ಪರ್ಸ್ನಲ್ಲಿ ಇದ್ದಿದ್ದೇ 23.25 ಕೋಟಿ; ಆದರೂ ಕಮಿನ್ಸ್ಗೆ 20.25 ಕೋಟಿವರೆಗೂ ಬಿಡ್ ನಡೆಸಿ ವಿರೋಚಿತ ಸೋಲು ಕಂಡ ಆರ್ಸಿಬಿ
Dec 19, 2023 06:50 PM IST
ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ಫ್ರಾಂಚೈಸಿಗಳು.
- Royal Challengers Bangalore: ಹರಾಜಿನ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡೆಸಿದ ಬಿಡ್ ಸಾಕಷ್ಟು ಅಚ್ಚರಿ ಮೂಡಿಸಿತ್ತು. ತನ್ನ ಪರ್ಸ್ನಲ್ಲಿ ಕೇವಲ 23.25 ಕೋಟಿ ಇಟ್ಟುಕೊಂಡು ಆಟಗಾರನ ಮೇಲೆ 20.25 ಕೋಟಿವರೆಗೂ ಆರ್ಸಿಬಿ ಬಿಡ್ ನಡೆಸಿತು.
ಐಪಿಎಲ್ ಮಿನಿ ಹರಾಜಾದರೂ (IPL Auction 2024) ಸಾಕಷ್ಟು ರೋಚಕತೆ ಸೃಷ್ಟಿಸಿದೆ. ನಿರೀಕ್ಷೆಯಂತೆ ಸ್ಟಾರ್ ಆಟಗಾರರು ದೊಡ್ಡ ಮೊತ್ತವನ್ನು ಜೇಬಿಗಿಳಿಸಿಕೊಂಡಿದ್ದರೆ, ಇನ್ನೂ ಕೆಲವರಿಗೆ ಭಾರಿ ನಿರಾಸೆಯಾಗಿದೆ. ಅದರಲ್ಲೂ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾದ ಆಟಗಾರರಾದ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮತ್ತು ನ್ಯೂಜಿಲೆಂಡ್ ತಂಡದ ಡೇರಿಲ್ ಮಿಚೆಲ್ಗೆ ಹಣ ಹೊಳೆಯನ್ನೇ ಹರಿಸಲಾಗಿದೆ.
ಮಿಚೆಲ್ ಸ್ಟಾರ್ಕ್ 24.75 ಕೋಟಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾದರೆ, ಪ್ಯಾಟ್ ಕಮಿನ್ಸ್ 20.50 ಕೋಟಿಗೆ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಿಕೊಂಡಿದ್ದಾರೆ. ಅಲ್ಲದೆ, ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರರಿಗೆ ಉತ್ತಮ ಮೊತ್ತವೇ ಸಿಕ್ಕಿದೆ. ಆದರೆ ಹರಾಜಿನ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ನಡೆಸಿದ ಬಿಡ್ ಸಾಕಷ್ಟು ಅಚ್ಚರಿ ಮೂಡಿಸಿತ್ತು.
ಇದ್ದಿದ್ದೇ 23.25 ಕೋಟಿ, ಬಿಡ್ ನಡೆಸಿದ್ದು 20.25 ಕೋಟಿ
ದುಬೈನಲ್ಲಿ ನಡೆದ ಐಪಿಎಲ್ ಮಿನಿ ಹರಾಜಿಗೂ ಮುನ್ನ ಆರ್ಸಿಬಿ ಪರ್ಸ್ನಲ್ಲಿ 23.25 ಕೋಟಿ ಇತ್ತು. ಆದರೆ, ಒಬ್ಬರಿಗಾಗಿ ಬಿಡ್ನಲ್ಲಿ ಪೈಪೋಟಿ ನಡೆಸಿದ್ದು 20.25 ಕೋಟಿವರೆಗೆ. ಹೌದು, ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಖರೀದಿಗೆ ಭಾರಿ ಪೈಪೋಟಿ ನಡೆಸಿತು. ಸನ್ರೈಸರ್ಸ್ ಹೈದರಾಬಾದ್ ಜೊತೆಗೆ ಜಿದ್ದಾಜಿದ್ದಿನ ಪೈಪೋಟಿ ನಡೆಸಿದ್ದು, ಅಚ್ಚರಿ ಮೂಡಿಸಿತ್ತು.
ಪ್ಯಾಟ್ ಕಮಿನ್ಸ್ 2 ಕೋಟಿ ಮೂಲ ಬೆಲೆ ಹೊಂದಿದ್ದರು. ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಖರೀದಿಗೆ ಒಟ್ಟು ನಾಲ್ಕು ತಂಡಗಳು ಪೈಟೋಟಿ ನಡೆಸಿದವು. ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಫ್ರಾಂಚೈಸಿಗಳು ಬಿಡ್ಡಿಂಗ್ ಆರಂಭಿಸಿದರೆ, ಬಳಿಕ ರೇಸ್ಗಿಳಿದ ಆರ್ಸಿಬಿ ಮತ್ತು ಸನ್ರೈಸರ್ಸ್ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಒಂದು ಹಂತದವರೆಗೂ ಹೋರಾಟ ನಡೆಸಿದ ಸಿಎಸ್ಕೆ, ಮುಂಬೈ ಬಳಿಕ ಬಿಡ್ನಿಂದ ಹಿಂದೆ ಸರಿದವು.
