logo
ಕನ್ನಡ ಸುದ್ದಿ  /  ಕ್ರಿಕೆಟ್  /  ಲಂಕಾ ವಿರುದ್ಧದ ವಿಶ್ವಕಪ್ ಪಂದ್ಯಕ್ಕೂ ಮುನ್ನ ರೋಹಿತ್‌ ಶರ್ಮಾಗೆ ಟೆನ್ಶ್ಯನ್;‌ ಮುಂಬೈ ಜನರಿಗೆ ಎಚ್ಚರಿಕೆ ಸಂದೇಶ

ಲಂಕಾ ವಿರುದ್ಧದ ವಿಶ್ವಕಪ್ ಪಂದ್ಯಕ್ಕೂ ಮುನ್ನ ರೋಹಿತ್‌ ಶರ್ಮಾಗೆ ಟೆನ್ಶ್ಯನ್;‌ ಮುಂಬೈ ಜನರಿಗೆ ಎಚ್ಚರಿಕೆ ಸಂದೇಶ

Jayaraj HT Kannada

Oct 31, 2023 09:53 PM IST

google News

ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ

    • Rohit Sharma: ಮುಂಬೈ ನಗರದ ಕಳಪೆ ಗಾಳಿ ಗುಣಮಟ್ಟದಿಂದ ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಘಾತಕ್ಕೊಳಗಾಗಿದ್ದಾರೆ. ಈ ಬಗ್ಗೆ ಖುದ್ದು ಅವರೇ ಹೇಳಿಕೊಂಡಿದ್ದಾರೆ.
ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ
ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ (BCCI Twitter)

ಏಕದಿನ ವಿಶ್ವಕಪ್ 2023ರ (ICC ODI World Cup 2023) ಮುಂದಿನ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾವನ್ನು ಎದುರಿಸಲಿದೆ. ಈ ಪಂದ್ಯವು ಮುಂಬೈನ ಐತಿಹಾಸಿಕ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ. ಪಂದ್ಯಕ್ಕಾಗಿ ಭಾರತ ತಂಡದ ಆಟಗಾರರು ಸೋಮವಾರ ವಾಣಿಜ್ಯ ನಗರಕ್ಕೆ ಬಂದಿಳಿದಿದ್ದಾರೆ. ಆದರೆ, ಪಂದ್ಯಕ್ಕೂ ಮುನ್ನ ಟೀಮ್‌ ಇಂಡಿಯಾ ಆಟಗಾರರು ನಗರದ ವಾತಾವರಣದ ಕುರಿತು ಚಿಂತಿತರಾಗಿದ್ದಾರೆ.

ಮುಂಬೈ ನಗರದಲ್ಲಿ ಲ್ಯಾಂಡ್‌ ಆಗುವ ಮುನ್ನವೇ ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಮಾನದಿಂದ ಮುಂಬೈನ ವೈಮಾನಿಕ ನೋಟವನ್ನು ಹಂಚಿಕೊಂಡಿದ್ದಾರೆ. ತಮ್ಮ ಇನ್ಸ್‌ಟಾಗ್ರಾಮ್‌ ಸ್ಟೋರಿಯಲ್ಲಿ ಮುಂಬೈನ ಹವಾಮಾನದ ಕುರಿತ ಫೋಟೋವನ್ನು ಹಿಟ್‌ಮ್ಯಾನ್ ಶೇರ್ ಮಾಡಿದ್ದಾರೆ.‌ ಫೋಟೋದಲ್ಲಿ ದಟ್ಟವಾದ ಹೊಗೆಯು ನಗರವನ್ನು ಆವರಿಸಿರುವುದು ಮಾತ್ರವೇ ಕಾಣುತ್ತಿದ್ದು, ಸುಂದರ ನಗರವೇ ಮಾಯವಾಗಿದೆ. ಮಾಲಿನ್ಯಯುತ ನಗರದ ಈ ದೃಶ್ಯವು ಮುಂಬೈ ನಗರವಾಸಿಗಳಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.

ಫೋಟೋ ಹಂಚಿಕೊಂಡಿರುವ ಹಿಟ್‌ಮ್ಯಾನ್‌ “ಮುಂಬೈ, ಯೇ ಕ್ಯಾ ಹೋ ಗಯಾ (ಮುಂಬೈ, ಇದೇನಾಗಿದೆ)?” ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಮಾಸ್ಕ್ ಧರಿಸಿರುವ ಎಮೋಜಿಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ.

