logo
ಕನ್ನಡ ಸುದ್ದಿ  /  ಕ್ರಿಕೆಟ್  /  ಎನ್​ಸಿಎ ತಲುಪಿದ ರವೀಂದ್ರ ಜಡೇಜಾ; ಮುಂದಿನ ಪಂದ್ಯಕ್ಕಲ್ಲ, ಉಳಿದ ಟೆಸ್ಟ್ ಸರಣಿಗೂ ಆಲ್​ರೌಂಡರ್ ಅನುಮಾನ

ಎನ್​ಸಿಎ ತಲುಪಿದ ರವೀಂದ್ರ ಜಡೇಜಾ; ಮುಂದಿನ ಪಂದ್ಯಕ್ಕಲ್ಲ, ಉಳಿದ ಟೆಸ್ಟ್ ಸರಣಿಗೂ ಆಲ್​ರೌಂಡರ್ ಅನುಮಾನ

Prasanna Kumar P N HT Kannada

Jan 31, 2024 09:26 AM IST

google News

ರವೀಂದ್ರ ಜಡೇಜಾ.

    • Ravindra Jadeja: ಮಂಡಿರಜ್ಜು ಗಾಯದ ಸಮಸ್ಯೆಗೆ ತುತ್ತಾಗಿರುವ ಆಲ್​ರೌಂಡರ್ ರವೀಂದ್ರ ಜಡೇಜಾ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ 2ನೇ ಟೆಸ್ಟ್ ಕ್ರಿಕೆಟ್​ ಪಂದ್ಯದಿಂದ ಹೊರಗುಳಿದಿದ್ದಾರೆ. ಅಲ್ಲದೆ ಉಳಿದ ಪಂದ್ಯಗಳಿಗೂ ಮರಳುವುದು ಅನುಮಾನ ಎನ್ನಲಾಗಿದೆ.
ರವೀಂದ್ರ ಜಡೇಜಾ.
ರವೀಂದ್ರ ಜಡೇಜಾ.

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ (India vs England 1st Test) ವೇಳೆ ಮಂಡಿರಜ್ಜು ಗಾಯಕ್ಕೆ ಒಳಗಾದ ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (National Cricket Academy) ಮರಳಿದ್ದಾರೆ. ಗಾಯದ ಸಮಸ್ಯೆಯಿಂದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಮುಂದಿನ ಕೆಲ ದಿನಗಳ ಕಾಲ ಮನೆಯಲ್ಲಿರುತ್ತೇನೆ ಎಂಬ ಶೀರ್ಷಿಕೆಯೊಂದಿಗೆ ಎನ್​ಸಿಎ ಫೋಟೋವನ್ನು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಜಡೇಜಾ ಜೊತೆಗೆ ಕೆಎಲ್ ರಾಹುಲ್ ಕೂಡ ಗಾಯದ ಸಮಸ್ಯೆಗೆ ಒಳಗಾಗಿ ಎರಡನೇ ಟೆಸ್ಟ್​ನಿಂದ ಹೊರಗುಳಿದಿದ್ದಾರೆ. ಬಲಭಾಗದ ಕ್ವಾಡ್ ಸ್ನಾಯುಗಳಲ್ಲಿ ನೋವಿಗೆ ತುತ್ತಾಗಿದ್ದು, ಮೂರನೇ ಟೆಸ್ಟ್​ಗೆ ಮರಳುವ ಸಾಧ್ಯತೆ ಇದೆ. ಆದರೆ ಜಡೇಜಾ ವಿಚಾರದಲ್ಲಿ ಹಾಗಿಲ್ಲ. ಅವರು ಮುಂದಿನ ಪಂದ್ಯಕ್ಕಲ್ಲ, ಉಳಿದ ಟೆಸ್ಟ್​ ಸರಣಿಯಿಂದಲೇ ಹೊರಬೀಳುವ ಸಾಧ್ಯತೆ ಇದೆ. ಸದ್ಯ ಬೆಂಗಳೂರಿನ ಎನ್​ಸಿಎನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಡೇಜಾ, ಫಿಟ್​ ಆಗಲು ತುಂಬಾ ಸಮಯ ಬೇಕಿದೆ ಎಂದು ವರದಿಯಾಗಿದೆ.

ಟೆಸ್ಟ್​ ಸರಣಿಯಿಂದಲೇ ಹೊರಕ್ಕೆ?

