ಐಪಿಎಲ್ vs ಪಿಎಸ್ಎಲ್, ಯಾವುದು ಅತ್ಯಂತ ಉತ್ತಮ ಲೀಗ್; ಪ್ರಾಮಾಣಿಕ ಉತ್ತರ ನೀಡಿದ ಪಾಕ್ ಮಾಜಿ ನಾಯಕ
Dec 31, 2023 10:05 AM IST
ಐಪಿಎಲ್ vs ಪಿಎಸ್ಎಲ್.
- IPL vs PSL: ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಪಾಕಿಸ್ತಾನ ಸೂಪರ್ ಲೀಗ್ ನಡುವೆ ಯಾವುದು ಅತ್ಯಂತ ಉತ್ತಮ ಟಿ20 ಟೂರ್ನಿ? ಈ ಪ್ರಶ್ನೆಗೆ ಪಾಕ್ ದಿಗ್ಗಜ ಕ್ರಿಕೆಟಿಗ ವಾಸೀಂ ಅಕ್ರಮ್ ಉತ್ತರಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್. ಈಗಾಗಲೇ ಕ್ರಿಕೆಟ್ ಲೋಕದಲ್ಲಿ ಹಲವು ಟಿ20 ಲೀಗ್ಗಳು ದೇಶಕ್ಕೊಂದರಂತೆ ತಲೆ ಎತ್ತಿವೆ. ಪಿಎಸ್ಎಲ್, ಬಿಪಿಎಲ್, ಎಸ್ಎಟಿ20, ಟಿ10, ಐಎಲ್ಟಿ20, ಹಂಡ್ರೆಡ್, ಬಿಬಿಎಲ್ ಹೀಗೆ ಸುಮಾರಿವೆ. ಆದರೆ ಯಾವ ಟಿ20 ಲೀಗ್ ಸಹ ಐಪಿಎಲ್ ಮಟ್ಟಕ್ಕೆ ಬೆಳೆದಿಲ್ಲ. ಮಿಲಿಯನ್ ಡಾಲರ್ ಟೂರ್ನಿಯು ವಿಶ್ವದ ಕ್ರೀಡಾ ಲೀಗ್ಗಳ ಪೈಕಿ ಎರಡನೇ ಸ್ಥಾನದಲ್ಲಿದೆ ಎಂಬುದು ಹೆಮ್ಮೆಯ ಸಂಗತಿ.
ಐಪಿಎಲ್ vs ಪಿಎಸ್ಎಲ್ ಯಾವುದು ಬೆಸ್ಟ್ ಲೀಗ್?
ಆದರೆ ಪಾಕಿಸ್ತಾನ ಕ್ರಿಕೆಟಿಗರು ಪಾಕಿಸ್ತಾನ ಸೂಪರ್ ಲೀಗ್ (Pakistan Super League) ಹಾಗೂ ಐಪಿಎಲ್ ನಡುವಿನ ಹೋಲಿಕೆ ಕುರಿತು ಮಾತನಾಡುತ್ತಾರೆ. ಕೆಲವರು ಐಪಿಎಲ್ಗಿಂತ ಪಿಎಸ್ಎಲ್ ಸಮವಲ್ಲ ಎಂದರೆ, ಇನ್ನೂ ಕೆಲವರು ಎರಡೂ ಒಂದೇ ಎಂದು ಹೇಳಿದ್ದೂ ಇದೆ. ಈ ಬಗ್ಗೆ ವಾದ-ವಿವಾದ, ಚರ್ಚೆಗಳು ಸಹ ನಡೆಯುತ್ತಲೇ ಇರುತ್ತವೆ. ಆದರೀಗ ಈ ಕುರಿತು ಮತ್ತೊಂದು ಚರ್ಚೆ ಮುನ್ನೆಲೆಗೆ ಬಂದಿದೆ. ಉಭಯ ಲೀಗ್ಗಳ ನಡುವಿನ ಹೋಲಿಕೆ ಕುರಿತು ಮಾಜಿ ಕ್ರಿಕೆಟಿಗ ವಾಸೀಂ ಅಕ್ರಮ್ ಮಾತಾಡಿದ್ದಾರೆ.
