logo
ಕನ್ನಡ ಸುದ್ದಿ  /  ಕ್ರಿಕೆಟ್  /  ಪಾಕಿಸ್ತಾನ Vs ಕೆನಡಾ ಮಾಡು ಇಲ್ಲವೇ ಮಡಿ ಪಂದ್ಯ; ಸಂಭಾವ್ಯ ತಂಡ, ನ್ಯೂಯಾರ್ಕ್ ಪಿಚ್‌ ಹಾಗೂ ಹವಾಮಾನ ವರದಿ

ಪಾಕಿಸ್ತಾನ vs ಕೆನಡಾ ಮಾಡು ಇಲ್ಲವೇ ಮಡಿ ಪಂದ್ಯ; ಸಂಭಾವ್ಯ ತಂಡ, ನ್ಯೂಯಾರ್ಕ್ ಪಿಚ್‌ ಹಾಗೂ ಹವಾಮಾನ ವರದಿ

Jayaraj HT Kannada

Jun 11, 2024 02:16 PM IST

google News

ಪಾಕಿಸ್ತಾನ vs ಕೆನಡಾ ಪಂದ್ಯಕ್ಕೆ ಸಂಭಾವ್ಯ ತಂಡ, ನ್ಯೂಯಾರ್ಕ್ ಪಿಚ್‌ ಹಾಗೂ ಹವಾಮಾನ ವರದಿ

    • Pakistan vs Canada: ಕೆನಡಾ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆದ್ದರಷ್ಟೇ ಪಾಕ್‌ ಟೂರ್ನಿಯಲ್ಲಿ ಉಳಿಯುತ್ತದೆ. ಇಂದು ಸೋತರೆ ವಿಶ್ವಕಪ್‌ನಿಂದ ಹೊರಬೀಳಲಿದೆ.
ಪಾಕಿಸ್ತಾನ vs ಕೆನಡಾ ಪಂದ್ಯಕ್ಕೆ ಸಂಭಾವ್ಯ ತಂಡ, ನ್ಯೂಯಾರ್ಕ್ ಪಿಚ್‌ ಹಾಗೂ ಹವಾಮಾನ ವರದಿ
ಪಾಕಿಸ್ತಾನ vs ಕೆನಡಾ ಪಂದ್ಯಕ್ಕೆ ಸಂಭಾವ್ಯ ತಂಡ, ನ್ಯೂಯಾರ್ಕ್ ಪಿಚ್‌ ಹಾಗೂ ಹವಾಮಾನ ವರದಿ (Getty Images via AFP)

ಟಿ20 ವಿಶ್ವಕಪ್‌ 2024ರ ಆವೃತ್ತಿಯಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡವು ಗುಂಪು ಹಂತದಿಂದಲೇ ಹೊರಬೀಳುವ ಭೀತಿಯಲ್ಲಿದೆ. ಯುಎಸ್ಎ ವಿರುದ್ಧ ಅಚ್ಚರಿಯ ಸೋಲು ಕಂಡ ಬಾಬರ್‌ ಅಜಮ್‌ ಬಳಗವು, ಆ ನಂತರದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧವೂ ಮುಗ್ಗರಿಸಿತು. ಸತತ ಎರಡು ಸೋಲಿನ ಬಳಿಕ ಇದೀಗ ಮುಂದಿನ ಎರಡು ಪಂದ್ಯಗಳಲ್ಲಿ ಗೆದ್ದರೂ, ತಂಡವು ಸೂಪರ್‌ ಫೋರ್‌ ಹಂತಕ್ಕೆ ಪ್ರವೇಶಿಸುವ ದಾರಿ ದುರ್ಗಮವಾಗಿದೆ. ಅದೃಷ್ಟವೊಂದೇ ತಂಡದ ಕೈ ಹಿಡಿಯಬೇಕಿದೆ. ಟೂರ್ನಿಯ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಪಾಕಿಸ್ತಾನವು ಇಂದು ಕೆನಡಾವನ್ನು (Pakistan vs Canada) ಎದುರಿಸುತ್ತಿದೆ. ಇಂದು ಗೆದ್ದರೂ, ಸೂಪರ್‌ ಫೋರ್‌ ಪ್ರವೇಶ ಸುಲಭವಲ್ಲ. ಒಂದು ವೇಳೆ ಸೋತರೆ, ಯಾವುದೇ ಲೆಕ್ಕಾಚಾರಗಳಿಲ್ಲದೆ ಪಾಕ್‌ ಟೂರ್ನಿಯಿಂದ ಹೊರಬೀಳಲಿದೆ.

ಜೂನ್‌ 11ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕ್‌ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗುತ್ತಿವೆ. ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಸಂಜೆ 8 ಗಂಟೆಗೆ ಆರಂಭವಾಗಲಿದೆ. ಇದೇ ಪಿಚ್‌ನಲ್ಲಿ ಪಾಕ್‌ ತಂಡ ಭಾರತದ ವಿರುದ್ಧ ಸೋತಿತ್ತು. ಹೀಗಾಗಿ ಈ ಪಿಚ್‌ನಲ್ಲಿ ಆಡುವುದು ಅಷ್ಟು ಸುಲಭವಲ್ಲ. ಅಲ್ಲದೆ ಕೆನಡಾವನ್ನು ಸುಲಭವಾಗಿ ಮಣಿಸಬಹುದು ಎಂದು ಪಾಕ್‌ ಆಟಗಾರರು ಊಹಿಸುವಂತಿಲ್ಲ. ಏಕೆಂದರೆ ಇದೇ ಕೆನಡಾ ತಂಡವು ಐರ್ಲೆಂಡ್‌ ವಿರುದ್ಧ ರೋಚಕ ಜಯ ಸಾಧಿಸಿತ್ತು. ಇದೀಗ ಪಾಕಿಸ್ತಾನಕ್ಕೂ ಕೆನಡಾ ಆಟಗಾರರು ಕಂಟಕರಾದರೆ ಅಚ್ಚರಿಯಿಲ್ಲ.