ಎರಡು ವಾರಗಳಿಂದ ವಾಯು ಗುಣಮಟ್ಟ ಕುಸಿತ

ಕಳೆದೆರಡು ವಾರಗಳಿಂದ ಮುಂಬೈ ನಗರದ ಹವಾಮಾನವು ತೀರಾ ಕಳವಳಕಾರಿಯಾಗಿದೆ. CPCB ಪ್ರಕಾರ, ಮುಂಬೈನಲ್ಲಿ ವಾಯು ಗುಣಮಟ್ಟವು (ಏರ್ ಕ್ವಾಲಿಟಿ ಇಂಡೆಕ್ಸ್ -AQI) ಮಂಗಳವಾರ ಬೆಳಗ್ಗೆ 161 ರಷ್ಟಿದೆ. ಇದನ್ನು 'ಮಧ್ಯಮ' ಗುಣಮಟ್ಟ ಎಂದು ಲೆಕ್ಕ ಹಾಕಲಾಗುತ್ತದೆ. ನಗರದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ಪ್ರದೇಶದಲ್ಲಿ ಗಾಳಿಯ ಗುಣಮಟ್ಟವು ಅತ್ಯಂತ ಕಳಪೆ ದಾಖಲಾಗಿದೆ. ಅಲ್ಲಿನ ಗಾಳಿಯ ಗುಣಮಟ್ಟವು 257ಕ್ಕೆ ತಲುಪಿದೆ. ಕಳೆದ ಸೋಮವಾರದ ವಾಯು ಗುಣಮಟ್ಟ ಕೂಡಾ ಉತ್ತಮವಾಗಿಲ್ಲ. ಸೋಮವಾರ ಬೆಳಗ್ಗೆ ಎಕ್ಯೂಐ 143 ಇದ್ದರೆ, ಭಾನುವಾರ 152 ಇತ್ತು.

ಇಂಡೋ-ಲಂಕಾ ಆಟಗಾರರಿಗೆ ಚಿಂತೆ

ನವೆಂಬರ್‌ 2ರ ಗುರುವಾರ ಟೀಮ್‌ ಇಂಡಿಯಾ ಮತ್ತು ಶ್ರೀಲಂಕಾ ತಂಡಗಳ ನಡುವೆ ಮುಂಬೈನಲ್ಲಿಯೇ ವಿಶ್ವಕಪ್‌ ಪಂದ್ಯ ನಡೆಯುತ್ತಿದೆ. ಹೀಗಾಗಿ ವಾಯು ಗುಣಮಟ್ಟವು ಉಭಯ ತಂಡಗಳ ಆಟಗಾರರನ್ನು ಕಾಡಲಿದೆ.

ರೋಹಿತ್ ಶರ್ಮಾ ಇನ್ಸ್‌ಟಾಗ್ರಾಮ್‌ ಸ್ಟೋರಿ

ಜೋ ರೂಟ್‌ ಅಸಮಾಧಾನ

ಮುಂಬೈನ ಕಳಪೆ ಗಾಳಿಯ ಗುಣಮಟ್ಟದಿಂದ ರೋಹಿತ್ ಶರ್ಮಾ ಮಾತ್ರ ಆಘಾತಕ್ಕೊಳಗಾಗಿಲ್ಲ. ಈಗಾಗಾಲೇ ನಗರದಲ್ಲಿ ಇಂಗ್ಲೆಂಡ್‌ ತಂಡದ ಪಂದ್ಯ ನಡೆದಿತ್ತು. ಪಂದ್ಯಗಳ ವೇಳೆ ಆಂಗ್ಲ ಬ್ಯಾಟರ್‌ ಜೋ ರೂಟ್ ಕೂಡ ನಗರದ ಗಾಳಿಯು ಕಳಪೆ ಗುಣಮಟ್ಟದ ಬಗ್ಗೆ ದೂರು ನೀಡಿದ್ದರು. “ನಾನು ಈ ಹಿಂದೆ ಅಂಥಾ ಪರಿಸ್ಥಿತಿಯಲ್ಲಿ ಆಡಿಲ್ಲ. ನಾನು ನಿಸ್ಸಂಶಯವಾಗಿ ಹೆಚ್ಚು ಬಿಸಿಯಾದ ಮತ್ತು ಬಹುಶಃ ಹೆಚ್ಚು ಆರ್ದ್ರ ಪರಿಸ್ಥಿತಿಗಳಲ್ಲಿ ಆಡಿದ್ದೇನೆ. ಆದರೆ ಇಲ್ಲಿ ನನಗೆ ಉಸಿರಾಡಲು ಕಷ್ಟವಾದಂತೆ ಭಾಸವಾಯ್ತು,” ಎಂದು ರೂಟ್ ಹೇಳಿದ್ದಾರೆ.

ಸದ್ಯ ಮುಂಬೈ ನಗರದ ಸದ್ಯದ ವಾತಾವರಣ ಚಿಂತಾಜನಕವಾಗಿದೆ. ಕಳಪೆ ಗಾಳಿಯನ್ನು ನಗರವಾಸಿಗಳು ಉಸಿರಾಡಬೇಕಾಗಿದೆ. ಈ ನಡುವೆ ರೋಹಿತ್‌ ಶರ್ಮಾ ಬಳಗ ಸೇರಿದಂತೆ ನಗರದಲ್ಲಿ ಕ್ರಿಕೆಟ್‌ ಆಡುವ ತಂಡಗಳು ಚಿಂತೆಯಿಂದಲೇ ಇಲ್ಲಿ ಪಂದ್ಯಗಳನ್ನು ಆಡಬೇಕಾಗಿದೆ. ಪಂದ್ಯಕ್ಕೆ ಇನ್ನು ಒಂದು ದಿನ ಮಾತ್ರವೇ ಬಾಕಿ ಉಳಿದಿದ್ದು, ಅದಕ್ಕೂ ಮುನ್ನ ನಗರದ ಹವಾಮಾನ ಸುಧಾರಣೆಯಾಗುವ ನಿರೀಕ್ಷೆ ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