ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತೊರೆಯುತ್ತಾರಾ; ಹೆಡ್ಕೋಚ್ ನೀಡಿದ್ರು ಬಿಗ್ಅಪ್ಡೇಟ್, ಆ ಮಾತಲ್ಲೇ ಇದೆ ಅರ್ಥ
May 18, 2024 02:41 PM IST
ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತೊರೆಯುತ್ತಾರಾ; ಹೆಡ್ಕೋಚ್ ನೀಡಿದ್ರು ಬಿಗ್ಅಪ್ಡೇಟ್
- Mark Boucher on Rohit Sharma: ಮುಂಬೈ ಇಂಡಿಯನ್ಸ್ನಲ್ಲಿ ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಚರ್ಚಿಸಲಾಯಿತು ಎಂದು ಮುಖ್ಯ ಕೋಚ್ ಮಾರ್ಕ್ ಬೌಷರ್ ಹೇಳಿದ್ದಾರೆ.
ಐಪಿಎಲ್-2024ರಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತನ್ನ ಕೊನೆಯ ಲೀಗ್ ಪಂದ್ಯದಲ್ಲೂ ಹೀನಾಯ ಸೋಲಿಗೆ ಶರಣಾಯಿತು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ 18 ರನ್ಗಳಿಂದ ಸೋಲೊಪ್ಪಿಕೊಂಡಿತು. ತವರಿನ ಅಭಿಮಾನಿಗಳ ಮುಂದೆ ಮತ್ತೊಮ್ಮೆ ತೀವ್ರ ಮುಖಭಂಗಕ್ಕೆ ಒಳಗಾಯಿತು. ಪಂದ್ಯದ ನಂತರ ಮುಂಬೈ ಕೋಚ್ ಮಾರ್ಕ್ ಬೌಚರ್ (Mark Boucher) ಅವರು ರೋಹಿತ್ ಶರ್ಮಾ (Rohit Sharma) ಅವರೊಂದಿಗೆ ಮಾತನಾಡಿದ್ದು, ತನ್ನ ಭವಿಷ್ಯದ ಕುರಿತು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಹಿಟ್ಮ್ಯಾನ್ ಅಚ್ಚರಿಯ ಉತ್ತರ ಕೊಟ್ಟಿದ್ದಾರೆ.
ಪ್ರಸಕ್ತ ಆವೃತ್ತಿಯಲ್ಲಿ ದ್ವಿತೀಯಾರ್ಧದಲ್ಲಿ ಹಿನ್ನಡೆ ಅನುಭವಿಸಿದರೂ ರೋಹಿತ್ ಒಂದು ಶತಕ ಮತ್ತು ಅರ್ಧ ಶತಕ ಸೇರಿದಂತೆ 417 ರನ್ಗಳೊಂದಿಗೆ ಮುಂಬೈ ಇಂಡಿಯನ್ಸ್ ಪರ ಅಗ್ರ ಸ್ಕೋರರ್ ಆಗಿ ಟೂರ್ನಿ ಮುಗಿಸಿದ್ದಾರೆ. ಅಂತಿಮ ಲೀಗ್ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದ ನಂತರ ಮೈದಾನದಲ್ಲಿ ತುಂಬಿದ್ದ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಎಂಐ ಪರ ರೋಹಿತ್ಗೆ ಇದೇ ಕೊನೆಯ ಐಪಿಎಲ್ ಪಂದ್ಯವಾಗಿರಬಹುದು ಎಂದು ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಐಪಿಎಲ್ ನಂತರ ರೋಹಿತ್ ಎಂಐ ತೊರೆಯುತ್ತಾರೆ ಎಂಬ ಗುಸು ಗುಸು ಸುದ್ದಿ ಕೆಲವು ಸಮಯದಿಂದಲೂ ಹರಿದಾಡುತ್ತಿದೆ. ಕೋಲ್ಕತಾ ನೈಟ್ ರೈಡರ್ಸ್ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರೊಂದಿಗೆ ರೋಹಿತ್, ತಮ್ಮ ತವರು ಎಂಐನಲ್ಲಿ ಏನೂ ಸರಿಯಾಗಿ ನಡೆಯುತ್ತಿಲ್ಲ ಎಂದು ಹೇಳಿದ್ದ ವಿಡಿಯೋ ಸಖತ್ ವೈರಲ್ ಆಗಿತ್ತು. ಅವರ ಮಾತುಗಳಲ್ಲಿ ಎಂಐ ತಂಡದ ವಿರುದ್ಧ ಅಸಮಾಧಾನ ಇರುವುದು ಕಂಡು ಬಂದಿತ್ತು. ಹೀಗಾಗಿ ಮುಂದಿನ ಸೀನಸ್ಗೆ ರೋಹಿತ್ ಶರ್ಮಾ ಆಡುವುದು ಬಹುತೇಕ ಅನುಮಾನ ಎಂದು ಸುದ್ದಿಗಳು ಹುಟ್ಟಿಕೊಂಡವು.
