logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅಶ್ವಿನ್, ಪ್ರಸಿದ್ಧ್ ಹೊರಕ್ಕೆ, ಜಡೇಜಾ ಕಂಬ್ಯಾಕ್; ಇಂತಿದೆ 2ನೇ ಟೆಸ್ಟ್​ಗೆ ಭಾರತ ಆಡುವ 11ರ ಬಳಗ

ಅಶ್ವಿನ್, ಪ್ರಸಿದ್ಧ್ ಹೊರಕ್ಕೆ, ಜಡೇಜಾ ಕಂಬ್ಯಾಕ್; ಇಂತಿದೆ 2ನೇ ಟೆಸ್ಟ್​ಗೆ ಭಾರತ ಆಡುವ 11ರ ಬಳಗ

Prasanna Kumar P N HT Kannada

Dec 29, 2023 12:37 PM IST

google News

ರವೀಂದ್ರ ಜಡೇಜಾ, ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್.

    • India vs South Africa 2nd Test: ಸೌತ್ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯ ಗೆದ್ದು ಸರಣಿ ಸೋಲಿನ ಮುಖಭಂಗದಿಂದ ಪಾರಾಗಲು ಭಾರತ ತಂಡ ಯೋಜನೆ ರೂಪಿಸಿದೆ. ಆಡುವ 11ರ ಬಳಗದಲ್ಲಿ ಬದಲಾವಣೆ ತರಲು ಚಿಂತನೆ ನಡೆಸಿದೆ.
ರವೀಂದ್ರ ಜಡೇಜಾ, ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್.
ರವೀಂದ್ರ ಜಡೇಜಾ, ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್.

ಸೆಂಚುರಿಯನ್‌ನಲ್ಲಿ ನಡೆದ ಸರಣಿಯ ಆರಂಭಿಕ ಟೆಸ್ಟ್​ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 32 ರನ್‌ಗಳಿಂದ ಸೋತ ನಂತರ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಹಾಗೂ ಅಂತಿಮ ಪಂದ್ಯದಲ್ಲಿ (India vs South Africa 2nd Test) ಬಲಿಷ್ಠವಾಗಿ ಪುನರಾಗಮನ ಮಾಡಲು ಎದುರು ನೋಡುತ್ತಿದೆ. ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್​ ಜನವರಿ 3 ರಂದು ಕೇಪ್​​ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆಯಲಿದೆ.

ಮೊದಲ ಟೆಸ್ಟ್​​ ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳು ಆಘಾತಕಾರಿ ಪ್ರದರ್ಶನ ನೀಡಿದರು. ಬೌಲರ್​​ಗಳಿಂದಲೂ ನಿರೀಕ್ಷಿಸಿದಂತೆ ಬೌಲಿಂಗ್ ನಡೆಸಲಿಲ್ಲ. ಹಾಗಾಗಿ ಎರಡನೇ ಟೆಸ್ಟ್​ ಪಂದ್ಯ ಗೆದ್ದು ಸರಣಿ ಸೋಲಿನ ಮುಖಭಂಗದಿಂದ ಪಾರಾಗಲು ಯೋಜನೆ ರೂಪಿಸಿರುವ ಭಾರತದ ಟೀಮ್ ಮ್ಯಾನೇಜ್ಮೆಂಟ್, ಆಡುವ 11ರ ಬಳಗದಲ್ಲಿ ಬದಲಾವಣೆ ತರಲು ಚಿಂತನೆ ನಡೆಸಿದೆ.

ಬ್ಯಾಟಿಂಗ್​ ವಿಭಾಗದಲ್ಲಿಲ್ಲ ಬದಲಾವಣೆ

ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಹೊರತಾಗಿಯೂ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಸಾಧ್ಯತೆ ಇಲ್ಲ. ಒಂದು ಋತುರಾಜ್ ಗಾಯಕ್ವಾಡ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಅಭಿಮನ್ಯು ಈಶ್ವರ್​ಗೆ ಅವಕಾಶದ ಸಾಧ್ಯತೆ ಇದ್ದರೂ, ಮೊದಲ ಆಯ್ಕೆಯಾಗಿ ಯಶಸ್ವಿ ಜೈಸ್ವಾಲ್​ಗೆ ಮಣೆ ಹಾಕಲಾಗುತ್ತದೆ. ಹಾಗಾಗಿ ಜೈಸ್ವಾಲ್‌ಗಿಂತ ಈಶ್ವರ್​ಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ.

