logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್, ಆಸ್ಟ್ರೇಲಿಯಾದಲ್ಲಿ ನಾವು ಮಾಡಿದ್ದನ್ನು ಮರೆಯಬೇಡಿ: ಕಳಪೆ ಬ್ಯಾಟಿಂಗ್ ಸಮರ್ಥಿಸಿಕೊಂಡ ರೋಹಿತ್

ಇಂಗ್ಲೆಂಡ್, ಆಸ್ಟ್ರೇಲಿಯಾದಲ್ಲಿ ನಾವು ಮಾಡಿದ್ದನ್ನು ಮರೆಯಬೇಡಿ: ಕಳಪೆ ಬ್ಯಾಟಿಂಗ್ ಸಮರ್ಥಿಸಿಕೊಂಡ ರೋಹಿತ್

Prasanna Kumar P N HT Kannada

Dec 29, 2023 08:20 AM IST

google News

ರೋಹಿತ್ ಶರ್ಮಾ

    • Rohit Sharma: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯ ಸೋತ ನಂತರ ಭಾರತದ ನಾಯಕ ರೋಹಿತ್ ಶರ್ಮಾ, ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗ ನೀಡಿರುವ ಕಳಪೆ ಪ್ರದರ್ಶನದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಾ
ರೋಹಿತ್ ಶರ್ಮಾ (REUTERS)

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (India vs South Africa 1st Test) ಮುಜುಗರದ ಸೋಲು ಅನುಭವಿಸಿದೆ. ಇನ್ನಿಂಗ್ಸ್ ಮತ್ತು 32 ರನ್ನುಗಳಿಂದ ಆತಿಥೇಯ ತಂಡಕ್ಕೆ‌ ಶರಣಾಗಿದೆ. ಸೆಂಚುರಿಯನ್ ಸೂಪರ್ ‌ಸ್ಪೋರ್ಟ್ಸ್ ಪಾರ್ಕ್‌ ಮೈದಾನದಲ್ಲಿ ಹರಿಣಗಳ ಖಡಕ್ ಬೌಲಿಂಗ್ ದಾಳಿಗೆ ಭಾರತ‌ ಉಸಿರೆತ್ತದೆ ಶರಣಾಯಿತು. 2021ರಲ್ಲಿ ಇದೇ‌ ಮೈದಾನದಲ್ಲಿ ಗೆದ್ದಿದ್ದ ಭಾರತ ಈಗ ಮಂಡಿಯೂರಿದೆ.

ಈ‌ ಸೋಲು ಸರಣಿ ಗೆಲುವಿನ ಕನಸಿಗೂ ಅಡ್ಡಿ‌ಪಡಿಸಿದೆ. ಉಳಿದ ಪಂದ್ಯದಲಿ ಗೆದ್ದು ಸರಣಿಯ ಸಮಬಲಗೊಳಿಸಿ ಸೋಲಿನಿಂದ ಪಾರಾಗಬೇಕಿದೆ. ಆ ಮೂಲಕ ಮರ್ಯಾದೆ ಉಳಿಸಿಕೊಳ್ಳಬೇಕಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಶತಕ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 76 ರನ್ ಸಿಡಿಸಿದ್ದು ಬಿಟ್ಟರೆ ಉಳಿದ ಆಟಗಾರರು ರನ್ ಗಳಿಸಲು ಪರದಾಟ ನಡೆಸಿದರು. ಆಫ್ರಿಕಾ ಬೌಲರ್‌ಗಳು ಮಾರಕವಾಗಿ ಪರಿಣಮಿಸಿದರು.

131ಕ್ಕೆ ಆಲೌಟ್​

ಟಾಸ್ ಸೋತು‌‌ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಕೆಎಲ್ ರಾಹುಲ್‌ ಶತಕದ‌ (101) ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 245 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟ್ ಬೀಸಿದ ದಕ್ಷಿಣ ಆಫ್ರಿಕಾ ತನ್ನ ಮೊದಲ‌ ಇನ್ನಿಂಗ್ಸ್‌ನಲ್ಲಿ 408 ರನ್ ಕಲೆ ಹಾಕಿತು. ಡೀನ್ ಎಲ್ಗರ್ 185 ರನ್ ಸಿಡಿಸಿದರು. 163 ರನ್‌ ಹಿನ್ನಡೆ ಜೊತೆಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ 131 ರನ್ ಗಳಿಗೆ ಆಲೌಟಾಯಿತು.

