ಶಂಕಿತ ಉಗ್ರರ ಅರೆಸ್ಟ್ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಭದ್ರತಾ ಭೀತಿ; ಆರ್‌ಸಿಬಿ ಅಭ್ಯಾಸ ರದ್ದು, ಪತ್ರಿಕಾಗೋಷ್ಠಿಯೂ ಕ್ಯಾನ್ಸಲ್
May 22, 2024 03:41 PM IST
ವಿರಾಟ್ ಕೊಹ್ಲಿಗೆ ಭದ್ರತಾ ಭೀತಿ; ಆರ್‌ಸಿಬಿ ಅಭ್ಯಾಸ ರದ್ದು
- ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಆರ್‌ಸಿಬಿ ತಂಡಗಳ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಆದರೆ, ಅದಕ್ಕೂ ಮುನ್ ಆರ್‌ಸಿಬಿ ಸ್ಟಾರ್ ಆಟಗಾರನಿಗೆ ಭದ್ರತಾ ಭೀತಿ ಎದುರಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಎಲಿಮನೇಟರ್ ಪಂದ್ಯಕ್ಕಾಗಿ ಅಹಮದಾಬಾದ್‌ಗೆ ಬಂದಿಳಿದಿದೆ. ಇಂದು (ಮೇ 22 ಬುಧವಾರ) ಮಹತ್ವದ ಪಂದ್ಯ ನಡೆಯಲಿದೆ. ಆದರೆ, ಪಂದ್ಯಕ್ಕೂ ಮುನ್ನ ತಂಡ ಭಾಗಿಯಾಗಬೇಕಿದ್ದ ಏಕೈಕ ಅಭ್ಯಾಸ ಅವಧಿಯನ್ನು ಭದ್ರತಾ ಕಾರಣಗಳಿಂದಾಗಿ ತಂಡ ರದ್ದುಗೊಳಿಸಿದೆ. ನಾಕೌಟ್ ಪಂದ್ಯಕ್ಕೆ ತಯಾರಿ ನಡೆಸಲು ಆರ್‌ಸಿಬಿ ಮಂಗಳವಾರ ಅಹಮದಾಬಾದ್‌ನ ಗುಜರಾತ್ ಕಾಲೇಜು ಮೈದಾನದಲ್ಲಿ ಅಭ್ಯಾಸ ನಡೆಸಬೇಕಿತ್ತು. ಆದರೆ ತಂಡವು ಯಾವುದೇ ಅಧಿಕೃತ ಕಾರಣ ನೀಡದೆ ಅದನ್ನು ರದ್ದುಗೊಳಿಸಿದೆ. ಮತ್ತೊಂದೆಡೆ, ರಾಜಸ್ಥಾನ್ ರಾಯಲ್ಸ್ ತಂಡವು ಇದೇ ಸ್ಥಳದಲ್ಲಿ ನೆಟ್ ಸೆಷನ್ ಮುಂದುವರೆಸಿದೆ.
ಸಾಮಾನ್ಯವಾಗಿ ಯಾವುದೇ ಪಂದ್ಯಕ್ಕೂ ಹಿಂದಿನ ದಿನ ಪತ್ರಿಕಾಗೋಷ್ಠಿ ನಡೆಸಲಾಗುತ್ತದೆ. ಆದರೆ, ನಿರ್ಣಾಯಕ ಪ್ಲೇಆಫ್ ಪಂದ್ಯಕ್ಕೂ ಮುನ್ನ ಸುದ್ದಗೋಷ್ಠಿ ನಡೆದಿಲ್ಲ. ಇದು ಗೊಂದಲಗಳಿಗೆ ಕಾರಣವಾಗಿದೆ.
