ಗೆದ್ದಿದ್ದು ಡೆಲ್ಲಿ ಸೋತಿದ್ದು ಲಕ್ನೋ, ಪ್ಲೇಆಫ್ ಪ್ರವೇಶಿಸಿದ್ದು ಮಾತ್ರ ರಾಜಸ್ಥಾನ್; ಆರ್‌ಸಿಬಿ-ಸಿಎಸ್‌ಕೆ ಅವಕಾಶವೂ ಇಮ್ಮಡಿ
May 15, 2024 07:05 AM IST
ಗೆದ್ದಿದ್ದು ಡೆಲ್ಲಿ ಸೋತಿದ್ದು ಲಕ್ನೋ, ಪ್ಲೇಆಫ್ ಪ್ರವೇಶಿಸಿದ್ದು ಮಾತ್ರ ರಾಜಸ್ಥಾನ್
- ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೂ, ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ 2024ರ ಪ್ಲೇಆಫ್ ಎಂಟ್ರಿ ಕೊಟ್ಟಿದೆ. ಇದೇ ವೇಳೆ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳ ಅವಕಾಶವನ್ನು ಹೆಚ್ಚಿಸಿದೆ. ಅದು ಹೇಗೆ ಎಂದು ತಿಳಿಯಲು ಈ ಸುದ್ದಿ ಓದಿ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕ ಗೆಲುವು ಸಾಧಿಸಿದೆ. ಗೆಲುವಿನ ಹೊರತಾಗಿಯೂ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಐಪಿಎಲ್ 2024ರ ಆವೃತ್ತಿಯಿಂದ ಬಹುತೇಕ ಹೊರಬಿದ್ದಿದೆ. ತಂಡದ ನೆಟ್ ರನ್ ರೇಟ್ ತೀರಾ ಕಡಿಮೆ ಇದ್ದು, ಪ್ಲೇಆಫ್‌ಗೇರುವ ಅವಕಾಶಕ್ಕೆ ಅಡ್ಡಿಯಾಗಿದೆ. ಅತ್ತ ಪಂದ್ಯದಲ್ಲಿ ಸೋತ ಎಲ್‌ಎಸ್‌ಜಿ ತಂಡ ಕೂಡಾ, ಪ್ಲೇ ಆಫ್ ರೇಸ್‌ನಿಂದ ಹಿಂದೆ ಬಿದ್ದಿದೆ. ಮುಂದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಪಡೆ ಗೆದ್ದರೂ, ತಂಡದ ಕಳಪೆ ನೆಟ್ ರನ್ ರೇಟ್ ತಂಡವನ್ನು ಕಾಡಲಿದೆ. ಇದೇ ವೇಳೆ ಈ ಪಂದ್ಯದ ಬಳಿಕ ಒಂದು ಮ್ಯಾಜಿಕ್ ನಡೆದಿದೆ. ಲಕ್ನೋ ವಿರುದ್ಧ ಡೆಲ್ಲಿ ತಂಡ ಗೆದ್ದರೂ, ರಾಜಸ್ಥಾನ ರಾಯಲ್ಸ್ ತಂಡ ಪ್ಲೇಆಫ್ ಎಂಟ್ರಿ ಕೊಟ್ಟಿದೆ.
ಹೌದು, ಮೇಲಿಂದ ಮೇಲೆ ಗೆಲುವಿನೊಂದಿಗೆ ಐಪಿಎಲ್ 17ರ ಆವೃತ್ತಿಯಲ್ಲಿ ಉತ್ತಮ ಆರಂಭ ಪಡೆದಿದ್ದ ರಾಜಸ್ಥಾನ, ಆಡಿದ ಕೊನೆಯ ಮೂರೂ ಪಂದ್ಯಗಳಲ್ಲಿ ಸೋತು ಹಿನ್ನಡೆ ಅನುಭವಿಸಿತ್ತು. ಇದರಿಂದಾಗಿ ಬೇಗನೇ ಪ್ಲೇಆಫ್ ಪ್ರವೇಶಿಸುವ ಅವಕಾಶ ಕೈಚೆಲ್ಲಿತ್ತು. ಇದೀಗ ಲಕ್ನೋ ವಿರುದ್ಧ ಡೆಲ್ಲಿ ಗೆದ್ದ ತಕ್ಷಣ ಸಂಜು ಸ್ಯಾಮ್ಸನ್ ಪಡೆ ಎರಡನೇ ತಂಡವಾಗಿ ಪ್ಲೇಆಫ್ ಪ್ರವೇಶಿಸಿದೆ.
