ಶತಕದೊಂದಿಗೆ ಗಂಗೂಲಿ-ಧೋನಿ ದಾಖಲೆ ಮುರಿದ ರೋಹಿತ್; ರೂಟ್ರನ್ನು ಹಿಂದಿಕ್ಕಿ ಎಬಿಡಿ ರೆಕಾರ್ಡ್ ಸರಿಗಟ್ಟಿದ ಶರ್ಮಾ
Feb 15, 2024 03:50 PM IST
ಶತಕದೊಂದಿಗೆ ಗಂಗೂಲಿ-ಧೋನಿ ದಾಖಲೆ ಮುರಿದ ರೋಹಿತ್
- Rohit Sharma Records : ಇಂಗ್ಲೆಂಡ್ ಎದುರಿನ ಮೂರನೇ ಟೆಸ್ಟ್ನಲ್ಲಿ ಭರ್ಜರಿ ಶತಕ ಸಿಡಿಸಿದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಅವುಗಳ ಪಟ್ಟಿ ಇಲ್ಲಿದೆ.
ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ಬೌಲರ್ಗಳ ಬೆವರಿಳಿಸಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 11ನೇ ಟೆಸ್ಟ್ ಶತಕ ಸಿಡಿಸಿ ಹಲವು ದಾಖಲೆ ಬರೆದಿದ್ದಾರೆ. ರನ್ಗಳ ವಿಚಾರದಲ್ಲಿ ಸೌರವ್ ಗಂಗೂಲಿ ಮತ್ತು ಸಿಕ್ಸರ್ಗಳಲ್ಲಿ ಮಹೇಂದ್ರ ಸಿಂಗ್ ಧೋನಿ ದಾಖಲೆ ಮುರಿದರೆ, ಶತಕಗಳ ಪಟ್ಟಿಯಲ್ಲಿ ಜೋರೂಟ್ರನ್ನು ಹಿಂದಿಕ್ಕಿ ಎಬಿ ಡಿವಿಲಿಯರ್ಸ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ಸಂಕಷ್ಟದಲ್ಲಿ ರೋಹಿತ್ ಶತಕ
ಮೂರನೇ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಭಾರತ 33ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ರೋಹಿತ್, ರವೀಂದ್ರ ಜಡೇಜಾ ಜೊತೆಗೂಡಿ ಭರ್ಜರಿ ಜೊತೆಯಾಟವಾಡಿದರು. ಅಲ್ಲದೆ, 52.3 ಓವರ್ನಲ್ಲಿ 157 ಎಸೆತಗಳನ್ನು ಎದುರಿಸಿದ ಕ್ಯಾಪ್ಟನ್, ತಮ್ಮ ಶತಕವನ್ನು ಪೂರೈಸಿದರು. 196 ಎಸೆತಗಳಲ್ಲಿ 14 ಬೌಂಡರಿ, 3 ಸಿಕ್ಸರ್ ಸಹಿತ 131 ರನ್ ಗಳಿಸಿ ಔಟಾದರು.
ರೂಟ್ರನ್ನು ಹಿಂದಿಕ್ಕಿ ಎಬಿಡಿ ದಾಖಲೆ ಸಮ
ಅಂತಾರಾಷ್ಟ್ರೀಯ ಕ್ರಿಕೆಟ್ನ ಮೂರು ಫಾರ್ಮೆಟ್ನಲ್ಲೂ ರೋಹಿತ್ 47ನೇ ಸೆಂಚುರಿ ಬಾರಿಸಿದಂತಾಗಿದೆ. ಅವರು ಟೆಸ್ಟ್ನಲ್ಲಿ 11, ಏಕದಿನದಲ್ಲಿ 31, ಟಿ20ಯಲ್ಲಿ 5 ಬಾರಿ ಶತಕ ಬಾರಿಸಿದ್ದಾರೆ. ಆ ಮೂಲಕ 47 ಶತಕ ಸಿಡಿಸಿದ ಸೌತ್ ಆಫ್ರಿಕಾದ ಮ್ಯಾಜಿ ಬ್ಯಾಟರ್ ಎಬಿ ಡಿವಿಲಿಯರ್ಸ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇನ್ನು ಸಕ್ರಿಯ ಆಟಗಾರರ ಪೈಕಿ ಅಧಿಕ ಅಂತಾರಾಷ್ಟ್ರೀಯ ಸೆಂಚುರಿ ಬಾರಿಸಿದ ಆಟಗಾರರ ಪೈಕಿ ವಿರಾಟ್ ಕೊಹ್ಲಿ (80), ಡೇವಿಡ್ ವಾರ್ನರ್ (49) ನಂತರ ರೋಹಿತ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ 46 ಶತಕ ಸಿಡಿಸಿರುವ ಇಂಗ್ಲೆಂಡ್ ತಂಡದ ಜೋ ರೂಟ್ ಅವರನ್ನು ಹಿಂದಿಕ್ಕಿದ್ದಾರೆ.
