ಕ್ರಿಕೆಟ್ನಲ್ಲಿ ಟರ್ನಿಂಗ್ ಟ್ರ್ಯಾಕ್ ಎಂದರೇನು; ಭಾರತದಲ್ಲಿ ಟೆಸ್ಟ್ ಆರಂಭಗೊಂಡಾಗಲೇ ಈ ಚರ್ಚೆ ಮುನ್ನೆಲೆಗೆ ಬರುವುದೇಕೆ?
Feb 04, 2024 02:59 PM IST
ಕ್ರಿಕೆಟ್ನಲ್ಲಿ ಟರ್ನಿಂಗ್ ಟ್ರ್ಯಾಕ್ ಎಂದರೇನು
- Rank Turners or Turning Tracks : ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭಗೊಂಡ ಬೆನ್ನಲ್ಲೇ ಟರ್ನಿಂಗ್ ಪಿಚ್ಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಹಾಗಾದರೆ ಕ್ರಿಕೆಟ್ನಲ್ಲಿ ಟರ್ನಿಂಗ್ ಟ್ರ್ಯಾಕ್ ಎಂದರೇನು? ಭಾರತದಲ್ಲಿ ಟೆಸ್ಟ್ ಆರಂಭಗೊಂಡಾಗಲೇ ಈ ಚರ್ಚೆ ಮುನ್ನೆಲೆಗೆ ಬರುವುದೇಕೆ? ಇಲ್ಲಿದೆ ವಿವರ.
ಭಾರತ-ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ (India vs England Test Series) ನಡೆಯುತ್ತಿದೆ. ಭಾರತದಲ್ಲಿ ಈ ಹೈವೋಲ್ಟೇಜ್ ಸೀರೀಸ್ ಜರುಗುತ್ತಿದ್ದು, ಕ್ರಿಕೆಟ್ ಜಗತ್ತಿನಲ್ಲಿ ಕುತೂಹಲ ಮನೆ ಮಾಡಿದೆ. ಈ ಸರಣಿ ಆರಂಭಗೊಂಡ ದಿನದಿಂದಲೂ ಭಾರತದ ಟರ್ನಿಂಗ್ ಟ್ರ್ಯಾಕ್ಗಳ ಬಗ್ಗೆಯೇ ಹೆಚ್ಚು ನಡೆಯುತ್ತಿದೆ. ಇದೊಂದೇ ಸರಣಿಗಲ್ಲ, ಭಾರತದಲ್ಲಿ ಯಾವುದೇ ತಂಡದ ವಿರುದ್ಧ ಟೆಸ್ಟ್ ಸರಣಿ ನಡೆದರೂ ಈ ಚರ್ಚೆ ಮುನ್ನೆಲೆಗೆ ಬರುತ್ತದೆ. ಆ ಸರಣಿ ಮುಗಿದು ತಿಂಗಳಾದರೂ ಚರ್ಚೆ ನಿಲ್ಲಲ್ಲ. ಹಾಗಾದರೆ ಟರ್ನಿಂಗ್ ಟ್ರ್ಯಾಕ್ ಎಂದರೇನು? ಭಾರತದಲ್ಲಿ ಟೆಸ್ಟ್ ಆರಂಭಗೊಂಡಾಗಲೇ ಈ ಚರ್ಚೆ ಮುನ್ನೆಲೆಗೆ ಬರುವುದೇಕೆ?