ಲಾಭದಾಯಕ ಫ್ರಾಂಚೈಸ್ ಮೌಲ್ಯಮಾಪನ, ವಿದೇಶಿ ಆಟಗಾರರ ವೇತನ ಮತ್ತು ಜಾಗತಿಕ ಪ್ರಾಯೋಜಕತ್ವ ಮತ್ತು ಹಣಕಾಸಿನ ಪ್ರಭಾವದಲ್ಲಿ ಐಪಿಎಲ್ ಸರ್ವೋಚ್ಚ. ಪ್ರೇಕ್ಷಕರನ್ನು ರಂಜಿಸುವುದ ಆಕರ್ಷಿಸುವುದರಲ್ಲೂ ನಂ 1. ಇದಕ್ಕೆ ವ್ಯತಿರಿಕ್ತವಾಗಿ ಪಿಎಸ್ಎಲ್ ಸಣ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೂ ಪಾಕಿಸ್ತಾನದ ದಿಗ್ಗಜ ಆಟಗಾರರು ಈ ಬಗ್ಗೆ ಒಂದಿಲ್ಲೊಂದು ಚರ್ಚೆ ನಡೆಸುತ್ತಲೇ ಇರುತ್ತಾರೆ. ಇದೀಗ ವಾಸೀಂ ಅಕ್ರಮ್ ಈ ಕ್ರಿಕೆಟ್ ಶಕ್ತಿಕೇಂದ್ರಗಳ ಹೋಲಿಕೆಯನ್ನು ಯಾವ ರೀತಿ ಮಾಡಿದ್ದಾರೆ ಎಂಬುದನ್ನು ಈ ಮುಂದೆ ತಿಳಿಯೋಣ.
ಪಿಎಸ್ಎಲ್ ಪಾಕಿಸ್ತಾನದ ಮಿನಿ ಐಪಿಎಲ್ನಂತೆ ಎಂದ ಅಕ್ರಮ್
ಎರಡೂ ಲೀಗ್ನ ನಡುವಿನ ಹೋಲಿಕೆ ಕುರಿತು ಮಾತನಾಡಿದ ಪಾಕಿಸ್ತಾನದ ಮಾಜಿ ಶ್ರೇಷ್ಠ ಆಟಗಾರ ವಾಸಿಂ ಅಕ್ರಮ್, ಐಪಿಎಲ್ ದೊಡ್ಡ ಲೀಗ್ ಮತ್ತು ಪಿಎಸ್ಎಲ್ ಪಾಕಿಸ್ತಾನದ ಮಿನಿ-ಐಪಿಎಲ್ ಇದ್ದಂತೆ ಎಂದು ಹೇಳಿದ್ದೆ. ನಾನು ಎರಡರಲ್ಲೂ ಕೆಲಸ ಮಾಡಿದ್ದೇನೆ. ನೀವು ಎರಡು ಟೂರ್ನಿಗಳನ್ನೂ ಹೋಲಿಸಲು ಸಾಧ್ಯವಿಲ್ಲ. ಐಪಿಎಲ್ ದೊಡ್ಡ ಮಟ್ಟದ ಟೂರ್ನಿ. ಆದರೆ ಪಿಎಸ್ಎಲ್ ಪಾಕಿಸ್ತಾನದಲ್ಲೂ ಅಷ್ಟೇ ದೊಡ್ಡ ಲೀಗ್ ಎಂಬುದು ಸತ್ಯ. ನಿಸ್ಸಂದೇಹವಾಗಿ ಇದು ಪಾಕಿಸ್ತಾನದ ಮಿನಿ ಐಪಿಎಲ್‌ನಂತಿದೆ ಎಂದು ಸ್ಪೋರ್ಟ್ಸ್ ಕೀಡಾದ ವಿಡಿಯೋದಲ್ಲಿ ಅಕ್ರಮ್ ಹೇಳಿದ್ದಾರೆ.
ಎರಡೂ ಲೀಗ್‌ಗಳಿಗೆ ಸಾಟಿಯಿಲ್ಲದ ಅಭಿಮಾನಿಗಳ ಬೆಂಬಲ ಇದೆ. ಐಪಿಎಲ್ ಜಗತ್ತಿಗೆ ಹುಚ್ಚು ಹಿಡಿಸಿದೆ. ಹಣಕಾಸಿನ ವ್ಯವಹಾರದಲ್ಲಿ ಇಷ್ಟು ದೊಡ್ಡ ಲೀಗ್ ಮತ್ತೊಂದಿಲ್ಲ. ಭಾರತದಲ್ಲಿ ಅದನ್ನು ಧರ್ಮ ಎಂದೇ ಭಾವಿಸುತ್ತಾರೆ. ಅಲ್ಲಿನ ಕ್ರಿಕೆಟ್ ಪ್ರೇಮಿಗಳಿಗೆ ಅದೊಂದು ಭಾವನೆ ಎಂದು ಹೇಳಿದ ಅಕ್ರಮ್, ನಮ್ಮಲ್ಲೂ ಪಿಎಸ್ಎಲ್ಗೆ ಅಷ್ಟೇ ಗೌರವ ಇದೆ. ಆದರೆ ಹಣಕಾಸಿನ ವ್ಯವಹಾರದಲ್ಲಿ ಐಪಿಎಲ್ನಷ್ಟು ಇಲ್ಲದಿರಬಹುದು. ನಮ್ಮ ಅಭಿಮಾನಿಗಳು ಸಹ ಪಿಎಸ್ಎಲ್ ಅಷ್ಟೇ ಇಷ್ಟ ಎಂದು ಅಕ್ರಮ್ ಹೇಳಿಕೆ ಕೊಟ್ಟಿದ್ದಾರೆ.