logo
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತದ ಸ್ಪಿನ್ ತ್ರಿವಳಿಗಳ ದಾಳಿಗೆ ಉಸಿರೆತ್ತದ ಇಂಗ್ಲೆಂಡ್; ಮೊದಲ ಇನ್ನಿಂಗ್ಸ್‌​ನಲ್ಲಿ 246ಕ್ಕೆ ಆಲೌಟ್​

ಭಾರತದ ಸ್ಪಿನ್ ತ್ರಿವಳಿಗಳ ದಾಳಿಗೆ ಉಸಿರೆತ್ತದ ಇಂಗ್ಲೆಂಡ್; ಮೊದಲ ಇನ್ನಿಂಗ್ಸ್‌​ನಲ್ಲಿ 246ಕ್ಕೆ ಆಲೌಟ್​

Jayaraj HT Kannada

Jan 25, 2024 03:19 PM IST

google News

ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ವೇಳೆ ಭಾರತ ತಂಡದ ಆಟಗಾರರು

    • India vs England 1st Test: ಹೈದರಾಬಾದ್​ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್​​ನಲ್ಲಿ ಭಾರತ ಮುನ್ನಡೆ ಕಾಯ್ದುಕೊಂಡಿದೆ. ಮೊದಲ ದಿನದಾಟದ ಒಳಗೆ ಆಂಗ್ಲರನ್ನು ಆಲೌಟ್‌ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ.
ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ವೇಳೆ ಭಾರತ ತಂಡದ ಆಟಗಾರರು
ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ವೇಳೆ ಭಾರತ ತಂಡದ ಆಟಗಾರರು (ANI)

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಪಂದ್ಯದ ಮೊದಲ ದಿನದಾಟದ ಕೊನೆಯ ಸೆಷನ್‌ಗೂ ಮುನ್ನ ಮುನ್ನ ಆಂಗ್ಲರನ್ನು ಆಲೌಟ್‌ ಮಾಡುವಲ್ಲಿ ರೋಹಿತ್‌ ಶರ್ಮಾ ಪಡೆ ಯಶಸ್ವಿಯಾಗಿದೆ. ಆರ್‌ ಅಶ್ವಿನ್‌, ರವೀಂದ್ರ ಜಡೇಜಾ ಹಾಗೂ ಅಕ್ಷರ್‌ ಪಟೇಲ್‌ ಸ್ಪಿನ್‌ ಮೋಡಿಗೆ ಬೇಗನೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ಇಂಗ್ಲೆಂಡ್; ನಾಯಕ ಬೆನ್‌ ಸ್ಟೋಕ್ಸ್‌ ಅರ್ಧಶತಕದ ಹೊರತಾಗಿಯೂ 64.3 ಓವರ್‌ಗಳಲ್ಲಿ 246 ರನ್‌ಗಳಿಗೆ ಆಲೌಟ್‌ ಆಗಿದೆ.

ಹೈದರಾಬಾದ್‌ನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್‌, ಹಿಂದೆ ಮುಂದೆ ನೋಡದೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ಇನ್ನಿಂಗ್ಸ್‌ ಆರಂಭಿಸಿದ ಆಂಗ್ಲರು, ಭಾರತೀಯ ಸ್ಪಿನ್ನರ್‌ಗಳ ದಾಳಿಗೆ ಬಗ್ಗಿದರು. ಮೂವರು ಬಲಿಷ್ಠ ಸ್ಪಿನ್ನರ್‌ಗಳನ್ನು ಕಣಕ್ಕಿಳಿದ ಭಾರತವು, ಇಂಗ್ಲೆಂಡ್‌ ಬ್ಯಾಟಿಂಗ್‌ ಲೈನಪ್‌ ಅನ್ನು ಹಣ್ನುಗಾಯಿ ನೀರುಗಾಯಿ ಮಾಡಿತು. ಬಜ್‌ಬಾಲ್‌ ತಂತ್ರದೊಂದಿಗೆ ಆಕ್ರಮಣಕಾರಿ ಇನ್ನಿಂಗ್ಸ್‌ ಆಡುವ ಆಂಗ್ಲರ ತಂತ್ರ ಸಫಲವಾಗಲಿಲ್ಲ.

ಇಂಗ್ಲೆಂಡ್‌ ಇನ್ನಿಂಗ್ಸ್‌ ಆರಂಭದಲ್ಲಿ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಕೈಗೆ ಹೊಸ ಚೆಂಡು ನೀಡಿದ ನಾಯಕ ರೋಹಿತ್‌ ಶರ್ಮಾ, ಇನ್ನಿಂಗ್ಸ್‌ನ ಒಂಬತ್ತನೇ ಓವರ್ ಬಳಿಕ ಸ್ಪಿನ್ನರ್‌ಗಳನ್ನು ದಾಳಿಗೆ ಇಳಿಸಿದರು. ಆಕ್ರಮಣಕಾರಿ ಆರಂಭ ಪಡೆದಿದ್ದ ಇಂಗ್ಲೆಂಡ್‌, ಸ್ಪಿನ್ನರ್‌ಗಳ ದಾಳಿ ಆರಂಭವಾಗುತ್ತಿದ್ದಂತೆಯೇ ವೇಗ ಕಳೆದುಕೊಂಡಿತು. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಬೇಗನೆ ಮೂರು ವಿಕೆಟ್‌ಗಳನ್ನು ಕಬಳಿಸಿದರು.

