ಮತ್ತೆ ಐಪಿಎಲ್ ಸಮರ ಶುರು, ಪ್ಲೇಆಫ್ಗೆ ಪ್ರವೇಶಿಸಲು ಆರ್ಸಿಬಿ ತವಕ; ಕೆಕೆಆರ್ಗೆ ಮಾಡು ಇಲ್ಲವೇ ಮಡಿ ಪಂದ್ಯ
Published May 16, 2025 04:07 PM IST
ಮತ್ತೆ ಐಪಿಎಲ್ ಸಮರ ಶುರು, ಪ್ಲೇಆಫ್ಗೆ ಪ್ರವೇಶಿಸಲು ಆರ್ಸಿಬಿ ತವಕ; ಕೆಕೆಆರ್ಗೆ ಮಾಡು ಇಲ್ಲವೇ ಮಡಿ ಪಂದ್ಯ
- ಇಂಡಿಯನ್ ಪ್ರೀಮಿಯರ್ ಲೀಗ್ 58ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಮಹತ್ವದ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಭಾರತ-ಪಾಕಿಸ್ತಾನ ಯುದ್ಧದ ಕಾರಣ ತಾತ್ಕಾಲಿಕ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತೆ ಸಮರ ಆರಂಭಿಸಲಿದೆ. ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸೆಣಸಾಟ ನಡೆಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳಿಂದಲೇ ಶ್ರೀಮಂತ ಲೀಗ್ ಮರು ಆರಂಭವಾಗಲಿದೆ. ಮೇ 17ರ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ ಪ್ಲೇಆಫ್ ಪ್ರವೇಶಿಸಲಿದೆ. ಮತ್ತೊಂದೆಡೆ ಕೆಕೆಆರ್ಗೂ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಸೋತರೆ ಪ್ಲೇಆಫ್ ರೇಸ್ನಿಂದ ಅಧಿಕೃತವಾಗಿ ಹೊರಬೀಳಲಿದೆ.
ಮೇ 22ರಂದು ನಡೆದಿದ್ದ ಆರಂಭಿಕ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಆರ್ಸಿಬಿ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತ್ತು. ಅದರ ಸೇಡಿಗೆ ಕೋಲ್ಕತ್ತಾ ಸಜ್ಜಾಗಿದ್ದರೆ, ಬೆಂಗಳೂರು ತವರು ಅಭಿಮಾನಿಗಳ ಮುಂದೆ ಘರ್ಜಿಸಲು ಸಿದ್ಧಗೊಂಡಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಆರ್ಸಿಬಿ 11 ಪಂದ್ಯಗಳಲ್ಲಿ 8 ಗೆಲುವು, 3 ಸೋಲಿನೊಂದಿಗೆ 16 ಅಂಕ ಪಡೆದು 2ನೇ ಸ್ಥಾನದಲ್ಲಿದೆ. ಕೋಲ್ಕತ್ತಾ 12 ಪಂದ್ಯಗಳಲ್ಲಿ 5 ಗೆಲುವು, 6 ಸೋಲು, 1 ಪಂದ್ಯ ರದ್ದಾಗುವುದರೊಂದಿಗೆ 11 ಅಂಕ ಪಡೆದಿದ್ದು, 6ನೇ ಸ್ಥಾನ ಪಡೆದಿದೆ. 2024ರಲ್ಲಿ ಚಾಂಪಿಯನ್ ಆಗಿದ್ದ ನೈಟ್ ರೈಡರ್ಸ್ ಇದೀಗ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ.
ಹವಾಮಾನ ಮತ್ತು ಪಿಚ್
ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ರಾತ್ರಿಯಾದರೆ ಸಾಕು ಮಳೆಯ ಆಗಮನ ಶುರುವಾಗುತ್ತದೆ. ಹೀಗಾಗಿ ಸಂಜೆ 7.30ಕ್ಕೆ ಆರಂಭವಾಗುವ ಪಂದ್ಯಕ್ಕೂ ವರುಣ ಅಡ್ಡಿಯಾಗಬಹುದು ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ. ಎಷ್ಟೇ ಮಳೆ ಬಂದರೂ ಮಳೆ ನಿಂತ ಕೆಲವೇ ನಿಮಿಷಗಳಲ್ಲಿ ಪಂದ್ಯ ಆರಂಭಿಸುವ ವಿಶೇಷ ತಂತ್ರಜ್ಞಾನ ಬೆಂಗಳೂರು ಮೈದಾನದಲ್ಲಿದೆ. ಅದುವೇ ಸಬ್ ಏರ್ ಡ್ರೈನೇಜ್ ಸಿಸ್ಟಂ. ಇದು ಒಣಗಿಸುವ ಪ್ರಕ್ರಿಯೆ ವೇಗಗೊಳಿಸುತ್ತದೆ. ಇನ್ನು ಈ ಐಪಿಎಲ್ನಲ್ಲಿ ಚಿನ್ನಸ್ವಾಮಿಯಲ್ಲಿ ಆಡಿರುವ ಐದು ಪಂದ್ಯಗಳಲ್ಲಿ 3ರಲ್ಲಿ ಸೋಲು, 2 ಗೆಲುವು ಸಾಧಿಸಿದೆ. ಇಲ್ಲಿ ಆರ್ಸಿಬಿ ಐದು ಮ್ಯಾಚ್ಗಳಲ್ಲೂ ಮೊದಲು ಬ್ಯಾಟಿಂಗ್ ಮಾಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ಗೆ ನೆರವಾಗುವ ಈ ಪಿಚ್ನಲ್ಲಿ ಸಮಾನಾಂತರ ಪೈಪೋಟಿ ಇರಲಿದೆ.
