ನರೇಂದ್ರ ಮೋದಿ ಮೈದಾನಕ್ಕೆ ನುಗ್ಗಿದ್ದ ನಾಯಿಗೆ ಬೂಟ್ ಕಾಲಲ್ಲೇ ಒದ್ದು ಹಿಂಸಿಸಿ ಬೆನ್ನಟ್ಟಿದ ಸಿಬ್ಬಂದಿ; ಪೆಟಾ, ಪ್ರಾಣಿ ಪ್ರಿಯರ ಆಕ್ರೋಶ
Mar 28, 2024 02:40 PM IST
ನರೇಂದ್ರ ಮೋದಿ ಮೈದಾನಕ್ಕೆ ನುಗ್ಗಿದ್ದ ನಾಯಿಗೆ ಬೂಟ್ ಕಾಲಲ್ಲೇ ಒದ್ದು ಹಿಂಸಿಸಿ ಬೆನ್ನಟ್ಟಿದ ಸಿಬ್ಬಂದಿ
- ಐಪಿಎಲ್ 2024ರ ಆವೃತ್ತಿಯಲ್ಲಿ ನಡೆದ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ನಾಯಿ ಪ್ರವೇಶಿಸಿತ್ತು. ಮೈದಾನದ ಸಿಬ್ಬಂದಿ ಶ್ವಾನವನ್ನು ಒದ್ದು ಓಡಿಸಿದ್ದರು. ಮೂಕ ಪ್ರಾಣಿ ಮೇಲೆ ಹಲ್ಲೆ ನಡೆಸಿರುವುದನ್ನು ಪ್ರಾಣಿ ಪ್ರಿಯರು ಹಾಗೂ ಪ್ರಾಣಿ ದಯಾ ಸಂಘಗಳ ಕಾರ್ಯಕರ್ತರು ಖಂಡಿಸಿದ್ದಾರೆ.
ಇತ್ತೀಚೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಪಂದ್ಯದ ವೇಳೆ, ಮೈದಾನಕ್ಕೆ ನಾಯಿಯೊಂದು ಪ್ರವೇಶಿಸುತ್ತು. ಆಕಸ್ಮಿಕವಾಗಿ ಕ್ರೀಡಾಂಗಣ ಪ್ರವೇಶಿಸಿದ ಶ್ವಾನವನ್ನು ಮೈದಾನದಿಂದ ಹೊರಕ್ಕೆ ಓಡಿಸಲಾಯ್ತು. ಮೈದಾನದ ಸಿಬ್ಬಂದಿ ನಾಯಿಯನ್ನು ಓಡಿಸುವ ವೇಳೆ ಅದರ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ. ಮುಗ್ದ ಜೀವಿಯ ಮೇಲೆ ಹಲ್ಲೆ ನಡೆಸಿರುವುದನ್ನು ಪ್ರಾಣಿ ದಯಾ ಸಂಘಗಳ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದಾರೆ.
ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ಮತ್ತು ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಪಂದ್ಯದ ವೇಳೆ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ನಾಯಿ ಪ್ರವೇಶಿಸಿತ್ತು. ಈ ವೇಳೆ ಕೆಲಕಾಲ ಪಂದ್ಯ ಸ್ಥಗಿತಗೊಂಡಿತ್ತು. ನಾಯಿಯನ್ನು ಹೊರಕ್ಕೆ ಕಳುಹಿಸಲು ಮೈದಾನದ ಸಿಬ್ಬಂದಿ ವರ್ತಿಸಿದ ರೀತಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಪ್ರಾಣಿ ದಯಾ ಸಂಘ ಪೆಟಾ (People for the Ethical Treatment of Animals India, PETA) ಕೂಡಾ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋಗೆ ಪ್ರತಿಕ್ರಿಯಿಸಿದೆ.
