logo
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ ರಿಟೆನ್ಷನ್ ನಿಯಮ: ತಲೆಕೆಳಗಾದ ಆರ್‌​ಸಿಬಿ ಮಾಸ್ಟರ್ ಪ್ಲಾನ್, ಈಗ ಯಾರನ್ನೆಲ್ಲ ಉಳಿಸಿಕೊಳ್ಳುತ್ತೆ ಬೆಂಗಳೂರು?

ಐಪಿಎಲ್ ರಿಟೆನ್ಷನ್ ನಿಯಮ: ತಲೆಕೆಳಗಾದ ಆರ್‌​ಸಿಬಿ ಮಾಸ್ಟರ್ ಪ್ಲಾನ್, ಈಗ ಯಾರನ್ನೆಲ್ಲ ಉಳಿಸಿಕೊಳ್ಳುತ್ತೆ ಬೆಂಗಳೂರು?

Jayaraj HT Kannada

Sep 29, 2024 01:22 PM IST

google News

ಐಪಿಎಲ್ ರಿಟೆನ್ಷನ್ ನಿಯಮ: ತಲೆಕೆಳಗಾದ ಆರ್‌​ಸಿಬಿ ಮಾಸ್ಟರ್ ಪ್ಲಾನ್

    • ಐಪಿಎಲ್ ಮೆಗಾ ಹರಾಜಿನ ಧಾರಣ ನಿಯಮದ ಪ್ರಕಾರ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಬಹುದು. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯೋಜನೆಯನ್ನು ತಲೆಕೆಳಗಾಗಿಸಿದೆ. ಐಪಿಎಲ್‌ 2025ರ ಆವೃತ್ತಿಗೆ ಆರ್‌ಸಿಬಿ ಉಳಿಸಿಕೊಳ್ಳಬಹುದಾದ ಆಟಗಾರರ ಸಂಭಾವ್ಯ ಪಟ್ಟಿ ಇಲ್ಲಿದೆ.
ಐಪಿಎಲ್ ರಿಟೆನ್ಷನ್ ನಿಯಮ: ತಲೆಕೆಳಗಾದ ಆರ್‌​ಸಿಬಿ ಮಾಸ್ಟರ್ ಪ್ಲಾನ್
ಐಪಿಎಲ್ ರಿಟೆನ್ಷನ್ ನಿಯಮ: ತಲೆಕೆಳಗಾದ ಆರ್‌​ಸಿಬಿ ಮಾಸ್ಟರ್ ಪ್ಲಾನ್

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಐಪಿಎಲ್ 2025ರ ಮೆಗಾ ಹರಾಜಿಗೆ ಮತ್ತು ಮುಂದಿನ ಸೀಸನ್‌ಗೆ ಸಂಬಂಧಿಸಿದ ಪ್ರಮುಖ ನಿಯಮಗಳನ್ನು ಪ್ರಕಟಿಸಿದೆ. ಸೆಪ್ಟೆಂಬರ್ 28ರ ಶನಿವಾರ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯ ನಂತರ ಕೆಲ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ನಿರೀಕ್ಷೆಯಂತೆಯೇ ಈ ಬಾರಿ ಫ್ರಾಂಚೈಸಿಗಳ ಬೇಡಿಕೆ ಪರಿಗಣಿಸಿ ಧಾರಣ ನಿಯಮದ ಅಡಿಯಲ್ಲಿ 4ರಿಂದ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಜೊತೆಗೆ ಹರಾಜು ಪರ್ಸ್ ಕೂಡ ಏರಿಕೆಯಾಗಿದ್ದು, ಇದೇ ಮೊದಲ ಬಾರಿಗೆ ಪಂದ್ಯದ ಶುಲ್ಕ ಪಾವತಿಯೂ ಆರಂಭವಾಗಿದೆ.

ಐಪಿಎಲ್ ಮೆಗಾ ಹರಾಜಿನ ರಿಟೆನ್ಷನ್ ನಿಯಮದ ಪ್ರಕಾರ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಬಹುದು. ಇವರಲ್ಲಿ ಐದು ಆಟಗಾರರನ್ನು ನೇರವಾಗಿ ಆಯ್ಕೆ ಮಾಡಿದರೆ, ಓರ್ವನ ಮೇಲೆ ರೈಟ್ ಟು ಮ್ಯಾಚ್ (RTM) ಕಾರ್ಡ್ ಬಳಸಿಕೊಳ್ಳಬಹುದು. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯೋಜನೆಯನ್ನು ತಲೆಕೆಳಗಾಗಿಸಿದೆ. ಈ ನಿಯಮದ ಪ್ರಕಾರ, ಫ್ರಾಂಚೈಸಿಯು ಬೇಕಾದರೆ ಐವರು ಭಾರತೀಯರನ್ನು ಅಥವಾ ಐವರನ್ನು ವಿದೇಶಿ ಆಟಗಾರರನ್ನೂ ರಿಟೈನ್ ಮಾಡಿಕೊಳ್ಳಬಹುದು. ಅದಾಗ್ಯೂ ಅನ್‌​ಕ್ಯಾಪ್ಡ್ ಆಟಗಾರನನ್ನು ಉಳಿಸಿಕೊಳ್ಳಲು ಬಯಸಿದರೆ ಕೇವಲ ಇಬ್ಬರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದು.

