logo
ಕನ್ನಡ ಸುದ್ದಿ  /  ಕ್ರಿಕೆಟ್  /  Ravi Bishnoi: ಮೊದಲ ಟಿ20ಯಲ್ಲಿ ನಡೆಯಿತು ಊಹಿಸಲಾಗದ ಘಟನೆ: ದೊಡ್ಡ ಅಪಾಯದಿಂದ ಪಾರಾದ ರವಿ ಬಿಷ್ಣೋಯ್

Ravi Bishnoi: ಮೊದಲ ಟಿ20ಯಲ್ಲಿ ನಡೆಯಿತು ಊಹಿಸಲಾಗದ ಘಟನೆ: ದೊಡ್ಡ ಅಪಾಯದಿಂದ ಪಾರಾದ ರವಿ ಬಿಷ್ಣೋಯ್

Prasanna Kumar P N HT Kannada

Jul 28, 2024 11:02 AM IST

google News

ಮೊದಲ ಟಿ20ಯಲ್ಲಿ ನಡೆಯಿತು ಊಹಿಸಲಾಗದ ಘಟನೆ: ದೊಡ್ಡ ಅಪಾಯದಿಂದ ಪಾರಾದ ರವಿ ಬಿಷ್ಣೋಯ್

    • Ravi Bishnoi Injury: ಶ್ರೀಲಂಕಾ ವಿರುದ್ಧ ನಡೆದ ಮೊದಲ ಟಿ20ಐ ಪಂದ್ಯದಲ್ಲಿ ಭಾರತ ಅಮೋಘ ಗೆಲುವು ಕಂಡಿದೆ. ಆದರೆ, ಈ ಜಯದ ನಡುವೆ ಪಲ್ಲೆಕೆಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ರವಿ ಬಿಷ್ಣೋಯ್ ಅವರು ದೊಡ್ಡ ಅಪಾಯದಿಂದ ಪಾರಾದರು. ಏನಿದು ಘಟನೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಮೊದಲ ಟಿ20ಯಲ್ಲಿ ನಡೆಯಿತು ಊಹಿಸಲಾಗದ ಘಟನೆ: ದೊಡ್ಡ ಅಪಾಯದಿಂದ ಪಾರಾದ ರವಿ ಬಿಷ್ಣೋಯ್
ಮೊದಲ ಟಿ20ಯಲ್ಲಿ ನಡೆಯಿತು ಊಹಿಸಲಾಗದ ಘಟನೆ: ದೊಡ್ಡ ಅಪಾಯದಿಂದ ಪಾರಾದ ರವಿ ಬಿಷ್ಣೋಯ್

ಶ್ರೀಲಂಕಾ ಪ್ರವಾಸವನ್ನು ಭಾರತ ಅದ್ಭುತವಾಗಿ ಆರಂಭಿಸಿದೆ. ಜುಲೈ 27ರ ಶನಿವಾರ ಪಲ್ಲೆಕೆಲೆಯಲ್ಲಿ ನಡೆದ ಮೊದಲ ಟಿ20ಐ ಪಂದ್ಯದಲ್ಲಿ ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾ ಭರ್ಜರಿ ಗೆಲುವು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 213 ರನ್ ಗಳಿಸಿದರೆ, ಇದಕ್ಕೆ ಉತ್ತರವಾಗಿ ಶ್ರೀಲಂಕಾ 170 ರನ್ ಗಳಿಸಲಷ್ಟೇ ಶಕ್ತವಾಯಿತು. ಆದರೆ, ಟೀಮ್ ಇಂಡಿಯಾದ ಈ ಗೆಲುವಿನ ನಡುವೆ ಪಲ್ಲೆಕೆಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪಂದ್ಯದ ನಡುವೆ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಅವರು ದೊಡ್ಡ ಅಪಾಯದಿಂದ ಪಾರಾದರು. ಭಾರತೀಯ ಆಟಗಾರರಿಗೆ ಮಾತ್ರವಲ್ಲದೆ ಲಂಕಾಕ್ಕೂ ಒಂದು ಕ್ಷಣ ಉಸಿರುಗಟ್ಟಿದ ಘಟನೆ ನಡೆಯಿತು.

ರವಿ ಬಿಷ್ಣೋಯಿ ಅವರು ಶ್ರೀಲಂಕಾದ ಬ್ಯಾಟಿಂಗ್ ಇನಿಂಗ್ಸ್‌ನ 16ನೇ ಓವರ್ ಅನ್ನು ಬೌಲಿಂಗ್ ಮಾಡಲು ಬಂದರು. ಕಮಿಂದು ಮೆಂಡಿಸ್ ಮೊದಲ ಎಸೆತವಾಗುವಾಗ ಸ್ಟ್ರೈಕ್‌ನಲ್ಲಿದ್ದರು. ಬಿಷ್ಣೋಯಿ ಅವರ ಗೂಗ್ಲಿ ಎಸೆತವನ್ನು ಗ್ರಹಿಸಲು ವಿಫಲವಾದ ಮೆಂಡಿಸ್ ಅಂದುಕೊಂಡ ಕಡೆ ಹೊಡೆಯಲಾಗಲಿಲ್ಲ. ಬ್ಯಾಟ್​ಗೆ ತಾಗಿದ ಚೆಂಡು ನೇರವಾಗಿ ಬಿಷ್ಣೋಯ್ ಅವರ ಬಲಗೈಯತ್ತ ಬಂದಿತು. ಆಗ, ಕ್ಯಾಚ್ ಹಿಡಿಯುವ ಪ್ರಯತ್ನದಲ್ಲಿ ಬಿಷ್ಣೋಯ್ ಅದ್ಭುತ ಡೈವ್ ಮಾಡಿದರು.