ಎಲ್ಲದಕ್ಕಿಂತ ಹೆಚ್ಚಾಗಿ ರೋಹಿತ್ ಮತ್ತು ಹೊಸ ನಾಯಕ ಹಾರ್ದಿಕ್ ಪಾಂಡ್ಯ ನಡುವೆ ಬಿರುಕು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಇದು ಎಂಐನ ಕಾರ್ಯಕ್ಷಮತೆಯ ಮೇಲೆ ಪ್ರತಿಬಿಂಬಿಸಿದವು. ಆಡಿರುವ 14 ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದೊಂದಿಗೆ ಅಭಿಯಾನ ಮುಗಿಸಿತು. ಕಳೆದ ಸೀಸನ್ಗಳಲ್ಲಿ ಎರಡು ಬಾರಿ ಕೊನೆಯ ಸ್ಥಾನದೊಂದಿಗೆ ಟೂರ್ನಿ ಮುಗಿಸಿದೆ. ಇದೀಗ ಪಂದ್ಯದ ನಂತರ ರೋಹಿತ್ ಶರ್ಮಾ ಅವರ ಎಂಐ ಭವಿಷ್ಯದ ಬಗ್ಗೆ ಬೌಚರ್ ಮಾತನಾಡಿದ್ದಾರೆ.
ರೋಹಿತ್ ಎಂಐನಲ್ಲೇ ಇರುವುದು ಡೌಟ್
‘ಪ್ರಾಮಾಣಿಕವಾಗಿ ಹೇಳುವುದಾದರೆ, ಮುಂಬೈ ಇಂಡಿಯನ್ಸ್ನಲ್ಲಿ ರೋಹಿತ್ ಭವಿಷ್ಯದ ಬಗ್ಗೆ ಹೆಚ್ಚಿನ ಸಂಭಾಷಣೆ ನಡೆದಿಲ್ಲ. ಆವೃತ್ತಿಯ ಬಗ್ಗೆ ಸ್ವಲ್ಪ ವಿಮರ್ಶೆ ಮಾಡಲು ನಾನು ಕಳೆದ ರಾತ್ರಿ (ಮೇ 17) ಅವರೊಂದಿಗೆ ಮಾತನಾಡಿದ್ದೇನೆ’ ಎಂದು ಬೌಷರ್ ಈ ಋತುವಿನಲ್ಲಿ ಎಂಐನ 10 ನೇ ಸೋಲಿನ ನಂತರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರೋಹಿತ್ಗೆ ಕಠಿಣ ಪ್ರಶ್ನೆಯನ್ನು ಕೇಳಿದ್ದರು. ಅದಕ್ಕೆ ಭಾರತೀಯ ನಾಯಕ ‘ಟಿ20 ವಿಶ್ವಕಪ್’ ಎಂದು ಉತ್ತರಿಸಿದ್ದಾರೆ.