ರ್ಯಾಂಕ್ ಟರ್ನರ್‌ಗಳು ಅಥವಾ ಟರ್ನಿಂಗ್ ಟ್ರ್ಯಾಕ್ಗಳು (Rank Turners or Turning Tracks) ಅಂದರೆ ಸ್ಪಿನ್ನರ್ಗಳಿಗೆ ನೆರವಾಗುವ ಪಿಚ್ಗಳು ಎಂದರ್ಥ. ಸ್ಪಿನ್ ಬೌಲರ್‌ಗಳು ಚೆಂಡನ್ನು ಅದ್ಭುತವಾಗಿ ತಿರುಗಿಸಬಲ್ಲ ಪಿಚ್. ಅಂತಹ ಪಿಚ್ಗಳು ಟೆಸ್ಟ್ ಪಂದ್ಯದ ಮೊದಲ ದಿನದಿಂದಲೇ ಸ್ಪಿನ್ ಬೌಲರ್ಸ್ಗೆ ಸಹಾಯ ಮಾಡುತ್ತವೆ. ಸ್ಪಿನ್ನರ್ಗಳಿಂದ ಅನಿರಿಕ್ಷಿತ ತಿರುವು ಮತ್ತು ಹೆಚ್ಚು ಬೌನ್ಸ್ ಕಂಡು ಬರುತ್ತದೆ. ಯಾವಾಗ ಹೇಗೆ ಚೆಂಡು ತಿರುವು ಪಡೆಯುತ್ತದೆ ಎಂಬುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಕೆಲವೊಮ್ಮೆ ಎಲ್ಲೋ ಎಸೆದ ಚೆಂಡು ಎಲ್ಲಿಗೋ ತಿರುವು ಪಡೆಯುತ್ತದೆ. ಸಡಿಲವಾದ ಮರಳಿನ ಸಮತಟ್ಟಾದ ಮೇಲ್ಮೈ ಹೊಂದಿರುರುವ ಈ ಪಿಚ್ಗಳು ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಈ ಟ್ರ್ಯಾಕ್‌ಗಳಲ್ಲಿ ವೇಗಿಗಳು ಮಿಂಚುವುದು ಅಪರೂಪ. ಇಂತಹದ್ದೇ ಪಿಚ್ನಲ್ಲಿ ಜಸ್ಪ್ರೀತ್ ಬುಮ್ರಾ ಎರಡೂ ಟೆಸ್ಟ್ಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಗಮನ ಸೆಳೆದಿದ್ದಾರೆ. ಆ್ಯಂಡರ್ಸ್ನ್ ಸಹ ವಿಕೆಟ್ ಬೇಟೆಯಾಡಿದ್ದಾರೆ. ಹೀಗಾಗಿ, ಸೌರವ್ ಗಂಗೂಲಿ ಭಾರತದಲ್ಲಿ ಟರ್ನಿಂಗ್ ಟ್ರ್ಯಾಕ್ ಸಿದ್ಧಪಡಿಸುವುದೇಕೆ ಎಂದು ಪ್ರಶ್ನಿಸಿದ್ದಾರೆ.
ತಿಂಗಳ ಮುಂಚೆಯೇ ಸಿದ್ಧವಾಗುತ್ತವೆ ಪ್ರವಾಸಿ ತಂಡಗಳು
ತವರು ನೆಲದಲ್ಲಿ ಆಡುವಾಗ ಟೀಮ್ ಇಂಡಿಯಾ ಅತ್ಯಂತ ಪ್ರಬಲ ತಂಡಗಳಲ್ಲಿ ಒಂದಾಗಿದೆ. ಭಾರತದಲ್ಲಿ ಟೆಸ್ಟ್ ಸರಣಿಯನ್ನು ಆಡಲು ಒಂದು ತಿಂಗಳ ಮುಂಚೆಯೇ ಎದುರಾಳಿ ತಂಡವು ತಯಾರಿ ನಡೆಸುತ್ತದೆ. ಭಾರತೀಯ ಸ್ಪಿನ್ನರ್‌ಗಳ ದಾಳಿಯನ್ನು ಎದುರಿಸಲು ಸಿದ್ಧವಾಗುತ್ತವೆ. ಆದರೆ ಕೆಲವೇ ಕೆಲವು ಪ್ರವಾಸಿ ತಂಡಗಳ ಬೌಲರ್‌ಗಳು ಟರ್ನಿಂಗ್ ಪಿಚ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾರೆ. ಇಂತಹ ಟರ್ನಿಂಗ್ ಟ್ರ್ಯಾಕ್‌ಗಳಲ್ಲಿ ಆಡುವ ಪಂದ್ಯಗಳು ಸಾಮಾನ್ಯವಾಗಿ 3 ದಿನಗಳಲ್ಲಿ ಪೂರ್ಣಗೊಳ್ಳುತ್ತವೆ.
