logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್ ಲಯನ್ಸ್ ವಿರುದ್ಧ ಸತತ ಶತಕ ಸಿಡಿಸಿ ಮಿಂಚಿದ 30 ವರ್ಷದ ಆರ್​ಸಿಬಿ ಸ್ಟಾರ್ ಬ್ಯಾಟರ್​

ಇಂಗ್ಲೆಂಡ್ ಲಯನ್ಸ್ ವಿರುದ್ಧ ಸತತ ಶತಕ ಸಿಡಿಸಿ ಮಿಂಚಿದ 30 ವರ್ಷದ ಆರ್​ಸಿಬಿ ಸ್ಟಾರ್ ಬ್ಯಾಟರ್​

Prasanna Kumar P N HT Kannada

Jan 19, 2024 02:22 PM IST

google News

ರಜತ್ ಪಾಟೀದಾರ್.

    • RCB Star Rajat Patidar: ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆಯುತ್ತಿರುವ ನಾಲ್ಕು ದಿನಗಳ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡದ ರಜತ್ ಪಾಟೀದಾರ್​ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ.
ರಜತ್ ಪಾಟೀದಾರ್.
ರಜತ್ ಪಾಟೀದಾರ್.

ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಅಫ್ಘಾನಿಸ್ತಾನ ತಂಡವನ್ನು ಸೋಲಿಸಿದ ನಂತರ ಭಾರತ, ಇಂಗ್ಲೆಂಡ್​ ವಿರುದ್ಧದ ಐದು (India vs England Test Series) ಪಂದ್ಯಗಳ ಟೆಸ್ಟ್​ ಸರಣಿಗೆ ಸಜ್ಜಾಗುತ್ತಿದೆ. ವಿಶ್ವ ದರ್ಜೆಯ ಎರಡು ಅಗ್ರ ತಂಡಗಳ ನಡುವೆ ಕೆಂಪು ಚೆಂಡಿನ ಯುದ್ಧ ಜನವರಿ 25ರಿಂದ ಆರಂಭವಾಗಲಿದೆ. ಈ ಸಮರಕ್ಕೂ ಮುನ್ನ ಪ್ರಾರಂಭವಾದ ಎರಡು ದೇಶಗಳ ಎ ತಂಡಗಳು 3 ಪಂದ್ಯಗಳ ಅನಧಿಕೃತ ಸರಣಿಯಲ್ಲಿ ತೊಡಗಿಕೊಂಡಿವೆ.

ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವಿನ ಮೊದಲ ಅನಧಿಕೃತ ಟೆಸ್ಟ್ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಅಂತ್ಯದಲ್ಲಿ ಪ್ರವಾಸಿಗರು ಅಬ್ಬರಿಸಿ ಬೃಹತ್ ಮೊತ್ತ ಪೇರಿಸಿದ್ದಾರೆ. ಆದರೆ ಭಾರತ ಎ ತಂಡ ತೀವ್ರ ವೈಫಲ್ಯ ಅನುಭವಿಸಿದ್ದು, ಕಡಿಮೆ ಮೊತ್ತಕ್ಕೆ ಕುಸಿತ ಕಂಡಿದೆ. ಇಂಗ್ಲೆಂಡ್ ಲಯನ್ಸ್ ಬೃಹತ್ ಮುನ್ನಡೆ ಪಡೆದಿದ್ದು, ದೊಡ್ಡ ಗುರಿ ನೀಡುವ ಲೆಕ್ಕಾಚಾರದಲ್ಲಿದೆ.

ಭಾರತದ ವೈಫಲ್ಯದ ನಡುವೆಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಶತಕ ಸಿಡಿಸಿ ಮಿಂಚಿದ್ದಾರೆ. 30 ವರ್ಷದ ಬಲಗೈ ಬ್ಯಾಟರ್ ರಜತ್ ಪಾಟೀದಾರ್​ ಸೆಂಚುರಿ ಸಿಡಿಸದೇ ಇದ್ದಿದ್ದರೆ ಭಾರತ ಎ ತಂಡದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿತ್ತು. 2023ರ ಡಿಸೆಂಬರ್ 21ರಂದು ದಕ್ಷಿಣ ಆಫ್ರಿಕಾ ವಿರುದ್ಧ ಪರ್ಲ್‌ನಲ್ಲಿ ಭಾರತದ ಪರ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು.

