ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಸಾಧನೆ ಮಾಡಿದ ನಾಥನ್ ಲಿಯಾನ್; GOAT ಎಂದು ಬಣ್ಣಿಸಿದ ಅಶ್ವಿನ್
Dec 18, 2023 11:26 AM IST
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 500 ವಿಕೆಟ್ ಪಡೆದ ನಾಥನ್ ಲಿಯಾನ್ ಕುರಿತು ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ
- Nathan Lyon: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 500 ವಿಕೆಟ್ ಪಡೆದ ವಿಶ್ವದ ಎಂಟನೇ ಬೌಲರ್ ಎಂಬ ಸಾಧನೆಯನ್ನು ನಥಾನ್ ಲಿಯಾನ್ ಮಾಡಿದರು. ಇದಕ್ಕೆ ಟೀಮ್ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್ ಪ್ರತಿಕ್ರಿಯೆ ನೀಡಿದ್ದಾರೆ.
ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ (Australia vs Pakistan 1st Test) ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ, ಆಸೀಸ್ ಸ್ಪಿನ್ನರ್ ನಾಥನ್ ಲಿಯಾನ್ (Nathan Lyon) ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಪಂದ್ಯಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್‌ನಲ್ಲಿ 496 ವಿಕೆಟ್‌ಗಳನ್ನು ಪಡೆದಿದ್ದ ಅವರು, ಪಂದ್ಯದಲ್ಲಿ ವಿಶ್ವದಾಖಲೆ ಮಾಡುವ ಅವಕಾಶ ಹೊಂದಿದ್ದರು. ಅದರಂತೆಯೇ ವಿಶೇಷ ಮೈಲಿಗಲ್ಲು ತಲುಪಿದ ಲಿಯಾನ್, ತಮ್ಮ ವಿಶೇಷ ಕೋಚ್ ಆರ್ ಅಶ್ವಿನ್ ಅವರಿಂದ ಮೆಚ್ಚುಗೆ ಸಂಪಾದಿಸಿದ್ದಾರೆ.
ಇತ್ತೀಚೆಗಷ್ಟೆ ತಮ್ಮ ವೃತ್ತಿಜೀವನದ ಮೇಲೆ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬೀರಿದ ಪ್ರಭಾವದ ಕುರಿತು ಲಿಯಾನ್ ಹೇಳಿಕೊಂಡಿದ್ದರು. ಅಶ್ವಿನ್ ಅವರನ್ನು “ನನ್ನ ಅತಿ ದೊಡ್ಡ ತರಬೇತುದಾರರಲ್ಲಿ ಒಬ್ಬರು” ಎಂಬುದಾಗಿ ಆಸೀಸ್ ಆಫ್ ಸ್ಪಿನ್ನರ್ ಬಣ್ಣಿಸಿದ್ದರು. ಲಿಯಾನ್ ಮಾತುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದವು. ಆ ಬಳಿಕ ಅಶ್ವಿನ್ ಕೂಡಾ ಅದಕ್ಕೆ ಪ್ರತಿಕ್ರಿಯೆ ನೀಡಿದ್ದರು. ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ಲಿಯಾನ್ 500 ವಿಕೆಟ್ ಸಾಧನೆ ಮಾಡಿದ ಬೆನ್ನಲ್ಲೇ, ಅಶ್ವಿನ್ ವಿಶೇಷ ಪ್ರತಿಕ್ರಿಯೆ ನೀಡಿದ್ದಾರೆ. 'GOAT' ಎನ್ನುವ ಮೂಲಕ ಹೊಗಳಿದ್ದಾರೆ.