ಮಾರ್ಚ್ 24ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆದಿತ್ತು. ಪಂದ್ಯಕ್ಕೆ ಅಡ್ಡಿಯಾದ ನಾಯಿಯನ್ನು ಬೆನ್ನಟ್ಟಿ ಹೊರಗೋಡಿಸಲಾಗಿದೆ. ಈ ವೇಳೆ ಕಾಲಿನಿಂದ ಒದ್ದು ಪ್ರಾಣಿಯನ್ನು ಶಿಕ್ಷಿಸಲಾಗಿದೆ. ಮೈದಾನದ ಸಿಬ್ಬಂದಿಯು ಮುಗ್ಧ ಜೀವಿಯನ್ನು ಅಮಾನವೀಯವಾಗಿ ಶಿಕ್ಷಿಸಿದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ | ಮೈದಾನಕ್ಕೆ ನುಗ್ಗಿದ ನಾಯಿ ಹಿಡಿಯಲೆತ್ನಿಸಿದ ಹಾರ್ದಿಕ್; ಸಿಕ್ಕಿದ್ದೇ ಚಾನ್ಸೆಂದು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ ನೆಟ್ಟಿಗರು
ಈ ಘಟನೆಯನ್ನು ಪ್ರಾಣಿ ದಯಾ ಸಂಘಟನೆಯು (ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್, ಇಂಡಿಯಾ) ಬಲವಾಗಿ ಖಂಡಿಸಿದೆ. ಒಂದು ವೇಳೆ ಪ್ರಾಣಿಗಳು ಮೈದಾನ ಪ್ರವೇಶಿಸಿದ ಸಂದರ್ಭಗಳಲ್ಲಿ “ನಾಯಿಯನ್ನು ಮಾನವೀಯವಾಗಿ ಮೈದಾನದಿಂದ ಹೊರಕಳುಹಿಸುವುದು ಹೇಗೆ” ಎಂಬುದರ ಕುರಿತು ಮೈದಾನದಲ್ಲಿ ಸಿಬ್ಬಂದಿಗೆ ತರಬೇತಿ ನೀಡಬೇಕು ಎಂದು ಒತ್ತಾಯಿಸಿದೆ.
"ಆಕಸ್ಮಿಕವಾಗಿ ಕ್ರೀಡಾಂಗಣಕ್ಕೆ ಪ್ರವೇಶಿಸಿ ಗೊಂದಲಕ್ಕೊಳಗಾಗಿರುವ ನಾಯಿಯನ್ನು ಬೆನ್ನಟ್ಟುವ, ಒದೆಯುವ ಮತ್ತು ಹೊಡೆಯುವ ವರ್ತನೆಯು ಖಂಡನೀಯ . ಅಲ್ಲದೆ ಇದು 100 ಪ್ರತಿಶತ ಕ್ರೀಡಾಸ್ಪೂರ್ತಿಗೆ ವಿರುದ್ಧವಾದ ಕೃತ್ಯ ಎಂದು ಪೆಟಾ ಇಂಡಿಯಾ ಖಂಡಿಸಿದೆ.
ಇಂಥ ಸಂದರ್ಭಗಳನ್ನು ನಿಭಾಯಿಸಲು ಕ್ರೀಡಾಂಗಣಗಳು ಮತ್ತು ಕ್ರೀಡಾ ಸ್ಥಳಗಳಲ್ಲಿನ ಸಿಬ್ಬಂದಿಗೆ ತರಬೇತಿ ನೀಡುವ ಅಗತ್ಯವಿದೆ ಎಂದು ಪ್ರಾಣಿ ದಯಾ ಸಂಘದ ಕಾರ್ಯಕರ್ತ ವಿದಿತ್ ಶರ್ಮಾ ಹೇಳಿದ್ದಾರೆ. “ಇಷ್ಟು ದೊಡ್ಡ ಮಟ್ಟದಲ್ಲಿ ಆಯೋಜಿಸಲಾದ ಪಂದ್ಯದಲ್ಲಿ, ಪ್ರಾಣಿಗಳನ್ನು ನಿಭಾಯಿಸಲು ನಮಗೆ ಮೂಲಭೂತ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳ ಕೊರತೆಯಿದೆ. ಜನರು ಕೂಡಾ ವಿಡಿಯೋಗಳನ್ನು ನಗುವ ಎಮೋಜಿಗಳೊಂದಿಗೆ ಹಂಚಿಕೊಳ್ಳುತ್ತಿರುವುದು ನಿರಾಶಾದಾಯಕವಾಗಿದೆ. ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳ ಸಮಯದಲ್ಲಿಯೂ ಬೆಕ್ಕುಗಳು ಹಾಗೂ ನಾಯಿಗಳು ಮೈದಾನಕ್ಕೆ ಪ್ರವೇಶಿಸುತ್ತವೆ. ಆದರೆ, ಅಲ್ಲಿ ಪ್ರಾಣಿಹಿಂಸೆ ನಡೆಯಲ್ಲ,” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ | ರಾಜಸ್ಥಾನ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್; ಜೈಪುರ ಪಿಚ್, ಹವಾಮಾನ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ
ಪಂದ್ಯದಲ್ಲಿ ಮೈದಾನಕ್ಕೆ ನಾಯಿ ಬಂದಾಗ, ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಿದ್ದರು. ಶ್ವಾನವನ್ನು ಹಿಡಿಯಲು ಯತ್ನಿಸಿದ ಹಾರ್ದಿಕ್ ಪಾಂಡ್ಯರನ್ನು ಮೈದಾನದಲ್ಲಿದ್ದ ಅಭಿಮಾನಿಗೂ ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ನಾಯಿ ಮೈದಾನದಲ್ಲಿ ಓಡುತ್ತಿದ್ದಾಗ ಹಾರ್ದಿಕ್ ಹಾರ್ದಿಕ್ ಎಂದು ಕೂಗಿದ್ದಾರೆ.