ಡೆಲ್ಲಿ ತಂಡವು ಸದ್ಯ ಅಂಕಪಟ್ಟಿಯಲ್ಲಿ ಆರ್‌ಸಿಬಿಯನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೆ ನೆಗೆದಿದೆ. ತಂಡದ ನೆಟ್ ರನ್ ರೇಟ್ -0.377. ತಂಡದ ಖಾತೆಯಲ್ಲಿ 14 ಅಂಕಗಳಿವೆ. ಆದರೆ, ತಂಡಕ್ಕೆ ಇನ್ಯಾವುದೇ ಪಂದ್ಯಗಳು ಉಳಿದಿಲ್ಲ. ಹೀಗಾಗಿ ಪಂತ್ ಪಡೆ ಟೂರ್ನಿಗೆ ವಿದಾಯ ಹೇಳಿದೆ.
ಇದನ್ನೂ ಓದಿ | ಮಳೆಯಿಂದಾಗಿ ಕೆಕೆಆರ್ vs ಗುಜರಾತ್ ಪಂದ್ಯ ರದ್ದು; ಜಿಟಿ ಟೂರ್ನಿಯಿಂದ ಔಟ್, ಕ್ವಾಲಿಫೈಯರ್‌ಗೆ ಲಗ್ಗೆ ಇಟ್ಟ ಕೋಲ್ಕತ್ತಾ
ಅತ್ತ ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಸೋತ ಎಲ್‌ಎಎಸ್‌ಜಿ, ಪ್ಲೇಆಫ್ ರೇಸ್‌ನಲ್ಲಿ ಹಿಂದೆ ಬಿದ್ದಿದೆ. ಅಂಕಪಟ್ಟಿಯಲ್ಲಿ ಸದ್ಯ 7ನೇ ಸ್ಥಾನದಲ್ಲಿರುವ ತಂಡದ ನೆಟ್ ರನ್ ರೇಟ್ -0.787 ಆಗಿದೆ. 12 ಅಂಕ ಸಂಪಾದಿಸಿರುವ ತಂಡವು ಮುಂದೆ ಮುಂಬೈ ವಿರುದ್ಧದ ಪಂದ್ಯದಲ್ಲಿ ಬೃಹತ್ ಅಂತರದಿಂದ ಗೆದ್ದರೂ, ಪ್ಲೇಆಫ್ ಪ್ರವೇಶಿಸುವ ಸಾಧ್ಯತೆ ತೀರಾ ಕಡಿಮೆ ಇದೆ. ಏಕೆಂದರೆ ಆರ್‌ಸಿಬಿ, ಸಿಎಸ್‌ಕೆ ಹಾಗೂ ಎಸ್‌ಆರ್‌ಎಚ್ ತಂಡಗಳ ನೆಟ್ ರನ್ ರೇಟ್ ಉತ್ತಮವಾಗಿದೆ. ಇದರಲ್ಲಿ ಒಂದು ತಂಡ ಸೋತರೂ ಮತ್ತೊಂದು ತಂಡಕ್ಕೆ ಅವಕಾಶ ಇರಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಲಕ್ನೋ ತಂಡದ ಸೋಲು ರಾಜಸ್ಥಾನ ರಾಯಲ್ಸ್ ಮಾತ್ರವಲ್ಲದೆ, ಇತರ ಮೂರು ತಂಡಗಳಿಗೂ ಅನುಕೂಲವಾಗಿದೆ. ಅದುವೇ ಎಸ್‌ಆರ್‌ಎಚ್, ಆರ್‌ಸಿಬಿ ಹಾಗೂ ಸಿಎಸ್‌ಕೆ.
ಆರ್‌ಸಿಬಿ ಪ್ಲೇಆಫ್ ಪ್ರವೇಶಿಸಬೇಕಾದರೆ ಏನು ಮಾಡಬೇಕು?