ಜಡೇಜಾ ಎರಡನೇ ಟೆಸ್ಟ್‌ನಿಂದ ಹೊರಗುಳಿದ ಒಂದು ದಿನದ ನಂತರ, ಬಿಸಿಸಿಐ ಎಷ್ಟು ದೊಡ್ಡ ಗಾಯವಾಗಿದೆ ಎಂಬ ಸ್ಪಷ್ಟ ಸೂಚನೆಯನ್ನು ನೀಡಿಲ್ಲ. ಟೈಮ್ಸ್ ಆಫ್ ಇಂಡಿಯಾ ವರದಿಯು ಆಲ್ ರೌಂಡರ್ ಇಂಗ್ಲೆಂಡ್ ಟೆಸ್ಟ್ ಸರಣಿಯ ಸಂಪೂರ್ಣ ಪಂದ್ಯವನ್ನು ಕಳೆದುಕೊಳ್ಳಬಹುದು ಎಂದು ಬಹಿರಂಗಪಡಿಸಿದೆ. ರಾಹುಲ್ ಬಹುಶಃ ಈ ಸರಣಿಯಲ್ಲಿ ಮರಳಬಹುದು. ಆದರೆ ಜಡೇಜಾ ಅವರ ಗಾಯವು ಹೆಚ್ಚು ಗಂಭೀರವಾಗಿರಬಹುದು. ಇದೇ ಕಾರಣಕ್ಕೆ ಎನ್​ಸಿಎಗೆ ಬಂದಿದ್ದಾರೆ.

ರವೀಂದ್ರ ಜಡೇಜಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಸ್ಥಾನಕ್ಕೆ ಈಗಾಗಲೇ ಬದಲಾವಣೆ ಮಾಡಲಾಗಿದೆ. ಕೊಹ್ಲಿ ಸ್ಥಾನಕ್ಕೆ ಮೊದಲ ಟೆಸ್ಟ್​ಗೂ ಮುನ್ನವೇ ರಜತ್​ ಪಾಟೀದಾರ್​ ಆಯ್ಕೆಯಾಗಿದ್ದರು. ಜಡೇಜಾ ಮತ್ತು ರಾಹುಲ್ ಹೊರ ಬಿದ್ದ ಬಳಿಕ ತಂಡಕ್ಕೆ ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್ ಮತ್ತು ಸೌರಭ್ ಕುಮಾರ್​ ಮೂವರು ಸೇರಿಕೊಂಡಿದ್ದಾರೆ. ಆದರೆ ಪ್ರಮುಖ ಆಟಗಾರರ ಸ್ಥಾನವನ್ನು ಯಾರು ತುಂಬುತ್ತಾರೆ. ಅನುಭವಿಗಳ ಬದಲಿಗೆ ಅನಾನುಭವಿಗಳ ಪ್ರದರ್ಶನ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಮೊದಲ ಟೆಸ್ಟ್​ನಲ್ಲಿ ರಾಹುಲ್-ಜಡೇಜಾ ಮಿಂಚು

ಮೊದಲ ಟೆಸ್ಟ್​ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ನಿರ್ಣಾಯಕ ಪಾತ್ರವಹಿಸಿದ್ದರು. ಆದರೆ ಮೊದಲ ಇನ್ನಿಂಗ್ಸ್​ನಲ್ಲಿ ರಾಹುಲ್ 86 ರನ್ ಸಿಡಿಸಿದರೆ, ಜಡ್ಡು 87 ರನ್ ಸಿಡಿಸಿ ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ಇಬ್ಬರೂ ವೈಫಲ್ಯ ಅನುಭವಿಸಿದರು. ಜಡೇಜಾ ಈ ಪಂದ್ಯದಲ್ಲಿ ಒಟ್ಟು 5 ವಿಕೆಟ್​ ಪಡೆದರು. ಎರಡನೇ ಇನ್ನಿಂಗ್ಸ್ ಅವಧಿಯಲ್ಲಿ ಅನಗತ್ಯ ರನ್ ಗಳಿಸಲು ಯತ್ನಿಸಿದ ಜಡೇಜಾ ರನೌಟ್ ಆದರು. ಈ ವೇಳೆ ಮಂಡಿರಜ್ಜು ಗಾಯಕ್ಕೆ ಒಳಗಾದರು.