ರವೀಂದ್ರ ಜಡೇಜಾ ಫಿಟ್​

ಆದರೆ ಬೌಲಿಂಗ್ ವಿಭಾಗದಲ್ಲಿ ಭಾರತ ಒಂದೆರಡು ಬದಲಾವಣೆ ಮಾಡುವ ಹೆಚ್ಚಿನ ಸಾಧ್ಯತೆಗಳಿವೆ. ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಎರಡನೇ ಟೆಸ್ಟ್​ ಪಂದ್ಯಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ. ಬೆನ್ನುಮೂಳೆಯ ಸೆಳೆತಕ್ಕೆ ಒಳಗಾಗಿದ್ದ ಕಾರಣ ಜಡೇಜಾ ಮೊದಲ ಟೆಸ್ಟ್​​​ ಪಂದ್ಯದಿಂದ ತಪ್ಪಿಸಿಕೊಂಡಿದ್ದರು. ಬದಲಿಗೆ ರವಿಚಂದ್ರನ್ ಅಶ್ವಿನ್ ಅವರನ್ನು ಆಡಿಸಲಾಗಿತ್ತು.

ಆದರೆ ವಿಶ್ವದ ನಂ.1 ಟೆಸ್ಟ್ ಬೌಲರ್ ಅಶ್ವಿನ್ ಅವರು ನಿರಾಸೆ ಮೂಡಿಸಿದರು. ಕೇವಲ ಒಂದು ವಿಕೆಟ್, ಎರಡೂ ಇನ್ನಿಂಗ್ಸ್​ ಸೇರಿ 8 ರನ್ ಗಳಿಸಿದರು. ಆ ಮೂಲಕ ವಿದೇಶಿ ಪಿಚ್​​ಗಳಲ್ಲಿ ತಮ್ಮ ಆಟ ನಡೆಯಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಇದೀಗ ಜಡೇಜಾ ಸಂಪೂರ್ಣ ಫಿಟ್​ ಆಗಿದ್ದು ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ವಿದೇಶಿ ಪಿಚ್​​ಗಳಲ್ಲಿ ಅಶ್ವಿನ್​ಗಿಂತ ಜಡೇಜಾ ಉತ್ತಮ ದಾಖಲೆ ಹೊಂದಿದ್ದಾರೆ.

ಪ್ರಸಿದ್ಧ್​ ಬದಲಿಗೆ ಮುಕೇಶ್​ಗೆ ಮಣೆ

ಅಶ್ವಿನ್ ಹೊರತಾಗಿ ಭಾರತದ ಪರ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ವೇಗಿ ಪ್ರಸಿದ್ಧ್ ಕೃಷ್ಣ ತಮ್ಮ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಅವರ ಸ್ಥಾನಕ್ಕೆ ಮುಕೇಶ್ ಕುಮಾರ್ ಕರೆ ತಂದರೂ ಅಚ್ಚರಿ ಇಲ್ಲ. ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ನಡುವಿನ 4 ದಿನದ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ ಕೃಷ್ಣ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿತ್ತು. ಆದರೆ ವೈಫಲ್ಯ ಅನುಭವಿಸಿದರು. 1 ವಿಕೆಟ್​ ಪಡೆದು ಕೃಷ್ಣ ಭಾರಿ ಟೀಕೆಗೂ ಗುರಿಯಾದರು.

ಶಾರ್ದೂಲ್ ಠಾಕೂರ್ ಕೂಡ ಚೆಂಡಿನಲ್ಲಿ ಮ್ಯಾಜಿಕ್ ನಡೆಸಲಿಲ್ಲ. ಬ್ಯಾಟಿಂಗ್​​ನಲ್ಲೂ ಕಾಣಿಕೆ ನೀಡಲಿಲ್ಲ. ಆದರೂ ತಂಡದ ಬ್ಯಾಟಿಂಗ್​ ವಿಭಾಗವನ್ನು ಬಲಿಷ್ಠಗೊಳಿಸಲು ಭಾರತ ತಂಡ ಅವರನ್ನು ಕೈ ಬಿಡಲು ನಿರ್ಧರಿಸಿಲ್ಲ. ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ಕಳೆದ 31 ವರ್ಷಗಳಿಂದ ಸರಣಿ ಗೆಲ್ಲಲಿಲ್ಲ. ಸರಣಿ ಆರಂಭಿಕ ಪಂದ್ಯ ಸೋತ ಕಾರಣ ಈ ಬಾರಿಯೂ ಐತಿಹಾಸಿಕ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಸರಣಿಯನ್ನು ಡ್ರಾಗೊಳಿಸಲು ಅವಕಾಶ ಇದೆ.

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್‌ಗೆ ಭಾರತ ಆಡುವ XI

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮುಕೇಶ್ ಕುಮಾರ್, ಮೊಹಮ್ಮದ್ ಸಿರಾಜ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