Rohit Sharma: 2011ರ ವಿಶ್ವಕಪ್ಗೆ ಸ್ಥಾನ ಪಡೆಯಲು ವಿಫಲರಾಗಿದ್ದ ರೋಹಿತ್ ಈಗ ಅದೇ ತಂಡಕ್ಕೆ ನಾಯಕ
Sep 08, 2023 08:00 AM IST
ಭಾರತ ತಂಡದ ನಾಯಕ ರೋಹಿತ್ ಶರ್ಮಾ.
- Rohit Sharma, ICC ODI World Cup 2023: 2011ರ ಏಕದಿನ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗದ ರೋಹಿತ್ ಶರ್ಮಾ ಇಂದು ಅದೇ ತಂಡಕ್ಕೆ ನಾಯಕನಾಗಿದ್ದಾರೆ. ಮತ್ತೆ ತಂಡದಲ್ಲಿ ಸ್ಥಾನ ಪಡೆದು, ಉಪನಾಯಕನಾಗಿ, ಈಗ ನಾಯಕನಾಗಿ ತಂಡಕ್ಕೆ ಆಧಾರ ಸ್ಥಂಭವಾಗಿದ್ದಾರೆ. ಹಾಗಾದರೆ, ರೋಹಿತ್ ವಿಶ್ವಕಪ್ ಪಯಣ ಹೇಗಿದೆ ಎಂಬುದನ್ನು ಇಲ್ಲಿ ತಿಳಿಯೋಣ.
ಅಕ್ಟೋಬರ್ 5ರಿಂದ ಶುರುವಾಗುವ ಏಕದಿನ ವಿಶ್ವಕಪ್ ಟೂರ್ನಿಗೆ (ODI World Cup 2023) ಟೀಮ್ ಇಂಡಿಯಾ ಪ್ರಕಟವಾಗಿದೆ. 15 ಸದಸ್ಯರ ಬಲಿಷ್ಠ ತಂಡವನ್ನೇ ಬಿಸಿಸಿಐ (BCCI) ನಿರ್ಮಿಸಿದೆ. ರೋಹಿತ್ ಶರ್ಮಾ (Rohit Sharma) ತಂಡದ ಸಾರಥಿಯಾಗಿದ್ದರೆ, ಹಾರ್ದಿಕ್ ಪಾಂಡ್ಯ (Hardik Pandya) ಉಪನಾಯಕನಾಗಿದ್ದಾರೆ. ವಿಶೇಷ ಅಂದರೆ 2011ರ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನವೇ ಪಡೆಯಲು ವಿಫಲರಾಗಿದ್ದ ರೋಹಿತ್, ಈಗ ಅದೇ ತಂಡವನ್ನು ಮುನ್ನಡೆಸುತ್ತಿದ್ದಾರೆ.
2007ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟಿದ್ದ ಹಿಟ್ಮ್ಯಾನ್ 2011ರ ಏಕದಿನ ವಿಶ್ವಕಪ್ಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು. ಆದರೆ ಕೊನೆ ಗಳಿಗೆಯಲ್ಲಿ ನಿರಾಸೆ ಅನುಭವಿಸಿದ್ದರು. ವಿಶ್ವಕಪ್ಗೆ ಆಯ್ಕೆಗೂ ಮುನ್ನ ವಿರಾಟ್ ಕೊಹ್ಲಿ ನೀಡಿದ್ದ ಅತ್ಯುತ್ತಮ ಪ್ರದರ್ಶನ ಕಾರಣ ರೋಹಿತ್ ಬದಲಿಗೆ ಕೊಹ್ಲಿಗೆ ಮಣೆ ಹಾಕಲಾಗಿತ್ತು. ಅಂದು, ಆಯ್ಕೆಯಾಗದಕ್ಕೆ ರೋಹಿತ್ ತೀವ್ರ ಬೇಸರ ವ್ಯಕ್ತಪಡಿಸಿದ್ದರು.
