ICC Rankings: ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನಕ್ಕೇರಿದ ರವಿ ಬಿಷ್ಣೋಯ್
Dec 06, 2023 05:32 PM IST
ರವಿ ಬಿಷ್ಣೋಯ್
- Ravi Bishnoi: 2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರವಿ ಬಿಷ್ಣೋಯ್, ಸದ್ಯ ಐಸಿಸಿ ಬಿಡುಗಡೆ ಮಾಡಿದ ಟಿ20 ಶ್ರೇಯಾಂಕದಲ್ಲಿ ನಂಬರ್ ವನ್ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.
ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ರವಿ ಬಿಷ್ಣೋಯ್ (Ravi Bishnoi), ಇದೀಗ ಐಸಿಸಿ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ (Men's T20I Player Rankings) ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ. ಬುಧವಾರ ಐಸಿಸಿ ನೂತನ ಶ್ರೇಯಾಂಕಪಟ್ಟಿ ಪ್ರಕಟಿಸಿದ್ದು, ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಹಿಂದಿಕ್ಕಿರುವ ಬಿಷ್ಣೋಯ್ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
ಕಳೆದ ವರ್ಷ, ಅಂದರೆ 2022ರ ಆರಂಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರವಿ ಬಿಷ್ಣೋಯ್, ಟೀಮ್ ಇಂಡಿಯಾ ಪರ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಹೀಗಾಗಿ ತಮ್ಮ 23 ವರ್ಷ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ.
ಇತ್ತೀಚೆಗೆ ತವರು ನೆಲದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಚುಟುಕು ಸರಣಿಯಲ್ಲಿ ಭಾರತವು 4-1 ಅಂತರದಿಂದ ಸರಣಿ ಗೆಲುವು ಸಾಧಿಸಿತು. ರವಿ ಬಿಷ್ಣೋಯ್ ಸರಣಿಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದರು. 2022ರ ಫೆಬ್ರವರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪದಾರ್ಪಣೆ ಮಾಡಿದ ಅವರು ಆಡಿದ 21 ಟಿ20 ಪಂದ್ಯಗಳಿಂದ ಒಟ್ಟು 34 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸದ್ಯ ಐಸಿಸಿ ಬೌಲರ್‌ಗಳ ಶ್ರೇಯಾಂಕದಲ್ಲಿ ನಾಲ್ಕು ಸ್ಥಾನಗಳನ್ನು ಮೇಲಕ್ಕೇರಿ ಅಗ್ರಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ | ಟಿ20 ವಿಶ್ವಕಪ್‌ಗೆ ನನ್ನನ್ನು ಆಯ್ಕೆ ಮಾಡ್ತೀರಾ, ಈಗಲೇ ಹೇಳಿ; ಬಿಸಿಸಿಐ ಅಧಿಕಾರಿಗಳಿಗೆ ರೋಹಿತ್ ಶರ್ಮಾ ಪ್ರಶ್ನೆ
ಬಿಷ್ಣೋಯಿ ಅಗ್ರಸ್ಥಾನಕ್ಕೆ ಜಿಗಿದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಆದಿಲ್ ರಶೀದ್ ಮೂರನೇ ಸ್ಥಾನದಲ್ಲಿದ್ದಾರೆ. ಅತ್ತ ಶ್ರೀಲಂಕಾದ ವನಿಂದು ಹಸರಂಗ ಕೂಡಾ ಮೂರನೇ ಸ್ಥಾನದಲ್ಲಿದ್ದಾರೆ. ಮಹೇಶ್ ತೀಕ್ಷಣ ಐದನೇ ಸ್ಥಾನದಲ್ಲಿದ್ದಾರೆ. ಬಿಷ್ಣೋಯ್ ಹೊರತಾಗಿ ಟಾಪ್ 10 ಒಳಗೆ ಬೇರೆ ಭಾರತೀಯರು ಸ್ಥಾನ ಪಡೆದಿಲ್ಲ. ಅತ್ತ ಸ್ಪಿನ್ನರ್ ಅಕ್ಷರ್ ಪಟೇಲ್ 16ನೇ ಸ್ಥಾನ ಪಡೆದಿದ್ದಾರೆ.
ಮತ್ತೊಂದೆಡೆ ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಿಂದ ಸರಣಿಗೆ ಗೆಲುವಿನತ್ತ ಭಾರತ ತಂಡವನ್ನು ಮುನ್ನಡೆಸಿದ ನಾಯಕ ಸೂರ್ಯಕುಮಾರ್ ಯಾದವ್, ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ತಮ್ಮ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಏಳನೇ ಸ್ಥಾನದಲ್ಲಿದಾರೆ.
ಇದನ್ನೂ ಓದಿ | ಬುಮ್ರಾ, ಶಮಿ ಮಾತ್ರವಲ್ಲ; ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಗೆಲುವಿಗೆ ಈ ಇಬ್ಬರು ನಿರ್ಣಾಯಕ ಎಂದ ಶ್ರೀಶಾಂತ್
ಗಾಯದ ಸಮಸ್ಯೆಯಿಂದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರೂ, ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಮೂರನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಶಕೀಬ್ ಅಲ್ ಹಸನ್ ಅಗ್ರಸ್ಥಾನದಲ್ಲಿದ್ದಾರೆ.