ಪಾಕಿಸ್ತಾನದ ವಿರುದ್ಧ ಆಡಲು ವಿರಾಟ್ ಕೊಹ್ಲಿಗೆ ಅಚ್ಚುಮೆಚ್ಚು, ರೋಹಿತ್ ಶರ್ಮಾಗೆ ಸಂಕಟ; ಈ ಅಂಕಿ-ಅಂಶವೇ ಸಾಕ್ಷಿ
May 31, 2024 04:53 PM IST
ಪಾಕಿಸ್ತಾನದ ವಿರುದ್ಧ ಆಡಲು ವಿರಾಟ್ ಕೊಹ್ಲಿಗೆ ಅಚ್ಚುಮೆಚ್ಚು, ರೋಹಿತ್ ಶರ್ಮಾಗೆ ಸಂಕಟ ಕಹಿ; ಈ ಅಂಕಿ-ಅಂಶವೇ ಸಾಕ್ಷಿ
- Rohit Sharma - Virat Kohli : ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಟೀಮ್ ಇಂಡಿಯಾ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಪ್ರದರ್ಶನ ಹೇಗಿದೆ ಎಂಬುದರ ವಿವರ ಇಲ್ಲಿದೆ.
India vs Pakistan: ಟೀಮ್ ಇಂಡಿಯಾ ಟಿ20 ವಿಶ್ವಕಪ್ಗೆ ಭರ್ಜರಿ ಸಿದ್ಧತೆ ನಡೆಸುತ್ತಿದೆ. 2013ರ ನಂತರ ಐಸಿಸಿ ಟೂರ್ನಮೆಂಟ್ಗಳಲ್ಲಿ ಸೆಮಿಫೈನಲ್-ಫೈನಲ್ಗೆ ಸುಸ್ತಾಗುತ್ತಿರುವ ಮೆನ್ ಇನ್ ಬ್ಲೂ, 11 ವರ್ಷಗಳ ಬಳಿಕ ಮತ್ತೊಂದು ಐಸಿಸಿ ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದೆ. ಜೂನ್ 5ರಿಂದ ತನ್ನ ಅಭಿಯಾನ ಆರಂಭಿಸಲಿರುವ ಭಾರತ, ಎ ಗುಂಪಿನಲ್ಲಿ ಐರ್ಲೆಂಡ್, ಪಾಕಿಸ್ತಾನ, ಯುಎಸ್ಎ ಮತ್ತು ಕೆನಡಾ ತಂಡಗಳ ವಿರುದ್ಧ ಸೆಣಸಾಟ ನಡೆಸಲಿದೆ. ಅದರಲ್ಲೂ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹೋರಾಟಕ್ಕೆ ಇಡೀ ಜಗತ್ತೇ ಕಾಯುತ್ತಿದೆ. ಆದರೆ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಪ್ರದರ್ಶನ ಹೇಗಿದೆ ಎಂಬುದನ್ನು ಈ ಮುಂದೆ ನೋಡಿ..
ವಿರಾಟ್ ಕೊಹ್ಲಿಗೆ ಸಿಹಿ-ರೋಹಿತ್ ಶರ್ಮಾಗೆ ಕಹಿ
ಬದ್ಧವೈರಿ ಪಾಕಿಸ್ತಾನ ವಿರುದ್ಧ ಆಡುವುದೆಂದರೆ ವಿರಾಟ್ ಕೊಹ್ಲಿಗೆ ತುಂಬಾ ಅಚ್ಚುಮೆಚ್ಚು. ಪ್ರತಿ ಆವೃತ್ತಿಯಲ್ಲೂ ನೆರೆಯ ರಾಷ್ಟ್ರದ ವಿರುದ್ಧ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಬಾಬರ್ ಪಡೆಯ ವಿರುದ್ಧ ಬ್ಯಾಟ್ ಬೀಸುವುದನ್ನು ಇಷ್ಟಪಡುವ ಕಿಂಗ್ ಕೊಹ್ಲಿ, ಜೂನ್ 9 ರಂದು ಸಹ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ. 2022ರ ಟಿ20 ವಿಶ್ವಕಪ್ನಲ್ಲಿ ಪಾಕ್ ಬೌಲರ್ಗಳ ವಿರುದ್ಧ ಯುದ್ಧದಂತೆ ಏಕಾಂಗಿ ಹೋರಾಟ ನಡೆಸಿದ ವಿರಾಟ್ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು. ಅಜೇಯ 82 ರನ್ ಬಾರಿಸಿ ಸೋಲುವ ಪಂದ್ಯವನ್ನೂ ಗೆಲುವಿನ ದಡ ಸೇರಿಸಿದ್ದರು. ಈ ಪಂದ್ಯ ಈಗಲೂ ಅವಿಸ್ಮರಣೀಯವಾಗಿದೆ. ಕೊಹ್ಲಿ ತನ್ನ ವೃತ್ತಿಜೀವನದಲ್ಲೂ ಇದು ವಿಶೇಷ ಪಂದ್ಯವಾಗಿ ಉಳಿದಿದೆ.
