ಪಿಎಸ್‌ಎಲ್ ಒಂದು ದೊಡ್ಡ ಬ್ರಾಂಡ್, ಐಪಿಎಲ್ ಆಡದಿದ್ದರೆ ನಮಗೇನು ನಷ್ಟ ಇಲ್ಲ; ಪಾಕ್ ಮಾಜಿ ಕ್ರಿಕೆಟಿಗ
Jan 30, 2024 12:00 PM IST
ಪಾಕ್ ಮಾಜಿ ಕ್ರಿಕೆಟಿಗ ಅಮಿರ್ ಸೊಹೈಲ್.
- IPL vs PSL: ಪಾಕಿಸ್ತಾನಿ ಆಟಗಾರರ ಮೇಲೆ ಐಪಿಎಲ್ ವಿತ್ತೀಯ ಪ್ರಯೋಜನಗಳ ಹೊರತಾಗಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಮಾಜಿ ಕ್ರಿಕೆಟಿಗ ಅಮಿರ್ ಸೊಹೈಲ್ ಹೇಳಿದ್ದಾರೆ.
ಐಪಿಎಲ್ (IPL) ಆಡದಂತೆ ಹೇರಿರುವ ನಿಷೇಧದಿಂದ ಪಾಕಿಸ್ತಾನಿ ಕ್ರಿಕೆಟಿಗರ (Pakistan Crickters) ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ ಎಂದು ಪಾಕ್ ಮಾಜಿ ಕ್ರಿಕೆಟಿಗ ಅಮಿರ್ ಸೊಹೈಲ್ (Aamer Sohail) ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ತಾನ ಕ್ರಿಕೆಟಿಗರು ಮೊದಲ ಆವೃತ್ತಿಯ ಐಪಿಎಲ್ ಆಡಿದ್ದರು. ಆ ಬಳಿಕ ನಡೆದ ರಾಜಕೀಯ ಉದ್ವಿಗ್ನತೆಯ ಕಾರಣ ಅವರಿಗೆ ಅನುಮತಿ ನೀಡಲಿಲ್ಲ. ಶೋಯೆಬ್ ಅಖ್ತರ್, ಶಾಹಿದ್ ಅಫ್ರಿದಿ, ಕಮ್ರಾನ್ ಅಕ್ಮಲ್ ಸೇರಿದಂತೆ ಹಲವು ಪಾಕ್ ಆಟಗಾರರು ಆಡಿದ್ದರು.
ಉಭಯ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಆಟಗಾರರು 2009ರಿಂದ ಶ್ರೀಮಂತ ಲೀಗ್ನಲ್ಲಿ ಸಂಭ್ರಮದಲ್ಲಿ ಭಾಗವಹಿಸುವುದನ್ನು ತಡೆಯಲಾಯಿತು. ನಂತರ 2016ರಲ್ಲಿ ಪಾಕ್ ತನ್ನದೇ ಆದ ಟಿ20 ಲೀಗ್ ಪಾಕಿಸ್ತಾನ್ ಸೂಪರ್ ಲೀಗ್ (Pakistan Super League) ಪರಿಚಯಿಸಿತು. ಪಿಎಸ್‌ಎಲ್ ಈಗ ಜಗತ್ತಿನ ಅತ್ಯಂತ ಜನಪ್ರಿಯ ಟಿ20 ಲೀಗ್‌ಗಳಲ್ಲಿ ಒಂದಾಗಿದೆ. ಭಾರತ ತಂಡ ಹೊರತುಪಡಿಸಿ ಉಳಿದ ದೇಶಗಳ ಆಟಗಾರರು ಈ ಲೀಗ್ನಲ್ಲಿ ಆಡುತ್ತಾರೆ.