ಪಾಕಿಸ್ತಾನದ ವಿರುದ್ಧ ಪರ್ತ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್ ಮತ್ತು ಅಮೇರ್ ಜಮಾಲ್ ವಿಕೆಟ್ ಪಡೆದಿದ್ದ ಲಿಯಾನ್, 499 ವಿಕೆಟ್ ವಿಕೆಟ್‌ಗಳನ್ನು ಖಾತೆಗೆ ಸೇರಿಸಿದರು. ಆ ಬಳಿಕ ಪಾಕಿಸ್ತಾನದ ಎರಡನೇ ಇನ್ನಿಂಗ್ಸ್ ವೇಳೆ ಫಹೀಮ್ ಅಶ್ರಫ್ ವಿಕೆಟ್ ಪಡೆಯುವುದರೊಂದಿಗೆ ಐತಿಹಾಸಿಕ ಸಾಧನೆ ಮಾಡಿದರು.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 500 ವಿಕೆಟ್‌ಗಳನ್ನು ಪಡೆದ ವಿಶ್ವದ ಎಂಟನೇ ಬೌಲರ್ ಲಿಯಾನ್. ಅಲ್ಲದೆ ಶೇನ್ ವಾರ್ನ್ (708) ಮತ್ತು ಗ್ಲೆನ್ ಮೆಕ್‌ಗ್ರಾತ್ (563) ಬಳಿಕ ಆಸ್ಟ್ರೇಲಿಯಾದ ಮೂರನೇ ಆಟಗಾರ ಎಂಬ ಹೆಗ್ಗಳಿಕೆ ಲಿಯಾನ್ ಅವರದ್ದು. ಮುತ್ತಯ್ಯ ಮುರಳೀಧರನ್ ಮತ್ತು ಅನಿಲ್ ಕುಂಬ್ಳೆ ಇರುವ ಈ ಪಟ್ಟಿಯಲ್ಲಿರುವ ಕೇವಲ ನಾಲ್ಕನೇ ಸ್ಪಿನ್ನರ್ ಅವರು.
ಲಿಯಾನ್ ಸಾಧನೆ ಬೆನ್ನಲ್ಲೇ ಅವರನ್ನು 'ಗೋಟ್' ಎಂದು ಅಶ್ವಿನ್ ಶ್ಲಾಘಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “500 ಟೆಸ್ಟ್ ವಿಕೆಟ್‌ಗಳನ್ನು ಪಡೆದ ವಿಶ್ವದ 8ನೇ ಬೌಲರ್ ಮತ್ತು 2ನೇ ಆಫ್ ಸ್ಪಿನ್ನರ್. ಲಿಯಾನ್ ಅಭಿನಂದನೆಗಳು," ಎಂಬುದಾಗಿ ಭಾರತದ ಸ್ಪಿನ್ನರ್ ಹೇಳಿಕೊಂಡಿದ್ದಾರೆ.
ಇದನ್ನೂ ಒದಿ | ಆಸೀಸ್ ವಿರುದ್ಧ ಪಾಕ್ಗೆ 360 ರನ್ಗಳ ಹೀನಾಯ ಸೋಲು; ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಭಾರತ
ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯ ನಾಲ್ಕೇ ದಿನಕ್ಕೆ ಮುಕ್ತಾಯಗೊಂಡಿತು. ಪ್ರವಾಸಿ ಪಾಕ್ ತಂಡವು 360 ರನ್ಗಳ ಅಂತರದಿಂದ ಸೋಲಿಗೆ ಶರಣಾಯ್ತು. ಇದರೊಂದಿಗೆ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸೀಸ್ 1-0ರಲ್ಲಿ ಮುನ್ನಡೆ ಸಾಧಿಸಿದೆ. ಡೇವಿಡ್ ವಾರ್ನರ್ ಭರ್ಜರಿ ಶತಕ (164) ಮತ್ತು ಮಿಚೆಲ್ ಮಾರ್ಷ್ ಖಡಕ್ ಆಲ್ರೌಂಡ್ ಪ್ರದರ್ಶನದಿಂದ ಪಾಕಿಸ್ತಾನ, ಘೋರ ಪರಾಭವಗೊಂಡಿತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 487 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ಪ್ರಥಮ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ 271 ರನ್ಗಳಿಗೆ ಸರ್ವಪತನ ಕಂಡಿತು. 216 ರನ್ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಆಸೀಸ್, 5 ವಿಕೆಟ್ ನಷ್ಟಕ್ಕೆ 233 ರನ್ ಕಲೆ ಹಾಕಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. 450 ರನ್ಗಳ ಬೃಹತ್ ಗುರಿ ಪಡೆದ ಪಾಕ್, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 89ಕ್ಕೆ ಆಲೌಟ್ ಆಗಿ 360 ರನ್ಗಳಿಂದ ಶರಣಾಯಿತು.