ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಏಕೆ 2024ರ ಟಿ20 ವಿಶ್ವಕಪ್ ಆಡಬೇಕು; ಇಲ್ಲಿವೆ ಮೂರು ಕಾರಣಗಳು
Jan 07, 2024 05:52 PM IST
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ.
- Rohit Sharma and Virat Kohli: ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು 2024ರ ಟಿ20 ವಿಶ್ವಕಪ್ ಆಡುವುದು ಯಾಕೆ ಮುಖ್ಯ? ಇಲ್ಲಿವೆ ನೋಡಿ ಪ್ರಮುಖ ಮೂರು ಕಾರಣಗಳು.
2023 ಏಕದಿನ ವಿಶ್ವಕಪ್ ಫೈನಲ್‌ನಲ್ಲಿ (ODI World Cup 2023) ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲು ಅನುಭವಿಸುತ್ತಿದ್ದಂತೆ ಐಸಿಸಿ ಪ್ರಶಸ್ತಿಗಾಗಿ ಭಾರತದ ಕಾಯುವಿಕೆ ಮುಂದುವರೆದಿದೆ. ಇದೀಗ ಭಾರತದ ಕಣ್ಣು ಈ ವರ್ಷ ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ನಡೆಯುವ ಟಿ20 ವಿಶ್ವಕಪ್ (T20 world Cup 2024) ಮೇಲೆ ನೆಟ್ಟಿದೆ. 2013ರಿಂದ ಈವರೆಗೂ ಐಸಿಸಿ ಟೂರ್ನಿಗಳಲ್ಲಿ ವೈಫಲ್ಯ ಅನುಭವಿಸುತ್ತಿರುವ ಭಾರತ ತಂಡಕ್ಕೆ ಚೋಕರ್ಸ್ ಪಟ್ಟ ಕಟ್ಟಲಾಗಿದೆ. ಈ ಟ್ಯಾಗ್ ಕಿತ್ತು ಹಾಕಲು ಟಿ20 ವಿಶ್ವಕಪ್ ಭಾರತಕ್ಕೆ ಮತ್ತೊಂದು ಅವಕಾಶವಾಗಿದೆ.
ಮತ್ತೊಂದೆಡೆ ಟಿ20 ವಿಶ್ವಕಪ್ ಟೂರ್ನಿಗೆ ಭಾರತದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ (Rohit Sharma and Virat Kohli) ಆಯ್ಕೆಯ ಕುರಿತು ಚರ್ಚೆಗಳು ನಡೆಯುತ್ತಿವೆ. 2022ರ ಟಿ20 ವಿಶ್ವಕಪ್ನ ಸೆಮಿಫೈನಲ್ ಬಳಿಕ ಇಲ್ಲಿಯವರೆಗೂ ಒಂದೇ ಒಂದು ಟಿ20 ಕ್ರಿಕೆಟ್ ಆಡದ ಈ ಜೋಡಿಯನ್ನು ಈ ವರ್ಷ ಚುಟುಕು ಮೆಗಾ ಟೂರ್ನಿಯಲ್ಲಿ ಆಡಿಸಬೇಕೇ ಬೇಡವೇ ಎನ್ನುವ ಡಿಬೇಟ್ಗಳು ಹೆಚ್ಚಾಗುತ್ತಿವೆ. ಆದರೆ ಅವರಿಬ್ಬರು 2024ರ ಟಿ20 ವಿಶ್ವಕಪ್ ಆಡುವುದು ಯಾಕೆ ಮುಖ್ಯ? ಇಲ್ಲಿವೆ ನೋಡಿ ಪ್ರಮುಖ ಮೂರು ಕಾರಣಗಳು.
ಅನುಭವದ ಸಮೃದ್ಧಿ
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಐಸಿಸಿ ಈವೆಂಟ್‌ಗಳಲ್ಲಿ ಆಡಿದ ಅಪಾರ ಅನುಭವ ಹೊಂದಿದ್ದಾರೆ. ಹೌದು, ವಿಶ್ವಕಪ್ ಗೆಲ್ಲುವಲ್ಲಿ ತಂಡ ವಿಫಲವಾಗಿಬಹುದು. ಆದರೆ ಆಟಗಾರರು ಅದ್ಭುತ ಪ್ರದರ್ಶನ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ರೋಹಿತ್ ಶರ್ಮಾ 2019ರ ಏಕದಿನ ವಿಶ್ವಕಪ್, 2023ರ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಟಾಪ್ ಸ್ಕೋರರ್ ಆಗಿದ್ದರು.
ಕಳೆದ ಏಕದಿನ ವಿಶ್ವಕಪ್ನಲ್ಲಿ ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಸಖತ್ ಫಾರ್ಮ್ನಲ್ಲಿದ್ದರು. ವೆಸ್ಟ್ ಇಂಡೀಸ್ ಪರಿಸ್ಥಿತಿಗಳ ಬಗ್ಗೆ ಅಪಾರ ಅನುಭವ ಹೊಂದಿದ್ದಾರೆ. ಅಲ್ಲಿ ಅಪರಿಚಿತ ಪಿಚ್ಗಳಲ್ಲಿ ಅನಾನುಭವಿಗಳು ಹೊಂದಿಕೊಳ್ಳುವುದು ಕಷ್ಟ. ಯುವ ಆಟಗಾರರು ಏಕಾಏಕಿ ಕಣಕ್ಕಿಳಿದರೆ, ಬ್ಯಾಟಿಂಗ್ ನಡೆಸುವುದು ಕಷ್ಟವಾಗಲಿದೆ. ತಂಡಕ್ಕೆ ರೋಹಿತ್ ಮತ್ತು ಕೊಹ್ಲಿ ಅವರ ಅನುಭವದ ಅಗತ್ಯವಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ವಿವರಿಸಿದ್ದಾರೆ.
