Shoaib Akhtar: ರೋಹಿತ್‌ಗೆ ನಾಯಕತ್ವ ಭಯ ಜಾಸ್ತಿ, ಅವರಲ್ಲಿ ವಿಶ್ವಕಪ್ ಗೆಲ್ಲುವ ತಂಡವಿಲ್ಲ; ಶೋಯೆಬ್ ಅಖ್ತರ್ ಟೀಕೆ
Aug 19, 2023 07:00 AM IST
ಶೋಯೆಬ್ ಅಖ್ತರ್ ಮತ್ತು ರೋಹಿತ್ ಶರ್ಮಾ.
- Shoaib Akhtar: ನಾಯಕ ರೋಹಿತ್ ಶರ್ಮಾ (Rohit Sharma) ಬಳಿ ವಿಶ್ವಕಪ್ ಗೆಲ್ಲುವ ತಂಡವಿಲ್ಲ ಎಂದಿರುವ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್, ತಂಡದ ಸಂಯೋಜನೆಗೆ ಆಟಗಾರರು ಇಲ್ಲದಿರುವ ಬಗ್ಗೆಯೂ ಟೀಕಿಸಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಗೆ (ODI World Cup 2023) ದಿನಗಣನೆ ಶುರುವಾಗಿದೆ. ಕೇವಲ ಒಂದೂವರೆ ತಿಂಗಳಷ್ಟೇ ಬಾಕಿ ಇದೆ. ಮೆಗಾ ಟೂರ್ನಿಯಲ್ಲಿ ಟ್ರೋಫಿ ಎತ್ತಿ ಹಿಡಿಯಲೇಬೇಕೆಂಬ ಕನಸಿನಲ್ಲಿ ಹತ್ತೂ ತಂಡಗಳು ಕಣಕ್ಕಿಳಿಯಲು ಸಜ್ಜಾಗಿವೆ. ಅದರಲ್ಲೂ ತವರಿನಲ್ಲೇ ವಿಶ್ವಕಪ್ ನಡೆಯುತ್ತಿರುವ ಕಾರಣ, ಭಾರತವೇ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಆದರೆ ಪಾಕಿಸ್ತಾನದ ದಿಗ್ಗಜ ಮಾಜಿ ಬೌಲರ್ ಶೋಯೆಬ್ ಅಖ್ತರ್ (Shoaib Akhtar), ಈ ಬಗ್ಗೆ ಅಪಸ್ವರ ಎತ್ತಿದ್ದಾರೆ.
12 ವರ್ಷಗಳ ನಂತರ ಭಾರತದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯುತ್ತಿದೆ. ತಂಡದ ಆಯ್ಕೆ ಕಸರತ್ತು ಕೂಡ ಜೋರಾಗಿದೆ. ಆದರೆ 4ನೇ ಕ್ರಮಾಂಕದ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಇದರ ನಡುವೆ ಶೋಯೆಬ್ ಅಖ್ತರ್ ಆಘಾತಕಾರಿ ಹೇಳಿಕೆ ನೀಡಿದ್ದು, ನಾಯಕ ರೋಹಿತ್ ಶರ್ಮಾ (Rohit Sharma) ಬಳಿ ವಿಶ್ವಕಪ್ ಗೆಲ್ಲುವ ತಂಡವಿಲ್ಲ ಎಂದಿದ್ದಾರೆ. ಅಲ್ಲದೆ, ತಂಡದ ಸಂಯೋಜನೆಗೆ ಆಟಗಾರರು ಇಲ್ಲದಿರುವ ಬಗ್ಗೆಯೂ ಟೀಕಿಸಿದ್ದಾರೆ.
ವಿಶ್ವಕಪ್ ಗೆಲ್ಲುವ ತಂಡವನ್ನು ಹೊಂದಿಲ್ಲ
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವೆಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ, ನನ್ನ ಪ್ರಕಾರ ಭಾರತ ತಂಡವು ಟ್ರೋಫಿ ಗೆಲ್ಲುವ ಫೇವರಿಟ್ ಅಲ್ಲ ಎಂದಿದ್ದಾರೆ. RevSports ಜೊತೆ ಮಾತನಾಡಿದ ಅಖ್ತರ್, ರೋಹಿತ್ ಕುರಿತು ಅಚ್ಚರಿ ಹೇಳಿಕೆ ನೀಡಿ, ವಿಶ್ವಕಪ್ ಗೆಲ್ಲುವಂತಹ ತಂಡವನ್ನು ರೋಹಿತ್ ಹೊಂದಿಲ್ಲ ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ ಅವರನ್ನು ನೋಡಿದಾಗೆಲ್ಲಾ ಒಂದು ಪ್ರಶ್ನೆ ಕೇಳಬೇಕು ಎನಿಸುತ್ತದೆ. ನಿಜವಾಗಿಯೂ ಮನಸ್ಫೂರ್ತಿಯಾಗಿ ಟೀಮ್ ಇಂಡಿಯಾ ನಾಯಕತ್ವವನ್ನು ಪಡೆದಿದ್ದಾರೆಯೇ ಎಂದು ಕೇಳಬೇಕು ಎನಿಸುತ್ತದೆ. ರೋಹಿತ್ ಶರ್ಮಾ ತುಂಬಾ ಸಂದರ್ಭಗಳಲ್ಲಿ ಒತ್ತಡಕ್ಕೆ ಒಳಗಾಗಿದ್ದಾರೆ. ಕೆಲವು ಸಂದರ್ಭಗಳಲ್ಲಿ ಅವರು ಭಯಪಟ್ಟಿದ್ದೂ ಇದೆ. ನಾಯಕತ್ವದ ಒತ್ತಡವೇ ಅವರನ್ನು ದುರ್ಬಲಗೊಳಿಸುತ್ತಿದೆ ಎಂದರು.
