ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ಗೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ; ಅನುಭವಿ ಸ್ಪಿನ್ನರ್ಗೆ ಮಣೆ ಹಾಕಲು ಚಿಂತನೆ
Nov 13, 2023 04:01 PM IST
ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ಗೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ.
- ಲೀಗ್ನಲ್ಲಿ ಆಡಿದ ಎಲ್ಲಾ 9 ಪಂದ್ಯಗಳನ್ನು ಗೆದ್ದಿರುವ ಭಾರತ ತಂಡವು ಮೊದಲ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನೂ ಮಣಿಸಿ ಫೈನಲ್ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ. 2019ರ ಸೇಡು ತೀರಿಸಿಕೊಳ್ಳಲು ಭಾರತ ಮಾಸ್ಟರ್ ಪ್ಲಾನ್ ರೂಪಿಸಿದೆ. ಅದಕ್ಕೆ ತಂಡದಲ್ಲಿ ಬದಲಾವಣೆ ಮೊರೆ ಹೋಗಿದೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ (ICC Cricket World Cup 2023) ಮಹತ್ವದ ಘಟ್ಟ ತಲುಪಿದೆ. ಲೀಗ್ ಹಂತ ಮುಕ್ತಾಯಗೊಂಡಿದೆ. ಈಗ ನಾಕೌಟ್ ಪಂದ್ಯಗಳು ನಡೆಯಲಿವೆ. ವಿಶ್ವ ಚಾಂಪಿಯನ್ ಪಟ್ಟಕ್ಕೇರಲು ನಾಲ್ಕು ತಂಡಗಳು ಅಳಿವು-ಉಳಿವಿನ ಹೋರಾಟ ನಡೆಸಬೇಕಿದೆ. ಸೆಮಿಫೈನಲ್ಗೆ ಅರ್ಹತೆ ಪಡೆದಿರುವ 4 ತಂಡಗಳೂ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿವೆ.
ಅದರಂತೆ ನವೆಂಬರ್ 15ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುವ ಮೊದಲ ಸೆಮಿಫೈನಲ್ನಲ್ಲಿ ಭಾರತ-ನ್ಯೂಜಿಲೆಂಡ್ ತಂಡಗಳ (India vs New Zealand) ನಡುವೆ ನಡೆಯಲಿದೆ. ಮತ್ತೊಂದು ಸೆಮಿಫೈನಲ್ ಪಂದ್ಯ ನವೆಂಬರ್ 16ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ತಂಡಗಳ ನಡುವೆ (Australia vs South Africa) ನಡೆಯಲಿದೆ. ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ಗೆ ಪ್ರವೇಶಿಸಲಿದೆ.
ತಂಡದಲ್ಲಿ ಮಹತ್ವದ ಬದಲಾವಣೆ
ಲೀಗ್ನಲ್ಲಿ ಆಡಿದ ಎಲ್ಲಾ 9 ಪಂದ್ಯಗಳನ್ನು ಗೆದ್ದಿರುವ ಭಾರತ ತಂಡವು ಮೊದಲ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನೂ ಮಣಿಸಿ ಫೈನಲ್ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ. 2019ರ ವಿಶ್ವಕಪ್ ಸೆಮೀಸ್ನಲ್ಲಿ ಉಭಯ ತಂಡಗಳು ಎದುರಾಗಿದ್ದವು. ಈಗ ಸೇಡು ತೀರಿಸಿಕೊಳ್ಳಲು ಭಾರತ ಮಾಸ್ಟರ್ ಪ್ಲಾನ್ ರೂಪಿಸಿದೆ. ಅದಕ್ಕೆ ತಂಡದಲ್ಲಿ ಬದಲಾವಣೆ ಮೊರೆ ಹೋಗಿದೆ.
ಕಿವೀಸ್ ಎದುರಿನ ದೊಡ್ಡ ಪಂದ್ಯಕ್ಕಾಗಿ ಭಾರತ ತಂಡವು ತನ್ನ ಆಡುವ 11ರ ಬಳಗದಲ್ಲಿ ಬದಲಾವಣೆ ತರಲು ನಿರ್ಧರಿಸಿದೆ. ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಡೆಪ್ತ್ ಅನ್ನು ಮುಂದಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿದೆ. ಬ್ಲ್ಯಾಕ್ ಕ್ಯಾಪ್ಸ್ ತಂಡದಲ್ಲಿ ಎಡಗೈ ಬ್ಯಾಟರ್ಗಳನ್ನೇ ಗಮನದಲ್ಲಿಟ್ಟುಕೊಂಡು ಹಿರಿಯ ಹಾಗೂ ಅನುಭವಿ ಆಟಗಾರನಿಗೆ ಮಣೆ ಹಾಕಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ.