ವಿದೇಶಿ ಮಾಧ್ಯಮಗಳಿಂದ ಟೀಕೆ
ಭಾರತೀಯ ಪಿಚ್ಗಳ ವಿಚಾರವಾಗಿ ವಿದೇಶಿ ಮಾಧ್ಯಮಗಳು ವ್ಯಂಗ್ಯ ಮತ್ತು ತೀವ್ರ ಟೀಕಿಸುತ್ತಾ ವರದಿಗಳನ್ನು ಮಾಡುತ್ತವೆ. ಅಲ್ಲದೆ ಭಾರತಕ್ಕೆ ಪ್ರವಾಸ ಕೈಗೊಳ್ಳುವ ಆಯಾ ದೇಶಗಳ ಮಾಜಿ ಕ್ರಿಕೆಟಿಗರು ಸಹ ಕಿಡಿಕಾರುತ್ತಾರೆ. ಪಿಚ್ಗಳು ಆಟದ ಗುಣಮಟ್ಟತೆ ಕಳೆದುಕೊಳ್ಳುವಂತೆ ಮಾಡುತ್ತವೆ. ಬ್ಯಾಟ್ಸ್ಮನ್ಗಳು ತೀವ್ರ ವೈಫಲ್ಯ ಅನುಭವಿಸುತ್ತಾರೆ. ಸ್ಪರ್ಧಾತ್ಮಕತೆಯೇ ಇರುವುದಿಲ್ಲ. ಒನ್ಸೈಡ್ ಪಂದ್ಯಗಳೆಂದೇ ಬಿಂಬಿತವಾಗುತ್ತದೆ. ವೇಗಿಗಳು ಹೆಚ್ಚಿನ ಅವಕಾಶ ಕಳೆದುಕೊಳ್ಳುವಂತೆ ಮಾಡುತ್ತದೆ. ಹಾಗಾಗಿ ಆಟದ ಗುಣಮಟ್ಟ ಹೆಚ್ಚಿಸಲು ಉತ್ತಮ ಪಿಚ್ ಸಿದ್ದಪಡಿಸಬೇಕು ಎಂದು ವರದಿಗಳಾಗಿವೆ.
ಸೌರವ್ ಗಂಗೂಲಿ ಅಭಿಪ್ರಾಯ
ಸೌರವ್ ಗಂಗೂಲಿ ಸಹ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತವರಿನ ಸರಣಿಗಳಿಗೆ ಟರ್ನಿಂಗ್ ಟ್ರ್ಯಾಕ್ ಸಿದ್ಧಪಡಿಸುವುದೇಕೆ ಎಂದು ಪ್ರಶ್ನಿಸಿದ್ದಾರೆ. ಸ್ಪಿನ್ನರ್ ಮತ್ತು ವೇಗಿಗಳಿಗೆ ಸಮನಾದ ಪೈಪೋಟಿ ಇರಲು ಗುಣಮಟ್ಟದ ಪಿಚ್ ಸಿದ್ಧಪಡಿಸಬೇಕು. ವೇಗಿಗಳು ಸಹ 20 ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಆದರೂ ಟರ್ನಿಂಗ್ ಟ್ರ್ಯಾಕ್ ಏಕೆ ಸಿದ್ಧಪಡಿಸುತ್ತಿದ್ದಾರೆ. ತವರಿನಲ್ಲಿ ಕಳೆದ 6 ರಿಂದ 7 ವರ್ಷಗಳಲ್ಲಿ ಕಳಪೆ ಪಿಚ್‌ಗಳಿಂದ ಬ್ಯಾಟಿಂಗ್ ಗುಣಮಟ್ಟ ಕುಸಿಯುತ್ತಿದೆ ಎಂದು ಹೇಳಿದ್ದಾರೆ.
ಟೀಕೆಗೆ ಕಾರಣ ಏನು?
