42 ಎಸೆತಗಳಲ್ಲಿ ಶತಕ, 9 ಸಿಕ್ಸರ್; ಸೌತ್ ಆಫ್ರಿಕಾ ಲೀಗ್‌ನಲ್ಲಿ ಆರ್‌ಸಿಬಿ ಆಟಗಾರ ಸ್ಫೋಟಕ ಬ್ಯಾಟಿಂಗ್
Jan 19, 2024 08:12 PM IST
ವಿಲ್ ಜಾಕ್ಸ್
- Will Jacks: ವಿಲ್ ಜ್ಯಾಕ್ಸ್ ಕೇವಲ 41 ಎಸೆತಗಳಲ್ಲಿ ಶತಕ ಸಿಡಿಸಿದರು. 240.48ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ 8 ಬೌಂಡರಿ ಮತ್ತು 9 ಬೃಹತ್ ಸಿಕ್ಸರ್ ಸಹಿತ 101 ರನ್ ಗಳಿಸಿದರು.
ಐಪಿಎಲ್‌ನಂತೆಯೇ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಫ್ರಾಂಚೈಸ್ ಆಧರಿತ ಟಿ20 ಲೀಗ್ SA20ಯಲ್ಲಿ (SA20 2024) ವಿವಿಧ ದೇಶಗಳ ಕ್ರಿಕೆಟಿಗರು ಅಬ್ಬರಿಸುತ್ತಿದ್ದಾರೆ. ಲೀಗ್‌ನ ಎರಡನೇ ಋತುವಿನಲ್ಲಿ ಹಲವು ಕ್ರಿಕೆಟಿಗರು ಅಬ್ಬರಿಸುತ್ತಿದ್ದಾರೆ. ಈ ನಡುವೆ ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲಿರುವ ಇಂಗ್ಲೆಂಡ್ ತಂಡದ ಬಲಿಷ್ಠ ಬ್ಯಾಟರ್ ವಿಲ್ ಜಾಕ್ಸ್ (Will Jacks) ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ.
ಡರ್ಬನ್ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಜ್ಯಾಕ್ಸ್ ಸ್ಫೋಟಕ ಶತಕ ಸಿಡಿಸಿದ್ದಾರೆ. ಅವರ ಶತಕದ ನೆರವಿಂದ ಕ್ಯಾಪಿಟಲ್ಸ್ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದೆ. ಇಂಗ್ಲೆಂಡ್ ಆಟಗಾರನ ಅಮೋಘ ಪ್ರದರ್ಶನದಿಂದ ಆರ್‌ಸಿಬಿ ಫ್ರಾಂಚೈಸಿ ಹಾಗೂ ಅಭಿಮಾನಿಗಳು ಖುಷಿಯಾಗಿದ್ದಾರೆ.
ಇದನ್ನೂ ಓದಿ | ಪಾಕಿಸ್ತಾನ ವಿರುದ್ಧದ ನಾಲ್ಕನೇ ಟಿ20ಯಲ್ಲೂ ಕಿವೀಸ್ ಜಯಭೇರಿ; ಅಫ್ರಿದಿ ಪಡೆಗೆ ವೈಟ್‌ವಾಶ್ ಭೀತಿ
ತಮ್ಮದೇ ದೇಶದ ಸಹ ಆಟಗಾರ ಫಿಲ್ ಸಾಲ್ಟ್ ಜೊತೆಗೆ ಕ್ಯಾಪಿಟಲ್ಸ್ ಪರ ಇನ್ನಿಂಗ್ಸ್ ಆರಂಭಿಸಿದ ವಿಲ್ ಜ್ಯಾಕ್ಸ್, ಆರಂಭದಿಂದಲೇ ಅಬ್ಬರಿಸಿದರು. ಮೊದಲ ವಿಕಕೆಟ್‌ಗೆ ಇವರಿಬ್ಬರು 75 ರನ್‌ಗಳ ಜೊತೆಯಾಟವಾಡಿದರು. ಸಾಲ್ಟ್ ಅಲ್ಪ ಮೊತ್ತಕ್ಕೆ ಔಟಾದರೂ, ಜ್ಯಾಕ್ಸ್ ಬೃಹತ್ ಶತಕ ಸಿಡಿಸಿದರು. ಕೇವಲ 41 ಎಸೆತಗಳಲ್ಲಿ ಮೂರಂಕಿ ತಲುಪಿದರು. ಅಂತಿಮವಾಗಿ 42 ಎಸೆತಗಳಲ್ಲಿ 8 ಬೌಂಡರಿ ಮತ್ತು 9 ಬೃಹತ್ ಸಿಕ್ಸರ್‌ಗಳ ನೆರವಿಂದ ಜ್ಯಾಕ್ಸ್ 101 ರನ್ ಗಳಿಸಿದರು. 240.48ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದರು.
ಇದು SA20ಯಲ್ಲಿ ಜಾಕ್ಸ್ ಅವರ ಮೊದಲ ಶತಕವಾಗಿದೆ. ಟಿ20 ವೃತ್ತಿಜೀವನದಲ್ಲಿ ಅವರ ಎರಡನೇ ಶತಕವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಐಪಿಎಲ್ 2023ರ ಹರಾಜಿನಲ್ಲಿ ಇಂಗ್ಲೆಂಡ್ ಆಟಗಾರನನ್ನು 3.20 ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು. ಅವರ ಮೂಲ ಬೆಲೆ 1.5 ಕೋಟಿ ರೂಪಾಯಿ. ಆದರೆ, ಗಾಯದಿಂದಾಗಿ ಅವರು ಐಪಿಎಲ್ 2023ರ ಋತುವಿನಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸಂಪೂರ್ಣ ಪಂದ್ಯಾವಳಿ ಮಿಸ್ ಮಾಡಿಕೊಂಡಿದ್ದರು.
2024ರ ಐಪಿಎಲ್‌ಗೆ ಆರ್‌ಸಿಬಿ ತಂಡ ಹೀಗಿದೆ
ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ಡಾಗರ್, ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೂನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾನ್.
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ.
ಇಮೇಲ್: ht.kannada@htdigital.in