logo
ಕನ್ನಡ ಸುದ್ದಿ  /  ಕ್ರಿಕೆಟ್  /  ಒಂದು ದಿನ ಗಿಲ್ ಸಹ ಗುಜರಾತ್ ತೊರೆಯಬಹುದು; ಹಾರ್ದಿಕ್ ಮುಂಬೈ ಸೇರಿದ ಬಗ್ಗೆ ಶಮಿ ಪ್ರತಿಕ್ರಿಯೆ

ಒಂದು ದಿನ ಗಿಲ್ ಸಹ ಗುಜರಾತ್ ತೊರೆಯಬಹುದು; ಹಾರ್ದಿಕ್ ಮುಂಬೈ ಸೇರಿದ ಬಗ್ಗೆ ಶಮಿ ಪ್ರತಿಕ್ರಿಯೆ

Prasanna Kumar P N HT Kannada

Jan 17, 2024 08:45 AM IST

google News

ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಶುಭ್ಮನ್ ಗಿಲ್.

    • Mohammed Shami on Hardik Pandya: ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತೊರೆದು ಮುಂಬೈ ಇಂಡಿಯನ್ಸ್ ಸೇರಿರುವ ಕುರಿತು ಸ್ಟಾರ್ ವೇಗಿ‌ ಮೊಹಮ್ಮದ್ ಶಮಿ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. 
ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಶುಭ್ಮನ್ ಗಿಲ್.
ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಶುಭ್ಮನ್ ಗಿಲ್.

2024ರ ಇಂಡಿಯನ್ ಪ್ರೀಮಿಯರ್ ಲೀಗ್ (IPL)ಗೂ ಮುನ್ನ ಗುಜರಾತ್ ಟೈಟಾನ್ಸ್‌ (Gujarat Titans) ತೊರೆದು ಟ್ರೇಡ್ ಮೂಲಕ ಮುಂಬೈ ಇಂಡಿಯನ್ಸ್ (Mumbai Indians) ಸೇರುವ ಮೂಲಕ ಹಾರ್ದಿಕ್ ಪಾಂಡ್ಯ (Hardik Pandya) ಅವರು ಹೊಸ ಸಂಚಲನ ಸೃಷ್ಟಿಸಿದ್ದರು. ಹತ್ತು ವರ್ಷಗಳಿಂದ ಮುಂಬೈ ತಂಡವನ್ನು ಮುನ್ನಡೆಸಿ ಐದು ಟ್ರೋಫಿ ಗೆದ್ದುಕೊಟ್ಟಿದ್ದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಎರಡು ವರ್ಷಗಳ ನಂತರ ತಂಡಕ್ಕೆ ಮರಳಿದ ಹಾರ್ದಿಕ್ ಗೆ ಪಟ್ಟ ಕಟ್ಟಲಾಯಿತು.

2022 ಮತ್ತು 2023ರಲ್ಲಿ ಗುಜರಾತ್ ತಂಡಕ್ಕೆ‌ ಸಾರಥ್ಯ ವಹಿಸಿದ್ದ ಹಾರ್ದಿಕ್, 15 ಕೋಟಿಗೆ 2015ರಿಂದ 2021ರವರೆಗೂ ಆಡಿದ್ದ ಮುಂಬೈಗೆ ಮರಳಿದ್ದಾರೆ. ಅವರ ಕ್ಯಾಪ್ಟನ್ಸಿಯಲ್ಲಿ ಗುಜರಾತ್ ಎರಡು ಬಾರಿಯೂ ಫೈನಲ್ ಪ್ರವೇಶಿಸಿತ್ತು. ಒಂದು ಬಾರಿ ಚಾಂಪಿಯನ್ ಕೂಡ ಆಗಿದೆ. ಯಶಸ್ಸಿನ ಹೊರತಾಗಿಯೂ ಹಾರ್ದಿಕ್ ಮುಂಬೈಗೆ ಮರಳಿದ್ದು, ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಟ್ರೇಡ್ ಆದ ಆಟಗಾರ ಎನಿಸಿದ್ದಾರೆ.