ರೋಹಿತ್ ಶರ್ಮಾ ಬೇಸರ

ಇದೀಗ ಸೋಲಿನ ಕುರಿತು ಮಾತನಾಡಿದ ನಾಯಕ ರೋಹಿತ್ ಶರ್ಮಾ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗ ನೀಡಿರುವ ಕಳಪೆ ಪ್ರದರ್ಶನದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಭಾರತ ತಂಡದ ಶೋಚನೀಯ ಸ್ಥಿತಿಯನ್ನು ಪ್ರತಿಬಿಂಬಿಸಿದ್ದಾರೆ. ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಆಟವನ್ನು ಹೊಗಳಿದ ನಾಯಕ, ಉಳಿದ ಆಟಗಾರರು ಇಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ವಿಫಲರಾದರು ಎಂದಿದ್ದಾರೆ.

‘ಮರೆಯಬೇಡಿ’

ಆಟಗಾರರನ್ನು ಪ್ರೇರೇಪಿಸುವ ಅಗತ್ಯವಿಲ್ಲ. ಅವರೆಲ್ಲರೂ ಅಂತಾರಾಷ್ಟ್ರೀಯ ಕ್ರಿಕೆಟಿಗರು. ನಾವು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಏನು ಮಾಡಿದ್ದೇವೆ ಎಂಬುದನ್ನು ಮರೆಯಬೇಡಿ. ಆಸ್ಟ್ರೇಲಿಯಾದಲ್ಲಿ ನಮ್ಮ ಬ್ಯಾಟಿಂಗ್‌ನಿಂದ ಗೆದ್ದಿದ್ದೇವೆ. ನಾವು ಇಂಗ್ಲೆಂಡ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಡ್ರಾ ಮಾಡಿಕೊಂಡಿದ್ದೇವೆ. ಭಾರತದ ಹೊರಗೆ ಬ್ಯಾಟಿಂಗ್ ಮಾಡುವುದು ನಮಗೆ ಗೊತ್ತಿಲ್ಲ ಅಂತಲ್ಲ ಎಂದು ಕಳಪೆ ಬ್ಯಾಟಿಂಗ್​ ಅನ್ನು ಸಮರ್ಥಿಸಿಕೊಂಡಿದ್ದಾರೆ.

ಬ್ಯಾಟಿಂಗ್​-ಬೌಲಿಂಗ್​ ಎರಡನ್ನೂ ದೂರಿದ ರೋಹಿತ್

ನಾವು ಈ‌ ಪಂದ್ಯದಲ್ಲಿ ಗೆಲ್ಲುವಷ್ಟು ಉತ್ತಮ ಪ್ರದರ್ಶನ ನೀಡಲಿಲ್ಲ. ಮೊದಲು ಬ್ಯಾಟಿಂಗ್ ನಡೆಸಿದ ಸಂದರ್ಭದಲ್ಲಿ ಕೆಎಲ್ ರಾಹುಲ್ ಭರ್ಜರಿ ಶತಕ ಸಿಡಿಸಿ ಉತ್ತಮ‌ ಬ್ಯಾಟಿಂಗ್ ನಡೆಸಿದರು. ಆದರೆ ಚೆಂಡಿನೊಂದಿಗೆ ಇಲ್ಲಿನ‌‌ ಪರಿಸ್ಥಿತಿಯನ್ನು ಉತ್ತಮವಾಗಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲೂ ಬ್ಯಾಟಿನ ಮೂಲಕ ಸದ್ದು ಮಾಡಲಿಲ್ಲ. ಆದರೆ ಕೊಹ್ಲಿ ಉತ್ತಮ ಇನ್ನಿಂಗ್ಸ್ ಆಡಿದರು ಎಂದರು.