ಆದರೆ ತಮ್ಮ ಪರ್ಸ್ನಲ್ಲಿ 23.25 ಕೋಟಿ ಹೊಂದಿದ್ದ ಆರ್ಸಿಬಿ, ತಾನು ಪೈಪೋಟಿಯಿಂದ ಹಿಂದೆ ಸರಿಯಲ್ಲ ಎನ್ನುವಂತೆ ಮುನ್ನುಗ್ಗಿತು. ಆ ಕಡೆ ಹೈದರಾಬಾದ್ ಸಹ ಜಿದ್ದಾಜಿದ್ದಿನ ಬಿಡ್ ನಡೆಸಿ ಗಮನ ಸೆಳೆಯಿತು. ನೋಡ ನೋಡುತ್ತಲ್ಲೇ 20 ಕೋಟಿ ದಾಟಿತು. ಆದರೂ ಸುಮ್ಮನಿರದ ಆರ್ಸಿಬಿ 20.25 ಕೋಟಿಗೆ ಬಿಡ್ ನಡೆಸಿ ಎಲ್ಲರನ್ನೂ ದಂಗು ಬಡಿಸಿತು. ಮತ್ತೆ ಯೋಚಿಸಿದ 20.25 ಕೋಟಿಗೆ ಎಸ್ಆರ್ಎಚ್ ಬಿಡ್ ನಡೆಸಿತು.
20.25 ಕೋಟಿವರೆಗೂ ಬಿಡ್ ನಡೆಸಿದ ಆರ್ಸಿಬಿ ಕೊನೆಯ ಹಂತದಲ್ಲಿ ಹಿಂದೆ ಸರಿಯಿತು. ಆ ಮೂಲಕ ಬಿಡ್ಡಿಂಗ್ನಲ್ಲೂ ವಿರೋಚಿತ ಸೋಲು ಅನುಭವಿಸಿತು. ಆರ್ಸಿಬಿ ಫ್ರಾಂಚೈಸಿ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಅಭಿಮಾನಿಗಳಂತೂ ಕೆಂಡಾಮಂಡಲರಾಗಿದ್ದಾರೆ. ಪ್ರಮುಖರ ಮೇಲೆ ಬಿಡ್ ನಡೆಸದೆ, 23.25 ಕೋಟಿ ಇಟ್ಕೊಂಡು 20.25 ಕೋಟಿವರೆಗೂ ಬಿಡ್ ನಡೆಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ಜೋಸೆಫ್, ಯಶ್ ದಯಾಳ್ಗೆ ಮಣೆ
ವಿಶ್ವಕಪ್ನಲ್ಲಿ ಮಿಂಚಿದ ರಚಿನ್ ರವೀಂದ್ರ ಮತ್ತು ಆರ್ಸಿಬಿ ಪರವೇ ಆಡಿದ್ದ ವನಿಂದು ಹಸರಂಗ ಅವರ ಮೇಲೆ ಬಿಡ್ ಮಾಡುವ ಅವಕಾಶ ಇತ್ತು. ರಚಿನ್ ಕೇವಲ 1.80 ಕೋಟಿಗೆ ಸಿಎಸ್ಕೆ ಪಾಲಾದರೆ, ಹಸರಂಗ ಅವರನ್ನು 1.50 ಕೋಟಿಗೆ ಸನ್ರೈಸರ್ಸ್ ಖರೀದಿಸಿದೆ. ಆದರೆ ಇವರ ಮೇಲೆ ಬಿಡ್ ನಡೆಸಲೂ ಆರ್ಸಿಬಿ ಮುಂದಾಗಲಿಲ್ಲ.
ಅಷ್ಟೇ ಅಲ್ಲದೆ, 5 ಕೋಟಿಗೆ ಮುಂಬೈ ಸೇರಿದ ಗೆರಾಲ್ಡ್ ಕೊಯೆಟ್ಜಿಗೂ ಬಿಡ್ ನಡೆಸಲಿಲ್ಲ. ಇನ್ನೂ ಹಲವರ ಕಡೆ ಮುಖವೆತ್ತಿ ನೋಡಲೂ ಇಲ್ಲ. ಆರ್ಸಿಬಿ ವೆಸ್ಟ್ ಇಂಡೀಸ್ನ ಅಲ್ಜಾರಿ ಜೋಸೆಫ್ ಮತ್ತು ರಿಂಕು ಸಿಂಗ್ 5 ಸಿಕ್ಸರ್ ಹೊಡೆದಿದ್ದ ಯಶ್ ದಯಾಳ್ರನ್ನು ಖರೀದಿಸಿದೆ. ಜೋಸೆಫ್ಗೆ 11.50 ಕೋಟಿ ನೀಡಿದರೆ, ದಯಾಳ್ಗೆ 5 ಕೋಟಿ ಕೊಟ್ಟು ಖರೀದಿಸಿದೆ.