ಹಾರ್ದಿಕ್ ಕುರಿತು ಮೊಹಮ್ಮದ್ ಶಮಿ ಪ್ರತಿಕ್ರಿಯೆ

ಪಾಂಡ್ಯ ಅವರ ಬದಲಾವಣೆಯ ನಂತರ ಗುಜರಾತ್ ಟೈಟಾನ್ಸ್‌ನಲ್ಲಿ ನಾಯಕತ್ವವನ್ನು ಪ್ರತಿಭಾನ್ವಿತ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್​​ಗೆ ಹಸ್ತಾಂತರಿಸಲಾಗಿದೆ. ಇದೀಗ ಗುಜರಾತ್ ತಂಡದ ಸ್ಟಾರ್ ವೇಗಿ‌ ಮೊಹಮ್ಮದ್ ಶಮಿ ಪ್ರತಿಕ್ರಿಯೆ ನೀಡಿದ್ದಾರೆ. 2023ರಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಶಮಿ, ಹಾರ್ದಿಕ್ ನಿರ್ಧಾರದ ಬಗ್ಗೆ ತಮ್ಮ ದೃಷ್ಟಿಕೋನ ಹಂಚಿಕೊಂಡಿದ್ದಾರೆ. ಅಂತಹ ನಡೆ ಆಟಗಾರನ ವೃತ್ತಿಪರ ಪ್ರಯಾಣದ ಸಾಮಾನ್ಯ ಅಂಶ. ಈ ಪ್ರಕ್ರಿಯೆ ಆಟಗಾರರ ಪ್ರಾಮುಖ್ಯತೆ ‌ಕಡಿಮೆ‌ ಮಾಡುತ್ತದೆ ಎಂದಿದ್ದಾರೆ.

ಯಾರೂ ತಲೆಕೆಡಿಸಿಕೊಂಡಿಲ್ಲ ಎಂದ ವೇಗಿ

ನೋಡಿ, ಯಾರು ಹೋಗಲಿ ಬಿಡಲಿ ಪರವಾಗಿಲ್ಲ. ಯಾರೂ (ಹಾರ್ದಿಕ್ ಪಾಂಡ್ಯ) ಫ್ರಾಂಚೈಸಿ ತೊರೆಯುವುದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಅದು ಅವರಿಷ್ಟ. ತಂಡದ ಸಮತೋಲನವನ್ನು ನೀವು ನೋಡಬೇಕು. ಹಾರ್ದಿಕ್ ಗುಜರಾತ್ ಪರ ಉತ್ತಮ ನಾಯಕತ್ವ ವಹಿಸಿದ್ದರು. ಎರಡೂ ಆವೃತ್ತಿಗಳಲ್ಲಿ ತಂಡವನ್ನು ಫೈನಲ್​ಗೇರಿಸಿದ್ದರು. 2022ರಲ್ಲಿ ನಮಗೆ ಪ್ರಶಸ್ತಿ ಗೆದ್ದುಕೊಟ್ಟರು. ಆದರೆ ಇಡೀ ಜೀವಮಾನ ಆಡುತ್ತೇನೆ ಎಂದು ಗುಜರಾತ್​​ಗೆ ಹಾರ್ದಿಕ್ ಸಹಿ ಮಾಡಿರಲಿಲ್ಲ. ತಂಡದಲ್ಲಿ ಇರುವುದು ಹೋಗುವುದು ಅವರ ನಿರ್ಧಾರ ಎಂದು ಪ್ರಾಮಾಣಿಕ ಹೇಳಿಕೆ ನೀಡಿದ್ದಾರೆ.