ಐಪಿಎಲ್ ಆಡದಿದ್ದರೆ ನಮಗೇನು ನಷ್ಟ ಇಲ್ಲ; ಅಮರ್
ಈ ಬಗ್ಗೆ ಮಾತನಾಡಿದ ಅಮಿರ್ ಸೊಹೈಲ್, ಪಾಕಿಸ್ತಾನಿ ಆಟಗಾರರ ಮೇಲೆ ಐಪಿಎಲ್ ವಿತ್ತೀಯ ಪ್ರಯೋಜನಗಳ ಹೊರತಾಗಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭಾವಿಸುತ್ತೇನೆ. ಪಾಕಿಸ್ತಾನ್ ಸೂಪರ್ ಲೀಗ್ ದೊಡ್ಡ ಬ್ರಾಂಡ್ ಆಗಿ ಮಾರ್ಪಟ್ಟಿದೆ. ಸದ್ಯ ನಮ್ಮ ಆಟಗಾರರಿಗೆ ಬೇಡಿಕೆ ಹೆಚ್ಚಾಗಿದೆ. ಬಿಗ್ ಬ್ಯಾಷ್ ಲೀಗ್, ಬಿಪಿಎಲ್ ಸೇರಿದಂತೆ ಹಲವು ಫ್ರಾಂಚೈಸಿ ಲೀಗ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಪಂಚದಾದ್ಯಂತದ ವಿವಿಧ ಲೀಗ್‌ಗಳು ಅವರನ್ನು (ಪಾಕ್ ಆಟಗಾರರು) ಹುಡುಕುತ್ತಿವೆ. ಹಾಗಾಗಿ ನಮ್ಮ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸದಿದ್ದರೆ, ಅದು ಪಾಕಿಸ್ತಾನ ಕ್ರಿಕೆಟ್‌ಗೆ ಯಾವುದೇ ನಷ್ಟ ಆಗಲಿದೆ ಎಂಬುದಾಗಿ ನಾನು ಭಾವಿಸಲ್ಲ ಎಂದು ಹೇಳಿದ್ದಾರೆ.
‘ಪಾಕಿಸ್ತಾನಕ್ಕೆ ಬ್ಯಾಟಿಂಗ್ ಆಲ್ರೌಂಡರ್ ಬೇಕು’
ಪಾಕಿಸ್ತಾನ ತಂಡವು ಏಕದಿನ ವಿಶ್ವಕಪ್‌ನ ಸೆಮಿಫೈನಲ್ ತಲುಪಲು ವಿಫಲವಾಯಿತು. ನಂತರ ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ 3-0 ವೈಟ್‌ವಾಶ್ ಅನುಭವಿಸಿತು. ನ್ಯೂಜಿಲೆಂಡ್ ವಿರುದ್ಧ ಟಿ20ಐ ಸರಣಿ ಕಳೆದುಕೊಂಡಿದೆ. ಹಾಗಾಗಿ ಪಾಕಿಸ್ತಾನವು ತಮ್ಮ ಕ್ರಿಕೆಟ್‌ನಲ್ಲಿ ಏನೆಲ್ಲಾ ಬದಲಾವಣೆ ತರಬೇಕೆಂದು ಕೇಳಿದಾಗ, ನಮ್ಮ ತಂಡವು ಗುಣಮಟ್ಟದ ಸ್ಪಿನ್ನರ್ ಮತ್ತು ಕೆಳ ಮಧ್ಯಮ ಕ್ರಮಾಂಕದಲ್ಲಿ ಆಡಬಲ್ಲ ಬ್ಯಾಟರ್ ಅನ್ನು ಹುಡುಕಬೇಕಾಗಿದೆ ಎಂದು ಅಮೀರ್ ಉತ್ತರಿಸಿದ್ದಾರೆ.
‘ಪಾಕ್ ತಂಡಕ್ಕಿದೆ ಫಿನಿಷರ್ ಅಗತ್ಯ’
ಪಾಕಿಸ್ತಾನ ಕ್ರಿಕೆಟ್ ಮಾಡಬೇಕಾದ ಏಕೈಕ ವಿಷಯವೆಂದರೆ ಅವರು ಉತ್ತಮ ಸ್ಪಿನ್ನರ್‌ಗಳನ್ನು ಹುಡುಕಬೇಕು ಎಂದು ನಾನು ಭಾವಿಸುತ್ತೇನೆ. ಅಲ್ಲದೆ, 5ನೇ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ನಡೆಸುವವರ ಅಗತ್ಯ ಇದೆ. ಹಾಗೆಯೇ ಫಿನಿಷರ್ ಕೂಡ ತಂಡಕ್ಕೆ ಅಗತ್ಯ ಇದೆ ಎಂದು ನಾನು ಭಾವಿಸುತ್ತೇನೆ. ಬ್ಯಾಟರ್‌ಗಳು ಉತ್ತಮ ತಂತ್ರವನ್ನು ಹೊಂದಿದ್ದರೆ ಮತ್ತು ಉತ್ತಮ ಎಸೆತಗಳಲ್ಲಿ ರನ್ ಗಳಿಸುವ ಕಲೆಯನ್ನು ತಿಳಿದಿದ್ದರೆ, ಅಂತಹ ಆಟಗಾರನಿಗೆ ಮೂರು ಫಾರ್ಮ್ಯಾಟ್‌ಗಳನ್ನು ಆಡಲು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.