ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಹಿಂದೆ ಸರಿದ ರೆಹಾನ್ ಅಹ್ಮದ್; ದಿಢೀರ್ ತವರಿಗೆ ಮರಳಿದ ಸ್ಪಿನ್ನರ್
Feb 23, 2024 10:35 AM IST
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಹಿಂದೆ ಸರಿದ ರೆಹಾನ್ ಅಹ್ಮದ್
- Rehan Ahmed: ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ ಇಂಗ್ಲೆಂಡ್ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಹಿಂದೆ ಸರಿದಿದ್ದಾರೆ. ವೈಯಕ್ತಿಕ ಕಾರಣಗಳಿಂದ ಅವರು ತವರಿಗೆ ಮರಳಿದ್ದಾರೆ. ಮತ್ತೆ ಅವರು ಭಾರತಕ್ಕೆ ಮರಳುವುದಿಲ್ಲ ಎಂದು ಎಂದು ಇಸಿಬಿ ತಿಳಿಸಿದೆ. ಅತ್ತ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಬದಲಿ ಆಟಗಾರನ ಆಯ್ಕೆ ಇಲ್ಲ ಎಂದು ಮಂಡಳಿ ತಿಳಿಸಿದೆ.
ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರಮುಖ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ (Rehan Ahmed), ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ (India vs England) ಹಿಂದೆ ಸರಿದಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಅಹ್ಮದ್ ಮನೆಗೆ ಮರಳಿದ್ದಾರೆ. ಸದ್ಯ ಸರಣಿಯ ಮುಂದಿನ ಪಂದ್ಯಕ್ಕೂ ಅವರು ಮರಳುವುದಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ರಾಂಚಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಪಂದ್ಯದ ಟಾಸ್ ಪ್ರಕ್ರಿಯೆ ಬೆನ್ನಲ್ಲೇ ಈ ಮಾಹಿತಿ ಲಭಿಸಿದೆ. “ರೆಹಾನ್ ಅಹ್ಮದ್ ವೈಯಕ್ತಿಕ ಕಾರಣಗಳಿಗಾಗಿ ಭಾರತ ಪ್ರವಾಸದಿಂದ ತಕ್ಷಣದಿಂದ ಜಾರಿಗೆ ಬರುವಂತೆ ತವರಿಗೆ ಮರಳಲಿದ್ದಾರೆ. ಅವರು ಮತ್ತೆ ಭಾರತಕ್ಕೆ ಮರಳುವುದಿಲ್ಲ,” ಎಂದು ಇಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರವಾಸದ ಉಳಿದ ಪಂದ್ಯಗಳಿಗೆ ಬದಲಿ ಆಟಗಾರನ ಆಯ್ಕೆ ಮಾಡುವುದಿಲ್ಲ ಎಂದು ಕ್ರಿಕೆಟ್ ಮಂಡಳಿ ತಿಳಿಸಿದೆ.
ಇದನ್ನೂ ಓದಿ | ನಾಲ್ಕನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ; ಭಾರತ ತಂಡಕ್ಕೆ ಆಕಾಶ್ ದೀಪ್ ಪದಾರ್ಪಣೆ
ರೆಹಾನ್ ಅಹ್ಮದ್ ಭಾರತ ವಿರುದ್ಧ ಈವರೆಗೆ ನಡೆದ ಎಲ್ಲಾ ಮೂರು ಪಂದ್ಯಗಳಲ್ಲಿ ಆಡಿದ್ದರು. ಆದರೆ, ನಾಲ್ಕನೇ ಟೆಸ್ಟ್‌ಗೆ ಆಡುವ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ರಾಂಚಿಯಲ್ಲಿ ಇಂದು ಆರಂಭವಾದ ಟೆಸ್ಟ್ ಪಂದ್ಯಕ್ಕಿಂತ ಮುನ್ನವೇ ಆಂಗ್ಲರು ಆಡುವ ಬಳಗವನ್ನು ಪ್ರಕಟಿಸಿದ್ದರು. ಮೂರೂ ಪಂದ್ಯಗಳಲ್ಲಿ ಆಡಿದ್ದ ಬಶೀರ್, ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಮೂರು ಟೆಸ್ಟ್ ಪಂದ್ಯಗಳಲ್ಲಿ ಓಟ್ಟು 11 ವಿಕೆಟ್ ಕಬಳಿಸಿದ್ದಾರೆ.
