ಬೆಂಗಳೂರಿನಲ್ಲಿ ನಿಲ್ಲದ ಮಳೆ; ಆರ್‌ಸಿಬಿ vs ಕೆಕೆಆರ್ ಐಪಿಎಲ್ ಪಂದ್ಯ ರದ್ದು, ಹಾಲಿ ಚಾಂಪಿಯನ್ ಟೂರ್ನಿಯಿಂದ ಔಟ್
Published May 17, 2025 10:43 PM IST
ಆರ್‌ಸಿಬಿ vs ಕೆಕೆಆರ್ ಐಪಿಎಲ್ ಪಂದ್ಯ ರದ್ದು, ಹಾಲಿ ಚಾಂಪಿಯನ್ ಟೂರ್ನಿಯಿಂದ ಔಟ್
- ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದ ಹಿನ್ನೆಲೆಯಲ್ಲಿ ಕೆಕೆಆರ್ ಅಭಿಯಾನ ಅಂತ್ಯವಾಗಿದೆ. ಆರ್‌ಸಿಬಿ ಪ್ಲೇಆಫ್ ಹಂತಕ್ಕೆ ಹತ್ತಿರವಾಗಿದೆ.
ಬೆಂಗಳೂರು: ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ನಡೆಯಬೇಕಿದ್ದ ಐಪಿಎಲ್ ಪಂದ್ಯವು, ಮಳೆಯಿಂದಾಗಿ ರದ್ದಾಗಿದೆ. ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಸುರಿದ ಕಾರಣದಿಂದಾಗಿ, ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಪಂದ್ಯವು ಕನಿಷ್ಠ ಟಾಸ್ ಪ್ರಕ್ರಿಯೆ ಕೂಡಾ ನಡೆಸಲಾಗದೆ ರದ್ದಾಗಿದೆ. ಇದರೊಂದಿಗೆ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದೆ. ಅತ್ತ ಆರ್‌ಸಿಬಿ ತಂಡ 1 ಅಂಕ ಪಡೆದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಲಗ್ಗೆ ಹಾಕಿದೆ. ಇದರೊಂದಿಗೆ ಪ್ಲೇ ಆಫ್ ಹಂತದಿಂದ ಕೇವಲ ಒಂದು ಹೆಜ್ಜೆಯಷ್ಟೇ ಹಿಂದಿದೆ.
ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು. ಆದರೆ, ಪಂದ್ಯದ ಟಾಸ್ ಆರಂಭಕ್ಕಿಂತ ಮುಂಚೆಯೇ ಮಳೆ ಶುರುವಾಗಿತ್ತು. ಮಧ್ಯದಲ್ಲಿ ಒಮ್ಮೆ ಬಿಡುವು ಪಡೆದಾಗ ಪಂದ್ಯ ಆರಂಭಕ್ಕೆ ಸಿದ್ಧತೆ ನಡೆಯಿತು. ಆದರೆ ಮತ್ತೆ ಶುರುವಾದ ಮಳೆ ನಿಲ್ಲಲೇ ಇಲ್ಲ. ಹೀಗಾಗಿ ಅಧಿಕೃತವಾಗಿ ಮೊಟಕುಗೊಳಿಸಲಾಯ್ತು.
ಕೆಕೆಆರ್ ತಂಡಕ್ಕೆ ಈ ಪಂದ್ಯವು ಮಾಡು ಇಲ್ಲವೇ ಮಡಿ ಎಂಬಂತಾಗಿತ್ತು. ಒಂದು ವೇಳೆ ಪಂದ್ಯದಲ್ಲಿ ಗೆದ್ದಿದ್ದರೆ, ಪ್ಲೇಆಫ್‌ಗೆ ಅವಕಾಶ ಪಡೆಯುವ ಸಾಧ್ಯತೆ ಇತ್ತು. ಆದರೆ, ಮಳೆ ಅದಕ್ಕೆ ಅವಕಾಶ ನೀಡಲಿಲ್ಲ. ಪಂದ್ಯ ರದ್ದಾದ ಕಾರಣದಿಂದ ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯ್ತು. ಹೀಗಾಗಿ ಕೆಕೆಆರ್ ತಂಡ ಆಡಿದ 13 ಪಂದ್ಯಗಳಿಂದ 12 ಅಂಕ ಮಾತ್ರ ಸಂಪಾದಿಸಿದೆ. ತಂಡವು ಮುಂದೆ ಎರಡು ಪಂದ್ಯಗಳಲ್ಲಿ ಆಡಲಿದೆ. ಆದರಲ್ಲಿ ಗೆದ್ದರೂ ಪ್ಲೇ ಆಫ್ ಪ್ರವೇಶ ಸಾಧ್ಯವಿಲ್ಲ.
ಪ್ಲೇಆಫ್‌ಗೆ ಮತ್ತಷ್ಟು ಹತ್ತಿರವಾದ ಆರ್‌ಸಿಬಿ
ಪಂದ್ಯ ರದ್ದಾದರೂ, ಆರ್‌ಸಿಬಿ ತಂಡಕ್ಕೆ ದೊಡ್ಡ ನಷ್ಟವಿಲ್ಲ. ಒಂದು ವೇಳೆ ಪಂದ್ಯ ನಡೆದು ಆರ್‌ಸಿಬಿ ಗೆದ್ದಿದ್ದರೆ, ನೇರವಾಗಿ ಪ್ಲೇಆಫ್ ಪ್ರವೇಶ ಸಾಧ್ಯವಿತ್ತು, ಆದರೆ, ಒಂದು ಅಂಕ ಲಭಿಸಿದ್ದರಿಂದ ಸದ್ಯ ಅಗ್ರಸ್ಥಾನ ಪಡೆದಿದೆ. ಆರ್‌ಸಿಬಿ ತಂಡ ಪ್ಲೇಆಫ್ ಪ್ರವೇಶ ಖಚಿತಪಡಿಸಿಕೊಳ್ಳಲು ಇನ್ನೊಂದು ಪಂದ್ಯ ಗೆಲ್ಲಬೇಕು. ಅಥವಾ ಇನ್ನೊಂದು ಪಂದ್ಯ ರದ್ದಾಗಬೇಕು.
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ಇದು ಅವರ ಮೊದಲ ಪಂದ್ಯವಾಗಿತ್ತು. ಹೀಗಾಗಿ ಅಭಿಮಾನಿಗಳು ವಿರಾಟ್‌ಗೆ ಗೌರವಾರ್ಥವಾಗಿ ಬಿಳಿ ಜೆರ್ಸಿ ಧರಿಸಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಪಂದ್ಯ ರದ್ದಾದ ಕಾರಣದಿಂದ ಅಭಿಮಾನಿಗಳಿಗೆ ಭಾರಿ ನಿರಾಶೆಯಾಗಿದೆ.