ಆದರೆ, ಒಂದು ಕೈಯಿಂದ ಕ್ಯಾಚ್ ಹಿಡಿಯಲು ಸಾಧ್ಯವಾಗಲಿಲ್ಲ. ಬಿಷ್ಣೋಯ್ ನೆಲದ ಮೇಲೆ ಬಿದ್ದರು. ಈ ಸಂದರ್ಭ ಚೆಂಡು ಪುಟಿದೆದ್ದು ರವಿ ಅವರ ಎಡಗಣ್ಣಿನ ಕೆಳಗಡೆಗೆ ಹೊಡೆದಿದೆ. ಇದರಿಂದ ಅವರ ಕಣ್ಣಿಗೂ ಸ್ವಲ್ಪ ಪೆಟ್ಟು ಬಿದ್ದಿದ್ದು ರಕ್ತಸ್ರಾವವಾಯಿತು, ತಕ್ಷಣವೇ ಫಿಸಿಯೋ ಮೈದಾನಕ್ಕೆ ಬಂದು ಅವರ ಕಣ್ಣಿಗೆ ಬ್ಯಾಂಡೇಜ್ ಹಾಕಿದರು. ರವಿ ಬಿಷ್ಣೋಯ್ ಸ್ವಲ್ಪದರಲ್ಲೇ ಬಹುದೊಡ್ಡ ಅಪಾಯದಿಂದ ಪಾರಾದರು. ಚೆಂಡು ನೇರವಾಗಿ ಕಣ್ಣಿಗೆ ಬಡಿದಿದ್ದರೆ ಇವರ ಕೆರಿಯರ್ ಮೇಲೆ ದೊಡ್ಡ ಪರಿಣಾಮ ಬೀಳುತ್ತಿತ್ತು.

ಮುಖಕ್ಕೆ ಚೆಂಡು ಬಡಿದು ದೊಡ್ಡ ಗಾಯವಾದರೂ ಬಿಷ್ಣೋಯ್ ಮೈದಾನದಿಂದ ಹೊರ ನಡೆಯಲಿಲ್ಲ. ಅದೇ ಓವರ್‌ನಲ್ಲಿ ಶ್ರೀಲಂಕಾ ನಾಯಕ ಚರಿತ್ ಅಸಲಂಕಾ ಅವರ ವಿಕೆಟ್ ಪಡೆಯುವ ಮೂಲಕ ಟೀಮ್ ಇಂಡಿಯಾಕ್ಕೆ ಮಹತ್ವದ ಯಶಸ್ಸು ತಂದುಕೊಟ್ಟರು. ಬಿಷ್ಣೋಯ್ ಅವರ ಈ ವಿಕೆಟ್ ನಂತರ, ಶ್ರೀಲಂಕಾದ ಮಧ್ಯಮ ಮತ್ತು ಕೆಳ ಕ್ರಮಾಂಕವು ದಿಢೀರ್ ಕುಸಿಯಿತು. ಇದರಿಂದಾಗಿ ಟಿ20 ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.

ಭಾರತಕ್ಕೆ 43 ರನ್‌ಗಳ ಜಯ

ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಭಾರತ 20 ಓವರ್​ಗಳಲ್ಲಿ 7 ವಿಕೆಟ್‌ಗೆ 213 ರನ್ ಕಲೆ ಹಾಕಿತು. ಸೂರ್ಯಕುಮಾರ್ ಯಾದವ್ 58 ರನ್‌ಗಳ ಬಿರುಸಿನ ಇನಿಂಗ್ಸ್ ಆಡಿದರು. 214 ರನ್‌ಗಳ ಗುರಿ ಬೆನ್ನತ್ತಿದ ಶ್ರೀಲಂಕಾ 19.2 ಓವರ್‌ಗಳಲ್ಲಿ 170 ರನ್‌ಗಳಿಗೆ ಆಲೌಟ್ ಆಗಿ 43 ರನ್‌ಗಳಿಂದ ಸೋಲು ಕಂಡಿತು. ಈ ಮೂಲಕ ಹೊಸ ಕೋಚ್ ಗೌತಮ್ ಗಂಭೀರ್ ಮತ್ತು ಹೊಸ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಲಂಕಾ ಪ್ರವಾಸದಲ್ಲಿ ಉತ್ತಮ ಆರಂಭ ಪಡೆದುಕೊಂಡಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಎರಡನೇ ಟಿ20 ಪಂದ್ಯ ಇಂದು (ಜುಲೈ 28) ಪಲ್ಲಕೆಲೆಯಲ್ಲೇ ನಡೆಯಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