ಸರಣಿಯಿಂದ ಹಿಂದೆ ಸರಿದ ನಾಲ್ವರು ಆಟಗಾರರು
ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಹಿಂದೆ ಸರಿದ ನಾಲ್ಕನೇ ಕ್ರಿಕೆಟಿಗ ರೆಹಾನ್. ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್, ತಮ್ಮ ತಂಡವು ಭಾರತಕ್ಕೆ ಬರುವ ಮೊದಲೇ ಪ್ರವಾಸದಿಂದ ಹಿಂದೆ ಸರಿದಿದ್ದರು. ವಿರಾಟ್ ಕೊಹ್ಲಿ ತಮ್ಮ ಎರಡನೇ ಮಗುವಿನ ಜನನದಿಂದಾಗಿ ಸಂಪೂರ್ಣ ಸರಣಿಯಿಂದ ಹೊರಗುಳಿದರು. ಕಳೆದ ವಾರ, ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ತಾಯಿಯ ಅನಾರೋಗ್ಯದಿಂದಾಗಿ ರಾಜ್‌ಕೋಟ್ ಟೆಸ್ಟ್‌ನ ಎರಡನೇ ದಿನದಾಟದ ನಂತರ ಮನೆಗೆ ಮರಳಿದ್ದರು. ಆದರೆ, 4ನೇ ದಿನದಂದು ತಂಡಕ್ಕೆ ಮತ್ತೆ ಮರಳಿದರು.
ಇದನ್ನೂ ಓದಿ | Explainer: ಡೆಲ್ಲಿ ಕ್ಯಾಪಿಟಲ್ಸ್ ತವರು ವಿಶಾಖಪಟ್ಟಣ; ಪಂತ್ ಪಡೆ ದೆಹಲಿಯಲ್ಲಿ ಐಪಿಎಲ್ ಪಂದ್ಯ ಆಡುತ್ತಿಲ್ಲವೇಕೆ?
ರಾಂಚಿ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡವು ಆಡುವ ಬಳಗದಲ್ಲಿ ಮತ್ತೊಂದು ಬದಲಾವಣೆ ಮಾಡಿದೆ. ಮಾರ್ಕ್ ವುಡ್ ಬದಲಿಗೆ ಒಲ್ಲಿ ರಾಬಿನ್ಸನ್ ತಂಡ ಸೇರಿಕೊಂಡಿದ್ದಾರೆ. ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಬದಲಿಗೆ ಯುವ ವೇಗಿ ಆಕಾಶ್ ದೀಪ್ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ.
ಭಾರತ ತಂಡ
ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್ ಆಡುವ ಬಳಗ
ಝಾಕ್ ಕ್ರಾಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಟಾಮ್ ಹಾರ್ಟ್ಲಿ, ಓಲ್ಲಿ ರಾಬಿನ್ಸನ್, ಶೋಯೆಬ್ ಬಶೀರ್, ಜೇಮ್ಸ್ ಆಂಡರ್ಸನ್.
ಇದನ್ನೂ ಓದಿ | Rohit sharma: ಟೆಸ್ಟ್ ಕ್ರಿಕೆಟ್ನಲ್ಲಿ ಈ ದಾಖಲೆ ಬರೆಯಲು ರೋಹಿತ್ ಶರ್ಮಾಗೆ ಬೇಕು ಕೇವಲ 22 ರನ್
(This copy first appeared in Hindustan Times Kannada website. To read more like this please logon to kannada.hindustantimes.com)