ಆಕ್ರಮಣಕಾರಿ ಆರಂಭ

ವೇಗವಾಗಿ ರನ್ ಕಲೆ ಹಾಕಲು ಆರಂಭಿಸಿದ ಜಾಕ್ ಕ್ರಾವ್ಲಿ ಮತ್ತು ಬೆನ್ ಡಕೆಟ್, ಮೊದಲ ವಿಕೆಟ್‌ಗೆ ವೇಗವಾಗಿ 50 ರನ್ ಕಲೆ ಹಾಕಿದರು. ಪ್ರತಿ ಓವರ್‌ಗೆ 5ರ ಸರಾಸರಿಯಲ್ಲಿ ರನ್‌ ಗಳಿಸಿದ ಅವರು, ಸ್ಪಿನ್ನರ್‌​​ಗಳಾದ ಜಡೇಜಾ ಮತ್ತು ಅಶ್ವಿನ್ ಬೌಲಿಂಗ್‌ ಆರಂಭ ಆಗುತ್ತಿದ್ದಂತೆಯೇ ಮಂಕಾದರು. 11.5ನೇ ಓವರ್‌​​ನಲ್ಲಿ 55 ರನ್ ಗಳಿಸಿದ್ದ ಇಂಗ್ಲೆಂಡ್ ಮೊದಲ ವಿಕೆಟ್ ಕಳೆದುಕೊಂಡಿತು. 39 ಎಸೆತಗಳಲ್ಲಿ 7 ಬೌಂಡರಿ ಸಹಿತ 35 ರನ್ ಗಳಿಸಿದ್ದ ಡಕೆಟ್, ಅಶ್ವಿನ್ ಬೌಲಿಂಗ್‌​ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಓಲಿ ಪೋಪ್ 1 ರನ್ ಗಳಿಸಿ ನಿರ್ಗಮಿಸಿದರು.

ರೂಟ್-ಬೇರ್‌ಸ್ಟೋ ಆಸರೆ

60 ರನ್‌ ವೇಳೆಗೆ 3 ವಿಕೆಟ್​ ಕಳೆದುಕೊಂಡಿದ್ದ ತಂಡಕ್ಕೆ ಜೋ ರೂಟ್ ಮತ್ತು ಬೇರ್‌​ಸ್ಟೋ ಆಸರೆಯಾದರು. ತಂಡದ ಮೊತ್ತ 121 ಆಗುತ್ತಿದ್ದಂತೆಯೇ, 37 ರನ್‌ ಗಳಿಸಿದ್ದ ಬೇರ್‌ಸ್ಟೋ ಅಕ್ಸರ್‌ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು. ಅವರ ಬೆನ್ನಲ್ಲೇ ರೂಟ್‌ ಆಟ 29 ರನ್‌ಗೆ ಅಂತ್ಯವಾಯ್ತು. ಬೆನ್‌ ಫೋಕ್ಸ್‌ ಮತ್ತು ರೆಹಾನ್‌ ಅಹ್ಮದ್‌ ಅಲ್ಪಮೊತ್ತಕ್ಕೆ ವಿಕೆಟ್‌ ಒಪ್ಪಿಸಿದರು.

ಸ್ಟೋಕ್ಸ್‌ ಅರ್ಧಶತಕ

ಒಂದು ಕಡೆ ವಿಕೆಟ್‌ಗಳು ಉರುಳುತ್ತಿದ್ದರೂ ನಾಯಕ ಬೆನ್‌ ಸ್ಟೋಕ್ಸ್‌ ತಮ್ಮದೇ ಶೈಲಿಯ ಆಟ ಆಡಿದರು. ವೇಗದ ಬ್ಯಾಟಿಂಗ್‌ ನಡೆಸಿ ರನ್‌ ಹೆಚ್ಚಿಸಿದರು. ಅರ್ಧಶತಕದ ಗಡಿದಾಟಿದ ಅವರು 88 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸ್ಫೋಟಕ ಸಿಕ್ಸರ್‌ ಸಹಿತ 70 ರನ್‌ ಗಳಿಸಿದರು. ಅಂತಿಮವಾಗಿ ಬುಮ್ರಾ ಎಸೆದ ಕ್ಲೀನ್‌ ಬೋಲ್ಡ್‌ ಆಗಿ ವಿಕೆಟ್‌ ಒಪ್ಪಿಸಿದರು. ಅಲ್ಲಿಗೆ ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ ಮೊದಲ ದಿನದಾಟಕ್ಕೂ ಮುನ್ನವೇ ಅಂತ್ಯವಾಯ್ತು.

ಭಾರತದ ಪರ ಸ್ಪಿನ್ನರ್‌ಗಳಾದ ಜಡೇಜಾ ಹಾಗೂ ಅಶ್ವಿನ್‌ ತಲಾ ಮೂರು ವಿಕೆಟ್‌ ಪಡೆದರು. ಅಕ್ಸರ್‌ ಹಾಗೂ ಬುಮ್ರಾ ತಲಾ ಎರಡು ವಿಕೆಟ್‌ ಪಡೆದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