ಟೆಸ್ಟ್ ಕ್ರಿಕೆಟ್ನಲ್ಲಿ ಅಶ್ವಿನ್ 500 ವಿಕೆಟ್ಗಳ ಸರದಾರ; ಕನ್ನಡಿಗ ಅನಿಲ್ ಕುಂಬ್ಳೆ ದಾಖಲೆ ಮುರಿದ ಸ್ಪಿನ್ ಮಾಂತ್ರಿಕ
Feb 16, 2024 04:11 PM IST
ಟೆಸ್ಟ್ ಕ್ರಿಕೆಟ್ನಲ್ಲಿ ಅಶ್ವಿನ್ 500 ವಿಕೆಟ್ಗಳ ಸರದಾರ
- Ravichandran Ashwin : ಭಾರತದ ಆಫ್ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ಗಳ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಅನಿಲ್ ಕುಂಬ್ಳೆ ದಾಖಲೆ ಮುರಿದಿರುವುದರ ಜೊತೆಗೆ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ನಲ್ಲಿ ಭಾರತದ ಅನುಭವಿ ಹಾಗೂ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬೌಲಿಂಗ್ನಲ್ಲಿ ಹೊಸ ವಿಶ್ವದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜಾಕ್ ಕ್ರಾವ್ಲಿ ಅವರನ್ನು ಔಟ್ ಮಾಡುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ಗಳ ಸಾಧನೆಗೈದಿದ್ದಾರೆ. ಈ ದಾಖಲೆ ಬರೆದ ಭಾರತದ 2ನೇ ಹಾಗೂ ವಿಶ್ವದ ಒಂಬತ್ತನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಅನಿಲ್ ಕುಂಬ್ಳೆ ಅವರು 500 ವಿಕೆಟ್ಗಳ ಸಾಧನೆ ಮಾಡಿದ ಭಾರತದ ಮೊದಲ ಬೌಲರ್ ಎಂಬ ದಾಖಲೆ ಬರೆದಿದ್ದಾರೆ. ಅವರು ಟೆಸ್ಟ್ನಲ್ಲಿ ಒಟ್ಟು 619 ವಿಕೆಟ್ ಉರುಳಿಸಿದ್ದಾರೆ. 37 ವರ್ಷದ ಕೇರಂ ಸ್ಪಿನ್ನರ್ ತನ್ನ 98ನೇ ಟೆಸ್ಟ್ನಲ್ಲಿ ಇದೀಗ ಈ ಮೈಲಿಗಲ್ಲು ಸಾಧಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಅವರು 500 ವಿಕೆಟ್ಗಳ ಕ್ಲಬ್ ಸೇರಲು 10 ವಿಕೆಟ್ಗಳ ಅಗತ್ಯ ಇತ್ತು. ಮೊದಲ 2 ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದರು.
ಹೀಗಾಗಿ ಐತಿಹಾಸಿಕ ದಾಖಲೆ ಬರೆಯಲು ಒಂದು ವಿಕೆಟ್ ಅಗತ್ಯ ಇತ್ತು. ಮೂರನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಪ್ರಥಮ ವಿಕೆಟ್ ಪಡೆಯುವ ಮೂಲಕ ಈ ಮೈಲುಗಲ್ಲು ನಿರ್ಮಿಸಿದರು. ಅಶ್ವಿನ್ ಈವರೆಗೆ ಭಾರತ ಪರ 98 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದು 500* ವಿಕೆಟ್ ಕಬಳಿಸಿದ್ದಾರೆ. 34 ಬಾರಿ ಇನಿಂಗ್ಸ್ವೊಂದರಲ್ಲಿ 5 ವಿಕೆಟ್ ಉರುಳಿಸಿದ ಸಾಧನೆ ಮಾಡಿದ್ದಾರೆ. 8 ಬಾರಿ 10 ವಿಕೆಟ್ (ಪಂದ್ಯವೊಂದರಲ್ಲಿ) ಗೊಂಚಲು ಪಡೆದಿದ್ದಾರೆ. ಅಶ್ವಿನ್ ಮೊದಲ ಟೆಸ್ಟ್ ಪಡೆದಿದ್ದು 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ.
5ನೇ ಸ್ಪಿನ್ನರ್, ಸಕ್ರಿಯ ಮೂರನೇ ಬೌಲರ್
ಟೆಸ್ಟ್ನಲ್ಲಿ 500 ವಿಕೆಟ್ ಕ್ಲಬ್ ಸೇರಿದ 9 ಬೌಲರ್ಗಳ ಪೈಕಿ ಅಶ್ವಿನ್, 5ನೇ ಸ್ಪಿನ್ನರ್ ಆಗಿದ್ದಾರೆ. ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್, ಅನಿಲ್ ಕುಂಬ್ಳೆ, ನಾಥನ್ ಲಿಯಾನ್ ಅವರು ಅಶ್ವಿನ್ಗೂ ಮೊದಲು ಈ ಸಾಧನೆ ಮಾಡಿದ್ದಾರೆ. ಸದ್ಯ ಕ್ರಿಕೆಟ್ನಲ್ಲಿ ಸಕ್ರಿಯ ಆಟಗಾರರ ಪೈಕಿ 500+ ವಿಕೆಟ್ ಪಡೆದರಲ್ಲಿ ಅಶ್ವಿನ್ ಮೂರನೇ ಬೌಲರ್. ಇಂಗ್ಲೆಂಡ್ ತಂಡದ ಜೇಮ್ಸ್ ಆಂಡರ್ಸನ್ (696*) ಮತ್ತು ಆಸ್ಟ್ರೇಲಿಯಾದ ನಾಥಾನ್ ಲಿಯಾನ್ (512*) ಮೊದಲ ಎರಡು ಸ್ಥಾನದಲ್ಲಿದ್ದಾರೆ.
