ಆರ್ಸಿಬಿ vs ಸಿಎಸ್ಕೆ ಪಂದ್ಯಕ್ಕೆ ವರುಣನ ಕರಿನೆರಳು; ಮಳೆಯಿಂದ ಪಂದ್ಯ ರದ್ದಾದರೆ ಯಾವ ತಂಡಕ್ಕಿದೆ ಪ್ಲೇಆಫ್ ಚಾನ್ಸ್?
May 15, 2024 06:58 PM IST
ಆರ್ಸಿಬಿ vs ಸಿಎಸ್ಕೆ ಪಂದ್ಯಕ್ಕೆ ವರುಣನ ಕರಿನೆರಳು; ಮಳೆಯಿಂದ ಪಂದ್ಯ ರದ್ದಾದರೆ ಪ್ಲೇಆಫ್ ಚಾನ್ಸ್ ಯಾರಿಗೆ?
- RCB vs CSK: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯಕ್ಕೆ ಮಳೆ ಭೀತಿ ಉಂಟಾಗಿದೆ. ಮಳೆಯಿಂದ ಪಂದ್ಯ ರದ್ದಾದರೆ ಪ್ಲೇಆಫ್ ಪ್ರವೇಶಿಸುವ ತಂಡ ಯಾವುದು? ಇಲ್ಲಿದೆ ವಿವರ.
17ನೇ ಆವೃತ್ತಿಯ ಐಪಿಎಲ್ನ (IPL 2024) ಬಹುನಿರೀಕ್ಷಿತ ಪಂದ್ಯಕ್ಕೆ ಆರ್ಸಿಬಿ-ಸಿಎಸ್ಕೆ (RCB vs CSK) ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಗೆದ್ದವರಿಗೆ ಪ್ಲೇಆಫ್ ಟಿಕೆಟ್ ಅಧಿಕೃತವಾಗಲಿರುವ ಕಾರಣ ತೀವ್ರ ಕುತೂಹಲ ಮೂಡಿಸಿದೆ. ಉಭಯ ತಂಡಗಳ ಮಹತ್ವದ ಪಂದ್ಯಕ್ಕೆ ಟಿಕೆಟ್ಗಳು ಸಹ ಸೋಲ್ಡ್ ಔಟ್ ಆಗಿವೆ. ಐಪಿಎಲ್ನ 68ನೇ ಪಂದ್ಯದಲ್ಲಿ ಬೆಂಗಳೂರು ಮತ್ತು ಚೆನ್ನೈ ತಂಡಗಳು ಎಂ ಚಿನ್ನಸ್ವಾಮಿ ಮೈದಾನದಲ್ಲಿ ಕಾದಾಡಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಫ್ಯಾನ್ಸ್ಗೆ ಕಹಿ ಸುದ್ದಿ ಕೇಳಿಬಂದಿದೆ.
ಮೇ 18ರಂದು ಶನಿವಾರ ನಡೆಯುವ ಹೈವೋಲ್ಟೇಜ್ ಕದನಕ್ಕೆ ಮಳೆ ಕಾಡುವ ಸಂಭವ ಇದೆ. ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಮೇ 19ರವರೆಗೂ ಧಾರಾಕಾರ ಮಳೆ ಸುರಿಯುವ ನಿರೀಕ್ಷೆ ಇದೆ. ಕಳೆದ 10 ದಿನಗಳಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಇತರೆ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ನಿರ್ಣಾಯಕ ಹಂತದಲ್ಲಿ ಮಳೆ ಕಾಟ ಐಪಿಎಲ್ ತಂಡಗಳನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ. ಇದೀಗ ಜಿದ್ದಾಜಿದ್ದಿನ ಕದನಕ್ಕೂ ಮಳೆ ಅಪಕೃಪ ತೋರಲಿದ್ದಾನೆ ವರದಿ ಹೇಳುತ್ತಿದೆ.
ಮೇ 13ರಂದು ನಡೆದ ಗುಜರಾತ್ ಟೈಟಾನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯವು ಮಳೆಯಿಂದ ರದ್ದಾಯಿತು. ಹೀಗಾಗಿ ಒಂದೂ ಎಸೆತವನ್ನು ಕಾಣದೆ ಸ್ಥಗಿತಗೊಂಡಿದ್ದು, ಉಭಯ ತಂಡಗಳು ತಲಾ ಒಂದೊಂದು ಅಂಕ ಪಡೆದವು. ಪ್ಲೇಆಫ್ ಮೇಲೆ ಕಣ್ಣು ಹಾಕಿದ್ದ ಶುಭ್ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ಮಳೆಯ ಕಾರಣದಿಂದ 11 ಅಂಕಗಳೊಂದಿಗೆ ಟೂರ್ನಿಯಿಂದಲೇ ಹೊರಬಿತ್ತು. ಕೋಲ್ಕತ್ತಾ 19 ಅಂಕಗಳೊಂದಿಗೆ ಅಗ್ರಸ್ಥಾನದ ಜತೆಗೆ ಮೊದಲ ಕ್ವಾಲಿಫೈಯರ್ಗೂ ಅರ್ಹತೆ ಪಡೆಯಿತು.
ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೂ ವರಣನ ಕರಿನೆರಳು?