ಮಂಗಳವಾರ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಮೊದಲ ಕ್ವಾಲಿಫೈಯರ್ ಪಂದ್ಯದ ಕಾರಣದಿಂದಾಗಿ, ನಿನ್ನೆ ನರೇಂದ್ರ ಮೋದಿ ಕ್ರೀಡಾಂಗಣವು ಅಭ್ಯಾಸಕ್ಕಾಗಿ ಲಭ್ಯವಿರಲಿಲ್ಲ. ರಾಜಸ್ಥಾನ ಮತ್ತು ಆರ್‌ಸಿಬಿಗೆ ಮುಖ್ಯ ಮೈದಾನ ಸಿಗಲಿಲ್ಲ. ಹೀಗಾಗಿ ಉಭಯ ತಂಡಗಳಿಗೆ ಪರ್ಯಾಯವಾಗಿ ಗುಜರಾತ್ ಕಾಲೇಜು ಮೈದಾನವನ್ನು ಅಭ್ಯಾಸಕ್ಕೆಂದು ನೀಡಲಾಯಿತು.
ಇದನ್ನೂ ಓದಿ | ನಾಯಕನಾಗಿ ಧೋನಿ, ರೋಹಿತ್ ಶರ್ಮಾ ಮಾಡದ ವಿಶಿಷ್ಠ ದಾಖಲೆ ಮಾಡಿದ ಶ್ರೇಯಸ್ ಅಯ್ಯರ್
ಬಂಗಾಳಿ ದಿನಪತ್ರಿಕೆ ಆನಂದಬಜಾರ್ ಪತ್ರಿಕೆ ವರದಿಯ ಪ್ರಕಾರ, ಆರ್‌ಸಿಬಿ ತಂಡವು ತನ್ನ ಅಭ್ಯಾಸ ಅವಧಿಯನ್ನು ರದ್ದುಗೊಳಿಸಲು ಮತ್ತು ಉಭಯ ತಂಡಗಳು ಕೂಡಾ ಪತ್ರಿಕಾಗೋಷ್ಠಿ ನಡೆಸದಿರಲು ಮುಖ್ಯ ಕಾರಣವಿದೆ. ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ಬೆದರಿಕೆ ಇರುವುದರರಿಂದ, ಭದ್ರತಾ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಯ್ತು ಎಂಬುದಾಗಿ ಗುಜರಾತ್ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಆನಂದಬಜಾರ್ ಪತ್ರಿಕೆ ವರದಿ ಮಾಡಿದೆ.
ಸೋಮವಾರವಷ್ಟೇ ಶಂಕಿತ ಉಗ್ರರ ಬಂಧನವಾಗಿತ್ತು
ಭಯೋತ್ಪಾದಕ ಚಟುವಟಿಕೆಗಳ ಶಂಕೆಯ ಮೇಲೆ ಗುಜರಾತ್ ಪೊಲೀಸರು ಸೋಮವಾರ ರಾತ್ರಿಯಷ್ಟೇ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ನಾಲ್ವರು ಶಂಕಿತರನ್ನು ಬಂಧಿಸಿದ್ದಾರೆ. ಪೊಲೀಸರು ಶಸ್ತ್ರಾಸ್ತ್ರಗಳು, ಅನುಮಾನಾಸ್ಪದ ವಿಡಿಯೋ ಮತ್ತು ಪಠ್ಯ ಸಂದೇಶಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಮಹತ್ವದ ಐಪಿಎಲ್ ಪಂದ್ಯಗಳ ಸಮಯದಲ್ಲಿ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿದೆ.