ರಿಟೈನ್ ಮಾಡಿಕೊಂಡ ಮೊದಲ ಆಟಗಾರನಿಗೆ ಫ್ರಾಂಚೈಸಿ 18 ಕೋಟಿ, ಎರಡನೇ ಆಟಗಾರನಿಗೆ 14 ಕೋಟಿ, ಮೂರನೇ ಆಟಗಾರನಿಗೆ 11 ಕೋಟಿ, ನಾಲ್ಕನೇ ಆಟಗಾರನಿಗೆ 18 ಕೋಟಿ, ಐದನೇ ಆಟಗಾರನಿಗೆ 14 ಕೋಟಿ ರೂ. ನೀಡಬೇಕಾಗುತ್ತದೆ. 120 ಕೋಟಿ ರೂ. ಮೆಗಾ ಹರಾಜು ಮೊತ್ತದಲ್ಲಿ 75 ಕೋಟಿ ರೂ. ರಿಟೈನ್ ಮಾಡುವ ಆಟಗಾರರಿಗೆ ಕೊಡಬೇಕಾಗುತ್ತದೆ. ಉಳಿದಿರುವ 45 ಕೋಟಿಯಲ್ಲಿ 13ರಿಂದ 20 ಆಟಗಾರರನ್ನು ಖರೀದಿಸಬೇಕಾಗುತ್ತದೆ. ಮೊದಲೇ ಸ್ಟಾರ್ ಅನುಭವಿ ಆಟಗಾರರ ಕೊರತೆಯಲ್ಲಿರುವ ಆರ್‌​ಸಿಬಿಗೆ ಇದು ದೊಡ್ಡ ಹಿನ್ನಡೆ ಆಗಿದೆ.

ಜೊತೆಗೆ ಐದು ವರ್ಷಕ್ಕೂ ಹೆಚ್ಚು ಕಾಲ ಟೀಮ್ ಇಂಡಿಯಾ ಪರ ಆಡದ ಕ್ಯಾಪ್ಡ್ ಆಟಗಾರರನ್ನು ಅನ್‌ಕ್ಯಾಪ್ಡ್ ಎಂದು ಪರಿಗಣಿಸುವ ನಿಯಮ ಬಂದಿದ್ದರೂ ಇದರಿಂದ ಬೆಂಗಳೂರಿಗೆ ಯಾವುದೇ ಲಾಭವಿಲ್ಲ. ಇದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವ 6 ಆಟಗಾರರನ್ನು ಉಳಿಸಿಕೊಳ್ಳಬಹುದು ಅಥವಾ RTM ಕಾರ್ಡ್ ಮೂಲಕ ತಮ್ಮ ತಂಡದಲ್ಲಿ ಸೇರಿಸಿಕೊಳ್ಳಲು ಪ್ರಯತ್ನಿಸಬಹುದು ಎಂಬುದನ್ನು ನೋಡೋಣ.

ವಿರಾಟ್ ಕೊಹ್ಲಿ

ಟೀಮ್ ಇಂಡಿಯಾ ಮತ್ತು ಆರ್‌ಸಿಬಿಯ ಮಾಜಿ ನಾಯಕನನ್ನು ಆರ್‌ಸಿಬಿ ತಂಡ ಉಳಿಸಿಕೊಳ್ಳುವುದು ಖಚಿತ. ದಾಖಲೆಯ 18ನೇ ಬಾರಿಗೆ ಬೆಂಗಳೂರು ಜೆರ್ಸಿ ಧರಿಸಿ ಐಪಿಎಲ್‌ನಲ್ಲಿ ಮೊದಲ ಪ್ರಶಸ್ತಿ ಗೆಲ್ಲುವ ಕನಸನ್ನು ನನಸಾಗಿಸಲು ವಿರಾಟ್ ಕೊಹ್ಲಿ ಈ ಬಾರಿ ಕೂಡ ಶ್ರಮಿಸಲಿದ್ದಾರೆ.