ಅತ್ತ ಎಸ್‌ಆರ್‌ಎಚ್ ತಂಡಕ್ಕೆ ತನ್ನ ಮುಂದೆ ಇನ್ನೆರಡು ಪಂದ್ಯಗಳಿವೆ. ಇದರಲ್ಲಿ ತಂಡ ಒಂದರಲ್ಲಿ ಗೆದ್ದರೂ ಪ್ಲೇ ಆಫ್ ಪ್ರವೇಶ ಪಡೆಯಲಿದೆ. ಪ್ಲೇ ಆಫ್‌ಗೆ ಏರುವ ಅವಕಾಶ ಹೈದರಾಬಾದ್‌ಗೆ ಹೆಚ್ಚಿದೆ. ಅತ್ತ, ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳಿಗೂ ಸಮಾನ ಅವಕಾಶಗಳಿವೆ. ಈ ಎರಡು ತಂಡಗಳು ಮೇ 18ರ ಶನಿವಾರ ಬೆಂಗಳೂರಿನಲ್ಲಿ ಮುಖಾಮುಖಿಯಾಗಲಿವೆ. ಸಿಎಸ್‌ಕೆ ತಂಡವು ಅಂತರದ ಲೆಕ್ಕಾಚಾರವಿಲ್ಲದೆ ಪಂದ್ಯ ಗೆದ್ದರೆ, ನೇರವಾಗಿ ಪ್ಲೇಆಫ್ ಪ್ರವೇಶಿಸಲಿದೆ. ಅತ್ತ ಹೈದರಾಬಾದ್ ತಂಡ ಪ್ಲೇಆಫ್ ಪ್ರವೇಶಿಸಿದ್ದರೂ ಸಿಎಸ್‌ಕೆ ದಾರಿಗೆ ಅಡ್ಡಿಯಾಗುವುದಿಲ್ಲ. ಆದರೆ ಆರ್‌ಸಿಬಿ ತಂಡವು ಪ್ಲೇಆಫ್ ಪ್ರವೇಶಿಸಬೇಕೆಂದಿದ್ದರೆ, ಉತ್ತಮ ಅಂತರದಿಂದ ಗೆದ್ದು ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳಬೇಕಾಗಿದೆ.
ಸಿಎಸ್‌ಕೆ ರನ್ ರೇಟ್ ಮೀರಿಸಲು ಆರ್‌ಸಿಬಿ ಏನು ಮಾಡಬೇಕು?
ಉಭಯ ತಂಡಗಳು ಮುಂದಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇಲ್ಲಿ ಆರ್‌ಸಿಬಿ ಉತ್ತಮ ಅಂತರದಿಂದ ಗೆಲ್ಲಬೇಕು. ಒಂದು ವೇಳೆ ರಾಯಲ್ ಚಾಲೆಂಜರ್ಸ್ ಮೊದಲು ಬ್ಯಾಟಿಂಗ್ ಮಾಡಿ 200 ರನ್ ಗಳಿಸಿದರೆ, ಆಗ ಸಿಎಸ್‌ಕೆ ತಂಡವನ್ನು 182 ರನ್ ಒಳಗೆ ಕಟ್ಟಿಹಾಕಬೇಕು. ಅಂದರೆ, ಆರ್‌ಸಿಬಿಯು ಕನಿಷ್ಠ 18 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳ ಅಂತರದಿಂದ ಗೆಲ್ಲಬೇಕು. ಒಂದು ವೇಳೆ ಪಂದ್ಯದಲ್ಲಿ ಸಿಎಸ್‌ಕೆ ಮೊದಲು ಬ್ಯಾಟಿಂಗ್ ಮಾಡಿ ಆರ್‌ಸಿಬಿಗೆ 201 ರನ್ ಗುರಿ ನೀಡಿದರೆ, ಆಗ ಆರ್‌ಸಿಬಿ ತಂಡವು ವೇಗವಾಗಿ ರನ್ ಕಲೆ ಹಾಕಿ ಕನಿಷ್ಠ 11 ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿ ಗೆಲ್ಲಬೇಕು. ಆಗ ಸಿಎಸ್‌ಕೆ ರನ್ ರೇಟ್ ಬ್ರೇಕ್ ಮಾಡಿದಂತಾಗುತ್ತದೆ.