ತಂಡಕ್ಕೆ ಬೇಕಿದ್ದಾರೆ ಜಡ್ಡುರಂತ ಆಟಗಾರ

ಈಗಾಗಲೇ ಮೊದಲ ಪಂದ್ಯ ಸೋತಿರುವ ಭಾರತ, 2ನೇ ಪಂದ್ಯದಲ್ಲಿ ತಿರುಗೇಟು ನೀವು ಲೆಕ್ಕಾಚಾರದಲ್ಲಿದೆ. ಆದರೆ ಪ್ರಮುಖ ಆಟಗಾರರ ಅಲಭ್ಯತೆ ಕಾಡುತ್ತಿದೆ. ಅದರಲ್ಲೂ ರವೀಂದ್ರ ಜಡೇಜಾ ಅವರಂತೆ ಆಲ್​ರೌಂಡರ್​ ಕೊರತೆ ಕಾಡುತ್ತಿದೆ. 2016ರಿಂದ 53 ಟೆಸ್ಟ್‌ಗಳಲ್ಲಿ ಜಡೇಜಾ ಅವರು 40 ಕ್ಕಿಂತ ಹೆಚ್ಚು ಬ್ಯಾಟಿಂಗ್ ಸರಾಸರಿ ಮತ್ತು 25 ಕ್ಕಿಂತ ಕಡಿಮೆ ಬೌಲಿಂಗ್ ಸರಾಸರಿ ಕಾಯ್ದುಕೊಂಡಿದ್ದಾರೆ. ಇದು ಭಾರತ ತಂಡಕ್ಕೆ ಆತನ ಅಗತ್ಯತೆಯನ್ನು ಒತ್ತಿ ಹೇಳುತ್ತದೆ. ಎರಡನೇ ಟೆಸ್ಟ್​ ಫೆಬ್ರವರಿ 2 ರಿಂದ ಆರಂಭವಾಗಲಿದೆ.

ರವೀಂದ್ರ ಜಡೇಜಾ ಸ್ಥಾನಕ್ಕೆ ಯಾರು?

ಜಡೇಜಾ ಹೊರಬಿದ್ದ ಬಳಿಕ ಆತನ ಸ್ಥಾನ ತುಂಬುವವರು ಯಾರು ಎಂಬ ಗೊಂದಲ ಉಂಟಾಗಿದೆ. ವಾಷಿಂಗ್ಟನ್ ಸುಂದರ್​, ಸೌರಭ್ ಕುಮಾರ್ ಮತ್ತು ಕುಲ್ದೀಪ್​ ಯಾದವ್ ನಡುವೆ ಪೈಪೋಟಿ ಏರ್ಪಟ್ಟಿದೆ. ಮತ್ತೊಂದೆಡೆ ಮೊಹಮ್ಮದ್ ಸಿರಾಜ್ ಬದಲಿಗೆ ಕುಲ್ದೀಪ್​ಗೆ ಮಣೆ ಹಾಕುವ ಕುರಿತು ಕೂಡ ಚಿಂತನೆ ನಡೆದಿದೆ. ಸದ್ಯ ಬ್ಯಾಟಿಂಗ್​​ನಲ್ಲೂ ಕೊಡುಗೆ ನೀಡುವ ಆಟಗಾರರಿಗೆ ಮಣೆ ಹಾಕುವ ಉದ್ದೇಶ ಮ್ಯಾನೇಜ್​ಮೆಂಟ್​ನದ್ದು. ಆದರೆ ತಂಡದ ಮೊದಲ ಆಯ್ಕೆಯಲ್ಲಿ ಸುಂದರ್ ಹೆಸರು ಕೇಳಿ ಬರುತ್ತಿದೆ. ಇದು ಅಂತಿಮವಲ್ಲ.

ಎರಡನೇ ಟೆಸ್ಟ್ ಪಂದ್ಯಕ್ಕೆ ಪರಿಷ್ಕೃತ ಭಾರತ ತಂಡ

ರೋಹಿತ್ ಶರ್ಮಾ (ನಾಯಕ ), ಶುಭ್ಮನ್‌ ಗಿಲ್, ಯಶಸ್ವಿ ಜೈಸ್ವಾಲ್, ರಜತ್ ಪಾಟೀದಾರ್, ಶ್ರೇಯಸ್‌ ಅಯ್ಯರ್, ಸರ್ಫರಾಜ್ ಖಾನ್, ಕೆಎಸ್ ಭರತ್ (ವಿಕೇಟ್ ಕೀಪರ್), ಧ್ರುವ್ ಜುರೆಲ್ (ವಿಕೇಟ್ ಕೀಪರ್), ಆರ್ ಅಶ್ವಿನ್, ವಾಷಿಂಗ್ಟನ್ ಸುಂದರ್, ಅಕ್ಷರ್​ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್, ಸೌರಭ್ ಕುಮಾರ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