‘ಗಿಲ್​ ಕೂಡ ಒಂದು ದಿನ ಹೋಗಬಹುದು’

ಶುಭ್ಮನ್‌ ಗಿಲ್ ಅವರು ಈಗ ನಾಯಕನಾಗಿದ್ದು, ಯುವ ಆಟಗಾರನಾಗಿ ಹೆಚ್ಚಿನ ಅನುಭವ ಪಡೆಯಲಿದ್ದಾರೆ. ಹಾಗಂತ ಅವರು ಸಹ ತಂಡದಲ್ಲೇ ಶಾಶ್ವತವಾಗಿ ಇರುತ್ತಾರೆ ಎಂದು ಹೇಳಲಾಗದು. ಯಾವತ್ತಾದರೂ ಅವರು ಒಂದು ದಿನ ಗುಜರಾತ್ ತೊರೆಯಬಹುದು. ಇದು ಆಟದ ಒಂದು ಭಾಗವಾಗಿದೆ. ಆಟಗಾರರು ಬರುವುದು, ಹೋಗುವುದು ಸಾಮಾನ್ಯ ಸಂಗತಿ ಮತ್ತು ಆಟಗಾರರು ಇಷ್ಟ ಎಂದು ಶಮಿ ನ್ಯೂಸ್ 24ಗೆ ತಿಳಿಸಿದರು.

ಗಿಲ್​ಗೆ ಸಲಹೆ ನೀಡಿದ ಶಮಿ

ನಾಯಕರಾದ ಮೇಲೆ ಪ್ರದರ್ಶನ ಜೊತೆಗೆ ಜವಾಬ್ದಾರಿ ನಿರ್ವಹಿಸುವುದು ಮುಖ್ಯವಾಗಿದೆ. ಮತ್ತು ಆ ಜವಾಬ್ದಾರಿಯನ್ನು ಈ ಬಾರಿ ಶುಭ್ಮನ್‌ಗೆ ವಹಿಸಲಾಗಿದೆ. ಆತನ ಮನಸ್ಸಿನಲ್ಲಿ ಸ್ವಲ್ಪ ಹೊರೆಯಾಗುವ ಭೀತಿ ಇರಬಹುದು. ಆದರೆ ಆಟಗಾರರು ಹೆಚ್ಚು ಕಡಿಮೆ ಒಂದೇ ಆಗಿರುತ್ತಾರೆ. ಹಾಗಾಗಿ ಆತ ಚಿಂತಿಸುವ ಅಗತ್ಯವಿಲ್ಲ. ಆಟಗಾರರನ್ನು ಉತ್ತಮವಾಗಿ ನಿರ್ವಹಿಸಬೇಕು ಮತ್ತು ನಿಮ್ಮ ಆಟಗಾರರಿಂದ ಉತ್ತಮವಾದುದನ್ನು ಹೊರತೆಗೆಯುವಂತಹ ವಾತಾವರಣ ನಿರ್ಮಿಸಬೇಕು ಎಂದು ಸಲಹೆ ನೀಡಿದ್ದಾರೆ.

ಗುಜರಾತ್ ಟೈಟಾನ್ಸ್ ತಂಡ

ಡೇವಿಡ್ ಮಿಲ್ಲರ್, ಶುಭ್ಮನ್ ಗಿಲ್ (ನಾಯಕ), ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹಾ, ಕೇನ್ ವಿಲಿಯಮ್ಸನ್, ಅಭಿನವ್ ಮನೋಹರ್, ಬಿ. ಸಾಯಿ ಸುದರ್ಶನ್, ದರ್ಶನ್ ನಲ್ಕಂಡೆ, ವಿಜಯ್ ಶಂಕರ್, ಜಯಂತ್ ಯಾದವ್, ರಾಹುಲ್ ತೆವಾಟಿಯಾ, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಸಾಯಿ ಕಿಶೋರ್, ರಶೀದ್ ಖಾನ್ ಜೋಶುವಾ ಲಿಟಲ್, ಮೋಹಿತ್ ಶರ್ಮಾ, ಅಜ್ಮತುಲ್ಲಾ ಒಮರ್ಜಾಯ್, ಉಮೇಶ್ ಯಾದವ್, ಶಾರುಖ್ ಖಾನ್, ಸುಶಾಂತ್ ಮಿಶ್ರಾ, ಕಾರ್ತಿಕ್ ತ್ಯಾಗಿ, ಮಾನವ್ ಸುತಾರ್, ಸ್ಪೆನ್ಸರ್ ಜಾನ್ಸನ್, ರಾಬಿನ್ ಮಿಂಜ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