ಭರ್ಜರಿ ಫಾರ್ಮ್ನಲ್ಲಿದ್ದಾರೆ ಅನುಭವಿಗಳು
ಕಳೆದ ವರ್ಷದಿಂದ ರೋಹಿತ್ ಮತ್ತು ಕೊಹ್ಲಿ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಕೊಹ್ಲಿ 2023ರಲ್ಲಿ ಏಕದಿನ ಕ್ರಿಕೆಟ್ನಲ್ಲಿ 1377 ರನ್ ಗಳಿಸಿ 2ನೇ ಪ್ರಮುಖ ರನ್ ಸ್ಕೋರರ್ ಆಗಿ ಕೊನೆಗೊಂಡರೆ, ರೋಹಿತ್ 1255 ರನ್ ಗಳಿಸಿ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಇಬ್ಬರೂ 100+ ಸ್ಟ್ರೈಕ್ ರೇಟ್ ಹೊಂದಿದ್ದರು. ವೈಟ್-ಬಾಲ್ ಫಾರ್ಮ್ಯಾಟ್‌ಗಳಲ್ಲಿ ಅವರಿಗೆ ರನ್ ಗಳಿಸುವ ಹಸಿವು ಇನ್ನೂ ಇದೆ ಎಂಬುದು ಅವರು ನೀಡಿರುವ ಪ್ರದರ್ಶನವೇ ಸಾಕ್ಷಿ.
ಟಿ20 ಕ್ರಿಕೆಟ್ಗೆ ಸೆಟ್ ಆಗಲ್ಲ ಎಂದು ಕೆಲವರು ಹೇಳಿದ್ದುಂಟು. ಆದರೆ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆ ಹಾಕಿದವರ ಪಟ್ಟಿಯಲ್ಲಿ ಕೊಹ್ಲಿ 4,000+ ರನ್, ರೋಹಿತ್ 3,853 ರನ್ ಕಲೆಹಾಕಿ ಅಗ್ರ ಎರಡು ಸ್ಥಾನ ಪಡೆದಿದ್ದಾರೆ ಎಂಬುದು ವಿಶೇಷ. ನಾಯಕ ಮತ್ತು ಮಾಜಿ ನಾಯಕ ತಮ್ಮ ನಾಯಕತ್ವದ ಆಟ ತಂಡಕ್ಕೆ ನಿಜಕ್ಕೂ ಬೇಕಿದೆ. ಹಾಗಾಗಿ ಅವರನ್ನು ತಂಡಕ್ಕೆ ಆಯ್ಕೆ ಮಾಡುವುದು ಉತ್ತಮ. ಇದು ಐಸಿಸಿ ಟ್ರೋಫಿ ಗೆಲ್ಲುವ ಸಾಧ್ಯತೆ ಹೆಚ್ಚಿಸಲಿದೆ.
ಐಸಿಸಿ ಟ್ರೋಫಿ ಗೆಲ್ಲಲು ಅರ್ಹರು
ರೋಹಿತ್ ಮತ್ತು ಕೊಹ್ಲಿ ಅವರು ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ಸಮೀಪಕ್ಕೆ ಬಂದಿದ್ದಾರೆ. 2027ರ ಏಕದಿನ ವಿಶ್ವಕಪ್ ಟೂರ್ನಿ ಆಡುವುದೇ ಅನುಮಾನವಾಗಿದೆ. ಹಾಗಾಗಿ ದಶಕಕ್ಕೂ ಅಧಿಕ ಕಾಲ ಭಾರತ ತಂಡಕ್ಕೆ ದುಡಿದ ಈ ಅನುಭವಿಗಳು ಐಸಿಸಿ ಟ್ರೋಫಿ ಗೆಲ್ಲಲು ನಿಜಕ್ಕೂ ಅರ್ಹರು. ಹಾಗಾಗಿ ಅವರಿಬ್ಬರು ತಮ್ಮ ಕ್ರಿಕೆಟ್ ಕರಿಯರ್ ಮುಗಿಸುವಷ್ಟರಲ್ಲಿ ಐಸಿಸಿ ಟ್ರೋಫಿ ಗೆಲ್ಲಲಿ ಎಂಬುದು ಎಲ್ಲರ ಮಹದಾಸೆ. ಹಾಗಾಗಿ ಅವರನ್ನು ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲೇಬೇಕು. ಟ್ರೋಫಿ ಗೆದ್ದು ಅವರ ಆಸೆಯನ್ನು ಈಡೇರಿಸಬೇಕಿದೆ.
ವಿಭಾಗ