ಅಶ್ವಿನ್ಗೆ ಮಣೆ ಹಾಕಲು ಚಿಂತನೆ
ಹೌದು, ಸೂರ್ಯಕುಮಾರ್ ಯಾದವ್ (Suryakumar Yadav) ಬದಲಿಗೆ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ಗೆ (Ravichandran Ashwin) ಮಣೆ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ. ಸೂರ್ಯಕುಮಾರ್ ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಆದರೆ ತಂಡದಲ್ಲಿ 6ನೇ ಬೌಲಿಂಗ್ ಆಯ್ಕೆಯೊಂದಿಗೆ ಹೋಗಲು ನಿರ್ಧರಿಸುತ್ತಿದೆ. ಇದು ಸೆಮಿಫೈನಲ್ನಂತಹ ದೊಡ್ಡ ಪಂದ್ಯದಲ್ಲಿ ಅಗತ್ಯ ಇದೆ ಎಂಬ ಚರ್ಚೆ ನಡೆದಿರುವ ಬಗ್ಗೆ ವರದಿಯಾಗಿದೆ.
ಹಾರ್ದಿಕ್ ಗಾಯಗೊಂಡಾಗಿನಿಂದ ಭಾರತ ತಂಡವು ಕೇವಲ 5 ಬೌಲರ್ಗಳೊಂದಿಗೆ ಮಾತ್ರ ಆಡಿದೆ. ಈ ಯೋಜನೆ ವರ್ಕೌಟ್ ಕೂಡ ಆಗಿದೆ. ಆದರೆ ನಾಕೌಟ್ ಪಂದ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಶ್ವಿನ್ರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಚಿಂತಿಸಲಾಗಿದೆ. ಆದರೆ ಈ ಒಂದು ಬದಲಾವಣೆ ಹೊರತುಪಡಿಸಿ ಉಳಿದ ಯಾವುದೇ ಬದಲಾವಣೆ ಕಾಣುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಆಸ್ಟ್ರೇಲಿಯಾ ವಿರುದ್ಧ ಮಾತ್ರ ಆಡಿದ್ದರು!
ಹಿರಿಯ ಸ್ಪಿನ್ನರ್ ಅಶ್ವಿನ್ ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಆದರೆ ಆ ಪಂದ್ಯದ ನಂತರ ಬೆಂಚ್ ಬಿಸಿ ಮಾಡುತ್ತಿದ್ದಾರೆ. ಬದಲಿಗೆ ವೇಗದ ಆಲ್ರೌಂಡರ್ ಶಾರ್ದೂಲ್ ಠಾಕೂರ್ಗೆ ಆದ್ಯತೆ ನೀಡಲಾಗಿತ್ತು. ಆದರೆ ಹಾರ್ದಿಕ್ ಗಾಯಗೊಂಡಾಗ ಮೊಹಮ್ಮದ್ ಶಮಿಯನ್ನು ಆಯ್ಕೆ ಮಾಡಲಾಯಿತು. ಸೂರ್ಯಗೆ ಅವಕಾಶ ನೀಡಿ ಬ್ಯಾಟಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸಿತು.
3ನೇ ವೇಗಿಯಾಗಿ ಕಾಣಿಸಿಕೊಂಡ ಶಮಿ ಕೇವಲ 5 ಪಂದ್ಯಗಳಲೇ 16 ವಿಕೆಟ್ ಪಡೆದು ಮಿಂಚಿದರು. ಮತ್ತೊಂದೆಡೆ ಸೂರ್ಯಗೆ ಬ್ಯಾಟಿಂಗ್ ನಡೆಸಲು ಹೆಚ್ಚಿನ ಅವಕಾಶಗಳು ಸಿಗುತ್ತಿಲ್ಲ. ಏಕೆಂದರೆ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್ಗಳೇ ಭರ್ಜರಿ ಫಾರ್ಮ್ನಲ್ಲಿ ರನ್ ಬೇಟೆಯಾಡುತ್ತಿದ್ದಾರೆ. ಹಾಗಾಗಿ ಎದುರಾಳಿಯ ಎಡಗೈ ಬ್ಯಾಟರ್ಗಳಿಗೆ ಕಾಡುವ ಮತ್ತು ಬ್ಯಾಟಿಂಗ್ನಲ್ಲಿ ಕೊಡುಗೆ ನೀಡುವ ಅಶ್ವಿನ್ರನ್ನು ಪರಿಗಣಿಸಲು ನಿರ್ಧರಿಸಲಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ಗೆ ಭಾರತದ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಸೂರ್ಯಕುಮಾರ್ ಯಾದವ್/ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.