ಐರ್ಲೆಂಡ್ ವಿರುದ್ಧದ ಗೆಲುವಿನೊಂದಿಗೆ ಕೆನಡಾ ತಂಡವು ಈಗಾಗಲೇ ಎರಡು ಅಂಕಗಳನ್ನು ಗಳಿಸಿದೆ. ಅತ್ತ ಪಾಕಿಸ್ತಾನವು ಇನ್ನೂ ಖಾತೆಯನ್ನೇ ತೆರೆದಿಲ್ಲ. ಹೀಗಾಗಿ ಕೆನಡಾ ವಿರುದ್ಧದ ಗೆಲುವು ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ಮುಖಾಮುಖಿ ದಾಖಲೆ

2008ರಲ್ಲಿ ಕಿಂಗ್ ಸಿಟಿಯಲ್ಲಿ ನಡೆದಿದ್ದ ಟಿ20 ಸರಣಿಯಲ್ಲಿ ಕೆನಡಾ ಹಾಗೂ ಪಾಕಿಸ್ತಾನ ತಂಡಗಳು ಕೇವಲ ಒಂದು ಬಾರಿ ಮಾತ್ರ ಮುಖಾಮುಖಿಯಾಗಿದ್ದವು. ಇದರಲ್ಲಿ ಪಾಕಿಸ್ತಾನ 35 ರನ್‌ಗಳಿಂದ ಜಯ ಸಾಧಿಸಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ಈ ಎರಡು ತಂಡಗಳು ಮುಖಾಮುಖಿಯಾಗುತ್ತಿವೆ.

ನ್ಯೂಯಾರ್ಕ್‌ ಪಿಚ್ ವರದಿ

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಸ್ಟೇಡಿಯಂ ಪಿಚ್‌ ಈವರೆಗೆ ಟೂರ್ನಿಯಲ್ಲಿ ಆರು ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಅದರಲ್ಲಿ ಚೇಸಿಂಗ್ ಮಾಡಿದ ತಂಡವು ಮೂರು ಪಂದ್ಯಗಳನ್ನು ಗೆದ್ದಿದೆ. ಇಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ತಂಡವು 3 ಪಂದ್ಯಗಳಲ್ಲಿ ಗೆದ್ದಿದೆ. ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 107 ರನ್‌ ಆದರೆ, ಎರಡನೇ ಇನ್ನಿಂಗ್ಸ್ ಸರಾಸರಿ ಸ್ಕೋರ್ 105 ರನ್‌ ಮಾತ್ರ. ಈವರೆಗೆ ಇಲ್ಲಿ ಟಾಸ್‌ ಗೆದ್ದ ತಂಡ ಚೇಸಿಂಗ್‌ ಆಯ್ಕೆ ಮಾಡುವುದನ್ನು ನೆಚ್ಚಿಕೊಂಡಿತ್ತು. ಆದರೆ ಕಳೆದ ಮೂರು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ತಂಡಗಳೇ ಗೆದ್ದಿವೆ.

ನ್ಯೂಯಾರ್ಕ್‌ ಹವಾಮಾನ ವರದಿ

ಜೂನ್ 12ರಂದು ನ್ಯೂಯಾರ್ಕ್‌ನಲ್ಲಿ ಸುಮಾರು 25 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ. ಪಂದ್ಯದ ಸಮಯದಲ್ಲಿ ಮಳೆಯ ಅಪಾಯ ಹೆಚ್ಚಿಲ್ಲ.

ಪಾಕಿಸ್ತಾನ ಸಂಭಾವ್ಯ ತಂಡ

ಮೊಹಮ್ಮದ್ ರಿಜ್ವಾನ್, ಸೈಮ್ ಅಯೂಬ್, ಬಾಬರ್ ಆಜಮ್, ಫಖರ್ ಜಮಾನ್, ಶಾದಾಬ್ ಖಾನ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಂ/ಅಜಮ್ ಖಾನ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್, ಮೊಹಮ್ಮದ್ ಅಮೀರ್.

ಕೆನಡಾ ಸಂಭಾವ್ಯ ತಂಡ

ಆರನ್ ಜಾನ್ಸನ್, ನವನೀತ್ ಧಲಿವಾಲ್, ಪರ್ಗತ್ ಸಿಂಗ್, ದಿಲ್‌ಪ್ರೀತ್ ಬಾಜ್ವಾ, ನಿಕೋಲಸ್ ಕಿರ್ಟನ್, ಶ್ರೇಯಸ್ ಮೊವ್ವಾ, ದಿಲ್ಲನ್ ಹೆಲಿಂಗರ್, ಸಾದ್ ಬಿನ್ ಜಾಫರ್, ಜುನೈ ಸಿದ್ದಿಕಿ, ಕಲೀಮ್ ಸನಾ, ಜೆರೆಮಿ ಗಾರ್ಡನ್.‌

ಟಿ20 ವಿಶ್ವಕಪ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