ಕೊಹ್ಲಿ ಟೆಸ್ಟ್ ನಿವೃತ್ತಿಯ ಬಳಿಕ ಮೊದಲ ಪಂದ್ಯ
ವಿರಾಟ್ ಕೊಹ್ಲಿ ಮೇ 12ರಂದು ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಿಸಿದರು. ಇದೀಗ ಅವರು ನಿವೃತ್ತಿ ಘೋಷಿಸಿದ ಬಳಿಕ ಇದೇ ಮೊದಲ ಪಂದ್ಯವನ್ನಾಡಲಿದ್ದಾರೆ. ರೆಡ್ ಹಾಟ್ ಫಾರ್ಮ್ನಲ್ಲಿರುವ ಕೊಹ್ಲಿ ಆರೆಂಜ್ ಕ್ಯಾಪ್ ಗೆಲ್ಲುವ ರೇಸ್ನಲ್ಲಿದ್ದಾರೆ. ಆಡಿರುವ 11 ಪಂದ್ಯಗಳಲ್ಲಿ 63.13ರ ಬ್ಯಾಟಿಂಗ್ ಸರಾಸರಿಯಲ್ಲಿ 505 ರನ್ ಗಳಿಸಿ ಪ್ರಸಕ್ತ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಅವರು ಈಗಾಗಲೇ 7 ಅರ್ಧಶತಕ ಬಾರಿಸಿದ್ದಾರೆ.
ಯಾರ ಪ್ರದರ್ಶನ ಹೇಗಿದೆ?
ಆರ್ಸಿಬಿ ತಂಡದಲ್ಲಿ ಎಲ್ಲಾ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಈ ಚೊಚ್ಚಲ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದೆ. ಆರಂಭಿಕರಾಗಿ ಫಿಲ್ ಮೊದಲಿಗೆ ಮಿಂಚಿದ್ದರೂ ಕೊನೆಯ ಕೆಲವು ಪಂದ್ಯಗಳಲ್ಲಿ ನಿರಾಸೆ ಮೂಡಿಸಿದರು. ಹೀಗಾಗಿ ಅವರ ಬದಲಿಗೆ ಜೇಕಬ್ ಬೆಥೆಲ್ ಕಣಕ್ಕಿಳಿದು ಅಬ್ಬರಿಸಿದ್ದರು. ಹೀಗಾಗಿ ಈ ಇಬ್ಬರಲ್ಲಿ ಬೆಥೆಲ್ ತಮ್ಮ ಸ್ಥಾನ ಉಳಿಸಿಕೊಳ್ಳಬಹುದು ಎಂದೇ ಹೇಳಬಹುದು. ಇನ್ನು ದೇವದತ್ ಪಡಿಕ್ಕಲ್ ಬದಲಿಗೆ ಸ್ಥಾನ ಗಿಟ್ಟಿಸಿಕೊಂಡಿರುವ ಮಯಾಂಕ್ 3ನೇ ಕ್ರಮಾಂಕದಲ್ಲಿ ಆಡಬಹುದು. ರಜತ್ ಪಾಟೀದಾರ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ ಎಲ್ಲರೂ ಅದ್ಭುತ ಪ್ರದರ್ಶನ ನೀಡುತ್ತಿದ್ದು, ತಮ್ಮ ತಮ್ಮ ಸ್ಥಾನಗಳಲ್ಲಿ ಎಂದಿನಂತೆ ಕಣಕ್ಕಿಳಿಯಲಿದ್ದಾರೆ. ಬೌಲಿಂಗ್ನಲ್ಲೂ ಯಾವುದೇ ಬದಲಾವಣೆ ಇಲ್ಲ. ಜೋಶ್ ಹೇಜಲ್ವುಡ್ ರಿಕವರ್ ಆಗಿದ್ದರೆ ಲುಂಗಿ ಎನ್ಗಿಡಿ ಅವರ ಸ್ಥಾನ ತುಂಬಬಹುದು.
ಹೆಡ್ ಟು ಹೆಡ್ ರೆಕಾರ್ಡ್ಸ್
ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು 35 ಬಾರಿಗೆ ಮುಖಾಮುಖಿಯಾಗಿವೆ. ಆದರೆ ಕೆಕೆಆರ್ ಹೆಚ್ಚು ಮೇಲುಗೈ ಸಾಧಿಸಿದೆ. ಆರ್ಸಿಬಿ 15 ಗೆಲುವು ಸಾಧಿಸಿದ್ದರೆ, ಕೆಕೆಆರ್ 20 ಜಯ ಸಾಧಿಸಿದೆ. ಕಳೆದ ಐದು ಪಂದ್ಯಗಳಲ್ಲಿ ಕೆಕೆಆರ್ 4 ಜಯ ಸಾಧಿಸಿದೆ.
ಸಂಭಾವ್ಯ ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಜೇಕಬ್ ಬೆಥೆಲ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ರಜತ್ ಪಾಟೀದಾರ್ (ನಾಯಕ), ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹೇಜಲ್ವುಡ್/ಲುಂಗಿ ಎನ್ಗಿಡಿ. ಇಂಪ್ಯಾಕ್ಟ್ ಪ್ಲೇಯರ್: ಸುಯಾಶ್ ಶರ್ಮಾ.
ಕೋಲ್ಕತ್ತಾ ನೈಟ್ ರೈಡರ್ಸ್: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಸುನಿಲ್ ನರೈನ್, ಅಜಿಂಕ್ಯ ರಹಾನೆ (ನಾಯಕ), ಆಂಗ್ಕ್ರಿಷ್ ರಘುವಂಶಿ, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಅನುಕುಲ್ ರಾಯ್, ವೈಭವ್ ಅರೋರಾ, ವರುಣ್ ಚಕ್ರವರ್ತಿ.