ಒಂದು ವೇಳೆ ಈ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ, ಗುಜರಾತ್ ಟೈಟಾನ್ಸ್ ಪ್ಲೇಆಫ್ ಕನಸು ಜೀವಂತವಾಗಿರುತ್ತಿತ್ತು. ಆದರೆ ವರುಣನ ಅವಕೃಪೆಯಿಂದ ಗುಜರಾತ್ಗೆ ತೀವ್ರ ನಿರಾಸೆಯಾಯಿತು. ಇದೀಗ ಇದೇ ಪಂದ್ಯದಂತೆ, ಆರ್ಸಿಬಿ ಮತ್ತು ಸಿಎಸ್ಕೆ ಪಂದ್ಯದ ಮೇಲೂ ಮಳೆಯ ಕರಿನೆರಳು ಬಿದ್ದಿದೆ. ಗುಜರಾತ್ ತಂಡವನ್ನು ಮನೆಗೆ ಕಳುಹಿಸಿದ ವರುಣ, ಈಗ ಆರ್ಸಿಬಿ ಕನಸಿನ ಮೇಲೂ ತಣ್ಣೀರು ಎರಚುವಂತಿದೆ. ಉಭಯ ತಂಡಗಳಿಗೂ ಈ ಪಂದ್ಯ ಜಯಿಸುವುದು ಬಹಳ ಮುಖ್ಯವಾಗಿದೆ. ಆದರೆ ಸಿಎಸ್ಕೆಗಿಂತ ಆರ್ಸಿಬಿಗೆ ಆತಂಕ ಶುರುವಾಗಿದೆ.
ಮೇ 18ರಂದು ಬೆಂಗಳೂರಿನಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಶೇ 80 ರಿಂದ 90ರಷ್ಟು ಮಳೆ ಸುರಿಯಲಿದೆ ಎಂದು ವೆದರ್ ರಿಪೋರ್ಟ್ ಹೇಳುತ್ತಿದೆ. ಟೂರ್ನಿಯ ಫಸ್ಟ್ ಹಾಫ್ನಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಆರ್ಸಿಬಿ, ಸೆಕೆಂಡ್ ಹಾಫ್ನಲ್ಲಿ ಸತತ ಜಯಗಳೊಂದಿಗೆ ಮುನ್ನುಗ್ಗುತ್ತಿದೆ. ಪ್ಲೇಆಫ್ ಪ್ರವೇಶಿಸುವುದೇ ಅಸಾಧ್ಯ ಇಲ್ಲ ಎನ್ನುವಂತಹ ಸ್ಥಿತಿಯಿಂದ ಈಗ ಪ್ರಬಲ ಪೈಪೋಟಿ ನೀಡುವ ತಂಡವಾಗಿ ಮಾರ್ಪಟ್ಟಿದೆ. ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಂಡಿದೆ.
ಪಂದ್ಯ ರದ್ದಾದರೆ ಪ್ಲೇಆಫ್ ಪ್ರವೇಶಿಸುವುದು ಯಾರು?
ಆರ್ಸಿಬಿ ಪ್ರಸ್ತುತ 13 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 12 ಅಂಕಗಳೊಂದಿಗೆ 0.387 ರನ್ ರೇಟ್‌ನೊಂದಿಗೆ 5ನೇ ಸ್ಥಾನದಲ್ಲಿದೆ. ಬೆಂಗಳೂರು ತನ್ನ ಕೊನೆಯ ಪಂದ್ಯದಲ್ಲಿ ಸಿಎಸ್ಕೆ, 18ಕ್ಕೂ ಹೆಚ್ಚು ರನ್ಗಳ ಅಂತರದಿಂದ ಸೋಲಿಸಬೇಕು. ಇಲ್ಲವಾದಲ್ಲಿ ಸಿಎಸ್ ಕೆ ವಿರುದ್ಧ 18.1 ಓವರ್ಗಳಲ್ಲಿ ಚೇಸ್ ಮಾಡಬೇಕು. ಆಗ ಸಿಎಸ್ಕೆಗಿಂತ ಉತ್ತಮ ರನ್ ರೇಟ್ ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೆ, ಪ್ಲೇ ಆಫ್ಗೂ ಅರ್ಹತೆ ಪಡೆಯಲಿದೆ. ಆದರೆ ಮಳೆ ಬಂದು ಪಂದ್ಯ ರದ್ದಾದರೆ ಸಿಎಸ್ಕೆ ಪ್ಲೇಆಫ್ಗೆ ಅರ್ಹತೆ ಪಡೆಯಲಿದೆ. ಆರ್ಸಿಬಿ ಹೊರಬೀಳಲಿದೆ.
ಮತ್ತೊಂದೆಡೆ ಒಂದು ವೇಳೆ ಸಿಎಸ್ಕೆ ವಿರುದ್ಧ ಗೆದ್ದರೂ ನೆಟ್ರನ್ರೇಟ್ ಕಡಿಮೆ ಇದ್ದರೂ ಆರ್ಸಿಬಿ ಪ್ಲೇಆಫ್ ಪ್ರವೇಶಿಸಲು ಮತ್ತೊಂದು ಅವಕಾಶ ಇದೆ. ಸನ್ರೈಸರ್ಸ್ ಹೈದರಾಬಾದ್ ತಂಡವು ತನ್ನ ಎರಡೂ ಪಂದ್ಯಗಳಲ್ಲಿ ಸೋತು ನೆಟ್ರನ್ರೇಟ್ ಕುಸಿದರೆ, ಆರ್ಸಿಬಿ ಪ್ಲೇಆಫ್ ಪ್ರವೇಶಿಸಲಿದೆ. ಆಗ ಸಿಎಸ್ಕೆ ಮತ್ತು ಆರ್ಸಿಬಿ ಎರಡೂ ತಂಡಗಳು ಎಲಿಮಿನೇಟರ್ ಆಡಲಿವೆ. ಪ್ರಸ್ತುತ ಭರ್ಜರಿ ಫಾರ್ಮ್ನಲ್ಲಿರುವ ಆರ್ಸಿಬಿ, ಸಿಎಸ್ಕೆ ತಂಡವನ್ನು ಸೋಲಿಸುವ ವಿಶ್ವಾಸದಲ್ಲಿದೆ.