2010ರಲ್ಲಿ ಕೊಹ್ಲಿ ಅದ್ಭುತ ಪ್ರದರ್ಶನ
ಅಂದು ಏಕದಿನ ವಿಶ್ವಕಪ್ಗೆ 2010ರ ವರ್ಷದ ಪ್ರದರ್ಶನವನ್ನೇ ಆಯ್ಕೆಯ ಮಾನದಂಡವನ್ನಾಗಿ ಪರಿಗಣಿಸಲಾಗಿತ್ತು. ಆದರೆ ಆ ವರ್ಷ ರೋಹಿತ್, ಪ್ರದರ್ಶನ ನೀಡಿದ್ದರಾದರೂ ಅದು ಅತ್ಯುತ್ತಮ ಎನಿಸಿರಲಿಲ್ಲ. ಆದರೆ ಕೊಹ್ಲಿ ಧೂಳೆಬ್ಬಿಸಿದ್ದರು. 2010ರ ವರ್ಷದಲ್ಲಿ ರೋಹಿತ್ 15 ಪಂದ್ಯಗಳಲ್ಲಿ 504 ರನ್ ಸಿಡಿಸಿದ್ದರು. 38.76 ಬ್ಯಾಟಿಂಗ್ ಸರಾಸರಿ ಹೊಂದಿದ್ದರು. 2 ಶತಕ, 1 ಅರ್ಧಶತಕ ಸಿಡಿಸಿದ್ದರು. ಮತ್ತೊಂದೆಡೆ ವಿರಾಟ್, 25 ಪಂದ್ಯಗಳಲ್ಲಿ 47.38ರ ಸರಾಸರಿಯಲ್ಲಿ 995 ರನ್ ಸಿಡಿಸಿದ್ದರು. 3 ಶತಕ, 7 ಅರ್ಧಶತಕ ಅವರ ಖಾತೆಯಲ್ಲಿದ್ದವು. ಇದೇ ಕಾರಣಕ್ಕೆ ಅವರನ್ನು ಕೈಬಿಡಲಾಗಿತ್ತು. ಉಳಿದಂತೆ ಎಲ್ಲರೂ ಹಿರಿಯ ಆಟಗಾರರೇ ಇದ್ದರು.
2015, 2019ರ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ
2011ರಲ್ಲಿ ಅವಕಾಶ ಸಿಗದ್ದಕ್ಕೆ ಬೇಸರಕ್ಕೆ ಒಳಗಾಗಿದ್ದ ರೋಹಿತ್, ವಿಶ್ವಕಪ್ ನೋಡುವುದಕ್ಕೇ ಬಿಟ್ಟಿದ್ದರಂತೆ. ಆ ಬಳಿಕ ಕಠಿಣ ಪರಿಶ್ರಮ ಪಟ್ಟ ಹಿಟ್ಮ್ಯಾನ್ 2015ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಮರಳಿದ್ದರು. ಹಾಗೂ 330 ರನ್ ಸಿಡಿಸಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ 2ನೇ ಆಟಗಾರ ಎನಿಸಿದರು. 2019ರ ವಿಶ್ವಕಪ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದರು. ದಾಖಲೆಯ 5 ಶತಕಗಳ ಸಹಾಯದಿಂದ 647 ರನ್ ಸಿಡಿಸಿ ಟೂರ್ನಿಯಲ್ಲಿ ಗರಿಷ್ಠ ಸ್ಕೋರರ್ ಎನಿಸಿದರು.
ಈಗ ಅದೇ ತಂಡಕ್ಕೆ ಉಪನಾಯಕನಿಂದ ನಾಯಕನಾಗಿ!