ಸೌರವ್ ಗಂಗೂಲಿ ದಾಖಲೆ ಬ್ರೇಕ್
ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಐದನೇ ಸ್ಥಾನದಲ್ಲಿದ್ದ ರೋಹಿತ್, ಸೌರವ್ ಗಂಗೂಲಿ ಅವರನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದರು. ಸಚಿನ್ ತೆಂಡೂಲ್ಕರ್ 34357, ವಿರಾಟ್ ಕೊಹ್ಲಿ 26733, ರಾಹುಲ್ ದ್ರಾವಿಡ್ 24208, ರೋಹಿತ್ ಶರ್ಮಾ 𝟭𝟴𝟱𝟳𝟳*, ಸೌರವ್ ಗಂಗೂಲಿ 18575 ರನ್ ಸಿಡಿಸಿದ್ದಾರೆ.
ಧೋನಿ ಸಿಕ್ಸರ್ಗಳ ದಾಖಲೆ ಉಡೀಸ್
ಈ ಪಂದ್ಯದಲ್ಲಿ ಮೂರು ಸಿಕ್ಸರ್ ಸಿಡಿಸಿದ ರೋಹಿತ್, ಮಾಜಿ ನಾಯಕ ಎಂಎಸ್ ಧೋನಿ ಅವರ ಸಿಕ್ಸರ್ಗಳ ದಾಖಲೆಯನ್ನು ಮುರಿದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ಹೆಚ್ಚು ಸಿಕ್ಸರ್ ಸಿಡಿಸಿದ ಎರಡನೇ ಆಟಗಾರ ಎನಿಸಿದ್ದಾರೆ. ವೀರೇಂದ್ರ ಸೆಹ್ವಾಗ್ 90 ಸಿಕ್ಸರ್, ರೋಹಿತ್ ಶರ್ಮಾ 80*, ಎಂಎಸ್ ಧೋನಿ 78, ಸಚಿನ್ ತೆಂಡೂಲ್ಕರ್ 69, ಕಪಿಲ್ ದೇವ್ 61 ಸಿಕ್ಸರ್ ಸಿಡಿಸಿದ್ದಾರೆ. ಆದರೆ ಭಾರತದ ನಾಯಕನಾಗಿ ಅತಿಹೆಚ್ಚು ಶತಕ ಸಿಡಿಸಿದ್ದಾರೆ.
ಟೆಸ್ಟ್ನಲ್ಲಿ 11ನೇ ಶತಕ
57 ಪಂದ್ಯಗಳ 97 ಇನ್ನಿಂಗ್ಸ್ಗಳಲ್ಲಿ ಹಿಟ್ಮ್ಯಾನ್ 11ನೇ ಬಾರಿಗೆ ನೂರರ ಗಡಿ ದಾಟಿದ್ದಾರೆ. ಅಲ್ಲದೆ, ಇಂಗ್ಲೆಂಡ್ ವಿರುದ್ಧವೇ ಮೂರು ಸಲ ಮೂರಂಕಿ (ಇಂದಿನ ಸೆಂಚುರಿಯೂ ಸೇರಿ) ಸಿಡಿಸಿರುವುದು ವಿಶೇಷ. 2021ರಲ್ಲಿ ಭಾರತದ ಪ್ರವಾಸದಲ್ಲೂ ಇಂಗ್ಲೆಂಡ್ ವಿರುದ್ಧದ ಚೆನ್ನೈನಲ್ಲಿ 161 ರನ್ ಗಳಿಸಿದ್ದರು. ಅದೇ ವರ್ಷ ದಿ ಓವಲ್ ಮೈದಾನದಲ್ಲಿ ಆಂಗ್ಲರ ಎದುರು 127 ರನ್ ಬಾರಿಸಿದ್ದರು.
ಭಾರತ ಆಡುವ 11ರ ಬಳಗ
ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.