ಬ್ಯಾಟ್ಸ್ಮನ್ ಆಗಿ ಟಾಪ್ ಕ್ಲಾಸ್, ನಾಯಕನಾಗಿ ಅಲ್ಲ
ವಿರಾಟ್ ಕೊಹ್ಲಿ ಕೂಡ ಇಂತಹ ಸಂದರ್ಭವನ್ನು ಎದುರಿಸಿದ್ದಾರೆ. ಇದನ್ನು ನಾನು ನೋಡಿದ್ದೇನೆ. ಇದೇ ಕಾರಣಕ್ಕೆ ಕೊಹ್ಲಿ ನಾಯಕನಾಗಿ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಈಗ ರೋಹಿತ್ ಕೂಡ ಇದೇ ದಾಟಿಯಲ್ಲಿದ್ದಾರೆ. ಅದಕ್ಕಾಗಿಯೇ ಭಾರತ ವಿಶ್ವಕಪ್ ಗೆಲ್ಲುವುದಿಲ್ಲ ಎಂದು ಹೇಳುತ್ತಿದ್ದೇನೆ. ಬ್ಯಾಟ್ಸ್ಮನ್ ಆಗಿ ವಿರಾಟ್ಗಿಂತಲೂ ರೋಹಿತ್ ಹೆಚ್ಚು ಪ್ರಭಾವಿತರಾಗಿದ್ದಾರೆ ಎಂದರು.
ತಾಂತ್ರಿಕವಾಗಿ ರೋಹಿತ್ ಶರ್ಮಾ ಟಾಪ್ ಕ್ಲಾಸ್ ಬ್ಯಾಟರ್. ತಮ್ಮ ಕ್ಲಾಸಿಕ್ ಬ್ಯಾಟಿಂಗ್ನಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಆದರೆ, ಕ್ಯಾಪ್ಟನ್ಸಿ ವಿಷಯಕ್ಕೆ ಬಂದಾಗ, ಅವರಲ್ಲಿ ಗತ್ತು ಕಾಣಿಸುತ್ತಿಲ್ಲ. ಫೈಯರ್ ಇಲ್ಲ. ಅಲ್ಲದೆ, ನಾಯಕತ್ವದ ಕಾರಣ, ಮುಕ್ತವಾಗಿ ಬ್ಯಾಟ್ ಬೀಸಲು ಹಿಂಜರಿಯುತ್ತಿದ್ದಾರೆ ಎಂದು ಹೇಳಿದ ಶೋಯೆಬ್ ಅಖ್ತರ್, ವಿಶ್ವಕಪ್ ಗೆಲ್ಲುವಂತಹ ತಂಡವನ್ನು ಹೊಂದಿಲ್ಲದಿರುವುದು ಕೂಡ ಅವರಿಗೆ ಹಿನ್ನಡೆ ತಂದೊಡ್ಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಂಡದ ಸಂಯೋಜನೆಯೇ ಇಲ್ಲ
ರೋಹಿತ್ ಬಳಿ ವಿಶ್ವಕಪ್ ಗೆಲ್ಲಲು ಬೇಕಾದ ತಂಡವೂ ಇಲ್ಲ. ಕೆಎಲ್ ರಾಹುಲ್ ಗಾಯಗೊಂಡಿದ್ದಾರೆ. ಇನ್ನು ಶ್ರೇಯಸ್ ಅಯ್ಯರ್ ಕೂಡ ಫಿಟ್ ಆಗಿಲ್ಲ. ಮಧ್ಯಮ ಕ್ರಮಾಂಕಕ್ಕೆ ಬೇಕಾದ ಆಟಗಾರರೇ ತಂಡಕ್ಕೆ ಸದ್ಯದ ಮಟ್ಟಿಗೆ ದೂರವಾಗಿದ್ದಾರೆ. ಅವರಿಬ್ಬರ ಬಗ್ಗೆ ಯಾವುದೇ ಅಪ್ಡೇಟ್ ಇಲ್ಲ. ಮಧ್ಯಮ ಕ್ರಮಾಂಕದ ಆಧಾರ ಸ್ಥಂಭಗಳು ಅವರಿಬ್ಬರು. ಆದರೆ, ಅವರ ಅನುಪಸ್ಥಿತಿ ಭಾರತ ತಂಡಕ್ಕೆ ಹೆಚ್ಚಾಗಿ ಕಾಡುತ್ತಿದೆ ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ರೋಹಿತ್ ಶರ್ಮಾ ಏಕದಿನ ವಿಶ್ವಕಪ್ ಗೆದ್ದು ನನ್ನ ತಪ್ಪು ಎಂದು ಸಾಬೀತುಪಡಿಸಿದರೆ ಒಳ್ಳೆಯದು. ಆದರೆ ಅದನ್ನು ಮಾಡಿ ತೋರಿಸಲು ಸಾಧ್ಯವೇ? ನನಗೆ ಅದರ ಮೇಲೆ ಅನುಮಾನವಿದೆ. 140 ಕೋಟಿ ಭಾರತೀಯರ ಕನಸುಗಳನ್ನು ಹೊತ್ತಿರುವುದು ಕೂಡ ರೋಹಿತ್‌ಗೆ ಹೆಚ್ಚುವರಿ ಒತ್ತಡ' ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಪ್ರತಿಕ್ರಿಯಿಸಿದ್ದಾರೆ.