2011ರ ವಿಶ್ವಕಪ್ಗೆ ಅವಕಾಶ ಸಿಗದಿದ್ದರೂ ಈಗ ಅದೇ ತಂಡಕ್ಕೆ ನಾಯಕನಾಗಿದ್ದಾರೆ. ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿದ್ದಾಗ ರೋಹಿತ್ ಉಪನಾಯಕನಾಗಿದ್ದರು. 2013ರಲ್ಲಿ ಕೊನೆಯದಾಗಿ ಭಾರತ ಐಸಿಸಿ ಟ್ರೋಫಿ ಗೆದ್ದಿದೆ. ಸದ್ಯ ಮಹತ್ವದ ಟೂರ್ನಿಯ ಜವಾಬ್ದಾರಿ ಹೊತ್ತಿರುವ ರೋಹಿತ್ 10 ವರ್ಷಗಳ ಬಳಿಕ ಭಾರತಕ್ಕೆ ಐಸಿಸಿ ಟ್ರೋಫಿ ಗೆದ್ದುಕೊಡಲು ಕಾಯುತ್ತಿದ್ದಾರೆ. ಆ ಮೂಲಕ ಐತಿಹಾಸಿಕ ಪುಟಗಳಲ್ಲಿ ತನ್ನ ಹೆಸರನ್ನು ದಾಖಲಿಸಲು ಸಿದ್ದರಾಗಿದ್ದಾರೆ.
ಯುವರಾಜ್ ಸಿಂಗ್ ಬೆಂಬಲ
2011ರ ವಿಶ್ವಕಪ್ಗೆ ಅವಕಾಶ ಪಡೆಯದ ರೋಹಿತ್ಗೆ ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಧೈರ್ಯ ತುಂಬಿದ್ದರು ಎಂದು ಯುವಿ ಹೇಳಿದ್ದ ಮಾತುಗಳನ್ನು ರೋಹಿತ್ ಸ್ಮರಿಸಿದ್ದಾರೆ. ವಿಶ್ವಕಪ್ಗೆ ಆಯ್ಕೆಯಾಗದ್ದಕ್ಕೆ ಮುಂದೇನು ಎಂಬ ಚಿಂತೆಗೆ ಜಾರಿದ್ದೆ. ಆಗ ಯುವರಾಜ್, ನನ್ನನ್ನು ಡಿನ್ನರ್ಗೆ ಕರೆದುಕೊಂಡು ಹೋಗಿ, ನಿಮಗೆ ಆಗುತ್ತಿರುವ ನೋವು ನನಗೆ ಅರ್ಥವಾಗುತ್ತಿದೆ. ನಿಮ್ಮ ಮುಂದೆ ಇನ್ನಷ್ಟು ಆಯ್ಕೆಗಳು, ವರ್ಷಗಳಿವೆ. ನಿಮ್ಮ ಆಟವನ್ನು ನೋಡಿ ಎಂಜಾಯ್ ಮಾಡುತ್ತೇವೆ. ಕಠಿಣ ಪರಿಶ್ರಮ ಹಾಕುವುದನ್ನು ಬಿಡಬೇಡಿ ಎಂದಿದ್ದರು ಎಂದು ಯುವಿ ಮಾತನ್ನು ಇತ್ತೀಚಿಗೆ ನೆನೆಸಿಕೊಂಡರು.
ಟ್ವೀಟ್ ಮೂಲಕ ಬೇಸರ
2011ರ ವಿಶ್ವಕಪ್ ಟೂರ್ನಿಗೆ ರೋಹಿತ್ ಶರ್ಮಾ ಆಯ್ಕೆಯಾಗದ ಕಾರಣಕ್ಕೆ ರೋಹಿತ್ ಶರ್ಮಾ ಟ್ವೀಟ್ ಮೂಲಕ ಬೇಸರ ಹೊರ ಹಾಕಿದ್ದರು. 2011ರ ಜನವರಿ 31ರಂದು ರಾತ್ರಿ 8.29ಕ್ಕೆ ಸರಿಯಾಗಿ ಟ್ವೀಟ್ ಮಾಡಿದ್ದರು. ವಿಶ್ವಕಪ್ ತಂಡದ ಭಾಗವಾಗದಿರುವುದಕ್ಕೆ ನಿಜವಾಗಿಯೂ ನಿರಾಶೆಯಾಗಿದೆ. ಇಲ್ಲಿಂದ ಮುಂದುವರಿಯಬೇಕಾಗಿದೆ. ಇದು ದೊಡ್ಡ ಹಿನ್ನಡೆಯಾಗಿದೆ ಎಂದು ಟ್ವೀಟ್ ಮೂಲಕ ನೋವನ್ನು ಹೊರಹಾಕಿದ್ದರು.
