ಪಾಕ್ ಮಣಿಸಿದ ಭಾರತ; ರೋಹಿತ್ ಬಳಗದ ಆಲ್‌ರೌಂಡ್ ಪ್ರದರ್ಶನಕ್ಕೆ ಪ್ರಧಾನಿ ಮೋದಿ ವಿಶೇಷ ಅಭಿನಂದನೆ
Oct 14, 2023 10:53 PM IST
ಪಾಕಿಸ್ತಾನ ವಿರುದ್ಧದ ಗೆಲುವಿನ ಬಳಿಕ ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ
- India vs Pakistan ICC ODI World Cup 2023: ಏಕದಿನ ವಿಶ್ವಕಪ್ 2023ರಲ್ಲಿ ಪಾಕಿಸ್ತಾನ ವಿರುದ್ಧ ದಾಖಲೆಯ ಗೆಲುವಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ತಂಡದ ಪ್ರದರ್ಶನಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium in Ahmedabad) ಪಾಕಿಸ್ತಾನ ವಿರುದ್ಧ ಭಾರತ ಕ್ರಿಕೆಟ್ ತಂಡ ಸಾಧಿಸಿದ ಭರ್ಜರಿ ಗೆಲುವಿಗೆ, ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಶುಭಕೋರಿದ್ದಾರೆ.
ಈವರೆಗೆ ಸತತ 7 ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದಿದ್ದ ಭಾರತ, ಇದೀಗ ಸತತ 8ನೇ ಗೆಲುವನ್ನು ತನ್ನದಾಗಿಸಿಕೊಂಡಿದೆ. ಆ ಮೂಲಕ ಪಾಕ್ ವಿರುದ್ಧ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ, ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಪ್ರಸಕ್ತ ವಿಶ್ವಕಪ್ ಪಂದ್ಯಾವಳಿಯಲ್ಲಿ ಸತತ ಮೂರನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ತಂಡವು ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ 82 ರನ್ ಜೊತೆಯಾಟದ ಹೊರತಾಗಿಯೂ, ಕೊನೆಯಲ್ಲಿ 36 ರನ್‌ಗಳ ಅಂತರದಲ್ಲಿ ಎಂಟು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟ ಅನುಭವಿಸಿತು. ಕುಲ್ದೀಪ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ದಾಳಿಗೆ ಪಾಕಿಸ್ತಾನವು ಬ್ಯಾಟಿಂಗ್ ಲೈನಪ್‌ನಲ್ಲಿ ಭಾರಿ ಕುಸಿತ ಕಂಡಿತು. ಆ ಮೂಲಕ ಕೇವಲ 191 ರನ್‌ಗಳಿಗೆ ಆಲೌಟಾಯಿತು.
ಪಾಕ್ ನೀಡಿದ ಸರಳ ಸವಾಲನ್ನು ಭಾರತ ಸುಲಭವಾಗಿ ಬೆನ್ನಟ್ಟಿತು. ರೋಹಿತ್ ಶರ್ಮಾ ತಮ್ಮ ಉತ್ತಮ ಫಾರ್ಮ್ ಮುಂದುವರೆಸಿದರು. ಅಫ್ಘಾನಿಸ್ತಾನ ವಿರುದ್ಧ ಅದ್ಭುತ ಶತಕ ಸಿಡಿಸಿದ್ದ ಅವರು, ಪಾಕಿಸ್ತಾನ ವಿರುದ್ಧ ಆಕರ್ಷಕ ಮತ್ತು ಸ್ಫೋಟಕ ಅರ್ಧಶತಕ ಸಿಡಿಸಿದರು. ಶ್ರೇಯಸ್ ಅಯ್ಯರ್ ಕೂಡಾ ಚೊಚ್ಚಲ ವಿಶ್ವಕಪ್ ಅರ್ಧಶತಕ ಗಳಿಸಿದರು. ಅಂತಿಮವಾಹಗಿ ಭಾರತವವು 117 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿತು.
ಭಾರತ ತಂಡದ ದಾಖಲೆಯ ಗೆಲುವಿನ ನಂತರ, ಪ್ರಧಾನಿ ನರೇಂದ್ರ ಮೋದಿ ರೋಹಿತ್ ಶರ್ಮಾ ಬಳಗವನ್ನು ಅಭಿನಂದಿಸಿದ್ದಾರೆ. ಭಾರತ ತಂಡದ ಆಲ್ರೌಂಡ್ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ.
“ಟೀಮ್ ಇಂಡಿಯಾ ಗೆಲುವಿನ ಹಾದಿಯಲ್ಲಿ ಸಾಗುತ್ತಿದೆ. ಅಹಮದಾಬಾದ್‌ನಲ್ಲಿ ಇಂದು ಅಮೋಘ ಗೆಲುವು ಸಾಧಿಸಿದೆ. ಇದರಲ್ಲಿ ತಂಡದ ಆಲ್‌ರೌಂಡ್ ಪ್ರದರ್ಶನ ಕಾಣುತ್ತಿದೆ. ತಂಡಕ್ಕೆ ಅಭಿನಂದನೆಗಳು. ಅಲ್ಲದೆ ಮುಂದಿನ ಎಲ್ಲಾ ಪಂದ್ಯಗಳಿಗೆ ಶುಭಾಶಯಗಳು" ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಗೆಲುವಿನೊಂದಿಗೆ ವಿಶ್ವಕಪ್ ಅಂಕಪಟ್ಟಿಯಲ್ಲಿ ಭಾರತವು ಅಗ್ರಸ್ಥಾನಕ್ಕೆ ಎಂಟ್ರಿ ಕೊಟ್ಟಿದೆ. ಅತ್ತ ನ್ಯೂಜಿಲ್ಯಾಂಡ್ ತಂಡ ಎರಡನೇ ಸ್ಥಾನಕ್ಕೆ ಇಳಿದಿದೆ. ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಈಗಾಗಲೇ ಪಂದ್ಯಾವಳಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದಿವೆ. ಉಭಯ ತಂಡಗಳು ತಲಾ ಆರು ಪಾಯಿಂಟ್‌ಗಳನ್ನು ಸಂಪಾದಿಸಿವೆ. ಉತ್ತಮ ನೆಟ್ ರನ್ ರೇಟ್‌ನಿಂದಾಗಿ ಭಾರತವು ಮೂರನೇ ಸ್ಥಾನದಿಂದ ಅಗ್ರಸ್ಥಾನಕ್ಕೆ ಏರಿದೆ. ರೋಹಿತ್ ಶರ್ಮಾ ಬಳಗದ ಪ್ರಸ್ತುತ ನಿವ್ವಳ ರನ್ ರೇಟ್ +1.821 ಆಗಿದ್ದರೆ, ನ್ಯೂಜಿಲ್ಯಾಂಡ್ ತಂಡ +1.604 ರನ್ ರೇಟ್ ಹೊಂದಿದೆ.