‘ಕೆಲವರಿಗೆ ಈ ಪಿಚ್ ಕಷ್ಟವಾಯಿತು’

ನಾವು ಹೆಚ್ಚೆಚ್ಚು ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕು. ಆದರೆ ನಾವು ಒಂದು ತಂಡವಾಗಿ ಹಾಗೇ ಮಾಡಲಿಲ್ಲ. ಕೆಲ ಆಟಗಾರರು ಇದೇ ಮೊದಲ ಬಾರಿಗೆ ಇಲ್ಲಿಗೆ (ದಕ್ಷಿಣ ಆಫ್ರಿಕಾ) ಬಂದಿದ್ದಾರೆ. ಈ ಪಿಚ್‌ಗಳಲ್ಲಿ ಮೊದಲ ಬ್ಯಾಟ್ ಬೀಸುತ್ತಿದ್ದಾರೆ. ಹಾಗಾಗಿ ಅವರು ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಕಷ್ಟವಾಯಿತು. ಯಾರಿಂದ‌ನಾವು ಏ‌ನೆಲ್ಲಾ ನಿರೀಕ್ಷಿಸಿದ್ದೇವೆ ಎಂಬುದು ಅವರಿಗೂ ಗೊತ್ತಿದೆ. ಪ್ರತಿಯೊಬ್ಬರೂ ತಮ್ಮದೆಯಾದ ಯೋಜನೆ ಹೊಂದಿದ್ದಾರೆ ಎಂದು ಯುವ ಆಟಗಾರರನ್ನು ಬೆಂಬಲಿಸಿದರು.

‘ಅದ್ಭುತ ಬೌಲಿಂಗ್ ನಡೆಸಿದರು’

ದಕ್ಷಿಣ ಆಫ್ರಿಕಾ ಬೌಲರ್‌ಗಳು ಅಸಾಧಾರಣ ಪ್ರದರ್ಶನ ತೋರಿದರು. ನಮ್ಮ ಬ್ಯಾಟಿಂಗ್ ವಿಭಾಗದ ಮೇಲೆ‌ ಹೆಚ್ಚು ಒತ್ತಡ ಹೇರಿದರು. ಸವಾಲು ಹಾಕಿದರು. ನಾವು ಅವರ ಗೇಮ್ ಪ್ಲಾನ್ ಅರಿಯುವಲ್ಲಿ ಎಡವಿದೆವು. ಇದು ಹೆಚ್ಚು ಸ್ಕೋರಿಂಗ್ ಗ್ರೌಂಡ್ ಆದರೂ ಅದನ್ನು ನಾವು ಉಪಯೋಗಿಸಿಕೊಳ್ಳಲಿಲ್ಲ. ಎರಡೂ ಇನ್ನಿಂಗ್ಸ್‌ಗಳಲ್ಲಿ ಉತ್ತಮ‌ ಬ್ಯಾಟಿಂಗ್ ನಡೆಸದ ಕಾರಣಕ್ಕೆ ಸೋಲೊಪ್ಪಿಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈಗಿನಿಂದಲೇ ಸಜ್ಜು

ಕೇವಲ ಮೂರೇ ದಿನಗಳಲ್ಲಿ ಪಂದ್ಯ ಕೊನೆಗೊಳ್ಳುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಮ್ಮ‌ ತಂಡದಿಂದಲೂ‌ ಸಕಾರಾತ್ಮಕ ಅಂಶಗಳು ಹೆಚ್ಚಾಗಿ ಸಿಗಲಿಲ್ಲ. ಇಂತಹ‌ ಪಿಚ್‌ನಲ್ಲಿ ಹೇಗೆ ಬ್ಯಾಟಿಂಗ್ ನಡೆಸಬೇಕೆಂದು ಕೆಎಲ್ ಮತ್ತು‌ ಕೊಹ್ಲಿ ತೋರಿಸಿಕೊಟ್ಟರು. ನಮ್ಮ ಕೆಲವು ಬೌಲರ್‌ಗಳು ಸಹ ಇದೇ ಮೊದಲ ಬಾರಿಗೆ ಇಲ್ಲಿ ಆಡುತ್ತಿದ್ದಾರೆ. ಹಾಗಾಗಿ ಹೆಚ್ಚು ವಿಮರ್ಶಿಸಲು ಹೋಗಲ್ಲ. ನಮಗೆ ಮರುಸಂಘಟನೆ ಮುಖ್ಯ. ಮುಂದಿನ‌ ಟೆಸ್ಟ್ ಪಂದ್ಯಕ್ಕೆ ಈಗಿನಿಂದಲೇ ಸಿದ್ಧರಾಗುತ್ತೇವೆ‌ ಎಂದು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