ಪ್ರವಾಸಿ ತಂಡಗಳ ಮಾಜಿಗಳು ಸ್ಪಿನ್ ಟ್ರ್ಯಾಕ್ಗಳನ್ನು ಟೀಕಿಸಲು ಸಾಕಷ್ಟು ಕಾರಣಗಳಿವೆ. ಮೊದಲಿಗೆ ಮೈಂಡ್ಗೇಮ್ ಮೂಲಕ ದಾರಿ ತಪ್ಪಿಸುವ ಕೆಲಸಕ್ಕೆ ಕೈ ಹಾಕುತ್ತಾರೆ. ಸ್ಪಿನ್ ಟ್ರ್ಯಾಕ್‌ಗಳಲ್ಲಿ ಆಡಿದ ಅನುಭವ ಹೆಚ್ಚು ಇರದ ಕಾರಣ, ಸೋಲುತ್ತೇವೆ ಎಂಬ ಭಯದಲ್ಲಿ ಹೀಗೆ ಮಾತನಾಡುತ್ತಾರೆ. ಮತ್ತೊಂದು ಕಾರಣ ಅಂದರೆ ಪ್ರವಾಸಿ ತಂಡಗಳ ಪರ ಸ್ಪಿನ್ನರ್ಗಳಿಗಿಂತ ವೇಗಿಗಳೇ ಹೆಚ್ಚು ಪರಿಣಾಮಕಾರಿಯಾಗಿರುತ್ತಾರೆ. ಆದರೆ ಸ್ಪಿನ್ ಟ್ರ್ಯಾಕ್‌ಗಳಲ್ಲಿ ಅವರ ಆಟ ನಡೆಯೋದಿಲ್ಲ ಎನ್ನುವ ಕಾರಣಕ್ಕೂ ಹೀಗೆ ಟೀಕಿಸುತ್ತಾರೆ. ಸ್ಪಿನ್ ಟ್ರ್ಯಾಕ್ನಲ್ಲಿ ಬ್ಯಾಟ್ಸ್ಮನ್ಗಳು ಗುಣಮಟ್ಟದ ಆಟವಾಡಲು ಕಷ್ಟವಾಗುತ್ತದೆ. ಅಲ್ಲದೆ, ಐದು ದಿನಗಳ ಪಂದ್ಯ ಎರಡು ಅಥವಾ ಮೂರೇ ದಿನಕ್ಕೆ ಮುಕ್ತಾಯಗೊಂಡರೂ ಅಚ್ಚರಿ ಇಲ್ಲ. ಟೆಸ್ಟ್ ಕ್ರಿಕೆಟ್ಗಿರುವ ಪ್ರಾಮುಖ್ಯತೆಯೂ ಕುಸಿಯುತ್ತದೆ. ಈ ಕಾರಣಗಳಿಂದ ಭಾರತದಲ್ಲಿ ಟೆಸ್ಟ್ ಸರಣಿ ನಡೆಯುವಾಗ ಈ ಚರ್ಚೆ ಮುನ್ನೆಲೆಗೆ ಬರುತ್ತದೆ.
ಭಾರತದಲ್ಲಿ ಸ್ಪಿನ್ನರ್ಸ್ಗೆ ಆಡುವುದು ಸುಲಭವಲ್ಲ
ನ್ಯೂಜಿಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ನಲ್ಲಿ ಫಾಸ್ಟ್ ಟ್ರ್ಯಾಕ್ಗಳಿವೆ. ಇಲ್ಲಿನ ಪಿಚ್ಗಳಲ್ಲಿ ವೇಗದ ಬೌಲರ್ಗಳ ಎದುರು ಬ್ಯಾಟ್ಸ್ಮನ್ಗಳು ಆಡುವುದು ಭಯಪಡುತ್ತಾರೆ. ಬೌನ್ಸಿ ಮತ್ತು ಪೇಸ್ ಹೆಚ್ಚಿರುತ್ತದೆ. ಬ್ಯಾಟರ್ಸ್ ತುಂಬಾ ಚಾಣಾಕ್ಷತನದಿಂದ ಆಡಬೇಕು. ಅದೇ ರೀತಿ ಭಾರತದಲ್ಲಿ ಸ್ಪಿನ್ನರ್ಸ್ ಮೇಲುಗೈ ಸಾಧಿಸುತ್ತಾರೆ. ಫಾಸ್ಟ್ ಪಿಚ್ಗಳಲ್ಲಿ ಆಡಿದ ಆಟಗಾರರು ನಿಧಾನಗತಿಯ ಮತ್ತು ತಿರುವು ಪಡೆಯುವ ಪಿಚ್ಗಳಲ್ಲಿ ಆಡಲು ಕಷ್ಟಪಡುತ್ತಾರೆ. ಹೆಚ್ಚು ಟರ್ನ್ ಆಗುವುದು ಸಹ ವಿದೇಶಿ ಬ್ಯಾಟರ್ಗಳಿಗೆ ಕಷ್ಟವಾಗುತ್ತದೆ.