‘ರೋಹಿತ್ ಶರ್ಮಾಗೆ ಮುಂದೇನು ಎಂದು ನಾನು ಕೇಳಿದೆ. ಅದಕ್ಕೆ ಅವರು ನನಗೆ ಹೇಳಿದ್ದು, ಟಿ20 ವಿಶ್ವಕಪ್. ಅದು ಪರಿಪೂರ್ಣವಾಗಿದೆ. ರೋಹಿತ್ ಶರ್ಮಾ ಅವರ ಭವಿಷ್ಯ ಏನು ಎಂಬುದರ ಬಗ್ಗೆ ನಾನು ತಿಳಿದುಕೊಳ್ಳಬೇಕಾದದ್ದು ಇಷ್ಟೇ. ಮುಂದಿನ ಋತುವಿಗೂ ಮುನ್ನ ದೊಡ್ಡ ಹರಾಜು ನಡೆಯಲಿದೆ. ಆದರೆ, ಏನಾಗಲಿದೆ ಎಂಬುದು ಯಾರಿಗೆ ತಿಳಿದಿಲ್ಲ. ನಾವು ಸಹ ಕಾದುನೋಡಬೇಕಿದೆ’ ಎಂದು ಅವರು ಹೇಳಿದ್ದಾರೆ. ಆದರೆ ಅವರ ಮಾತುಗಳು, ರೋಹಿತ್ರನ್ನು ಕೈಬಿಡುವ ಸಾಧ್ಯತೆ ಇದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
‘ರೋಹಿತ್ ಶರ್ಮಾಗೆ ಎರಡು ಅರ್ಧಭಾಗಗಳ ಆವೃತ್ತಿ’
‘ರೋಹಿತ್ ಬ್ಯಾಟ್ಸ್ಮನ್ ಆಗಿ 2 ಅರ್ಧಭಾಗಗಳ ಆವೃತ್ತಿಗಳನ್ನು ಹೊಂದಿದ್ದರು. ಎಂಐ ಪರ ಪರ ಅತಿ ಹೆಚ್ಚು ರನ್ ಗಳಿಸಿದವರಾಗಿ ಕೊನೆಗೊಂಡರೂ, ಮಾಜಿ ನಾಯಕ ಫಲಿತಾಂಶದಿಂದ ನಿರಾಶೆಗೊಂಡಿದ್ದಾರೆ’ ಎಂದು ಬೌಷರ್ ಬೌಷರ್ ಹೇಳಿದ್ದಾರೆ. 'ಇದು ಅವರಿಗೆ ಎರಡು ಅರ್ಧಭಾಗಗಳ ಋತುವಾಗಿತ್ತು. ಅವರು ನಿಜವಾಗಿಯೂ ಉತ್ತಮವಾಗಿ ಪ್ರಾರಂಭಿಸಿದ್ದರು. ನೆಟ್ಸ್ನಲ್ಲಿ ಅದ್ಭುತ ಪ್ರಾಕ್ಟೀಸ್ ನಡೆಸುತ್ತಿದ್ದರು. ಸಿಎಸ್ಕೆ ವಿರುದ್ಧವೂ ಉತ್ತಮ ಶತಕವನ್ನು ಗಳಿಸಿ ಗಮನ ಸೆಳೆದರು ಎಂದು ಬೌಚರ್ ಹೇಳಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 38 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ಗಳೊಂದಿಗೆ 68 ರನ್ ಗಳಿಸಿದ ರೋಹಿತ್, ಟೂರ್ನಿಯಲ್ಲಿ 14 ಪಂದ್ಯಗಳಲ್ಲಿ 417 ರನ್ ಗಳಿಸಿದ್ದಾರೆ. ರೋಹಿತ್ ಆಟದ ಕುರಿತು ಮಾತನಾಡಿದ ಬೌಚರ್, ಆಕ್ರಮಣಕಾರಿ ಆರಂಭಿಕನಾಗಿ ಆಡುವ ಹೊಸ ವಿಧಾನಕ್ಕೆ ಹೊಂದಿಕೊಳ್ಳುವುದನ್ನು ಮುಂದುವರಿಸಿದ್ದಾರೆ ಎಂದು ಹೇಳಿದ್ದಾರೆ. ಅವರು ಒಂದೆರಡು ಕಡಿಮೆ ಸ್ಕೋರ್ ಗಳಿಸಿದರೂ ದುರದೃಷ್ಟವಶಾತ್ ಆ ನಿರ್ದಿಷ್ಟ ಪರಿಸ್ಥಿತಿಯಲ್ಲಿ ನಮಗೆ ಸಹಾಯ ಮಾಡಲಿಲ್ಲ ಎಂದು ಅವರು ಹೇಳಿದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)