‘ವಿಶ್ವಕಪ್ ನೋಡದಿರಲು ಪ್ರತಿಜ್ಞೆ ಮಾಡಿದ್ದೆ’
ವೆಸ್ಟ್ ಇಂಡೀಸ್ ಪ್ರವಾಸ ಮುಗಿಸಿ ಅಮೆರಿಕ ತೆರಳಿದ್ದ ರೋಹಿತ್, 2011ರ ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಸಿಗದಿದ್ದಕ್ಕೆ ನನಗೆ ತುಂಬಾ ಬೇಸರವಾಗಿತ್ತು. ಕೋಪದಲ್ಲಿ ವಿಶ್ವಕಪ್ ಪಂದ್ಯಗಳನ್ನು ನೋಡಬಾರದು ಎಂದು ಪ್ರತಿಜ್ಞೆ ಮಾಡಿದ್ದೆ. ಇಡೀ ತಂಡ ವಿಶ್ವಕಪ್ ಆಡುತ್ತಿದ್ದಾಗ ಮನೆಯಲ್ಲಿ ಇರಲು ನನಗೆ ತುಂಬಾ ಕಷ್ಟವಾಯಿತು. ಅದೊಂದು ದುಃಸ್ವಪ್ನದಂತೆ ಭಾಸವಾಗುತ್ತಿತ್ತು. ಪದೆಪದೇ ಕಾಡುತ್ತಿತ್ತು ಎಂದು ತಾನು ಅನುಭವಿಸಿದ ನೋವಿನ ದಿನಗಳನ್ನು ಹಂಚಿಕೊಂಡಿದ್ದರು.
ಆದರೆ, ಭಾರತ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ನಂತರ ನನ್ನ ಮನಸು ತಡೆಯಲಿಲ್ಲ. ಪಂದ್ಯಕ್ಕೆ ಬೆಂಬಲ ಸೂಚಿಸದೆ ಇರಲು ಆಗಲಿಲ್ಲ. ನಂತರ ಪ್ರತಿ ಪಂದ್ಯ, ಪ್ರತಿ ಎಸೆತ, ಪ್ರತಿ ಕ್ಷಣವನ್ನೂ ವೀಕ್ಷಿಸಿದೆ. ಅದೊಂದು ವಿಭಿನ್ನ ಅನುಭವ. ಮೈದಾನದಲ್ಲಿ ನಾನೇ ಆಡುತ್ತಿರುವಂತೆ ಭಾಸವಾಗುತ್ತಿತ್ತು. ಈ ಬಾರಿ ಟ್ರೋಫಿ ಗೆಲ್ಲಬೇಕೆಂದು ಬಯಸುತ್ತೇವೆ ಎಂದು ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದರು. ಒಟ್ನಲ್ಲಿ ಅಂದು ಭಾರತ ತಂಡಕ್ಕೆ ಆಯ್ಕೆಯಾಗದೆ ಬೇಸರಗೊಂಡಿದ್ದ ರೋಹಿತ್ ಅದೇ ತಂಡಕ್ಕೆ ನಾಯಕನಾಗಿದ್ದು, ಟ್ರೋಫಿ ಗೆದ್ದುಕೊಡಲಿ ಎಂದು ಆಶಿಸೋಣ.