ರಜತ್ ಪಾಟೀದಾರ್

ರಜತ್ ಪಾಟಿದಾರ್ ಆರ್‌ಸಿಬಿ ಉಳಿಸಿಕೊಳ್ಳುವ ಎರಡನೇ ಆಟಗಾರನಾಗಲಿದ್ದಾರೆ. ಕಳೆದ ಋತುವಿನ ದ್ವಿತಿಯಾರ್ಧದಲ್ಲಿ ಪಾಟೀದಾರ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು. ವಿರಾಟ್ ನಂತರ ಮಧ್ಯಮ ಕ್ರಮಾಂಕದಲ್ಲಿ ಅವರ ಸ್ಫೋಟಕ ಬ್ಯಾಟಿಂಗ್ ತಂಡವನ್ನು ಪ್ಲೇ ಆಫ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಫಾಫ್ ಡುಪ್ಲೆಸಿಸ್

ಆರ್​ಸಿಬಿ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ನಾಯಕನ ಬಗ್ಗೆ. ಆರ್‌ಸಿಬಿ ವ್ಯಾಪಾರದ ಮೂಲಕ ತಂಡಕ್ಕೆ ಯಾವುದೇ ದೊಡ್ಡ ಆಟಗಾರನನ್ನು ಸೇರಿಸದಿದ್ದರೆ, ಮತ್ತೊಮ್ಮೆ ತಂಡವು ಫಾಫ್ ನಾಯಕತ್ವದಲ್ಲಿ ಲೀಗ್‌ನಲ್ಲಿ ಆಡುವುದನ್ನು ಕಾಣಬಹುದು. ಒಂದು ವೇಳೆ ಫಾಫ್‌ ಅವರನ್ನು ತಂಡ ಕೈಬಿಡುವ ಯೋಚನೆ ಮಾಡಿದರೆ ಕ್ಯಾಮರೂನ್‌ ಗ್ರೀನ್‌ ತಂಡದ ನಂತರ ಆಯ್ಕೆಯಾಗಬಹುದು.

ಮೊಹಮ್ಮದ್ ಸಿರಾಜ್

ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಉಳಿಸಿಕೊಳ್ಳಲು ಆರ್‌ಸಿಬಿ ತಂಡ ನಿರ್ಧರಿಸಬಹುದು. ತಂಡದ ವೇಗದ ಬೌಲಿಂಗ್‌ಗೆ ಬಲ ತುಂಬಬಲ್ಲ ವೇಗಿ ಇವರೊಬ್ಬರೆ.

ವಿಲ್ ಜಾಕ್ಸ್- ಗ್ಲೆನ್ ಮ್ಯಾಕ್ಸ್‌​ವೆಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಯುವ ಇಂಗ್ಲೆಂಡ್ ಬ್ಯಾಟ್ಸ್‌ಮನ್ ವಿಲ್ ಜಾಕ್ಸ್ ಅವರನ್ನು ತಮ್ಮ ಆರ್‌ಟಿಎಂ ಕಾರ್ಡ್ ಬಳಸಿ ತಂಡ ಸೇರಿಸಿಕೊಳ್ಳುವ ಉದ್ದೇಶದಿಂದ ಮೊದಲು ಬಿಡುಗಡೆ ಮಾಡಿ ಆ ಬಳಿಕ ಹರಾಜಿನಲ್ಲಿ ತಮ್ಮ ತಂಡಕ್ಕೆ ಸೇರಿಸಬಹುದು. ಇಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕೂಡಾ ಸ್ಪರ್ಧೆಯಲ್ಲಿದ್ದಾರೆ. ಕಳೆದ ಆವೃತ್ತಿಯುದ್ದಕ್ಕೂ ಕಳಪೆ ಪ್ರದರ್ಶನ ನೀಡಿ ಅಭಿಮಾನಿಗಳ ಕೆಳಗಣ್ಣಿಗೆ ಗುರಿಯಾಗಿದ್ದ ಆಟಗಾರನನ್ನು ತಂಡ ಕೈಬಿಟ್ಟರೂ ಅಚ್ಚರಿಯಿಲ್ಲ. ಹೀಗಾಗಿ ಮ್ಯಾಕ್ಸಿಗಿಂತ ಜಾಕ್ಸ್‌ ಮೇಲೆ ಫ್ರಾಂಚೈಸ್‌ ಗಮನ ಹರಿಸಲಿದೆ.

ಯಶ್ ದಯಾಳ್

ಆರ್‌​ಸಿಬಿ ಹರಾಜಿಗೂ ಮುನ್ನ ಎಡಗೈ ವೇಗದ ಬೌಲರ್ ಯಶ್ ದಯಾಳ್ ಅವರನ್ನು ಉಳಿಸಿಕೊಳ್ಳಬಹುದು. ಕಳೆದ ಒಂದು ವರ್ಷದಿಂದ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ದಯಾಳ್ ಟೀಮ್ ಇಂಡಿಯಾ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಶ್ ಅವರನ್ನು ಅನ್‌ಕ್ಯಾಪ್ಡ್ ಆಟಗಾರನಾಗಿ ಉಳಿಸಿಕೊಳ್ಳಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