ಭದ್ರತಾ ವಿಚಾರವನ್ನು ಉಭಯ ತಂಡಗಗಳೊಂದಿಗೆ ಹಂಚಿಕೊಳ್ಳಲಾಗಿದೆ. ಆದರೆ, ರಾಜಸ್ಥಾನವು ಅಭ್ಯಾಸ ಮುಂದುವರೆಸಿದರೆ, ಆರ್‌ಸಿಬಿ ತಂಡ ಮಾತ್ರ ಭದ್ರತಾ ಸಿಬ್ಬಂದಿಗೆ ಯಾವುದೇ ಅಭ್ಯಾಸ ಅವಧಿ ಇರುವುದಿಲ್ಲ ಎಂದು ಮಾಹಿತಿ ನೀಡಿದೆ. ಆದರೆ, ಅಭ್ಯಾಸ ಅವಧಿಯನ್ನು ರದ್ದುಗೊಳಿಸುವ ಹಠಾತ್ ನಿರ್ಧಾರಕ್ಕೆ ಫ್ರಾಂಚೈಸಿಯಿಂದ ಯಾವುದೇ ಅಧಿಕೃತ ಕಾರಣ ಹೊರಬಂದಿಲ್ಲ ಎಂದು ವರದಿ ಹೇಳಿದೆ.
“ವಿರಾಟ್ ಕೊಹ್ಲಿ ನಮ್ಮ ದೇಶದ ಸಂಪತ್ತು. ಅವರ ಭದ್ರತೆ ನಮ್ಮ ಪ್ರಮುಖ ಆದ್ಯತೆಯಾಗಿದೆ” ಎಂದು ಪೊಲೀಸ್ ಅಧಿಕಾರಿ ವಿಜಯ್ ಸಿಂಘಾ ಜ್ವಾಲಾ ಹೇಳಿದ್ದಾರೆ. “ಆರ್‌ಸಿಬಿ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿರಲಿಲ್ಲ. ಹೀಗಾಗಿ ಯಾವುದೇ ಅಭ್ಯಾಸ ಅವಧಿ ಇರುವುದಿಲ್ಲ ಎಂದು ಅವರು ನಮಗೆ ಮಾಹಿತಿ ನೀಡಿದರು. ಈ ಬೆಳವಣಿಗೆ ಕುರಿತು ರಾಜಸ್ಥಾನ್ ರಾಯಲ್ಸ್‌ಗೆ ಮಾಹಿತಿ ನೀಡಲಾಯಿತು. ಆದರೆ ಅವರಿಗೆ ಅಭ್ಯಾಸ ಮುಂದುವರಿಸಲು ಯಾವುದೇ ಸಮಸ್ಯೆ ಇರಲಿಲ್ಲ” ಎಂದು ಅಧಿಕಾರಿ ಹೇಳಿದ್ದಾರೆ.
ಅಹಮದಾಬಾದ್‌ನಲ್ಲಿ ತಂಡದ ಹೋಟೆಲ್ ಹೊರಗೆ ಭದ್ರತೆ ಬಿಗಿಗೊಳಿಸಲಾಗಿತ್ತು. ಹೋಟೆಲ್‌ಗೆ ಇತರ ಯಾವುದೇ ಅತಿಥಿಗಳಿಗೆ ಪ್ರವೇಶ ನೀಡಿಲ್ಲ. ಐಪಿಎಲ್ ಮಾನ್ಯತೆ ಪಡೆದ ಮಾಧ್ಯಮ ಸಿಬ್ಬಂದಿಗೂ ಹೋಟೆಲ್ ಆವರಣಕ್ಕೆ ಪ್ರವೇಶಿಸಲು ಅವಕಾಶವಿರಲಿಲ್ಲ.
ಭದ್ರತಾ ಕಾರಣಗಳಿಂದಾಗಿಯೇ ತಂಡದ ಮ್ಯಾನೇಜ್ಮೆಂಟ್ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಬೇಕಾಯಿತು.
ಇದನ್ನೂ ಓದಿ | RCB vs RR Eliminator: ಇಂದು ಆರ್‌ಸಿಬಿ-ಆರ್‌ಆರ್ ಐಪಿಎಲ್ ಎಲಿಮಿನೇಟರ್ ಪಂದ್ಯ; ಇಲ್ಲಿದೆ ನರೇಂದ್ರ ಮೋದಿ ಸ್ಟೇಡಿಯಂ ಪಿಚ್, ವೆದರ್ ರಿಪೋರ್ಟ್
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)