ಬಾಬರ್ ಪಡೆಯ ವಿರುದ್ಧ ಕೊಹ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದರೆ, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅತ್ಯಂತ ಕಳಪೆ ದಾಖಲೆ ಹೊಂದಿದ್ದಾರೆ. ಟಿ20 ವಿಶ್ವಕಪ್ ಶುರುವಾದಾಗಿನಿಂದಲೂ ಮೆನ್ ಇನ್ ಬ್ಲೂ ಪ್ರತಿನಿಧಿಸುತ್ತಿರುವ ಹಿಟ್ಮ್ಯಾನ್, ಒಂದು ಫಿಫ್ಟಿ ಕೂಡ ಸಿಡಿಸಿಲ್ಲ. ಪಾಕ್ ಎದುರು 30 ರನ್ ಗಳಿಸಿದ್ದೇ ಅವರ ಗರಿಷ್ಠ ಸ್ಕೋರ್ ಆಗಿದೆ. ಆದರೆ ಅದೇನಾಯಿತೋ ಮೆನ್ ಇನ್ ಗ್ರೀನ್ ವಿರುದ್ಧ ಅಬ್ಬರದ ಬ್ಯಾಟಿಂಗ್ ನಡೆಸಲು ವಿಫಲರಾಗುತ್ತಿದ್ದಾರೆ. ಇದೀಗ ನ್ಯೂಯಾರ್ಕ್ನಲ್ಲಿ ನಡೆಯುವ ಕದನದಲ್ಲಿ ಬಾಬರ್ ಬೌಲರ್ಗಳ ಘರ್ಜಿಸಲು ವಿಶೇಷ ಗೇಮ್ ಪ್ಲಾನ್ ರೂಪಿಸಿಕೊಳ್ಳುತ್ತಿದ್ದಾರೆ. ಆದರೆ ಅವರು ಹೇಗೆ ಆಡುತ್ತಾರೆ ಎಂಬುದನ್ನು ಕಾದುನೋಡೋಣ.
ಪಾಕ್ ವಿರುದ್ಧ ಇಬ್ಬರ ಅಂಕಿ-ಅಂಶ ಹೇಗಿದೆ ನೋಡಿ
ವಿರಾಟ್ ಐದು ಆವೃತ್ತಿಗಳಲ್ಲಿ ಪಾಕ್ ಎದುರು 4 ಭರ್ಜರಿ ಅರ್ಧಶತಕ ಸಿಡಿಸಿದ್ದಾರೆ. ಈ ಪೈಕಿ ನಾಲ್ಕರಲ್ಲಿ ಅಜೇಯರಾಗಿ ಉಳಿದಿದ್ದಾರೆ. 2012ರಲ್ಲಿ 61 ಎಸೆತಗಳಲ್ಲಿ 78*, 2014ರಲ್ಲಿ 32 ಎಸೆತಗಳಲ್ಲಿ 36*, 2016ರಲ್ಲಿ 37 ಎಸೆತಗಳಲ್ಲಿ 55* ರನ್, 2021ರಲ್ಲಿ 49 ಎಸೆತಗಳಲ್ಲಿ 57 ರನ್, 2022ರಲ್ಲಿ 53 ಎಸೆತಗಳಲ್ಲಿ 82* ಬಾರಿಸಿದ್ದಾರೆ. ರೋಹಿತ್ ಶರ್ಮಾ 1 ಅರ್ಧಶತಕವನ್ನೂ ಸಿಡಿಸಿಲ್ಲ. ಒಟ್ಟು ಆವೃತ್ತಿಗಳಲ್ಲಿ ಪಾಕ್ ಎದುರು ಬ್ಯಾಟಿಂಗ್ ನಡೆಸಿದ್ದಾರೆ. 2016ರಲ್ಲಿ 16 ಎಸೆತಗಳಲ್ಲಿ 30* ರನ್, 2012ರಲ್ಲಿ ಬ್ಯಾಟ್ ಬೀಸಲು ಅವಕಾಶ ಪಡೆಯದ ರೋಹಿತ್, 2014ರಲ್ಲಿ 21 ಎಸೆತಗಳಲ್ಲಿ 24 ರನ್, 2016ರಲ್ಲಿ 11 ಎಸೆತಗಳಲ್ಲಿ 10 ರನ್, 2021ರಲ್ಲಿ ಡಕೌಟ್, 2022ರಲ್ಲಿ 7 ಎಸೆತಗಳಲ್ಲಿ 4 ರನ್ ಗಳಿಸಿದ್ದರು.