ಸ್ಫೋಟಕ 140 ರನ್ ಚಚ್ಚಿದ ಪಾಟೀದಾರ್

ಭಾರತ ಎ ತಂಡವು 23 ಓವರ್​​ಗಳಲ್ಲಿ 95 ರನ್​​​ಗಳಿಗೆ 7 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಸಂಕಷ್ಟದಲ್ಲೂ ಬೆಂಕಿ ಬಿರುಗಾಳಿ ಬ್ಯಾಟಿಂಗ್ ನಡೆಸಿದ ಕಾರಣ 2ನೇ ದಿನದಾಟದ ಅಂತ್ಯಕ್ಕೆ ಆರ್‌ಸಿಬಿ ಬ್ಯಾಟ್ಸ್‌ಮನ್ ರಜತ್ ಪಾಟೀದಾರ್, 132 ಎಸೆತಗಳಲ್ಲಿ 140 ರನ್ ಗಳಿಸಿ ತಂಡವನ್ನು ಸುಸ್ಥಿತಿಗೆ ತಂದರು. ಅವರ ಇನ್ನಿಂಗ್ಸ್​ನಲ್ಲಿ 18 ಬೌಂಡರಿ ಮತ್ತು 5 ಸಿಕ್ಸರ್​​​ಗಳು ಒಳಗೊಂಡಿವೆ.

ಜನವರಿ 17ರಂದು ಗುರುವಾರ ಇಂಗ್ಲೆಂಡ್ ಲಯನ್ಸ್ ವಿರುದ್ಧ ಅವರ ಎರಡನೇ ಬ್ಯಾಕ್ ಟು ಬ್ಯಾಕ್ ಶತಕವಾಗಿದೆ. ಕಳೆದ ವಾರ ನಡೆದ ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ಪಾಟೀದಾರ್ 141 ಎಸೆತಗಳಲ್ಲಿ 111 ರನ್ ಗಳಿಸುವ ಮೂಲಕ ಭಾರತದ ಪರ ಗರಿಷ್ಠ ಸ್ಕೋರ್ ಗಳಿಸಿದರು. ಈಗಾಗಲೇ ಇಂಗ್ಲೆಂಡ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ತಂಡ ಪ್ರಕಟವಾಗಿದ್ದು, ಉಳಿದ 3 ಪಂದ್ಯಗಳಿಗೆ ಆಯ್ಕೆ ನಿರೀಕ್ಷೆಯಲ್ಲಿದ್ದಾರೆ.

ಸರ್ಫರಾಜ್ ನಿರಾಸೆ

ಜನವರಿ 12ರಂದು ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ 16 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಕೊನೆಯ 3 ಪಂದ್ಯಗಳಿಗೆ ತಂಡವನ್ನು ನಂತರ ಪ್ರಕಟಿಸಲಾಗುವುದು. ಪಾಟೀದಾರ್ ಹೊರತುಪಡಿಸಿ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ಯಾವುದೇ ಭಾರತ ಎ ಬ್ಯಾಟರ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ 96 ರನ್‌ ಗಳಿಸಿದ್ದ ಸರ್ಫರಾಜ್ ಖಾನ್‌ ಮೇಲೆ ಹೆಚ್ಚಿನ ಭರವಸೆ ಇತ್ತು.

ಆದರೆ ನಾಲ್ಕು ದಿನಗಳ ಅನಧಿಕೃತ ಟೆಸ್ಟ್​ನಲ್ಲಿ ಸರ್ಫರಾಜ್​ ಕೇವಲ 4 ರನ್ ಗಳಿಸಲಷ್ಟೇ ಸಾಧ್ಯವಾಯಿತು. ನಾಯಕ ಅಭಿಮನ್ಯು ಈಶ್ವರನ್ ಕೂಡ 4 ರನ್ ಗಳಿಸಿ ಔಟಾದರೆ, ವಿಕೆಟ್ ಕೀಪರ್-ಬ್ಯಾಟರ್ ಕೆಎಸ್ ಭರತ್ 15 ರನ್ ಕೊಡುಗೆ ನೀಡಿದರು. ಮೂವರು ಬ್ಯಾಟರ್‌ಗಳಾದ ಸಾಯಿ ಸುದರ್ಶನ್, ಪ್ರದೋಶ್ ಪಾಲ್ ಮತ್ತು ಮಾನವ್ ಸುತಾರ್ 2ನೇ ದಿನದಂದು ತಮ್ಮ ಖಾತೆಯನ್ನು ತೆರೆಯಲು ವಿಫಲರಾದರು.

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