ಟೆಸ್ಟ್ನಲ್ಲಿ ವೇಗದ 500 ವಿಕೆಟ್
ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ 500 ವಿಕೆಟ್ ಪಡೆದ ವಿಶ್ವದ ಎರಡನೇ ಬೌಲರ್ ಎಂಬ ಖ್ಯಾತಿಗೆ ಅಶ್ವಿನ್ ಒಳಗಾಗಿದ್ದಾರೆ. ಆ ಮೂಲಕ 105 ಪಂದ್ಯಗಳಲ್ಲಿ ಈ ಸಾಧನೆಗೈದಿದ್ದ ಅನಿಲ್ ಕುಂಬ್ಳೆ ದಾಖಲೆ ಮುರಿದು ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಮೊದಲ ಸ್ಥಾನದಲ್ಲಿ ಮುತ್ತಯ್ಯ ಮುರಳೀಧರನ್ ಅವರಿದ್ದು 87 ಟೆಸ್ಟ್ಗಳಲ್ಲೇ 500 ವಿಕೆಟ್ ಕ್ಲಬ್ ಸೇರಿದ್ದರು. ಅಶ್ವಿನ್ 98 ಟೆಸ್ಟ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಶೇನ್ ವಾರ್ನ್ 108, ಗ್ಲೆನ್ ಮೆಗ್ರಾಥ್ 110 ಟೆಸ್ಟ್ಗಳಲ್ಲಿ 500 ವಿಕೆಟ್ ಸಾಧನೆ ಮಾಡಿದ್ದರು.
ಕಡಿಮೆ ಎಸೆತಗಳಲ್ಲಿ 500 ವಿಕೆಟ್
ಅತಿ ಕಡಿಮೆ ಎಸೆತಗಳಲ್ಲಿ 500 ವಿಕೆಟ್ ಪಡೆದ ಬೌಲರ್ಗಳ ಪೈಕಿ ಅಶ್ವಿನ್ ಎರಡನೇ ಸ್ಥಾನಕ್ಕೇರಿದ್ದಾರೆ. ಆ ಮೂಲಕ ಜೇಮ್ಸ್ ಆಂಡರ್ಸನ್ ಅವರನ್ನು 3ನೇ ಸ್ಥಾನಕ್ಕೆ ತಳ್ಳಿದ್ದಾರೆ. ಅಗ್ರಸ್ಥಾನದಲ್ಲಿರುವ ಗ್ಲೆನ್ ಮೆಗ್ರಾಥ್ 25528 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಅಶ್ವಿನ್ ಇಷ್ಟು ವಿಕೆಟ್ ತೆಗೆದುಕೊಳ್ಳಲು 25714 ಎಸೆತಗಳನ್ನು ಎಸೆದಿದ್ದಾರೆ. ಆಂಡರ್ಸನ್ 28150, ಸ್ಟುವರ್ಟ್ ಬ್ರಾಡ್ 28430, ಕರ್ಟ್ನಿ ವಾಲ್ಷ್ 28833 ಎಸೆತಗಳಲ್ಲಿ 500 ವಿಕೆಟ್ ಪಡೆದಿದ್ದಾರೆ.
ಟೆಸ್ಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿ (ಟಾಪ್-10)
- ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ) - 800
- ಶೇನ್ ವಾರ್ನ್ (ಆಸ್ಟ್ರೇಲಿಯಾ) - 708
- ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್) - 696*
- ಅನಿಲ್ ಕುಂಬ್ಳೆ (ಭಾರತ) - 619
- ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್) - 604
- ಗ್ಲೆನ್ ಮೆಕ್ಗ್ರಾತ್ (ಆಸ್ಟ್ರೇಲಿಯಾ) - 563
- ಕರ್ಟ್ನಿ ವಾಲ್ಷ್ (ವೆಸ್ಟ್ ಇಂಡೀಸ್) - 519
- ನಾಥನ್ ಲಿಯಾನ್ (ಆಸ್ಟ್ರೇಲಿಯಾ) - 512*
- ರವಿಚಂದ್ರನ್ ಅಶ್ವಿನ್ (ಭಾರತ) - 500*
- ಡೇಲ್ ಸ್ಟೈನ್ (ದಕ್ಷಿಣ ಆಫ್ರಿಕಾ)- 439
ಇದನ್ನೂ ಓದಿ: ದಾಖಲೆಗಾಗಿ ಸರ್ಫರಾಜ್ರನ್ನು ರನೌಟ್ ಮಾಡಿದ್ರು; ಜಡೇಜಾರನ್ನು ದೂಷಿಸಿದ ನೆಟ್ಟಿಗರು, ಕೋಪದಿಂದ ಕ್ಯಾಪ್ ಬಿಸಾಡಿದ ರೋಹಿತ್