲೇಆಫ್​ ಪ್ರವೇಶಿಸಲಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